ದೂರದ ತಿರುವಿನಲ್ಲಿ ಕುದುರೆಯ ಖರಪುಟದಿಂದೆದ್ದ ಧೂಳೇ ಸಾರಿ ಹೇಳುತ್ತಿತ್ತು. ಶಕುನಿ ಮತ್ತು ಆತನ ನೂರು ಜನ ತಮ್ಮಂದಿರು ದುರ್ಯೋಧನನ ಅರಮನೆಯತ್ತ ಬರುತ್ತಿರುವ ಸಂದೇಶವನ್ನು ಹಾಗೆ ಬರುತ್ತಿರುವಾಗ ಅವರಲ್ಲೊಬ್ಬ ಸವಾರಿ ಮಾಡುತ್ತಿದ್ದ ಕುದುರೆ, ಹಾದಿಯಲ್ಲಿನ ಪುಟ್ಟ ದಿಬ್ಬವೊಂದಕ್ಕೆ ಎಡವಿ ಮುಗ್ಗರಿಸಿತು. ಆ ದಿಬ್ಬದ ಕಾರಣದಿಂದಲೇ ತಮ್ಮವನೊಬ್ಬ ಕುದುರೆಯಿಂದ ಉರುಳಿದ್ದು ಕಂಡ ಸಹೋದರರು, ಆ ಕೂಡಲೇ ಕುದುರೆಯಿಂದ ಇಳಿದು ದಿಬ್ಬವನ್ನು ಕಡಿದು ನೆಲಸಮ ಮಾಡಿ ಮುಂದೆ ಹೊರಟರು.
ಅರಮನೆಯ ಮಹಡಿಯಿಂದ ಇದನ್ನೆಲ್ಲಾ ಗಮನಿಸುತ್ತಿದ್ದ ದುರ್ಯೋಧನನ ಮನದಲ್ಲಿ ಆಶ್ಚರ್ಯ ಮತ್ತು ಆತಂಕಗಳು ಒಟ್ಟೊಟ್ಟಿಗೇ ಕಾಣಿಸಿಕೊಂಡವು. ಸಹೋದರನೊಬ್ಬ ಅವಸರದಲ್ಲಿ ಮುಗ್ಗರಿಸಿ ಬಿದ್ದಿದ್ದೇ ನೆಪವಾಗಿ ಆ ದಿಬ್ಬವನ್ನು ನೆಲಸಮ ಮಾಡಿದವರು; ನಾಳೆ ಏನಾದರೂ ನಮ್ಮೊಡನೆ ಹಗೆತನಕ್ಕೆ ಬಿದ್ದರೆ ನಮ್ಮನ್ನೂ ನೀಗಿಸಿ ಬಿಡಬಹುದಲ್ಲಾ...! ಆತಂಕ ಮನದಲ್ಲಿ ಹೆಡೆಯಾಡತೊಡಗಿತು. ಇನ್ನು ತನ್ನ ನೂರ ಜನ ಮಾವಂದಿರನ್ನು ನಿರ್ಲಕ್ಷಿಸಿದರೆ ಮುಂದೆ ಅವರಿಂದ ತನಗೆ ಆಪತ್ತು ತಪ್ಪಿದ್ದಲ್ಲವೆಂಬ ಭಾವನೆ ಮೊದಲಾಯಿತು. ಆ ಕ್ಷಣಕ್ಕೆ ದುಷ್ಟ ವಿಚಾರವೊಂದು ಮನದಲ್ಲಿ ಹಾದು ಹೋಯಿತು. ಅದು, ಸದ್ದಿಲ್ಲದೇ ಅವರನ್ನೆಲ್ಲಾ ಮುಗಿಸಿ ಬಿಡಬೇಕೆಂಬ ದುರಾಲೋಚನೆ.
ಅರಮನೆಗೆ ಬಂದ ಸೋದರ ಮಾವಂದಿರನ್ನು ದುರ್ಯೋಧನ ಆದರದಿಂದಲೇ ಸ್ವಾಗತಿಸಿ ಬಗೆಬಗೆಯಾಗಿಯೇ ಉಪಚರಿಸಿದ. ಅವರ ವಸತಿಗೆಂದು ಮೊದಲೇ ಗುರುತಿಸಿ ವ್ಯವಸ್ಥೆ ಮಾಡಿದ್ದ ನೆಲಮಾಳಿಗೆಯೊಂದರಲ್ಲಿ ಕರೆದುಕೊಂಡು ಹೋದ. ಅವರೆಲ್ಲಾ ನೆಲಮಾಳಿಗೆ ಸೇರಿದ ನಂತರ ಹೊರಗಿನಿಂದ ಬಾಗಿಲು ಭದ್ರಪಡಿಸಿಯೂ ಬಿಟ್ಟ.
