ಚಲನಶೀಲ ಇತಿಹಾಸ ಸದಾ ವಿಸ್ಮಯಕಾರಿ. ಒಳಿತು- ಕೆಡುಕುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು, ದೃಷ್ಟಿ ಮಸುಕಾದರೂ ಒಳಗಣ್ಣು ತೆರೆದಿರುವ ಮನೆಯ ಹಿರಿಯನಂತೆ ಆತ ನೆನಪಿನ ಬುತ್ತಿ ಬಿಚ್ಚಿಟ್ಟರೆ, ಅನುಭವಗಳ ಪರಿಪಾಕ. ಹಾಗೆಯೇ ಇತಿಹಾಸ ಮನಬಿಚ್ಚಿ ಮಾತಾಡಿದರೆ ಬದುಕಿನ ಹಲವು ಮಗ್ಗುಲುಗಳು ಅನಾವರಣ.
ಇತಿಹಾಸಪುರುಷ ಸರ್ವಜ್ಞಾನಿ. ಸರ್ವಾಂತರ್ಯಾಮಿ. ಮಿಗಿಲಾಗಿ ಮಹಾಮೌನಿ. ಆತನ ಉದರವನ್ನು ಬಗೆಯಬೇಕು. ಒರೆಗೆ ಹಚ್ಚಿ ತಿಕ್ಕಬೇಕು. ಚಿಂತನೆಗಳ ಮಂಥನದಲ್ಲಿ ನವನೀತಕ್ಕಾಗಿ ಧೇನಿಸಬೇಕು. ಇಂಥ ಇತಿಹಾಸದ ಅಧ್ಯಯನಕ್ಕೆ ಉತ್ಖನನ, ಶಾಸನ, ಸ್ಮಾರಕ, ವಾಸ್ತುಶಿಲ್ಪಗಳು ಸ್ಥಾವರ ಆಧಾರಗಳು. ಹಾಗೆಯೇ ಧಾರ್ಮಿಕ ಗ್ರಂಥಗಳು, ಸ್ಥಳೀಯ ಮತ್ತು ವಿದೇಶಿ ಬರವಣಿಗೆಗಳು, ನಾಣ್ಯಗಳು ಜಂಗಮ ಆಧಾರಗಳು. ಈ ಜಂಗಮ ಆಧಾರಗಳಲ್ಲಿ ಬಿರುದುಗಳನ್ನು ಸೇರಿಸಬಹುದೆಂಬುದು ನನ್ನ ಆಲೋಚನೆ.
ಬಿರುದು ಭೌತಿಕ ಸಾಕ್ಷಿ
ವ್ಯಕ್ತಿಯ ಸಾಧನೆ, ಮಹತ್ವ, ಬುದ್ಧಿಮತ್ತೆ, ಪಾಂಡಿತ್ಯ, ಚಾಣಾಕ್ಷತನ, ಮುತ್ಸದ್ಧಿತನ, ಸಜ್ಜನಿಕೆ, ಯೋಗ್ಯತೆ, ಸಾಮರ್ಥ್ಯ, ಗುಣ- ನಡತೆ, ಮನೋಭಾವ- ವರ್ತನೆ, ಶೌರ್ಯ- ಧೈರ್ಯ, ತಾಳ್ಮೆ- ತ್ಯಾಗ, ರುಚಿ- ಅಭಿರುಚಿಗಳನ್ನು ಗುರುತಿಸಿ, ಗೌರವದಿಂದ ಆ ವ್ಯಕ್ತಿಯ ಅಂಕಿತನಾಮದೊಂದಿಗೆ, ಅನ್ವರ್ಥ ನಾಮಗಳನ್ನು ಸೇರಿಸುವುದೇ ಬಿರುದೆನಿಸಿಕೊಳ್ಳುತ್ತದೆ. ಬಿರುದೆಂದರೆ ತಮಾಷೆಗಾಗಿ, ಕುಚೋದ್ಯಕ್ಕಾಗಿ, ಅವಹೇಳನಕ್ಕಾಗಿ ಕರೆಯುವ ಅಡ್ಡನಾಮಗಳಲ್ಲ.
