'ಊಟ ಮಾಡಿ ಮೂರ್ ದಿನ ಆಗೈತೆ, ಹೊಟ್ಟೆಗೇನಾದ್ರೂ ಕೊಡೀ ಸ್ವಾಮಿ...' ಎಂದು ಭಿಕ್ಷುಕ ದೈನ್ಯದಿಂದ ಬೇಡಿದ. ಮನೆಯ ಯಜಮಾನ ಅವನ ಕೈಗೆ ಎರಡು ರುಪಾಯಿಯ ನಾಣ್ಯವನ್ನಿಟ್ಟು ಕಳಿಸಿದ!
ರಾಜ, ಸೇವಕನಾದ!
ಅವನ ಹೆಸರು ರಾಜ. ರಾಜನಂತೆಯೇ ಬೆಳೆದಿದ್ದ. ಹೆತ್ತವರೂ ಸಹ ಅವನಿಂದ ಒಂದೂ ಕೆಲಸವನ್ನು ಮಾಡಿಸದೆ ರಾಜನಂತೆ ಸಾಕಿ ಬೆಳೆಸಿದ್ದರು. ರಾಜನಂತಿದ್ದ ರಾಜ ಎಂಬ ಆ ಯುವಕನಿಗೆ ಮದುವೆಯಾಯಿತು. ತಾಳಿಕಟ್ಟಿದ್ದು ಇವನೇ. ಆದರೆ ಆಳ್ವಿಕೆ ನಡೆಸುತ್ತಿರುವುದು ಅವನ ಮಡದಿ!!
ಮುಖವಾಡ
ಆ ರಾಜಕಾರಣಿ ಆಗಸ್ಟ್ 15 ರಂದು ಧ್ವಜಾರೋಹಣಮಾಡಿ, ನೆರೆದಿದ್ದ ಸಲಭಿಕರ ಮುಂದೆ ದೇಶದ ಏಳಿಗೆಗೆ ಶ್ರಮಿಸುವುದಾಗಿ ಆಣೆ- ಪ್ರಮಾಣಗಳನ್ನು ಮಾಡಿದ. ಆಗಸ್ಟ್ 16ರಂದು ತಾನು ದೋಚಿದ- ಬಾಚಿದ. ತನ್ನಲ್ಲಿರುವ ಕಪ್ಪು ಹಣವನ್ನೆಲ್ಲ ಭದ್ರವಾಗಿ ಸ್ವಿಸ್ ಬ್ಯಾಂಕಿನಲ್ಲಿಟ್ಟು ಬಂದ!
ದಾಹ
ಹಿಂದಿದ್ದ ಹಳೆಯ ಪಕ್ಷದಲ್ಲಿ ತನಗೆ ಸೂಕ್ತ ಸ್ಥಾನ-ಮಾನ ದೊರೆಯಲಿಲ್ಲವೆಂದು ಪುಣ್ಯಾತ್ಮನೊಬ್ಬ(?) ತನ್ನದೇ ಹೊಸ ರಾಜಕೀಯ ಪಕ್ಷವನ್ನು ಕಟ್ಟಿದ. ಅದರ ಉದ್ಘಾಟನೆಗೆಂದು ದೊಡ್ಡ ಸಮಾವೇಶವನ್ನೇ ಮಾಡಿದ. ಆ ಸಮಾರಂಭದಲ್ಲಿ ಜನರೆಲ್ಲರೂ ಬಿಸಿಲಿನಲ್ಲಿ ನಿಂತು, ಕುಡಿಯಲು ನೀರಿಲ್ಲದೇ ಗಂಟಲು ಒಣಗಿಸಿಕೊಂಡು ಅವನ ಪೊಳ್ಳು ಭಾಷಣವನ್ನು ಕೇಳುತ್ತಿದ್ದರು! ಆ ರಾಜಕಾರಣಿ ಮಾತ್ರ ಎರಡು ಮಾತಿಗೊಮ್ಮೆ ಬಿಸ್ಲೇರಿ ಬಾಟಲಿಯಿಂದ ತಣ್ಣನೆಯ ನೀರನ್ನು ಗಂಟಲಿಗಿಳಿಸಿಕೊಳ್ಳುತ್ತಿದ್ದ...!!
- ನವೀನ್ ಮಧುಗಿರಿ