ಚುನಾವಣೆ ಪ್ರಚಾರದಲ್ಲಿ ಎಲ್ಲಾ ಅಭ್ಯರ್ಥಿಗಳೂ ಬಿಜಿಯಾಗಿದ್ದರು. ಆಡಳಿತ ಪಕ್ಷದ ಮುಖಂಡನೊಬ್ಬ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಪರಿ ಪರಿಯಾಗಿ ಹೊಗಳುತ್ತಾ ಹೇಳಿದ: 'ಮುಂದೆ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮೊಟ್ಟ ಮೊದಲು ಎಲ್ಲಾ ಮನೆಗಳಿಗೂ ನೀರು ಕೊಡುತ್ತೇವೆ'. ಸಭೆಯ ಮುಂದೆ ಕುಳಿತ ವೃದ್ಧರೊಬ್ಬರು ಗೊಣಗಿಕೊಂಡರು. ನಿಜ ನಿಜ...! ಈ ಐದು ವರ್ಷ ನಿಮಗೆ ಅಧಿಕಾರ ಕೊಟ್ಟು ಉಪ್ಪು ತಿಂದಿದ್ದೇವೆ. ಇನ್ನೈದು ವರ್ಷ ನೀರು ಕುಡಿಯುತ್ತೇವೆ ಬಿಡಿ....
ದಾರಿಯಲ್ಲಿ ಇಬ್ಬರು ಗಂಡಸರು ಕೊರಳಪಟ್ಟಿ ಹಿಡಿದು ಹೊಡೆದಾಡುತ್ತಿದ್ದರು. ಒಬ್ಬ ಪುಟ್ಟ ಬಾಲಕ ಶಾಲೆಗೆ ಹೋಗದೆ ಅವರನ್ನೇ ನೋಡುತ್ತಾ ನಿಂತಿದ್ದ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಅವನ ಮೇಷ್ಟ್ರಿಗೆ ಬಾಲಕನನ್ನು ಕಂಡು ರೇಗಿತು. 'ಕತ್ತೇ...! ಶಾಲೆಗೆ ಹೋಗದೆ ಜಗಳ ನೋಡುತ್ತಾ ನಿಂತಿದ್ದೀಯ... ಕರೀ ನಿಮ್ ಅಪ್ಪನ್ನಾ...' ಅಂದರು.
'ಅಪ್ಪ ಯಾರು ಅಂತಾನೆ ಈ ಜಗಳ ಆಗ್ತಿರೋದು' ಮೇಷ್ಟ್ರೇ, ಬಾಲಕ ತಣ್ಣಗೆ ಉತ್ತರಿಸಿದ.
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ದೇಶದಲ್ಲಿ ಬಂದ್ ಆಚರಿಸಲಾಯಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಒಂದಷ್ಟು ಕಿಡಿಗೇಡಿಗಳು ಸರ್ಕಾರಿ ಆಸ್ತಿ-ಪಾಸ್ತಿಗಳನ್ನು ಮನಬಂದಂತೆ ಹಾಳುಗೆಡವಿ ಬಂದ್ ಯಶಸ್ವಿ ಎಂದು ಬೊಬ್ಬೆ ಹೊಡೆದರು. ಸರ್ಕಾರ ಏನೂ ಮಾತನಾಡದೇ ಮುಂದಿನ ಬಜೆಟ್‌ನಲ್ಲಿ ಸಾಮಾನ್ಯ ಜನರ ಮೇಲೆ ಮತ್ತಷ್ಟು ತೆರಿಗೆ ಜಡಿಯಿತು.
ಆಡಳಿತದಲ್ಲಿರುವ ಪಕ್ಷ ಯಾವ ಸೌಲಭ್ಯಗಳನ್ನು ಒದಗಿಸಲಿಲ್ಲ ಎಂಬ ಕಾರಣಕ್ಕೇ ಆ ಹಳ್ಳಿಯವರು ಚುನಾವಣೆಯನ್ನು ಬಹಿಷ್ಕರಿಸಿದರು. ಯಾರೊಬ್ಬರೂ ಅವರ ಮನವೊಲಿಸಲು ಹೋಗಲಿಲ್ಲ. ಮುಂದೆ ಮತ್ತೆ ಹಿಂದೆ ಆಡಳಿತ ನಡೆಸಿದ ಪಕ್ಷವೇ ಅಧಿಕಾರಕ್ಕೆ ಬಂತು. ಹಳ್ಳಿಯ ಜನ ಮತ ಹಾಕಲಿಲ್ಲ ಎಂಬ ಕಾರಣಕ್ಕೇ ಮತ್ತೆ ಯಾವುದೇ ಸೌಲಭ್ಯಗಳನ್ನೂ ಅವರಿಗೆ ನೀಡಲಿಲ್ಲ.
-ಮಧು ಮಾಲ್ವೆ, ಸಾಗರ