ಇಬ್ಬರೂ ಮೌನವಾಗಿ ಕುಳಿತಿದ್ದರು. ಮುಂದೇನು ಮಾಡುವುದೆಂದು ಇಬ್ಬರಿಗೂ ತೋಚುತ್ತಿಲ್ಲ. ಜಾತಿಯ ನೆಪವೊಡ್ಡಿ ಎರಡೂ ಮನೆಯವರು ಪ್ರೇಮಿಗಳನ್ನ ದೂರ ಮಾಡಲು ಯತ್ನಿಸಿದ್ದರು.
"ಮುಂದೇನು ಮಾಡುವುದು?" ಹುಡುಗಿ ಪ್ರಶ್ನಿಸಿದಳು.
"ಗೊತ್ತಿಲ್ಲ. ಏನೊಂದೂ ತೋಚುತ್ತಿಲ್ಲ" ಹುಡುಗ ಉತ್ತರಿಸಿದ.
"ಎಲ್ಲಾದರೂ ದೂರಹೋಗಿ ಜೊತೆಯಾಗಿ ಬದುಕೋಣ"
"ಬದುಕು ಎರಡೂವರೆ ಗಂಟೆಯ ಸಿನಿಮಾವಲ್ಲ"
"ಹಾಗಾದರೆ ನಾವು ಪ್ರೀತಿಸಿದ್ದಾದರೂ ಯಾಕೆ?" ಹುಡುಗಿಯ ಕಣ್ಣಲ್ಲಿ ನೀರು ತುಂಬಿತ್ತು.
ಅವಳ ಕಣ್ಣಲ್ಲಿನ ನೋವು ಗುರುತಿಸಿದ. ಎದೆಗೆ ಕೊಳ್ಳಿಯಿಂದ ತಿವಿದಂತಾಯ್ತು, ನೋವಿನಿಂದಲೇ ನುಡಿದ "ಜೊತೆಯಾಗಿ ಬದುಕೋಣವೆಂದು, ಆದರೆ..." "ಆದರೆ ಇವರೇಕೆ ನಮ್ಮನ್ನು ಜೊತೆಯಾಗಿ ಬದುಕಲು ಬಿಡುತ್ತಿಲ್ಲ" ಹುಡುಗಿ ಬಿಕ್ಕಿದಳು
ಹುಡುಗ ತನ್ನ ಕೈಗಳಲ್ಲಿ ಅವಳ ಕೈ ಹಿಡಿದು ಮೆಲ್ಲನೆ ಒಮ್ಮೆ ಅದುಮಿ ಕ್ಷಣ ಹೊತ್ತಿನ ಮೌನದ ನಂತರ ಮಾತಾಡಿದ.
"ಜೊತೆಯಾಗಿ ಬದುಕುವುದನ್ನ ಅವರು ತಡೆಯಬಹುದು, ಆದರೆ ಜೊತೆಯಾಗಿ ಸಾಯುವುದನ್ನ ತಡೆಯಲು ಯಾರಿಗೆ ಸಾಧ್ಯ?"
ತಲೆ ತಗ್ಗಿಸಿ ಬಿಕ್ಕುತ್ತಾ ಕುಳಿತಿದ್ದವಳು ತಲೆಯೆತ್ತಿ ಅವನ ಮುಖ ನೋಡಿದಳು. ಆ ಕ್ಷಣವೇ ಇಬ್ಬರ ಮನಸ್ಸೂ ಒಂದು ದೃಢ ನಿರ್ಧಾರಕ್ಕೆ ಬಂತು.
-ಮರುದಿನ ಸಂಜೆ ಜನರು ಗುಂಪಾಗಿ ನಿಂತು ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದ ಪ್ರೇಮಿಗಳ ಹೆಣವನ್ನು ನೋಡುತ್ತಾ ತಮ್ಮ ತಲೆಗೆ, ಬಾಯಿಗೆ ಬಂದಂತೆ ಕತೆಕಟ್ಟಿ ಮಾತಾಡುತ್ತಾ ಪ್ರೇಮಿಗಳ ಸಾವಿಗೆ ಸಂತಾಪ ಸೂಚಿಸಿದರು.
- ನವೀನ್ ಮಧುಗಿರಿ