ಮಲೆನಾಡ ಕುಗ್ರಾಮ. ಅಂದ ಮೇಲೆ ಕೇಳಬೇಕಾ? ಅಲ್ಲಿದ್ದವರ ಪೈಕಿ ಹೆಚ್ಚಿನವರು ಮೂಢನಂಬಿಕೆಗಳಲ್ಲೇ ಮಿಂದು ಏಳುವ ಜನ. ಈಗ ಹೇಳುತ್ತಿರುವುದು ಸ್ವಲ್ಪ ವರ್ಷಗಳ ಹಿಂದೆ ನಡೆದ ಕಥೆ. ಮೂಢನಂಬಿಕೆಯಿಂದ ಉದ್ಭವಿಸುವ ಅಚಾತುರ್ಯಕ್ಕೆ ಇದು ಕೈಗನ್ನಡಿ. ಆ ಊರಲ್ಲಿದ್ದ ಶಾನುಭೋಗರ ಮಕ್ಕಳು ಸ್ವಭಾವತ ಪುಕ್ಕಲರು. ಬಹುಶಃ ದೆವ್ವ, ಭೂತಗಳ ಕಥೆ ಕೇಳಿ ಕೇಳಿ ಹಾಗಾಗಿದ್ದರು ಎಂದರೆ ಸುಳ್ಳಲ್ಲ. ಕತ್ತಲು, ಅಮವಾಸ್ಯೆ, ದೆವ್ವ, ಪೂರ್ಣಮಿ ಎಂಬಿತ್ಯಾದಿ ಹೆಸರು ಕೇಳುತ್ತಲೇ ನಡುಗುವ ಹುಡುಗರವರು.
ಶಾನುಭೋಗರ ಅಕ್ಕ, ಪುಕ್ಕಲು ಮಕ್ಕಳ ಅತ್ತೆ. ಪ್ರೀತಿಯಲ್ಲಿ ಸರೋಜತ್ತೆಯಾಗಿದ್ದ ಸರೋಜಾದೇವಿ. ಒಂದು ದಿನ ಇದ್ದಕ್ಕಿದ್ದಂತೆ ಬಸ್ ನಿಲ್ದಾಣದಿಂದ ತನ್ನ ಮಗಳು ಪುಷ್ಪಳನ್ನು ದರದರನೆ ಮನೆಗೆ ಎಳೆದು ತಂದಳು. ಅಚ್ಚರಿ, ಗಾಬರಿಯಿಂದ ನೆರೆಕರೆಯವರೆಲ್ಲ ಸೇರಿದರು. ತನಗಾದ ಅವಮಾನಕ್ಕೊ, ಎಳೆತಂದ ರಭಸಕ್ಕೆ ಮೈಕೈ ನೋವಾಗಿ ಕಣ್ಣು ಕೆಕ್ಕರಿಸುತ್ತಾ, ಸುಡುವಳೇನೋ ಎಂಬಂತೆ ದುರುಗುಟ್ಟಿ ನೋಡುತ್ತಿದ್ದಳು.
ಪುಷ್ಪಳನ್ನು ನೋಡುತ್ತ 'ನಿನ್ನ ಚೇಷ್ಟೆ ನಂಗೆ ಗೊತ್ತಿಲ್ಲಾಂತ ಅಂದ್ಕೋಬೇಡ ಅಮ್ಮಣ್ಣಿ! ನೀನು ಯಾರು, ಯಾಕೆ ಬಂದಿದಿಯಾಂತ ನಂಗೆ ಚೆನ್ನಾಗಿ ಗೊತ್ತೈತೆ...' - ಮುಂದುವರೆದಿತ್ತು ವಾಚಾಮಗೋಚರ ಬೈಗುಳಗಳು. ಅಮ್ಮನ ರೌದ್ರಭಾವಕ್ಕೆ ಹೆದರಿ ಪುಷ್ಪ ಮೂಲೆಯಲ್ಲಿ ಮುದುಡಿ ಕುಳಿತಿದ್ದಳು. ಆಗಲೇ ಈ ಸರೋಜಮ್ಮ, ಬೇವಿನ ಸೊಪ್ಪು ತರಿಸಿ ಮಗಳನ್ನು ಹಿಗ್ಗಾಮುಗ್ಗ ಥಳಿಸಿದಳು. ಹೊಡೆತ ಸಹಿಸಲಾರದೆ ಪುಷ್ಪ ನೆಲಕಚ್ಚಿದ್ದಳು. ನೋಡುಗರಾದರೂ ಮರುಕಪಟ್ಟು ನಿಲ್ಲಿಸುತ್ತಾರೇನೋ ಅಂದುಕೊಂಡರೆ ಅವರ ವರಾತವೇ ಬೇರೆ. ಇನ್ನೂ ಬಿಗಿಯಲಿ. ಪುಷ್ಪಳ ಮೈ ಮೇಲಿರುವ ದೆವ್ವ ಹಾರಿಹೋಗಲಿ ಎಂಬ ಆಶಯ ಅವರದ್ದು. ಸರೋಜಮ್ಮರನ್ನು ಅವರೆಲ್ಲಾ ಮತ್ತಷ್ಟು ಪ್ರೋತ್ಸಾಹಿಸುತ್ತಿದ್ದರು.
