ನವೆಂಬರ್ 1, ಎಲ್ಲ ಕನ್ನಡಿಗರ ಪಾಲಿಗೂ ಮನೆಹಬ್ಬ. ಆದರೆ, ಕನ್ನಡದ 'ಮೊದಲ ರಾಷ್ಟ್ರಕವಿ' ಮಂಜೇಶ್ವರ ಗೋವಿಂದ ಪೈ ಅವರಿಗೆ 'ಶ್ರಾದ್ಧದ ದಿನ'!
ಯಾಕೆ? ಅಂತ ಕೇಳಿ... 1956, ನ.1ರಂದು ಚದುರಿಹೋಗಿದ್ದ ಕನ್ನಡನಾಡು ಒಂದಾಗುತ್ತೆ ಎಂಬ ಸುದ್ದಿ ಕೇಳಿ ಪೈಗಳು ಕುಣಿದಾಡಿದ್ದರು. 'ತಾಯೆ ಬಾರ ಮೊಗವ ತೋರ' ಹಾಡು ಬರೆದು, ಅದನ್ನವರು ಭುವನೇಶ್ವರಿಯ ಚರಣಗಳಿಗೆ ಅರ್ಪಿಸಿದ್ದೂ ಅದೇ ಸಮಯದಲ್ಲೇ. ಆದರೆ, ಅವರ ಹುಟ್ಟೂರು ಆ ದಿನದಂದು ಕೇರಳಕ್ಕೆ ಸೇರಿಹೋಯಿತು. ಆ ದುಃಖ ಅವರಿಗೆ ತಡೆಯಲಾಗಲಿಲ್ಲ. ಆಗ ಅವರ ಬಾಯಿಯಿಂದ ಬಂದ ಮಾತಿದು, 'ನವೆಂಬರ್ 1 ನನ್ನ ಪಾಲಿಗೆ ಶ್ರಾದ್ಧದ ದಿನ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಹೇಗೆ ಸಹಿಸುವುದು? ನಾನು ಹುಟ್ಟಿದ್ದು ಕನ್ನಡನಾಡಿನ ಮಂಜೇಶ್ವರದಲ್ಲಿ. ಆದರೆ, ಈಗ ಮಂಜೇಶ್ವರವು ಕಾಸರಗೋಡಿನ ಜತೆಗೆ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ ಅಂದರೆ ಮಂಗಳೂರಿನಲ್ಲಿ ಸಾಯಲು ಇಷ್ಟಪಡುತ್ತೇನೆ'.