ಬಿರುದು ಕೊಡುವರಾರು?
ಕೆಲವು ಸಾಂಪ್ರದಾಯಿಕ ಬಿರುದುಗಳು. ಕೆಲವು ಸ್ವಯಂಘೋಷಿತ. ಕೆಲವು ಅರಸರಿಂದ, ಮಠ-ಮಾನ್ಯಗಳಿಂದ ದೊರೆತವು. ಜನ ಮನ್ನಣೆಯಿಂದ ಗಳಿಸಿದವು. ಕೆಲವು ಇತಿಹಾಸ ತಜ್ಞರ, ಔಚಿತ್ಯ ಪ್ರಜ್ಞೆಯ ನಾಮಕರಣಗಳು. ಗುಣ ವಿಶೇಷಣಗಳೇ ಕೆಲವೊಮ್ಮೆ ಬಿರುದುಗಳಾಗುತ್ತವೆ.
ಸ್ತುತಿ ಪರಾಕುಗಳು
ಸಾಂಪ್ರದಾಯಿಕ ಬಿರುದುಗಳೆಂದರೆ ಸ್ತುತಿ ಪರಾಕುಗಳಿದ್ದಂತೆ. ಸಾಧನೆಯಿಂದ ದೊರೆತ ಬಿರುದು ನಂತರದ ಅವನ ವಂಶಜರಿಗೆಲ್ಲ ಬಂದುಬಿಡುತ್ತದೆ. ಪಿತ್ರಾರ್ಜಿತ ಆಸ್ತಿಯಂತೆ. ವೈಯಕ್ತಿಕ ಸಾಧನೆ ಇಲ್ಲಿ ನಗಣ್ಯವಾಗಿ ಹುಟ್ಟು, ಕುಲ, ಮನೆತನ ಮುಖ್ಯವಾಗುತ್ತದೆ. ಉದಾ: ರಾಜಾಧಿರಾಜ, ರಾಜ ಮಹಾರಾಜ, ರಾಜ ಮಾರ್ತಾಂಡ, ರಾಜಕುಲತಿಲಕ.
ಪುಲಿಕೇಶಿಯ ಸಾರ್ವಭೌಮತ್ವವನ್ನು ಸೂಚಿಸುವ 'ರಣವಿಕ್ರಮ', 'ಶ್ರೀವಲ್ಲಭ', 'ಪೃಥ್ವೀವಲ್ಲಭ', 'ಪರಮೇಶ್ವರ' ಇತ್ಯಾದಿ ಬಿರುದುಗಳು ನಂತರದ ಬಾದಾಮಿ ಚಾಲುಕ್ಯ ಅರಸರಿಗೂ ಬಳಸಲಾಗುತಿತ್ತು. ಮೌರ್ಯ ಅಶೋಕ ಮಹಾರಾಜನ 'ದೇವನಾಂಪ್ರಿಯ' ಮತ್ತು 'ಪ್ರಿಯದರ್ಶಿ' ಬಿರುದುಗಳು ಅಧ್ಯಯನಶೀಲನಿಗೆ ಇತಿಹಾಸ ಸಮುದ್ರವನ್ನು ಮಥಿಸಲು ಪ್ರೇರಣೆ ನೀಡುತ್ತವೆ.
ಅಶೋಕ, ಕಳಿಂಗ ಯುದ್ಧದ ನಂತರ ಉಪಗುಪ್ತನ ಬೋಧನೆಯಿಂದ ಬೌದ್ಧಧರ್ಮದ ಅವಲಂಬಿಯಾದರೂ, ಹಿಂದೂಧರ್ಮವನ್ನೇನು ತ್ಯಜಿಸಲಿಲ್ಲ ಎಂಬುದಕ್ಕೆ 'ದೇವನಾಂಪ್ರಿಯ' ಬಿರುದು ಸಾಕ್ಷಿ. ಏಕೆಂದರೆ ಬೌದ್ಧ ಧರ್ಮಾವಲಂಬಿಗಳು ದೇವರಲ್ಲಿ ನಂಬಿಕೆ ಇಲ್ಲದವರು. ದೈವದಲ್ಲಿ ನಂಬಿಕೆ ಇಟ್ಟಿದ್ದರಿಂದಲೇ ಆತ ಈ ಬಿರುದುಗಳನ್ನು ಸ್ವತಃ ಘೋಷಿಸಿಕೊಂಡ.
