ಆ ಹುಡುಗಿ
ಅವನ ಕನಸುಗಳನ್ನ
ತನ್ನೆದೆಯ ಕವಾಟಿನಲ್ಲಿ
ಬಚ್ಚಿಟ್ಟು ಭದ್ರವಾಗಿ
ಬೀಗ ಹಾಕಿದ್ದಾಳೆ
ಇಲ್ಲಿ ಅವನಿಗೆ
ಇಡೀ ರಾತ್ರಿ ನಿದ್ರೆಯಿಲ್ಲ!
=
ಖಾಲಿ ರಸ್ತೆಯ ಮೇಲೆ
ಮುರುಕು ಚಂದಿರನ
ಬೆಳದಿಂಗಳು ಅನಾಥವಾಗಿದೆ
ಬಾಗಿ ಎತ್ತಿಕೊಳ್ಳುವವರಿಲ್ಲ!
=
ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ನೋಡುವ ಅಷ್ಟೂ ಹೊತ್ತು
ಆಕಾಶದಲ್ಲಿನ ಎರಡು
ಚುಕ್ಕಿಗಳು ಕಾಣೆಯಾಗುತ್ತವೆ!
=
ಮೋಡ ಹನಿಯಾಗುತ್ತದೆ
ಬೆಂಕಿ ಬೂದಿಯಾಗುತ್ತದೆ
ನಿನ್ನ ನೆನಪು ಮಾತ್ರ ಮೌನಿ!
=
ಮಳೆಯಾಗೂ ಇಲ್ಲಾ ಬೂದಿಯಾಗೂ
ಮೆಲ್ಲನೆ ಇರಿಯುವ ಕಣ್ಣೀರಾಗದೆ...
=
ನೋಡು ನೀಲಾಕಾಶದ
ಚುಕ್ಕಿಗಳೆಲ್ಲವೂ
ಧರೆಗುದುರಿ ಬೀಳುತ್ತಿದೆ
ಅವುಗಳಿಗೂ ಸಣ್ಣ ಸಂದೇಹ
ಚಂದಮಾಮ ನೀನೆಂದು!
=
ಹೂವು ಇದ್ದ ಜಾಗದಲ್ಲೇ ಇರುತ್ತೆ
ದುಂಬಿ ಮಾತ್ರ ಮಕರಂದಕ್ಕೆ
ಶಿಕಾರಿ ನಡೆಸುವ ಅಲೆಮಾರಿ!
- ಆಶಾ ನವೀನ