ನನ್ನೊಳಗಿನ ಜೀವವೆ...
ಕಳೆದೋಗುವ ಮುನ್ನವೇ ಈ ಜೀವವ ಸೇರಿದ ಪ್ರೀತಿ. ನಿನಗೆ ಹೇಳಬೇಕೆಂದುಕೊಂಡ ಯಾವುದೋ ಒಂದು ತುಡಿತ ನನ್ನೆದೆಯೊಳಗೆ ಹಾಗೆ ನೆಲೆಯೂರಿದೆ. ಹೇಳಲಾಗದೆ ಚಡಪಡಿಸುತ್ತಿರುವೆ. ನಿನ್ನ ಪ್ರೀತಿಯಲ್ಲಿ ಸಿಲುಕಿದಾಗಿನಿಂದ ನಾನು ನಾನಾಗಿಲ್ಲ. ನನ್ನ ಯೊಚನೆಗಳೇ ಬೇರೆಯಾಗಿವೆ. ನನ್ನ ದಾರಿಯೇ ಬದಲಾಗಿದೆ. ಕಣ್ಣ ನೋಟವೇ ಬದಲಾಗಿದೆ. ಮನಸ್ಸು ಮಾತೇ ಕೇಳುತ್ತಿಲ್ಲ... ಕಾಣೋ ಕನಸೆಲ್ಲ ನಿನದಾಗಿದೆ. ನನಗೇಕೆ ಹೀಗೆಲ್ಲ ಎಂದು ಪ್ರಶ್ನಿಸಿದರೆ ಉತ್ತರ ಸಿಗದೆ ಆ ಪ್ರಶ್ನೆ ಹಾಗೆಯೇ ಉಳಿದಿದೆ. ಹೌದು, ನನಗೇಕೆ ಹೀಗೆ?
ನಿನ್ನೊಟ್ಟಿಗೆ ಆಡುವ ಆ ತುಂಟ ಜಗಳಕ್ಕೆ ಮನಸ್ಸು ಅದೆಷ್ಟು ಸಂತೋಷಿಸುವುದೋ ನಾ ವಿವರಿಸಲಾರೆ. ನಿನ್ನೊಟ್ಟಿಗೆ ಕುಳಿತು ಕಳೆದ ಸಮಯ ತಾಯಿಯ ಮಡಿಲಿಂದ ಮಗು ಜನ್ಮವ ಪಡೆದು ಹೊರಜಗತ್ತು ಕಾಣುವ ಹಾಗೆ ನಿನ್ನಲ್ಲಿ ನಾ ಆ ಹೊಸ ಜಗವ ಕಾಣುತಿಹೆನು. 'ನನ್ನೊಳಗಿರುವ ನಿನ್ನನ್ನು ಪ್ರತಿ ಗಳಿಗೆಯೂ ನೆನೆಯುತ್ತಿರುತ್ತೇನೆ. ಕಳೆದೋಗುವ ಮುನ್ನವೇ ಈ ಮನದಲ್ಲಿನ ಪ್ರೀತಿಯ ಅರ್ಥೈಸಿ, ಈ ಜೀವವಾ ಸೇರಿದ ಪ್ರೀತಿ, ನನ್ನ ಭಾವನೆಗಳಿಗೆ ಜೀವ ತುಂಬಿ ಪ್ರೀತಿಸಿದ ನಿನ್ನ ಪ್ರೀತಿ ಈ ಜೀವ ಕಳೆದೋಗುವವರೆಗೂ ನನ್ನದಾಗಿರಲಿ ಎಂಬುದೇ ಈ ಜೀವದ ಹಂಬಲ.'