ಭಯ ಮತ್ತು ನೋವಿನಿಂದ ಅವಡುಗಚ್ಚಿ ಥರಗುಟ್ಟುತ್ತಿದ್ದ ಮಗಳ ಮೇಲೆ ದೆವ್ವ ಮೆಟ್ಟಿರುವುದು ಗ್ಯಾರಂಟಿ ಎಂದು ಬಗೆದ ಊರಜನ ಹತ್ತಿರದ ಕಾರೆಪುರದ ದೆವ್ವ ಬಿಡಿಸುವ ಆಚಾರಿ ಬಳಿಗೆ ಆಕೆಯನ್ನು ಕಳುಹಿಸಲು ತೀರ್ಮಾನಿಸಿದರು. ಮರುದಿನ ಬೆಳಗ್ಗೆ ಶ್ಯಾನುಭೋಗರ ಪುಕ್ಕಲು ಮಕ್ಕಳು ಪುಷ್ಪಳನ್ನು ಸೈಕಲ್‌ನ ಕ್ಯಾರಿಯರ್ ಮೇಲೆ ಕುಳ್ಳಿರಿಸಿ ತಳ್ಳುತ್ತ ಕಾರೆಪುರದ ಕಡೆ ಸಾಗುತ್ತಿದ್ದರು.
ಅವರು, 'ದೆವ್ವ ಹಿಡಿದಿದೆ' - ಎಂಬ ಮರ್ಮ ತಿಳಿದಿರದ ಮಕ್ಕಳೇನೂ ಅಲ್ಲ. ಹೀಗಾಗಿ ಆ ಮಕ್ಕಳಿಗೂ ಮೈಯಲ್ಲಿ ಭಯದ ಜ್ವರವೇರುತ್ತಿತ್ತು. ಹಿಂದೆ ಭಾರವಾಗಿದ್ದರಿಂದ ಸೈಕಲ್ ಚಕ್ರ ಮೇಲೇಳುತ್ತಿತ್ತು. 'ದೆವ್ವ ಹಿಡಿದವರು ಕ್ರಮೇಣ ಭಾರವಾಗುತ್ತ ಹೋಗುತ್ತಾರೆ' - ಎಂಬ ಮೂಢ ಮಾತನ್ನು ಕೇಳಿದ್ದ ಈ ಮಕ್ಕಳು, ಸೈಕಲ್ ಮೇಲೆ ಕೂತಿರುವಾಕೆಗೆ ದೆವ್ವ ಬಂದೇಬಿಟ್ಟಿದೆ ಎಂದೇ ನಂಬಿ ನಿಂತಲ್ಲೇ ನಡುಗಿಹೋದರು. ಕೊನೆಗೆ ಉಸಿರು ಬಿಗಿ ಹಿಡಿದು, ಕಾರೆಪುರ ತಲುಪಿ, ಅಲ್ಲಿನ ಮಂತ್ರವಾದಿ ಕೈನಲ್ಲೊಂದಿಷ್ಟು ಏಟು ತಿನ್ನಿಸಿ ಪುಷ್ಪಳನ್ನು ಮನೆಗೆ ಕರೆತಂದರು.
