ವಿಪರ್ಯಾಸ
ಶರವೇಗದಲ್ಲಿ ವಾಹನಗಳು ಸಾಗುವ ರಸ್ತೆ. ಬದಿಯಲ್ಲಿ ಮುದುಕಿಯೊಬ್ಬಳು ಎಳನೀರು ಮಾರುತ್ತಿದ್ದಾಳೆ. ಯುವಕ ಭಿಕ್ಷೆ ಬೇಡುತ್ತಿದ್ದಾನೆ.
ನಗ್ನ ಸತ್ಯ
ಅವಳು ಊರ ಮಂದಿಯ ಮುಂದೆಲ್ಲ ಬೆತ್ತಲಾಗಿದ್ದಳು. ಅದಾದ ಎಷ್ಟೋ ದಿನದ ನಂತರ, ಸಂತೆಯಲ್ಲಿ ಅವಳ ಸೆರಗು ಜಾರಿತು. ನಾಚುತ್ತಲೇ ಮೇಲೆಳೆದುಕೊಂಡಳು.
ಕಾಲ
ಕ್ಲಿಕ್ಕಿಸುವಾಗ ಖುಷಿಕೊಟ್ಟ ಎಷ್ಟೋ ಚಿತ್ರಗಳು ಪ್ರಿಂಟಾಕಿಸಿದ ನಂತರ ನಿರ್ಜೀವವಾಗಿ ಬಿಡುತ್ತವೆ. ಕ್ಲಿಕ್ಕಿಸುವಾಗ ಕಣ್ಣಿಗೂ ಬೇಡವಾಗುವ ಎಷ್ಟೋ ಚಿತ್ರಗಳು ನೆನಪಿನ ಫ್ರೇಮಿನೊಳಗೆ ಕುಂತ ಮೇಲೆ ಮನಸ್ಸು ಕಲಕುತ್ತವೆ.
ಬಯಕೆ
ಯಾರೂ ನಡೆಯದ ಹಾದಿ ಯಾರದೋ ಬರುವಿಕೆಗಾಗಿ ಕಾಯುತ್ತಿದೆ. ತನ್ನ ಮೈಮೇಲೂ ಹೆಜ್ಜೆಗುರುತುಗಳು ಮೂಡಲಿ ಎಂಬ ಆಸೆಯಿಂದ.
ತೃಪ್ತ
ನಿಜ ಹೇಳುತ್ತೇನೆ. ನನ್ನಲ್ಲಿ ಏನಾದರೂ ಸಾಧಿಸಬೇಕೆಂಬ ಹಸಿವೇ ಇಲ್ಲ. ನಾನು ಹೊಟ್ಟೆ ತುಂಬಿದ ಮನುಷ್ಯ... ಅವಳು ನನಗೆ ದಕ್ಕಿದ ಮೇಲೆ.
- ಎಚ್.ಕೆ. ಶರತ್