ಅತಂತ್ರ
ಮೈ ತೊಳೆದುಕೊಂಡು ಮಡಿಯಾದ ಅವನು ಮಂತ್ರ ಪಠಿಸಲು ಆರಂಭಿಸಿದ್ದ. ಅವನ ತೆರೆದ ಬಾಯೊಳಗೆ ಸೊಳ್ಳೆ ನುಸುಳಿತು. ಅವನು ಹೊಲಸು ತಿಂದ ಕೊರಗಿನಲ್ಲಿ ಅತಂತ್ರನಾದ.
ಅನಾಥ ಶವ
ಆ ರಸ್ತೆಯಲ್ಲಿ ಹೆಣ ಬಿದ್ದಿದೆ. ಜನ ಕಂಡರೂ ಕಾಣದಂತೆ ನಡೆದುಕೊಂಡು ಹೋಗುತ್ತಿದ್ದಾರೆ. ಎಲ್ಲರ ಸಾವೂ ಒಂದೇ ಅಲ್ಲ ಎಂಬ ಮಾತಿಗೆ ಪುರಾವೆ ಒದಗಿಸುತ್ತಿದ್ದಾರೆ.
ಒಂದು ಕಥೆ
ಗೋಡೆ ಖಾಲಿಯಾಗಿತ್ತು. ಅಲ್ಲ, ಖಾಲಿಯಾದಂತೆ ಕಾಣುತ್ತಿತ್ತು. ಬಣ್ಣ ಕಾವಲಿಗಿತ್ತು. ಅಲ್ಲ, ಹಾಗೆ ನಟಿಸುತ್ತಿತ್ತು. ನಾನು ಗೋಡೆಗೆ ಮೈ ತಾಕಿಸಿದೆ. ಬಣ್ಣ ಮೈಗಂಟಿಕೊಂಡಿತ್ತು.
ಅನಾಥೆ
ಒಂದು ಗೋಡೆ. ಆ ಬದಿಯಲ್ಲಿ ಬೆಳಕು. ಈ ಬದಿಯಲ್ಲಿ ಕತ್ತಲು. ನೋಡುವ ಕಣ್ಣುಗಳು ಸುತ್ತಲೂ... ಬೆಳಕು ಉಂಡವರು ಕತ್ತಲು ಬಳಿದು ಹೊರಡುತ್ತಾರೆ. ಕತ್ತಲು ಕಂಡವರು ಹೊಲಸೆಂದು ಹೀಗಳೆಯುತ್ತಾರೆ.
- ಎಚ್.ಕೆ. ಶರತ್ ಹಾಸನ