ಎಲೆಕ್ಷನ್ ಸುಳಿದುಹೋಯಿತು. ಹಾಗಾಗಿ, ನಾಡಿಗೇರ ಕೃಷ್ಣರಾಯರು ನೆನಪಾದರು!
ಸುವಿಖ್ಯಾತ ಹಾಸ್ಯ ಸಾಹಿತಿ ದಿವಂಗತ ನಾಡಿಗೇರ ಕೃಷ್ಣರಾಯರು ಕಾಲಾತೀತರಾಗಿ ಇಪ್ಪತ್ತೊಂದು ವರ್ಷಗಳೇ ಉರುಳಿವೆ. 63 ಕೃತಿಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯ ಭಂಡಾರವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ನಾಡಿಗೇರ ಕೃಷ್ಣರಾಯರು ಸ್ವಭಾವತಃ ಸರಳ ಸುಂದರಜೀವಿ. ನಾಡಿನಾದ್ಯಂತ ಓದುಗರ ವಲಯದಲ್ಲಿ ಅಪಾರ ಜನಪ್ರಿಯತೆ ಹಾಗೂ ಮನ್ನಣೆ ಗಳಿಸಿದ್ದ ನಾಡಿಗೇರರು ಆರ್ಥಿಕ ದೃಷ್ಟಿಯಿಂದ ಹೇಳುವುದಾದರೆ, ಸಾಮಾನ್ಯರಲ್ಲಿ ಸಾಮಾನ್ಯರು ಎಂಬಂತಿದ್ದವರು. ಹಣ, ಹಾಡು, ಹಸೆಮಣೆಗಾಗಿ ಅವರೇನೂ ಹಪಿಹಪಿಸಿದವರಲ್ಲ.
ದೈನಂದಿನ ಬದುಕಿನಲ್ಲಿ ಜರುಗುತ್ತಿದ್ದ ಸಣ್ಣಪುಟ್ಟ ಘಟನೆಗಳಿಗೂ ಉಪ್ಪು ಸೊಪ್ಪು ಸೇರಿಸಿ, ಹಾಸ್ಯದ ಲೇಪಿಸಿ ಓದುಗರಲ್ಲಿ ನಗೆಬುಗ್ಗೆಯನ್ನು ಚಿಮ್ಮಿಸುತ್ತಿದ್ದವರು ನಾಡಿಗೇರ್. ಈ ಮಾತಿಗೆ ನಿದರ್ಶನವೆಂಬಂತೆ ಇಲ್ಲೊಂದು ಪುಟ್ಟ ಪ್ರಸಂಗ...
ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗುತ್ತಿದ್ದ ಸಮಯ. ಪ್ರತಿ ಪಕ್ಷದಲ್ಲೂ ಪ್ರತಿಷ್ಠಿತ ವ್ಯಕ್ತಿಗಳನ್ನು ಕಣಕ್ಕಿಳಿಸುವ ಕಾಲ. ಆ ಕಾಲದಲ್ಲೊಮ್ಮೆ ಒಬ್ಬ ಧುರೀಣ ರಾಜಕಾರಣಿ ನಾಡಿಗೇರರ ಮನೆಗೆ ಬಂದರು. ನಾಡಿಗೇರರು ಸಿಗರೇಟನ್ನು ಭಂಗಿ ಸೇದುವ ಭಂಗಿಯಲ್ಲಿ ಬೆರಳುಗಳ ನಡುವೆ ಹಿಡಿದು, ನೆಟಿಕೆ ಹೊಡೆಯುವುದರ ಮೂಲಕ ಬೆಳೆದ ಬೂದಿಯನ್ನು ಪಕ್ಕಕ್ಕೆ ಚಿಮ್ಮುತ್ತ, ಕಣ್ಮುಚ್ಚಿ ಏನನ್ನೋ ಯೋಚಿಸುತ್ತ, ಚಿಂತನಾಲಹರಿಯಲ್ಲಿ ಮಗ್ನರಾಗಿ, ಇಹಲೋಕವನ್ನೇ ಮರೆತಿರುವ ಒಬ್ಬ ವಿಭೂತಿ ಪುರುಷನಂತೆ ತೋರಿ ಕೂತಿದ್ದರು. ನಾಡಿಗೇರರ ಎದುರು ಆ ರಾಜಕಾರಣಿ ಬಂದು ಕುಳಿತರು. ಸಮಾಧಿ ಸ್ಥಿತಿಯನ್ನು ತಲುಪಿದಂತಿದ್ದ ನಾಡಿಗೇರರನ್ನು ಎಬ್ಬಿಸಿ ಅವರ ಗಮನ ಸೆಳೆಯಲು ಒಮ್ಮೆ ಕೆಮ್ಮಿದರು. ಇನ್ನೊಮ್ಮೆ ಕ್ಯಾಕರಿಸಿದರು. ಈ ಕರ್ಕಶ ಕರ್ಣಕಠೋರ ಶಬ್ದವನ್ನು ಕೇಳುತ್ತಲೇ ಬೆಚ್ಚಿ ಕಣ್ತೆರೆದ ನಾಡಿಗೇರರು ಎದುರು ಕುಳಿತಿದ್ದವನತ್ತ ನಗೆ ಬೀರಿ, ಬಂದ ವಿಚಾರವೇನೆಂದು ಕೇಳಲು...
