ಪ್ರೀತಿಯ ಕೋತಿ,
ನೀ ಜೊತೆ ಇಲ್ಲದೇ ಸೊರಗಿದ್ದೇನೆ. ಒಡಲೊಳಗಿನ ಮೌನವ ಕಿತ್ತೆಸೆದು ಕೂಗಬೇಕೆನಿಸಿದೆ ನನಗೆ. ಭಾವುಕತೆ ಕಟ್ಟೆಯೊಡೆದಿದೆ. ನೀನಿರುವೆ ಜೊತೆಯಲಿ ಎಂಬ ಭರವಸೆಯಲಿ ಪ್ರತಿಕ್ಷಣದ ಹೆಜ್ಜೆಯನ್ನಿಡುತ್ತಿದ್ದವಳಿಗೆ ಇಂದು ಬರಿದಾದ ಕನಸ ಹೊತ್ತು ಸಾಗಲು ಮನಸ್ಸಾಗದು. ಹೊಸ ಹೊಸ ಹೊಂಗನಸ ಹೆಣೆದು, ಖುಷಿಯ ಬೀಜವ ಬಿತ್ತಿ, ಅದು ಮೊಳಕೆಯೊಡೆದಿರಲು... ಚಿವುಟಿ ಹೊರಟೆಯ ನೀ. ಮನಸ್ಸಿಲ್ಲದ ಮನಸ್ಸಿನೊಂದಿಗೆ ಕನಸ ಪೋಣಿಸಲು ಕುಳಿತೆ. ನೀನೇ ಇಲ್ಲದ ಮೇಲೆ ಚಿತ್ತಾರ ಮೂಡಲು ಸಾಧ್ಯವೇ?
ನನ್ನ ಪುಟ್ಟ ಹೃದಯದಲ್ಲಿ ನಿನಗೆ ಮನೆ ಮಾಡಿದೆ. ನೀ ದೂರಾದ ಮೇಲೆ ಒಂಟಿತನದ ಕಗ್ಗತ್ತಲ ಕಾರ್ಮೋಡ ರಾಜ್ಯಭಾರ ಮಾಡುತ್ತಿದೆ. ನಾ ಮಾತು ಮರೆತ ಮೂಕಿ. ನನ್ನ ಮನದ ಮಾತು ಕೇಳುವವರ್ಯಾರು? ನನ್ನ ಆತ್ಮೀಯ ನೀ. ನೀನು ದೂರವಾಗಲು ಇಚ್ಛಿಸಿದ ಮೇಲೆ ಮಾತಾಡಿ ಏನು ಪ್ರಯೋಜನ? ನೀನಿಲ್ಲದೇ ನಾ ಬದುಕಲಾರೆ ಎಂಬ ಕಣ್ಣ ಹನಿಯೊಂದಿಗಿನ ನಿನ್ನ ಕೂಗು ಇಂದು ಮೌನವಾಗಿದೆ ಏಕೆ? ಮೌನದ ಕುದುರೆಯನ್ನೇರಲು ಅಣಿಯಾದೆಯಾ?
ನಿನಗಾಗಿ ಎಲ್ಲವನ್ನೂ ಸಹಿಸಿದೆ ನಾ. ನಿನ್ನ ಕಿರುನಗೆಯಲಿ ಹೊಸ ಕಲ್ಪನೆಯ ಹೊಸೆದು ಬೆಳಕಿನ ಹಾದಿಯ ಕಂಡವಳು, ನಿನ್ನ ನಿಟ್ಟುಸಿರಲಿ ಬೆರೆತು ಬದುಕಿದವಳು ನಾ. ಇಂದು ದೂರ ತಳ್ಳಿದೆ ಏಕೆ? ಬೆಳಕಿನ ಹೊಸ್ತಿಲ ದಾಟಿ ನಿನಗಾಗಿ ಕಗ್ಗತ್ತಲೆಯ ಮಡಿಲಲ್ಲಿ ಬಂಧಿಯಾಗಿದ್ದೇನೆ. ಖಾಲಿ ಮನದ ಪುಟಗಳು ಗಾಳಿ ಸೋಕಿ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಎಲ್ಲಿ ಹುಡುಕಿದರೂ ನಿನ್ನ ಸುಳಿವು ಸಿಗದು. ತಿಳಿಯಾದ ಖಾಲಿ ಪುಟದಲ್ಲಿ ಕನಸ ಹೊಸೆದು ಬದುಕಿಗೆ ಹೊಸ ರೂಪವ ನೀಡಲಾರೆಯಾ?
ನೀ ಮರಳಿ ಗೂಡಿಗೆ ಬರುವೆ ಎಂಬ ಆಸೆಯಲಿ ಉಸಿರಾಡುತ್ತಿರುವೆ. ಬಣ್ಣಗಳ ಮೋಡಿಗೆ ಮರುಳಾಗದಿರು. ಕಾಲ ಕಳೆದಂತೆ ಬಣ್ಣ ಮಾಸಿ ಹಳತಾಗುವುದು. ಬದುಕು ಬಂಜರಾಗಲು ಬಿಡೆನು. ಬಾಳ ಬಂಡಿಯ ಹೂಡಲು ನೀ ಬೇಕು ನನಗೆ. ಭಾವುಕ ಮನ ಇಂದು ನಿನಗಾಗಿ ಕಾದು ಬಸವಳಿದು ಮರುಗುತ್ತಿದೆ, ಬಾಳಿನ ಬಿಡಿಸಲಾಗದ ಬಂಧನದೊಳಗೆ. ಮುಚ್ಚಿರುವ ಕಣ್ಣ ತೆರೆದು ನೋಡು ಒಮ್ಮೆ ನನ್ನನ್ನು. ನಾನೇಕೆ ನಿನ್ನ ಮರಳಿ ಕರೆಯುತ್ತಿರುವೆ? ಮನದ ಬಾಗಿಲು ತೆರೆದಿದೆ ನಿನಗಾಗಿ. ನೀನಿಂದು ಮುದುಡಿ ಕುಳಿತಿರುವುದ ನನ್ನಿಂದ ನೋಡಲಾಗದು. ನೀ ಸದಾ ನಸುನಗುತ್ತಿರಬೇಕು. ಯಾವಾಗಲೂ ನನ್ನ ಕನಸು, ನನ್ನ ಮನಸ್ಸು ಒಂದಾಗಿ ಸಾಗುತ್ತಿರಬೇಕು.
ಭಾವದ ಕೂಸು ಒಡಲೊಳಗೆ ನಗುತ್ತಿರಲು, ಹೊಸ ಬದುಕಿನ ಪಯಣದ ಒನಪು ಮೂಡುತ್ತಿರಲು ನನಗದೇ ನೆಮ್ಮದಿ. ಇಂದು ಕೈ ಜೋಡಿಸು, ಬದುಕಿಗೆ ಹೊಸ ಭಾಷ್ಯ ಬರೆಯಲು. ಹೊಸ ಹೊಸ್ತಿಲೆಡೆಗೆ ಪಯಣಿಸೋಣ ನಾವಿಬ್ಬರೂ ಕೂಡಿ...
ಇಂತಿ ನಿನ್ನವಳು,
- ಕಾವೇರಿ