ಕುಶಾನರು ಬೌದ್ಧಧರ್ಮಾವಲಂಬಿಗಳಾದರೂ, ದೊರೆ ವಿಮಾಕಡಫೈಸಸ್‌ನಿಗೆ 'ಮಹೇಶ್ವರ' ಎಂಬ ಬಿರುದಿತ್ತೆಂಬುದನ್ನು ಆತನ ನಾಣ್ಯಗಳಿಂದ ಮತ್ತು ಮುದ್ರಿಕೆಗಳಿಂದ ಗುರುತಿಸಬಹುದು. ಇವು ಆತ ಶಿವನ ಆರಾಧಕನೆನ್ನಲು ಸ್ಪಷ್ಟ ಸಾಕ್ಷಿಗಳು. ರಾಜರು ದಿಗ್ವಿಜಯಗಳಲ್ಲಿ ಯಶಸ್ವಿಯಾದ ಮೇಲೆ, ರಾಜ ಮುಕುಟಕ್ಕೆ ಬಿರುದಗಳ ನವಿಲುಗರಿಯನ್ನೇ ಸಿಕ್ಕಿಸಿಕೊಂಡು ಸಂಭ್ರಮಿಸಿದರು.
ಗಂಗರನ್ನು ಸೋಲಿಸಿದ ರಾಜೇಂದ್ರ ಚೋಳ 'ಗಂಗೈಕೊಂಡ ಚೋಳ' ಎಂದೇ ಬಿರುದಾಂಕಿತ. ಪುಲಿಕೇಶಿಯನ್ನು ಪರಾಭವಗೊಳಿಸಿ ವಾತಾಪಿ ವಶಪಡಿಸಿಕೊಂಡ ಪಲ್ಲವ ದೊರೆ ನರಸಿಂಹವರ್ಮನು 'ವಾತಾಪಿಕೊಂಡ ನರಸಿಂಹವರ್ಮ' ಎಂದೇ ಘೋಷಿಸಿಕೊಂಡ. ಚೋಳರನ್ನು ಹಿಮ್ಮೆಟ್ಟಿಸಿ 'ತಲಕಾಡುಗೊಂಡ', ಕಂಚಿಯನ್ನು ಆಕ್ರಮಿಸಿ 'ಕಂಚಿಗೊಂಡ' ಎಂಬ ಬಿರುದು ಧರಿಸಿದಾತ ಹೊಯ್ಸಳ ವಿಷ್ಣುವರ್ಧನ. 'ರಾಜರಾಜ ಚೋಳ', 'ಶಿವಪಾದಶೇಖರ'ನೆಂದು ವಿನಮ್ರಭಾವದಿಂದ ತನ್ನನ್ನು ಕರೆದುಕೊಂಡಿದ್ದಾನೆ.
ಕವಿಲೋಕದ ಶ್ರೇಷ್ಠರು
ಕವಿಗಳಾದ- ನಾಗಚಂದ್ರ, ಗದುಗಿನ ನಾರಣಪ್ಪ, ನರಹರಿತೀರ್ಥರು ಪೂರ್ವಸೂರಿಗಳನ್ನು ಆರಾಧಿಸಿ, ಅನುಕರಿಸಿ, ತಮ್ಮನ್ನು ಅವರ ಮಾನಸಪುತ್ರರೆಂದು ಕರೆದುಕೊಂಡವರು. ಹಾಗಾಗಿಯೇ ನಾಗಚಂದ್ರ 'ಅಭಿನವ ಪಂಪ', ನಾರಣಪ್ಪ 'ಕುಮಾರವ್ಯಾಸ', ನರಹರಿ ತೀರ್ಥರು 'ಕುಮಾರವಾಲ್ಮೀಕಿ' ಅಂತ ಕರೆಸಿಕೊಂಡರು. ಪಂಪ 'ಕವಿತಾ ಗುಣಾರ್ಣವ', ಪೊನ್ನ- ರನ್ನ- ಜನ್ನರು 'ಕವಿಚಕ್ರವರ್ತಿ'ಗಳಾದರು. ರಾಜಾಶ್ರಯದಲ್ಲಿದ್ದ ಕವಿಗಳಿಗೆ, ಕಲಾವಿದರಿಗೆ ಅರಸರೇ ಬಿರುದುಗಳನ್ನಿತ್ತು ಸನ್ಮಾನಿಸಿಸುತ್ತಿದ್ದರು. ಗಂಗರಸರು ಚಾವುಂಡರಾಯನನ್ನು 'ಸತ್ಯಯುಧಿಷ್ಠಿರ'ನೆಂದು ಗೌರವಿಸಿದರು. ಮೈಸೂರು ಮಹಾರಾಜರು ನವರತ್ನರಾಮರಾಯ ಮತ್ತು ಬಿ.ಎಂ.ಶ್ರೀಕಂಠಯ್ಯನವರಿಗೆ 'ರಾಜಸೇವಾಸಕ್ತ' ಎಂದು ಬಿರುದನ್ನಿತ್ತು ಮನ್ನಣೆ ನೀಡಿದರು. ರನ್ನನ ಆಶ್ರಯದಾತೆ, ಶಾಂತಿ ಪುರಾಣದ ಪ್ರಕಾಶಕಿ ಅತ್ತಿಮಬ್ಬೆ ಹೆಸರಿನೊಂದಿಗೆ ಸದಾ ಇರುವ ಬಿರುದು 'ದಾನಚಿಂತಾಮಣಿ'. ಹೊಯ್ಸಳ ಎರಡನೇ ಬಲ್ಲಾಳನ 'ಚೋಳರಾಜ್ಯ ಪ್ರತಿಷ್ಠಾಪನಾಚಾರ್ಯ' ಮತ್ತು ಕೃಷ್ಣದೇವರಾಯನ 'ಯವನರಾಜ್ಯ ಸಂಸ್ಥಾಪನಾಚಾರ್ಯ' ಬಿರುದುಗಳು ಆಯಾ ರಾಜರ ಔದಾರ್ಯ, ಉದಾತ್ತತೆಯನ್ನು ಎತ್ತಿ ತೋರಿಸುತ್ತವೆ.
ನಾಲಗೆಯ ತುದಿಮೇಲೆ...
ಜನಸಾಮಾನ್ಯರ ಪ್ರೀತಿ, ವಿಶ್ವಾಸ, ಗೌರವ ಗಳಿಸಿದ್ದರಿಂದ ಬಸವೇಶ್ವರರು 'ಅಣ್ಣ ಬಸವಣ್ಣ'ರಾದರು. ಮಹಾದೇವಿ 'ಅಕ್ಕಮಹಾದೇವಿ'ಯಾದರು. ಗಾಂಧೀಜಿ 'ಬಾಪು'ವಾಗಿ, ಅಂಬೇಡ್ಕರ್ 'ಬಾಬಾ' ಆಗಿ, ನೆಹರು 'ಚಾಚಾ' ಆಗಿ ನಮ್ಮೆಲ್ಲರ ನಾಲಗೆಯ ತುದಿಮೇಲೆ ನಿಂತರು. ಬದುಕಿನೆಡೆಗಿನ ಇವರ ನಿಲುವು ಬದ್ಧತೆಗಳಿಂದ, ಜನರ ಆಪ್ತ ಬಂಧುಗಳೆನಿಸಿಕೊಂಡರು.
