ಮಕರಂದ/ದೋಣಿ

ಮಡದಿಯ ಮಾತು ಬಾಳನ್ನೇ ಬದಲಿಸಿತು

ತುಳಸೀ ರಾಮಾಯಣ'ವನ್ನು ರಚಿಸಿರುವ ತುಳಸಿದಾಸರು...

'ತುಳಸೀ ರಾಮಾಯಣ'ವನ್ನು ರಚಿಸಿರುವ ತುಳಸಿದಾಸರು ಹರೆಯದ ದಿನಗಳಲ್ಲಿ ಸೌಂದರ್ಯದ ಮಹಾ ಆರಾಧಕರಾಗಿದ್ದರು. ತಮ್ಮ ಪತ್ನಿಯ ಸೌಂದರ್ಯವನ್ನು ನೋಡುತ್ತ ನೋಡುತ್ತ ಅವರು ಬಾಹ್ಯ ಜಗತ್ತನ್ನೇ ಮರೆತು ಬಿಡುತ್ತಿದ್ದರಂತೆ. ಪತ್ನಿ ಒಂದು ಕ್ಷಣ ಕಣ್ಮರೆಯಾದರೂ ಸಹಿಸುತ್ತಿರಲಿಲ್ಲ. ಯಾರೇ ಕರೆಯಲು ಬಂದರೂ ಪತ್ನಿಯನ್ನು ತವರಿಗೆ ಕಳಿಸಿಕೊಡುತ್ತಿರಲಿಲ್ಲ. ಅಂತಹ ಅತಿಶಯ ವ್ಯಾಮೋಹ ಪತ್ನಿಯ ಮೇಲೆ. ಆ ಪತ್ನಿಯಾದರೋ ಪತಿಯನ್ನು ಎಷ್ಟೇ ಪ್ರೀತಿಸುತ್ತಿದ್ದರೂ, ಎಲ್ಲ ಹೆಣ್ಣು ಮಕ್ಕಳಂತೆ ಅವರೂ ತವರಿನ ಪ್ರೀತಿ, ಹಂಬಲಗಳನ್ನು ಬಿಡಲಾರದವರಾಗಿದ್ದರು.
ಹೀಗಿರುವಾಗ ಒಂದು ಸಲ ಅವರ ಪತ್ನಿಯ ಅಣ್ಣ ಯಾವುದೋ ಹಬ್ಬಕ್ಕೆ ತಂಗಿಯನ್ನು ಕರೆಯಲು ಬಂದರು. ಅಣ್ಣನನ್ನು ಕಂಡ ಕೂಡಲೇ ದಾಸರ ಪತ್ನಿ, ತಮ್ಮ ಹಂಬಲವನ್ನು ಹತ್ತಿಕ್ಕಲಾರದೆ, ಪತಿಗೆ ತಿಳಿಸದೆಯೇ ಅಣ್ಣನೊಂದಿಗೆ ತವರಿಗೆ ಹೊರಟು ಬಿಟ್ಟರು.
ವಿಷಯ ತಿಳಿದ ದಾಸರು ಮತಿಕೆಟ್ಟವರಂತಾದರು. ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಕಂಗೆಟ್ಟರು. ನಿಂತಲ್ಲಿ ನಿಲ್ಲಲಾರದೆ ಚಡಪಡಿಸಿದರು. ಕಡೆಗೆ ತಾವೂ ಪತ್ನಿಯ ತವರೂರಿನ ದಾರಿಯನ್ನು ಹಿಡಿದು ಹೊರಟು ಬಿಟ್ಟರು.
ಮಳೆಗಾಲದ ದಿನಗಳು ಅವು. ಅರ್ಧ ದಾರಿಯಲ್ಲಿ ಧೋ ಎಂದು ಕುಂಬದ್ರೋಣ ಮಳೆ ಸುರಿಯಲಾರಂಭಿಸಿತು. ಗಾಢಾಂಧಕಾರ, ಗುಡುಗು ಸಿಡಿಲುಗಳ ಆರ್ಭಟ, ಉಕ್ಕಿ ಬೋರ್ಗರೆಯುತ್ತ ಹರಿಯುತ್ತಿದ್ದ ನದಿಯ ಪ್ರವಾಹ ಇವೊಂದೂ ಅವರ ಗಮನಕ್ಕೆ ಬರಲೇ ಇಲ್ಲ. ಪ್ರವಾಹವನ್ನು ಲೆಕ್ಕಿಸದೆ ನದಿ ದಾಟಿದರು. ಹರಿಯುತ್ತಿದ್ದ ಹಾವನ್ನು ಹಗ್ಗವೆಂದು ಭಾವಿಸಿ ಹಿಡಿದು ಮಾವನ ಮನೆಯ ಮಾಳಿಗೆಯನ್ನು ಹತ್ತಿ ಧುತ್ತೆಂದು ಮಡದಿಯ ಮುಂದೆ ಪ್ರತ್ಯಕ್ಷರಾದರು.
ಪತ್ನಿ ಇವರನ್ನು ಕಂಡ ಕೂಡಲೇ, ಇವರ ಮನದ ಉಮ್ಮಳಗಳೊಂದನ್ನೂ ಗಣನೆಗೆ ತಾರದೆ, "ಅಯ್ಯೋ ದೇವರೇ, ಇಂಥ ದ್ರೋಣ ಮಳೆ, ಪ್ರವಾಹ ಒಂದನ್ನೂ ಲೆಕ್ಕಿಸದೆ ಹೀಗೆ ಧಾವಿಸಿ ಬಂದಿರುವಿರಲ್ಲ! ಇದೇ ಪ್ರೀತಿ, ಭಕ್ತಿಗಳನ್ನು ನೀವು ನಿಜವಾಗಿ ಭಗವಂತನಲ್ಲಿ ತೋರಿಸಿದ್ದರೆ ಈ ವೇಳೆಗೆ ನೀವೊಬ್ಬರು ಮಹಾ ಭಕ್ತರೇ ಅಗುತ್ತಿದ್ದಿರಿ" ಎಂದು ಉದ್ಗರಿಸಿದರು.
ತಕ್ಷಣ ದಾಸರ ತಲೆಯಲ್ಲಿ ಮಿಂಚು ಹರಿದಂತಾಯಿತು. ಮಡದಿಯ ಉದ್ಗಾರ ಅವರ ಸುಪ್ತ ಮನಸ್ಸಿನ ಭಾವನೆಗಳನ್ನು ಬಡಿದೆಬ್ಬಿಸಿತು. ಅಂದಿನಿಂದ ಅವರ ಜೀವನ ಬದಲಾಯಿತು. ಕಾಯಾ, ವಾಚಾ, ಮನಸಾ ಭಗವಂತನ ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ದಾಸರು ನಿಜವಾಗಿ ಅವನ ಅಂತರಂಗದ ಭಕ್ತರಾದರು. ಜಗತ್ ಪ್ರಸಿದ್ಧ ತುಳಸೀ ರಾಮಾಯಣವನ್ನು ರಚಿಸಿ 'ತುಳಸೀ ದಾಸ'ರೆಂದೇ ಪ್ರಸಿದ್ಧರಾದರು.

- ಬ್ರಹ್ಮಾಣಿ ಪಿ. ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP