ಸಂಜೆ
ಯಾರಿಗೋ ಕಾಯುತ್ತ ಕುಳಿತಿದ್ದ ಸಂಜೆ ಅವರು ಬಂದ ಮೇಲೆ ಎದ್ದು ಹೋಯಿತು. ತನ್ನ ಪಾಲಿನ ಸುಖ ಅರಸಿ.
ನೆನಪು
ನೀನು ದೂರ ಸರಿ... ಅವಳೆಂದಳು. ಅವನು ಸರಿ ಎಂದು ಸರಿದ... ಅವಳ ನೆನಪುಗಳ ತೀರಕ್ಕೆ.
ಅಗತ್ಯ
ಕಸದ ತೊಟ್ಟಿಯಲ್ಲಿ ಅಗಳು ಅನ್ನ ಅರಸುತ್ತಿದ್ದ ಅವನಿಗೆ ಹಣ ಕೊಡಲು ಹೋದೆ. ಅವನು ಕಣ್ಣೆತ್ತಿಯೂ ನೋಡಲಿಲ್ಲ.
ಅದಲು ಬದಲು
ಸುತ್ತಲೂ ಒಂದು ಜಗತ್ತು. ಅವನೊಳಗೇ ಇನ್ನೊಂದು ಜಗತ್ತು. ಒಂದು ಕರಾಳ ಮತ್ತೊಂದು ನಿರಾಳ. ಎರಡರ ಬಣ್ಣವೂ ಆಗಾಗ ಅದಲು ಬದಲು.
ಮಳೆ
ಕಾಡ ನಡುವಿನ ಮರದಡಿ ನಿಂತು ಕಣ್ತುಂಬಿಕೊಂಡ ಮಹಾಮಳೆಯ ಸದ್ದು ಈಗಲೂ ಕಿವಿಗೆ ಮುತ್ತಿಕ್ಕುತ್ತಿದೆ. ಮನಸ್ಸು ನಾಚಿಕೊಳ್ಳುತ್ತಿದೆ.
ಪ್ರೀತಿ
ಮಳೆ ತೊರೆದು ಹೋದ ಊರಲ್ಲಿ ಹರಿಯುತ್ತಿರುವ ಹೊಸ ನದಿ ಅವಳು. ತೀರದಲ್ಲಿ ಕೆಲಸವಿಲ್ಲದ ಕೊಡೆಗಳು ಮಾತಿಗೆ ಕೂತಿವೆ.
ಮಿತಿ
'ಇಷ್ಟೇ' ಎಂಬ ಮಿತಿಯೊಳಗೆ ಬಂಧಿಯಾದವರ ಬದುಕು ದಿನಕ್ಕೊಂದು ಬಣ್ಣ ಕಳೆದುಕೊಳ್ಳುತ್ತಿದೆ.
- ಎಚ್.ಕೆ. ಶರತ್