'ನಾಟ್ಯರಾಣಿ' ಶಾಂತಲೆ, 'ನೃತ್ಯ ವಿಶಾರದೆ' ಎಂದು ಜನಜನಿತವಾದಾಕೆ. 'ಸವತಿಗಂಧವಾರಣೆ' ಎಂಬ ಬಿರುದು ಆಕೆಯ ಸ್ವಭಾವವನ್ನಷ್ಟೇ ಅಲ್ಲದೆ ಗೃಹಾಡಳಿತದಲ್ಲಿನ ರಾಜತಾಂತ್ರಿಕ ಕುಶಲತೆಯನ್ನು ಎತ್ತಿಹಿಡಿಯುತ್ತದೆ. ಕುಮಾರರಾಮನಿಗಿದ್ದ 'ಪರನಾರಿ ಸಹೋದರ' ಎಂಬ ಬಿರುದು, ಆತನ ಗುಣ, ಸ್ವಭಾವ, ಸಂಸ್ಕಾರವನ್ನು ಪ್ರಕಟಿಸುವಂಥದ್ದು.
ಭಾರತದ ಸರ್ದಾರ ಪಟೇಲ್ ಮತ್ತು ಜರ್ಮನಿಯ ಅಟ್ಟೋವನ್ ಬಿಸ್ಮಾರ್ಕರು 'ಉಕ್ಕಿನ ಮನುಷ್ಯ'ರೆಂದೇ ಪ್ರಸಿದ್ಧಿ. ದೇಶ ಬೇರೆ, ಭಾಷೆ ಬೇರೆ, ವೇಷ ಬೇರೆಯಾದರೂ ಇಬ್ಬರು ಮಹನೀಯರು ತಮ್ಮ ಕಾಲಘಟ್ಟಗಳಲ್ಲಿ ಏಕೀಕರಣದ ಮಂತ್ರ ಜಪಿಸಿದವರು. ಅವರ ಕಠೋರ, ಅಚಲ ಉಕ್ಕಿನ ತೀರ್ಮಾನಗಳು, ಆ ದೇಶಗಳು ಅಭಿವೃದ್ಧಿಯಾಗಲು ಕಾರಣವಾದವು.
ಬ್ರಹ್ಮಕುಲದವರಲ್ಲ!
ಸಂಕಷ್ಟದ ಸಂದರ್ಭಗಳಲ್ಲಿ ಗಟ್ಟಿ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡ 'ಉಕ್ಕಿನ ಮಹಿಳೆ'ಯರು ಭಾರತದ ಇಂದಿರಾಗಾಂಧಿ ಮತ್ತು ಬ್ರಿಟನ್ನಿನ ಮಾರ್ಗರೆಟ್ ಥ್ಯಾಚರ್. ಬ್ರಹ್ಮನ ಸೃಷ್ಟಿಕ್ರಿಯೆಗೆ ಸರಿಸಾಟಿಯಾಗಿ ಸೃಜನಕ್ರಿಯೆಯಲ್ಲಿ ತೊಡಗಿಸಿಕೊಂಡು ಬ್ರಹ್ಮನೆಂದೇ ವಿಮರ್ಶಕರಿಂದ ಕರಿಸಿಕೊಂಡವರು, 'ಷಟ್ಪದಿಬ್ರಹ್ಮ' ರಾಘವಾಂಕ, 'ಹಾಸ್ಯಬ್ರಹ್ಮ' ಬೀಚಿ, 'ಚುಟುಕಬ್ರಹ್ಮ' ದಿನಕರ ದೇಸಾಯಿ.
