ಅವಳ ಕನಸುಗಳಿಗೆ ರೆಕ್ಕೆ ಹಚ್ಚಿದೆ
ರೆಕ್ಕೆ ಬಲಿತ ಮೇಲೆ; ಗೂಡು ತೊರೆದು
ಹಾರಿಹೋದಳು...
---
ಎಷ್ಟೊಂದು ಪ್ರೀತಿ ಸುರಿದೆ
ಅವಳ ಬರಡು ಹೃದಯಕ್ಕೆ;
ಕೊಂಚವೂ ಹಸಿರು ಮೂಡಲಿಲ್ಲ...
---
ತುಂಬಾ ಆಸೆ ಪಟ್ಟೆ
ಆ ಬೆಳ್ಳಿಮೋಡಕ್ಕೆ; ಹನಿಯೊಡೆಯದೇ
ಯಾವುದೋ ಗಾಳಿಗೆ ದಾರಿ ತಪ್ಪಿತು...
---
ಪದೇ ಪದೆ ಅವಳ ಹೆಸರನ್ನೇ
ಕೂಗುವ ನನ್ನ ಉಸಿರನ್ನು;
ನಿಲ್ಲಿಸಿ ಬಿಡಲು ನಿರ್ಧರಿಸಿದ್ದೇನೆ...
---
ಹೆತ್ತ ಕನಸುಗಳನ್ನು
ಕತ್ತು ಹಿಸುಕಿ ಕೊಲ್ಲಬಯಸಿದ್ದೇನೆ, ಆದರೆ
ಅವಳ ಮತ್ತಲ್ಲಿ ಮೈಮರೆಯುತ್ತಿದ್ದೇನೆ...
---
ಅವಳ ನೆನಪಿನಲ್ಲಿ,
ನನಗೆ ನನ್ನ ಬದುಕಿನ ನೆನಪಾಗುತ್ತಿಲ್ಲ...
---
ಅವಳ ಬದುಕಿಗೆ
ಬಣ್ಣ ಹಚ್ಚುವ ಆತುರದಲ್ಲಿ;
ನನ್ನ ಬದುಕಿನ ಬಣ್ಣವೇ ಮಾಸಿಹೋಗಿತ್ತು...
---
ಅವಳ ಕೊರಳಿಗೆ ಕಟ್ಟಿದ ತಾಳಿ
ನನ್ನ ಕೊರಳಿಗೆ ಉರುಳಾಗಿತ್ತು...
- ನಾಗರಾಜ್ ವಾಯ್. ಕಾಂಬಳೆ