ಇಳಿಸಂಜೆಯ ತಂಪಾದ ಗಾಳಿಯಲ್ಲಿ ಕುಳಿತು ನಿನ್ನ ನೆನೆದಾಗ ದುಂಬಿಯ ಸ್ಪರ್ಶಕ್ಕೆ ಹೂವು ಹೇಗೆ ಅರಳುವುದೋ ಹಾಗೇ ನೀ ಕೊಟ್ಟ ಮುತ್ತು ನೆನೆಪಾಗಿ ಮನವು ಅರಳಿ ಹಕ್ಕಿಯಂತೆ ಹಾರಲಾರಂಭಿಸುತ್ತದೆ. ಕೆಲವೊಮ್ಮೆ ಈ ನೋವಿನ ಮನಕ್ಕೆ ನೀ ಕೊಟ್ಟ ಸಾಂತ್ವನ ಎಲ್ಲ ನೋವನ್ನು ಮರೆಸಿ ಸದಾ ಹಸನ್ಮುಖಿಯಾಗಿರುವಂತೆ ಮಾಡಿದೆ ನನ್ನನ್ನು. ಈ ಸಮಯ ನೀ ದೂರವಿದ್ದರೇನು? ನೀ ನನ್ನಲ್ಲಿ ಕಟ್ಟಿದ ಆ ಸವಿನೆನಪುಗಳು ಮಾತ್ರ ಜೀವಂತ. ಆ ನೆನಪುಗಳಲ್ಲೇ ನಾ ನಿನ್ನ ಕಾಣುತಿಹೆನು. ಈ ಹೃದಯಕ್ಕೆ ನಿನ್ನ ಪ್ರೀತಿಯ ರಾಯಭಾರಿ ನೀಡಿಹೆನು.
ನಿನಗೆಂದೇ ಮುಡಿಯುತ್ತಿರುವ ಈ ಮನವ ಸ್ವೀಕರಿಸಿ, ಇನ್ನಷ್ಟು ದಿನ ಮಿಡಿಯುವಂತೆ ಪ್ರೀತಿಯೆಂಬ ಜೀವವಾ ತುಂಬು ಗೆಳೆಯ. ನಿನ್ನ ಸಾಂಗತ್ಯವ ಬಯಸುತಿಹೆನು. ಕೊನೆಯವರೆಗೂ ನಿನ್ನ ಪ್ರೀತಿಯಲ್ಲಿ ಜೀಕುವ ಕನಸು ನನ್ನದು.
ನನ್ನದೆಗೆ ಒಡೆಯನಾಗಿರುವ ನಿನಗೆ, ನೋಟದಲ್ಲೇ ನನ್ನ ಬಂಧಿಯಾಗಿಸಿದ ಆ ನಿನ್ನ ಎರಡು ಕಣ್ಗಳಿಗೆ ಚುಂಬಿಸಿ, ನಿನ್ನೆದೆಗೆ ಒಮ್ಮೆ ತಬ್ಬಿ, ತೋಳಬಂದಿಯಲ್ಲಿ ಬಂಧಿಯಾಗಿ ಕೇಳಬೇಕೆಂದೆನಿಸುತ್ತಿದೆ ನಿನ್ನನ್ನು.... 'ನಾ ಕಾಣೋ ಕನಸಿಗೆ ನಾಯಕನಾಗಿ. ನಾ ನಡೆಯೋ ದಾರಿಯಲ್ಲಿ ನನ್ನ ನೆರಳಾಗಿ. ಮಗುವಿನಂತೆ ನನ್ನ ಕೈ ಹಿಡಿದು ನಾ ಹಾಕುವ ಹೆಜ್ಜೆಗೆ ನೀ ಜೊತೆಯಾಗುವೆಯಾ' ಎಂದು...
ನನ್ನ ಕೈ ಹಿಡಿದು ಈ ಬಾಳಿಗೆ ನೀ ಜೊತೆಯಾಗುವೆಯಾ ನನ್ನೊಳಗಿನ ಜೀವವೇ.
ಎಂದಿಗೂ ನಿನ್ನ ನಿರೀಕ್ಷೆಯಲ್ಲಿರುವ ಜೀವ.
- ಶಿಲ್ಪ ಎಸ್. ಕುಮಾರ್