ಸಾಧನೆಯ ಕ್ಷೇತ್ರದಲ್ಲಿ ಕೆಲವರು ಕಗ್ಗಾಡಿನಲ್ಲಿ ಹೆದ್ದಾರಿ ನಿರ್ಮಿಸಿದ್ದರಿಂದ 'ಆದ್ಯ'ರೆಂದು ಪಂಡಿತರು ಅವರನ್ನು ಗುರುತಿಸಿದರು. ಹಾಗಾಗಿಯೇ, ಮುದ್ದಣ 'ನವೋದಯ ಸಾಹಿತ್ಯದ ಮುಂಗೋಳಿ', ಬಿಎಂಶ್ರೀ 'ನವೋದಯ ಕಾವ್ಯದ ಪ್ರವರ್ತಕ', ಗೋಕಾಕ 'ನವ್ಯ ಕಾವ್ಯದ ಪ್ರವರ್ತಕ', ಎ.ಎನ್. ಮೂರ್ತಿರಾಯರು 'ಲಲಿತ ಪ್ರಬಂಧಗಳ ಜನಕ', ಬಿ.ಎಲ್. ರೈಸ್ 'ಶಾಸನ ಪಿತಾಮಹ', ಟಿ.ಪಿ. ಕೈಲಾಸಂ 'ಕರ್ನಾಟಕ ಪ್ರಹಸನ ಪಿತಾಮಹ', ಪುರಂದರದಾಸರು 'ಕರ್ನಾಟಕ ಸಂಗೀತ ಪಿತಾಮಹ' ಎಂದು ಗೌರವಿಸಲ್ಪಟ್ಟರು. 'ಚಲಿಸುವ ಕನ್ನಡ ನಿಘಂಟು' ಎಂದು ಹೆಸರಾದವರು ಡಿ.ಎಲ್. ನರಸಿಂಹಚಾರ್. ಅನಕೃ 'ಕಾದಂಬರಿ ಸಾರ್ವಭೌಮ', ರಾಜಕುಮಾರ್ 'ನಟಸಾರ್ವಭೌಮ'ರಾದರು. ಕವಿ ಹರಿಹರನಿಗಿದ್ದ 'ರಗಳೆಯ ಕವಿ' ಬಿರುದು ಧ್ವನ್ಯಾರ್ಥ ಹಾಗೂ ವಾಚ್ಯಾರ್ಥಗಳೆರಡನ್ನು ಹೊಂದಿರುವುದು ಕುತೂಹಕಾರಿ ಅಧ್ಯಯನಕ್ಕೆ ದಾರಿ ತೋರುತ್ತದೆ.
'ಉತ್ತರ ಪಥೇಶ್ವರ' ಹರ್ಷವರ್ಧನನ್ನು ಇತಿಹಾಸ ತಜ್ಞರು 'ಭಾರತದ ಹಾತೀಂತಾಯಿ' ಎಂದು ಕರೆದರು. ಯಾರು ಈ 'ಹಾತೀಂತಾಯಿ'? ಇವರೀರ್ವರಿಗೆ ಎತ್ತಣಿಂದೆತ್ತ ಸಂಬಂಧವಯ್ಯ? ಎಂಬ ಪ್ರಶ್ನೆ ಇನ್ನೊಂದು ಹೊರಳಿನತ್ತ ದೃಷ್ಟಿ ಹರಿಸಬಲ್ಲದು. 'ಹಾತೀಂತಾಯಿ' ಅರಬ್ ರಾಷ್ಟ್ರಗಳಲ್ಲಿನ ಅತ್ಯಂತ ಶ್ರೀಮಂತ, ಕೊಡುಗೈ ದೊರೆ, ಜನನಾಯಕನಾಗಿದ್ದವನು. ಅಂತೆಯೇ ಹರ್ಷವರ್ಧನನೂ ಯಥೇಚ್ಚ ದಾನ ಮಾಡಿದವ.
ಗುಪ್ತರ ಅರಸ ಸಮುದ್ರಗುಪ್ತನ ದಂಡಯಾತ್ರೆ ಮತ್ತು ರಾಜ್ಯದ ವಿಸ್ತಾರವನ್ನು ಗಮನಿಸಿಯೇ ವಿ.ಎ. ಸ್ಮಿತ್ ಎಂಬ ಇತಿಹಾಸ ತಜ್ಞ ಸಮುದ್ರಗುಪ್ತನನ್ನು 'ಭಾರತದ ನೆಪೋಲಿಯನ್' ಎಂದು ಫ್ರಾನ್ಸ್‌ನ ಸರ್ವಾಧಿಕಾರಿಯೊಂದಿಗೆ ಸಮೀಕರಿಸಿದ್ದು ಕುತೂಹಲ ಹುಟ್ಟಿಸುವಂಥದ್ದಾಗಿದೆ.