ಕೆಲಘಳಿಗೆ ಕಳೆದ ನಂತರ ಅವರಿಗೆ ತಾವೆಲ್ಲಾ ಬಂಧಿಯಾಗಿರುವುದು ಅನುಭವಕ್ಕೆ ಬಂತು. ಅಲ್ಲಿಂದ ಹೊರ ಬರುವ ಅವರ ಪ್ರಯತ್ನ ಫಲಕಾಣಲಿಲ್ಲ. ಕೂಗಾಟ- ಕಿರುಚಾಟಗಳೆಲ್ಲಾ ಅರಣ್ಯರೋದನವಾಯ್ತು. ಆ ಕೋಣೆಗಿದ್ದ ಕಿರು ಕಿಂಡಿಯೇ ಹೊರ ಪ್ರಪಂಚದ ಸಂಪರ್ಕಕ್ಕಿದ್ದ ಏಕಮಾತ್ರ ವ್ಯವಸ್ಥೆ.
ಇವರ ಅರಚಾಟ ಅರಸ ದುರ್ಯೋಧನನಿಗೆ ಕೇಳಿಸದಿದ್ದೀತೇ...? ಆತ ಕಿಂಡಿಯಿಂದಲೇ ಅವರನ್ನೆಲ್ಲಾ ಕೂಗಿ, 'ನಿಮಗೆಲ್ಲಾ ಇನ್ನು ಇದೇ ಪ್ರಪಂಚ. ಪ್ರತಿ ದಿನ ಒಂದು ಹೊತ್ತಿಗೆ ಒಬ್ಬರಿಗಾಗುವಷ್ಟು ಮಾತ್ರ ಊಟ ಸಿಗುತ್ತದೆಂತಲೂ, ನೀವೆಲ್ಲಾ ಅನ್ನ ನೀರಿಲ್ಲದೇ ಸೊರಗಬೇಕೆಂತಲೂ ತಿಳಿಸಿದ'.ಮಾವಂದಿರ ಪರಿಪರಿಯ ಪ್ರಾರ್ಥನೆಗೆ ಮನಕರಗದೇ, ಮುಖ ತಿರುಗಿಸಿ ನೆಡದೇ ಬಿಟ್ಟ.
ದಿನದಿಂದ ದಿನಕ್ಕೆ ಅವರ ಪರಿಸ್ಥಿತಿ ಶೋಚನೀಯವಾಗುತ್ತಾ ಹೋಯಿತು. ಅನ್ನ- ನೀರಿಗೆ ಹಾಹಾಕಾರ; ಹಸಿವಿನಿಂದ ಕೆಲವರದ್ದಂತೂ ಸಾಯುವ ಸ್ಥಿತಿ. ಈ ಯಾತನೆಯಿಂದ ಬಿಡುಗಡೆಯ ದಾರಿ ಯೋಚಿಸಿದ ಶಕುನಿ ಉಳಿದವರೊಡನೆ ಸಮಾಲೋಚಿಸಿದ. ಕೊನೆಗೆ ತಮ್ಮಲ್ಲೇ ಸಮರ್ಥರಾದ ಯಾರಾದರೊಬ್ಬರು ಉಳಿದುಕೊಂಡು ಉಪಾಯದಿಂದ ಹೊರಬಂದು, ಸಮಯ ಸಾಧಿಸಿ ಕೌರವರನ್ನು ನಾಮಾವಶೇಷ ಮಾಡಬೇಕೆಂಬ ತೀರ್ಮಾನ ಅದು. ಆದರೆ ಆ ನೂರು ಜನರಲ್ಲಿ ಸಮರ್ಥರು ಯಾರು ಎಂಬುವನ್ನು ಕಂಡುಕೊಳ್ಳುವುದಾದರೂ ಹೇಗೆ...?
ಅದಕ್ಕಾಗಿ ದೊಡ್ಡವನಾದ ಶಕುನಿ ಒಂದು ಉಪಾಯ ಯೋಚಿಸಿದ. ಅದರಂತೆ ಆ ದಿನದ ಅನ್ನವನ್ನು ಒಂದು ಉಂಡೆ ಮಾಡಿದ. 'ಯಾವುದೇ ಶಸ್ತ್ರದ ಸಹಾಯವಿಲ್ಲದೇ ಈ ಅನ್ನದುಂಡೆಯೊಳಗೆ ದಾರವೊಂದನ್ನು ಪೋಣಿಸಬೇಕೆಂದೂ, ಈ ಕಾರ್ಯದಲ್ಲಿ ಯಶಸ್ವಿಯಾದ ವ್ಯಕ್ತಿ ಮಾತ್ರ ಉಂಡು ಕಾರ್ಯ ಸಾಧಿಸಬೇಕು' ಎಂದ.