'ಅಲ್ರೀ ಮಿಸ್ಟರ್ ನಾಡಿಗೇರ್, ನೀವು ನನಗೆ ತುಂಬಾ ಆತ್ಮೀಯರಾಗಿರೋದ್ರಿಂದ ಹೇಳ್ತಿದ್ದೀನಿ. ಸಂಪಾದನೆಯನ್ನೇ ಸರಿಯಾಗಿ ಸಲ್ಲಿಸದ ಈ ಸುಡುಗಾಡು ಸಾಹಿತ್ಯವನ್ನು ನೆಚ್ಕೊಂಡು ಯಾಕ್ರೀ ಕಾಲಕಳೆಯುತ್ತಿದ್ದೀರಿ? ಇದಕ್ಕೆ ಬದಲು ರಾಜಕೀಯವನ್ನು ವೃತ್ತಿಯಾಗಿ ಕಟ್ಕೊಳಿ. ನಮ್ಮ ಪಕ್ಷ ಸೇರ್ಕೊಳಿ. ಮುಂದೆ ನಿಮಗೆ ಒಳ್ಳೆಯ ಸ್ಥಾನಮಾನ, ಕೈತುಂಬಾ ತುಂಬಿ ತುಳುಕುವಷ್ಟು ಹಣ, ಆಸ್ತಿ ಸಿಗುತ್ತೆ. ನೀವು ನಿಮ್ಮ ಮಡದಿ, ಮಕ್ಕಳು, ಮೊಮ್ಮೊಕ್ಕಳು, ಎಲ್ಲರೂ ವಂಶಪಾರಂಪರ್ಯವಾಗಿ ಸುಖವಾಗಿರಬಹುದು. ಏನಂತೀರಿ? ನಮ್ಮ ಪಕ್ಷ ಸೇರ್ಕೋತ್ತೀರಾ?'
ಅವರತ್ತ ನೋಡಿ ನಕ್ಕ ನಾಡಿಗೇರರು, ಸಮಾಧಾನವಾಗಿ 'ನೋಡಿ ಸ್ವಾಮಿ, ನೀವು ಹೇಳ್ತಿರೋ ಹಾಗೆ ಮಾಡಬಹುದಿತ್ತು. ಆದರೆ ಆಗಲ್ಲ. ಏನ್ಮಾಡ್ಲಿ? ನನ್ನದೇ ಒಂದು ಪಕ್ಷ ಅಂತ ಇರೋವಾಗ ಬೇರೆ ಪಕ್ಷ ಸೇರೋದು ಹ್ಯಾಗೆ? ಅಲ್ಲದೆ ಲಾಗಾಯ್ತಿನಿಂದಲೂ ನನ್ನ ಪಕ್ಷದ ನಿಯಮಾವಳಿಗಳಿಗೆ ಕಟ್ಟುನಿಟ್ಟಾಗಿ ಅಂಟಿಕೊಂಡಿರುವವನು ನಾನು. ಈಗ ನಾನೇ ನನ್ನ ಪಕ್ಷದ ನೀತಿ ನಿಯಮಗಳನ್ನು ಮೀರಿ ಪಕ್ಷಾಂತರ ಮಾಡುವುದು ಸಾಧ್ಯವಿಲ್ಲ, ಕ್ಷಮಿಸಿ' ಎಂದು ಆ ರಾಯರು ಹೇಳುತ್ತಲೇ ಅಚ್ಚರಿಗೊಂಡ ಆ ರಾಜಕಾರಣಿ ಕಣ್ಗಳಲ್ಲಿ ಕುತೂಹಲವನ್ನು ಸೂಸುತ್ತಾ...