ರೂಪಕಗಳ ಅಲಂಕಾರ
ಇಂಥವೇ ಇನ್ನಷ್ಟು ಹೋಲಿಕಾ ರೂಪದ ರೂಪಕಗಳನ್ನು ಗಮನಿಸೋಣ... ಹರ್ಡೇಕರ್ ಮಂಜಪ್ಪ 'ಕರ್ನಾಟಕದ ಗಾಂಧಿ', ಗೊರೂರು ರಾಮಸ್ವಾಮಿ ಅಯ್ಯಂಗಾರ್ 'ಹೇಮಾವತಿ ತೀರದ ಗಾಂಧಿ', ಬಾಬು ರಾಜೇಂದ್ರ ಪ್ರಸಾದ್ 'ಬಿಹಾರದ ಗಾಂಧಿ', ಖಾನ್ ಅಬ್ದುಲ್ ಗಫಾರ್ ಖಾನ್ 'ಗಡಿನಾಡ ಗಾಂಧಿ'. ಸರ್ವಕಾಲಕ್ಕೂ ಸಲ್ಲುವ ಅಹಿಂಸಾ ನೇತಾರ ಗಾಂಧಿಯ ತತ್ತ್ವ ಹಾಗೂ ಸತ್ವಗಳನ್ನು ಮೈಗೂಡಿಸಿಕೊಂಡಿದ್ದರಿಂದಲೇ ತಮ್ಮ ತಮ್ಮ ಸ್ಥಳಗಳಲ್ಲಿ ಗಾಂಧಿ ಎಂದೇ ಖ್ಯಾದರಾದರಿವರು.
ಬಸವಣ್ಣ- ಕರ್ನಾಟಕದ ಮಾರ್ಟಿನ್ ಲೂಥರ್, ಕುವೆಂಪು- ಕನ್ನಡದ ವರ್ಡ್ಸ್‌ವರ್ತ್, ಬಸವಪ್ಪ ಶಾಸ್ತ್ರಿ- ಅಭಿನವ ಕಾಳಿದಾಸ, ಡಾ. ಅಂಬೇಡ್ಕರ್- ಆಧುನಿಕ ಮನು, ಕಾರಂತ- ಕಡಲ ತೀರದ ಭಾರ್ಗವ, ಉತ್ತಂಗಿ ಚೆನ್ನಪ್ಪ- ಆಧುನಿಕ ಸರ್ವಜ್ಞ, ಡಾ. ಎಸ್. ರಾಧಕೃಷ್ಣ- ಎರಡನೇ ವಿವೇಕಾನಂದ, ಡಾ. ಕಂಬಾರ್- ಕನ್ನಡ ರಂಗಭೂಮಿಯ ಋಷ್ಯಶೃಂಗ.
ಈ ಹೋಲಿಕೆಗಳನ್ನು ತಜ್ಞರು, ವಿಮರ್ಶಕರು ಆಳ ಅಧ್ಯಯನ ನಡೆಸಿ, ಸಾಮ್ಯತೆ ಗುರುತಿಸಿದ್ದಾರೆ. ಹೌದು, ಬಿರುದುಗಳೆಂದರೆ ಕಿರೀಟಗಳೇ. ಆ ಕಿರೀಟದ ಮೇಲಿಣುಕಿ ನೋಡಿದರೆ ಐತಿಹಾಸಿಕ ಕಾದಂಬರಿ ಲೋಕ ಗೋಚರವಾಗುತ್ತದೆ.
- ಸಿ.ಬಿ. ಶೈಲಾ ಜಯಕುಮಾರ್