ಕೆಲವರೇನೋ ಪ್ರಯತ್ನಿಸಿದರು. ಆದರೆ ಯಾರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಉಳಿದವ ಶಕುನಿ; ಆತ ಸುತ್ತ ನೋಡಿದ, ಅಲ್ಲೊಂದೆಡೆ ಮಣ್ಣಿನಲ್ಲಿ ಸಣ್ಣಸಣ್ಣ ಕುಳಿಗಳನ್ನು ಮಾಡಿಕೊಂಡಿದ್ದ ಹುಳುಗಳು ಕಂಡವು. ಆತನಿಗೆ ಏನು ಹೊಳೆಯಿತೋ...! ಆ ಹುಳುವಿಗೆ ದಾರ ಕಟ್ಟಿ, ಅನ್ನದ ಉಂಡೆಯ ಮೇಲೆ ಬಿಟ್ಟ. ಅದು ಅನ್ನದ ಉಂಡೆಯನ್ನು ಕೊರೆದು, ತೂತು ಮಾಡಿಕೊಂಡು ಆಚೆ ಬಂತು. ಅದರೊಟ್ಟಿಗೆ ದಾರವೂ...!
ಆ ಕಾರಣಕ್ಕಾಗಿ ತಮ್ಮನ್ನು ಸಾವಿನ ದವಡೆಗೆ ನೂಕಿದ ಕೌರವರನ್ನು ನಿರ್ನಾಮ ಮಾಡಲು ತಮ್ಮಲ್ಲೇ ಸಮರ್ಥ ವ್ಯಕ್ತಿಯೊಬ್ಬ ಸಿಕ್ಕನೆಂಬುದೇ ಸಾವಿನ ಮನೆಯೊಳಗೆ ಕಾಣಿಸಿದ ಸಮಾಧಾನ. ಅಂದಿನಿಂದ ಅವರೆಲ್ಲಾ ಶಕುನಿಯೊಬ್ಬನಿಗೆ ಊಟ ಬಿಟ್ಟು ಒಬ್ಬೊಬ್ಬರಾಗಿ ಸಾವಿನ ಹಾದಿ ಹಿಡಿದರು. ತನ್ನ ಕಣ್ಣ ಮುಂದೆಯೇ ತನ್ನ ತಮ್ಮಂದಿರೆಲ್ಲಾ ಹಸಿವಿನಿಂದ ಹುಳುಗಳಂತೆ ಒದ್ದಾಡಿ ಸತ್ತದ್ದು ಕಂಡ ಶಕುನಿ ಇನ್ನಿಲ್ಲದಂತೆ ರೋದಿಸಿದ.
ತನ್ನ ಸತ್ತ ತಮ್ಮಂದಿರ ಮೂಳೆಗಳಿಂದಲೇ ಪಗಡೆಯಾಟದ ದಾಳಗಳನ್ನು ಮಾಡಿಕೊಂಡ. ಮೂಳೆಗಳಿಂದ ತಯಾರಾದ ಆ ದಾಳಗಳಲ್ಲೊಂದು ವಿಶೇಷತೆ ಇತ್ತು. ಅವು ಶಕುನಿ ಯಾವಾಗ ಎಷ್ಟು ಬೀಳಬೇಕೆಂದು ಅಪೇಕ್ಷೆ ಪಡುತ್ತಾನೋ ಅಷ್ಟು ಬೀಳುತ್ತಿದ್ದವು. ಆ ದಾಳಗಳಿಂದಲೇ ಶಕುನಿ, ಪಾಂಡವರನ್ನು ದ್ಯೂತದಲ್ಲಿ ಸೋಲಿಸಿದ. ಅಣ್ಣ- ತಮ್ಮಂದಿರಾದ ಕೌರವ, ಪಾಂಡವರ ಮಧ್ಯೆ ಹಗೆತನ ತಂದಿಟ್ಟ. ಮುಂದೆ ಈ ದಾಯಾದಿಗಳ ಕಲಹದಲ್ಲಿ ಕೌರವರೆಲ್ಲಾ ನಾಶವಾದದ್ದು ಇತಿಹಾಸ.
- ಹೊಸ್ಮನೆ ಮುತ್ತು