ಆದರೂ ಸರೋಜಮ್ಮನಿಗೆ ನೆಮ್ಮದಿ ಇಲ್ಲ. ಮರುದಿವಸವೂ ಮಂತ್ರಹಾಕಿಸಲು ಆಜ್ಞಾಪಿಸಿದಳು. ಜ್ವರವೆಂಬ ಕುಂಟು ನೆಪ ಒಬ್ಬನ ಗೈರಿಗೆ ಕಾರಣವಾಯಿತು. ಮತ್ತೊಬ್ಬ ವಿಧಿ ಇಲ್ಲದೆ ಸೈಕಲ್‌ನಲ್ಲಿ ಪುಷ್ಪಳನ್ನು ಕುಳ್ಳಿರಿಸಿ ಹೊರಟ. ಆಕೆ ದಣಿದು ಮತ್ತೆ ಮಂತ್ರವಾದಿ ಕೈನಲ್ಲಿ ಒದೆ ತಿನ್ನುವ ದುರಾವಸ್ಥೆಯನ್ನು ನೆನೆದು ಕಂಗಾಲಾಗಿ ಕುಳಿತಿದ್ದಳು. ಜೊತೆಗಿದ್ದ ಹುಡುಗ, ಮೌನ ಮುರಿಯಲು ಪುಷ್ಪಿ..., ಪುಷ್ಪಿ..., ಎಂದ. ಊಹುಂ! ಉತ್ತರವಿಲ್ಲ. ಅದನ್ನು ಗಮನಿಸಿದ ಆ ಭೂಪ, ಪುಷ್ಪಳ ಮೈಮೇಲೆ ದೆವ್ವ ಬಂದಿದೆ ಎಂಬುದಾಗಿ ಭ್ರಮಿಸಿ ತತ್ತರಗೊಂಡು ಓಟಕಿತ್ತ. ಓಡುವ ಮುನ್ನ ಪುಷ್ಪಳನ್ನು ಸೈಕಲ್ಲನ್ನೂ ಒಂದು ಬದಿಗೆ ನೂಕಿ ಹರಿಬಿದ್ದು ಓಡಿದ್ದನು. ಕೆಳಗೆಬಿದ್ದ ಪುಷ್ಪ ನೋವಿಂದ ಅಳುತ್ತ ಹೇಗೋ ತರಾತುರಿಯಲ್ಲಿ ಸಾವರಿಸಿಕೊಂಡು ಆತನನ್ನೂ ನಿಲ್ಲುವಂತೆ ಕೋರುತ್ತ ಹಿಂಬಾಲಿಸತೊಡಗಿದಳು. ಮಾರನೆ ದಿನ ಶಾನುಭೋಗರೇ ಸರೋಜಮ್ಮರ ಸಮಾಧಾನಕ್ಕೆ ಪುಷ್ಪಳಿಗೆ ಮಂತ್ರಹಾಕಿಸಿ ಕರೆತಂದರು.
ಆದದ್ದಿಷ್ಟೆ, ಬಸ್ಸಿಂದ ಇಳಿಯುವಾಗ ನಿದ್ರೆಯ ಮಂಪರಲಿದ್ದ ಪುಷ್ಪ ಅನುಚಿತವಾಗಿ ವರ್ತಿಸಿದ್ದಳು. ಇದನ್ನೇ ಸರೋಜಮ್ಮ ಮಗಳಿಗೆ ದೆವ್ವ ಹಿಡಿದಿದೆಯೆಂದು ತಪ್ಪಾಗಿ ಅರ್ಥೈಸಿ ಮಗಳಿಗೆ ನಿಕೃಷ್ಟವಾಗಿ ಹೊಡೆದಿದ್ದರು. ಮುಗ್ಧ ಹುಡುಗಿ ಪುಷ್ಪ ಮನೆಮಂದಿಯ ಮೂಡನಂಬಿಕೆಗೆ ಬಲಿಯಾಗಿ ನೋವನುಭವಿಸಿದ್ದಳು.
- ಅಮಿತ ಅತ್ರೇಶ್ ಎಚ್, ಆರ್.