ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಕರಂದ/ದೋಣಿ

ಚುಕ್ಕಿ ಜಾರುತಿರುವಾಗ ಕೋರಿಕೆ ಸಲ್ಲಿಸಿರುವೆ...

Mainashree
Updated On : 1 Oct 2013, 2:05 am

ಚಿನ್ನು,
ಜೋರು ಮಳೆ ಶುರುವಾಗಿದೆ. ಬೇಡವೆಂದರೂ ನಮ್ಮಿಬ್ಬರನ್ನೂ ದೂರ ಮಾಡಲು ಕಾರಣವಾದ ಆ ದಿನ ನೆನಪಾಗುತಿದೆ. ಎರಡು ವರ್ಷ ಪೂರೈಸಿದ ತುಂಬು ಪ್ರೀತಿಗೆ ಮಳೆರಾಯ ತಣ್ಣೀರೆರಚಿದ ಕರಾಳ ದಿನ ಅದು. ಮಳೆ ಬಂದಾಗಲೆಲ್ಲಾ ನನ್ನನ್ನು ನೋವಿನ ಮಡಿಲಲಿ ತೋಯಿಸಲು ಕಾದು ಕುಳಿತಿರುತ್ತದೆ. ಬೇಡವೆಂದರೂ ಹೃದಯದ ದುಃಖದ ಹಾಳೆಯನು ತೆರೆದು ಮತ್ತೆ ಮತ್ತೆ ಹರಿಯಲು ಪ್ರಯತ್ನಿಸುತ್ತದೆ. ಸಿಡಿಲು, ಮಿಂಚು, ಮಳೆಗೆ ಬೆದರಿ ನಿಂತಿದ್ದ ನೀನು... ಸತ್ಯವಾಗಿ ಹೇಳುತ್ತೇನೆ ಕೇಳು. ಆ ದಿನ ಮಗುವಿನ ಹಾಗೆ ಕಂಡಿದ್ದೆ. ಅದೇ ಕಾರಣದಿಂದ ಓಲೈಸಲೆತ್ನಿಸಿ ಸಿಹಿ ಮುತ್ತನ್ನಿಟ್ಟೆನೇ ಹೊರತು ನನ್ನಲ್ಲಿ ಯಾವುದೇ ಕೆಟ್ಟ ಭಾವನೆಗಳಿರಲಿಲ್ಲ. ಅದಕ್ಕಾಗಿ ನೀನು ಕೊಟ್ಟ ಚಾಟಿ ಏಟಿನಂಥ ಮಾತುಗಳು ಎದೆಯ ಚುಚ್ಚಿವೆ. ಚುಚ್ಚಿ ಇಂದಿಗೂ ಕೊಲ್ಲುತಿವೆ. ಅಂದಿನಿಂದ ನೀನು ತಳೆದಿರುವ ಮೌನ ನನ್ನ ಹೃದಯದ ಕಿತ್ತು ಹೊರಹಾಕುವುದರಲ್ಲಿದೆ.
ಮನಸನು ಬಿಚ್ಚಿ ಹೇಳುತ್ತಿದ್ದೀನಿ ಕೇಳು: ನನ್ನ ಭಾವನೆಗಳು ಯಾವುದೇ ಕಾರಣಕ್ಕೂ ಯಾವತ್ತೂ ಎಲ್ಲೇ ಮೀರಲ್ಲ... ಮೀರುವುದೂ ಇಲ್ಲ. ನಮ್ಮ ಮೊದಲ ಭೇಟಿಯಿಂದ ಇಂದಿನವರೆಗೂ ನಿನ್ನನ್ನು ನಾನು ಒಂದೊಳ್ಳೆ ಗೆಳತಿಯಾಗಿ, ಹಿಡಿ ಹೃದಯದ ಸಂಬಂಧಿಯಾಗಿ ನಾಳೆಗಳ ಸಂಗಾತಿಯಾಗಿ ನೋಡುತಿರುವೆನೇ ಹೊರತು ನನ್ನಲ್ಲಿ ಯಾವುದೇ ಅಸಭ್ಯತೆಗೆ ಜಾಗ ಇಲ್ಲ. ಒಮ್ಮೆ ಯೋಚಿಸಿ ನೋಡು: ನಾವಿಬ್ಬರೂ ಒಂದೇ ಆಗಿರುವಾಗ ನನ್ನ ಆತ್ಮಗೌರವಕ್ಕೆ ತೊಂದರೆಯಾದರೇನು ನಿನ್ನ ಆತ್ಮಗೌರವಕ್ಕೆ ಕುತ್ತಾದರೇನು; ಎರಡೂ ಒಂದೇ ಅಲ್ಲವಾ? ಇಂದಿಗೂ ನಾವು ವಾರಕ್ಕೊಮ್ಮೆ ಭೇಟಿಯಾಗುತ್ತಿದ್ದ ರಾಮಾಂಜನೇಯ ಗುಡ್ಡಕ್ಕೆ ಹೋಗಿ ಹನುಮಂತನ ನೆನೆದು ನಾವಿಬ್ಬರೂ ಬೇಡುತ್ತಿದ್ದ ಅದೇ ವರದ ಜೊತೆಗೆ ನಿನ್ನ ಮೌನಕ್ಕೆ ಇತಿಶ್ರೀ ಬೀಳಲಿ ಅಂತ ಕೂಡ ಕೇಳಿಕೊಳ್ಳುತ್ತಿದ್ದೇನೆ. ನಾಳೆ ಮತ್ತೆ ಬಂದಿದೆ ಶನಿವಾರ. ಮತ್ತೆ ಹನುಮಂತನ ಗುಡಿಗೆ ನಾನು ಹೋಗುವುದಂತೂ ಗ್ಯಾರಂಟಿ. ನಿನ್ನನ್ನು ಎಂದಿನ ಹಾಗೆ ಎದುರು ನೋಡುತಿರುವುದೂ ಗ್ಯಾರಂಟೀನೇ. ದಯವಿಟ್ಟು ನನ್ನ ಅಂತರಂಗದ ಕೂಗನ್ನು ಕೇಳಿಸಿಕೋ. ನಾನು ಮಾಡಿದ್ದು ತಪ್ಪಲ್ಲ ಎಂದು ಪ್ರತಿಪಾದಿಸುತ್ತಿಲ್ಲ. ನನ್ನ ಹೃದಯದ ಭಾವನೆಗಳಲ್ಲಿ ಕೆಟ್ಟ ಯೋಚನೆಗಳು ಇರಲಿಲ್ಲ ಎಂದು ತಿಳಿಸಲು ಯತ್ನಿಸುತ್ತಿದ್ದೀನಿ. ನಿನ್ನೆಲ್ಲಾ ಭಾವನೆಗಳ ಒಳಹೊರಗನು ತಿಳಿದಿರುವ ನಾನು ನಿನ್ನನ್ನು ಮತ್ತೆ ಪಡೆದೇ ಪಡೆಯದೇ ಎನ್ನುವ ಆಶಾಭಾವನೆಯಲ್ಲಿದ್ದೇನೆ. ನನ್ನ ಹೃದಯದ ಜಲಪಾತ ತನ್ನಷ್ಟಕ್ಕೆ ತಾನೇ ಬೋರ್ಗರೆಯುತ್ತಿರುವಾಗ ಕಿಟಕಿಯ ಹೊರಹಾಯ್ದ ದೃಷ್ಟಿಗೆ ಜಾರುತಿರುವ ಚುಕ್ಕಿ ಎದುರಾಯಿತು. ನಾಳೆ ನಿನ್ನನ್ನು ನಮ್ಮ ಅದೇ ಅಡ್ಡಕ್ಕೆ ಬರುವಂತೆ ಮಾಡೆಂದು ಕೋರಿಕೆ ಸಲ್ಲಿಸಿರುವೆ. ಆಗಸದಿಂದ ನಕ್ಷತ್ರ ಜಾರುತಿರುವಾಗ ಬೇಡಿಕೊಳ್ಳುವುದೆಲ್ಲಾ ಈಡೇರುತ್ತದಂತೆ. ಈ ನಂಬಿಕೆಯನ್ನು ನಿಜ ಮಾಡಲಾದರೂ ಗುಡ್ಡದಲ್ಲಿ ಎದುರಾಗು... ಎಂದೆಂದಿಗೂ ನಿನ್ನವ...

- ಜಮುನಾ ರಾಣಿ., ಎಚ್.ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments