ಮಕರಂದ/ದೋಣಿ

ಕ್ಷಮೆ ಕೇಳಿದವಳ ಕಣ್ಣಲ್ಲಿ ಧುಮ್ಮಿಕ್ಕುವ ಜಲಪಾತ...

ಪ್ರೀತಿಯ ಪ್ರಾರ್ಥನಾ...

ಅನುಮಾನವೆನ್ನುವುದು ಒಂದು ಪೆಡಂಭೂತ. ಸಂಶಯದ ಕೈಗೆ ಮನಸ್ಸು- ಬುದ್ಧಿ ಕೊಟ್ಟರೆ ಬದುಕು ಮುಳ್ಳಿನ ಮೇಲಿನ ನಡಿಗೆ. ಅದೇಕೆ ಅನುಮಾನವೆಂಬ ಪಿಶಾಚಿ ನಿನ್ನ ತಲೆ ಹೊಕ್ಕಿತೋ ನಾ ಕಾಣೆ. ಪರಿಪರಿಯಾಗಿ ಬೇಡಿಕೊಂಡರೂ ನಿನಗೆ ನನ್ನ ಮೇಲಿನ ಅನುಮಾನ ಕಿಂಚಿತ್ತೂ ಕಡಿಮೆಯಾಗಲಿಲ್ಲ. ನಾನು ನಿನ್ನವನು ಕಣೇ. ಅದ್ಯಾವದೋ ಹುಡುಗಿಯ ಹತ್ತಿರ ನಗುತ್ತ ಮಾತಾಡುತ್ತ ನಿಂತರೆ ಅದಕ್ಕೆ ಅನುಮಾನವೇಕೆ ಪಡಬೇಕು? ಹುಚ್ಚಿ... ಇಷ್ಟು ಹೊಟ್ಟೆಕಿಚ್ಚು ಪಡೋದು ಒಳ್ಳೆಯದಲ್ಲ.

ಅಂದು ಭಾನುವಾರ ನಿನ್ನ ನೋಡುವ ಗಡಿಬಿಡಿಯಲ್ಲಿ ಮನೆ ಬಿಟ್ಟಿದ್ದಂತೂ ನಿಜ. ದಾರಿಯಲ್ಲಿ ನನ್ನ ಹಳೇ ಕ್ಲಾಸ್‌ಮೇಟ್ ಜುಬೇದಾ ಸಿಕ್ಕಳು. ಸಿಕ್ಕು ಬಹಳ ದಿನಗಳಾಗಿತ್ತಲ್ಲ; ಮಾತಿಗೆ ಕೂತೆವು. ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ಆಕೆಗೆ ಸಾಹಿತ್ಯವೆಂದರೆ ಪ್ರಾಣ. ನನಗೂ ಸಾಹಿತ್ಯದ ಗೀಳು. ಓದಿಕೊಂಡ ಪುಸ್ತಕಗಳ ಬಗ್ಗೆ ಪರಸ್ಪರ ಮೆಚ್ಚುಗೆ. ಆಶ್ಚರ್ಯ ವ್ಯಕ್ತಪಡಿಸುತ್ತಾ, ನಮ್ಮ ಹಳೆಯ ದಿನಗಳತ್ತ ಒಂದು ಇಣುಕು ನೋಟ ಬೀರಿ ನಕ್ಕಿದ್ದೇ ನಕ್ಕಿದ್ದು. ಕಳ್ಳಿ ನೀನು ಅದ್ಯಾವಾಗ ಬಂದು ನಿಂತುಕೊಂಡೆಯೋ ಗೊತ್ತೇ ಆಗಲಿಲ್ಲ. ಮೂಗಿನ ಮೇಲೆ ಸಿಟ್ಟು ಉಕ್ಕೇರುತ್ತಿತ್ತು. ಕಣ್ಣಲ್ಲಿ ಕೆಂಡದಂಥ ಕೋಪ. ನಿನ್ನ ಸಿಟ್ಟಿಗೆ ಬೆದರಿ ನನ್ನ ಹಳೆಯ ಗೆಳತಿಯನ್ನು ನಿನಗೆ ಪರಿಚಯ ಮಾಡಿಸೋದು ಕೂಡ ಮರೆತುಬಿಟ್ಟೆ. ಕನಿಷ್ಟ ಪಕ್ಷ ಆಕೆಗೆ ಬೈ ಕೂಡ ಹೇಳಲಿಲ್ಲ. ನಿನ್ನ ಸಂತೈಸೋದರಲ್ಲಿ ಸಾಕು ಸಾಕಾಗಿತ್ತು.

ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ...!
ಎಷ್ಟು ಹೇಳಿದರೂ ನಿಂದೊಂದೇ ಹಠ. "ನನ್ನ ಬಿಟ್ಟು ಇನ್ನೊಬ್ಬ ಹುಡುಗಿ ಹತ್ತಿರ ಮಾತನಾಡಿದ್ದು ಏಕೆ?" ಎನ್ನೋದು. ಅಲ್ಲ ಪ್ರಾರ್ಥನಾ... ಒಂದು ಹುಡುಗಿಯೊಂದಿಗೆ ಮಾತನಾಡಿದಾಕ್ಷಣ ಸಂಬಂಧ ಕಲ್ಪಿಸಿಕೊಂಡು ಮಾತು ಬಿಡೋದು, ಮುನಿಸಿಕೊಳ್ಳೋದು ಮಾಡಿದರೆ ಹೇಗೆ? ಆ ಹುಡುಗಿ ತಂಗಿಯಾಗಿರಬಹುದು, ಅಕ್ಕನಾಗಿರಬಹುದು ಅಥವಾ ಒಬ್ಬ ಒಳ್ಳೆಯ ಗೆಳತಿಯಾಗಿರಬಹುದು. ಸುಮ್ಮಸುಮ್ಮನೆ ಅನುಮಾನಪಟ್ಟು, ಏನೇನೋ ಕಲ್ಪಿಸಿಕೊಂಡು ತಲೆ ಕೆಡಿಸಿಕೊಳ್ಳೇದು ಸಮಂಜಸವೇ? ನಾನಂತೂ ಖಂಡಿತವಾಗಿ ಹೇಳ್ತೀನಿ, ನಿನ್ನನ್ನಲ್ಲದೆ ಬೇರೆ ಯಾರನ್ನು ಕಣ್ಣೆತ್ತಿ ನೋಡಲು ಸಾದ್ಯವಿಲ್ಲ. ಆ ಭಾವನೆ ನಿನ್ನಲ್ಲಿ ಹುಟ್ಟುವುದೂ ಬೇಡ. ಅವಳು ಹಳೆಯ ಕ್ಲಾಸ್‌ಮೇಟ್ ಆಗಿದ್ದಳೇ ಹೊರತು ಬೇರೇನೂ ಅಲ್ಲ. ನಿನ್ನ ಮೇಲೆ ಪ್ರಾಮಿಸ್ ಮಾಡಿ ಹೇಳ್ತೀನಿ. ನೀನಷ್ಟೇ ನನ್ನ ಜೀವ, ನನ್ನುಸಿರು. ನಿನ್ನ ಸ್ಥಾನವನ್ನು ಬೇರೊಬ್ಬರು ಅಲಂಕರಿಸುವುದು ಸಾಧ್ಯವೇ ಇಲ್ಲ.

ಕೊನೆಯದಾಗಿ ಒಂದು ಮಾತು. ಪ್ರೀತಿ ಅನುಮಾನದ ಅಡಿಪಾಯದ ಮೇಲೆ ಭದ್ರವಾಗಿರಲು ಎಂದೆಂದಿಗೂ ಸಾಧ್ಯವಿಲ್ಲ. ಪರಸ್ಪರರಲ್ಲಿ ನಂಬಿಕೆಯ ಸೇತುವೆ ಸಂಬಂಧ ಕಲಿಸಬೇಕೆ ಹೊರತು ಸಂಶಯದ ಹುತ್ತ ನಮ್ಮಿಬ್ಬರ ನಡುವೆ ಬೆಳೆಯಗೊಡಬಾರದು. ಇದನ್ನು ನೀನು ಅರ್ಥಮಾಡಿಕೊಳ್ಳುತ್ತೀಯಾ ಅಂತ ಭಾವಿಸಿದ್ದೇನೆ. ಈ ಪತ್ರ ಓದಿದ ಕೂಡಲೇ ನೀನು ಸಾರಿ ಕೇಳುತ್ತಾ ಕಣ್ಣಲ್ಲಿ ಕಣ್ಣೀರ ಜಲಪಾತ ತುಂಬಿಕೊಂಡು ನನ್ನ ಬಳಿ ಓಡೋಡಿ ಬರುತ್ತೀ ಅಂತಲೂ ಗೊತ್ತು. ನಿನ್ನ ಪ್ರೀತಿಗೆ, ಒಲವ ಒರತೆಗೆ ನನ್ನೆದೆಯಲ್ಲಿ ಎಂದೆಂದಿಗೂ ಶಾಶ್ವತವಾದ ಸ್ಥಾನವಿದೆ. ನಾನು ಕೇವಲ ನಿನ್ನವನು. ನಿನ್ನವನಾಗಿಯೇ ಇರ್ತೀನಿ ಅಯ್ತಾ?
ನಿನ್ನವನು.

- ನಾಗೇಶ್ ಜೆ. ನಾಯಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