'ಅಲ್ರೀ ಇದೇನಿದು ನೀವನ್ನುತ್ತಿರುವುದು? ನಿಮ್ಮದೇ ಒಂದು ಪ್ರತ್ಯೇಕ ಪಕ್ಷವೆಂಬುದು ಇದೆಯೇ? ಪಂಚಾಂಗದಲ್ಲಿರುವಂತೆ ಕೃಷ್ಣ ಪಕ್ಷ, ಶುಕ್ಲ ಪಕ್ಷದ ಹೊರತು ಬೇರಾವ ಪಕ್ಷವೂ ನಿಮಗೆ ತಿಳಿದಿಲ್ಲವೆಂದಿದ್ದೆ. ಆಯಿತು, ನಿಮ್ಮದು, ನಾವ್ಯಾರು ಕಂಡು ಕೇಳದ ಅದ್ಯಾವ ಪಕ್ಷ?' ಎಂದು ಕೇಳಲು, ನಾಡಿಗೇರರು ಸೀರಿಯಸ್ಸಾಗಿಯೇ 'ಅದು ಸಮತಾ ಪಕ್ಷ ಸ್ವಾಮಿ. ನಾನೀ ಪಕ್ಷವನ್ನು ಅಸ್ತಿತ್ವಕ್ಕೆ ತಂದು ಹನ್ನೆರಡು ವರ್ಷಗಳೇ ಆಯಿತು; ನನ್ನ ಮದುವೆಯ ಮಂಗಳ ಮುಹೂರ್ತದಲ್ಲೇ ಸ್ಥಾಪಿಸಿದ ಪಕ್ಷವಿದು. ಅಂದಿನಿಂದ ಇಂದಿನವರೆಗೂ ನನ್ನ ಪಕ್ಷದ ಹೆಸರಿಗೆ ಕಿಂಚಿತ್ತೂ ಕಳಂಕ ಬರದಂತೆ ಬಲು ನಿಷ್ಠೆಯಿಂದ, ಎಚ್ಚರಿಕೆಯಿಂದ ನಡೆದುಕೊಂಡು ಬರುತ್ತಿದ್ದೇನೆ' ಎಂದಿನರೆನ್ನಲು ಕೇಳಿದ ಆ ರಾಜಕಾರಣಿ ಮತ್ತಷ್ಟೇ ಕುತೂಹಲದಿಂದ 'ಸಮತಾ ಪಕ್ಷ! ಹಾಗೆಂದರೇನು ನಾಡಿಗೇರರೇ' ಕೇಳಿದರು. ನಾಡಿಗೇರರು ನಗುತ್ತಾ 'ನೋಡಿ ಸ್ವಾಮಿ, ನನಗೆ ಮದುವೆಯಾಗಿ 12 ವರ್ಷಗಳಾಯಿತು. ನನಗೀಗ ಬರೋಬ್ಬರಿ 12 ಮಕ್ಕಳು. (ಈ ಮಾತು ಉತ್ಪ್ರೇಕ್ಷಿತ. ನಾಡಿಗೇರರಿಗೆ ಇಬ್ಬರೇ ಇಬ್ಬರು ಗಂಡು ಮಕ್ಕಳು- ಇದು ವಾಚಕರ ಗಮನಕ್ಕೆ) ಇವುಗಳು ಹುಟ್ಟಿದ ಕ್ರಮ ಹೀಗೆ- ಒಂದು ವರ್ಷ ಹೆಣ್ಣಾದರೆ ಅವರ ಮುಂದಿನ ವರುಷ ಗಂಡು. ಈ ಕ್ರಮದಲ್ಲೇ ನಮಗೆ ಆರು ಹೆಣ್ಣು, ಆರು ಗಂಡು! ಸರಿಸಮನೆಂಬಂತಾಯಿತಲ್ಲವೇ? ಅಂದ ಮೇಲೆ ನನ್ನದು 'ಸಮತಾ ಪಕ್ಷ'ವೆಂಬಂತಾಗಲಿಲ್ಲವೇ? ಎಂದು ಹೇಳಿ ಕಿಲಕಿಲನೆ ನಕ್ಕಾಗ ಕೇಳಿದ ಆ ರಾಜಕಾರಣಿ ಹೊಟ್ಟೆ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾ ಅಲ್ಲ, ನಗುತ್ತಾ, ತಲೆ ತಲೆ ಚೆಚ್ಚಿಕೊಳ್ಳುತ್ತ, 'ಸಾಕಪ್ಪಾ ನಿಮ್ಮ ಸಹವಾಸ' ಎಂದು ಹೇಳುತ್ತಾ, ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೆ, ಎತ್ತಲೋ ಹೊರಟುಹೋದನಂತೆ.
- ಬಿ.ಎಸ್. ಕೇಶವರಾವ್