ದಂತ ಕಥೆಯಾದರೆ ತೇಜಸ್ವಿ...?!
2002ನೇ ಇಸವಿ. ನಾನಾಗ ಕಾಲೇಜು ವಿದ್ಯಾರ್ಥಿ. ಗೌರಿಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದ...
2002ನೇ ಇಸವಿ. ನಾನಾಗ ಕಾಲೇಜು ವಿದ್ಯಾರ್ಥಿ. ಗೌರಿಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದ ಕಣಚೂರಿನ ಕಾಫಿ ತೋಟದ ರೈಟರ್ ಲಕ್ಷ್ಮಣಗೌಡ ಎಂಬ ನನ್ನ ದೂರದ ಸಂಬಂಧಿ 'ನಿನಗೆ ತೇಜಸ್ವಿ ಗೊತ್ತೇನೋ?' ಎಂದು ಕೇಳಿದರು. 'ಹೌದು ಗೊತ್ತು. ಅವರ ಸುಸ್ಮಿತಾ ಮತ್ತು ಹಕ್ಕಿ ಮರಿ ಕತೆ ಓದಿದ್ದೇನೆ. ನನಗೆ ಕನ್ನಡ ಪಾಠ ಹೇಳುವ ಜಿ.ಕೆ. ರಾವ್ ಹಾಗೂ ದತ್ತಾತ್ರಿ ಸರ್ ತುಂಬಾ ಚೆನ್ನಾಗಿ ಕಣ್ಣಿಗೆ ಕಟ್ಟಿದಂತೆ ತಿಳಿಸಿಕೊಟ್ಟಿದ್ದಾರೆ' ಎಂದೆ. 'ನೀನು ಅವರ ಮನೆ ಹ್ಯಾಂಡ್ಪೋಸ್ಟ್ಗೆ ಹೋಗಿದ್ದೀಯಾ? ನಿರುತ್ತರ ಅಂತ ಹೆಸರು ಇಟ್ಟುಕೊಂಡಿದ್ದಾರೆ. ನಾನು ಹೋಗಿದ್ದೆ. ಮಾತನಾಡಿಕೊಂಡು ಬಂದೆ' ಎಂದರು. 'ಅಲ್ಲಾ ಮತ್ತೇ...! ಅವರನ್ನು ಮಾತನಾಡಿಸಿದರೆ ಬೈಯುತ್ತಾರಂತೆ. ನಮ್ಮ ನಟರಾಜ್ ಸರ್ ಹಾಗಂತ ಹೇಳಿದ್ದ ನೆನಪು ನನಗೆ' ಎಂದು ಬಡಬಡಿಸಿದೆ. 'ಸುಮ್ಮ ಸುಮ್ಮನೆ ಬಯ್ಯೋದಕ್ಕೆ ಅವರಿಗೇನು ತಲೆ ಕೆಟ್ಟಿಲ್ಲ. ಮೂಡಿಗೆರೆಯವನಾಗಿ ಅವರನ್ನು ಮಾತನಾಡಿಸಿಲ್ಲ ಅಂದ್ರೆ ನಿನ್ನಂತಹ ದಡ್ಡ ಮತ್ತೊಬ್ಬನಿಲ್ಲ' ಎಂದು ಛೇಡಿಸಿದರು. ಆಗ 'ಹೌದು. ನಾನೂ ತೇಜಸ್ವಿಯವರನ್ನು ಮಾತನಾಡಿಸಬೇಕು!' ಎಂದು ನನ್ನ ಸಾತ್ವಿಕ ಪ್ರಜ್ಞೆ ತೀರ್ಮಾನಿಸಿಬಿಟ್ಟಿತು.
ಅಂದು ಸಂಜೆ ಐದರ ಸಮಯ. ಮೂಡಿಗೆರೆ ಬೇಲೂರು ರಸ್ತೆಯ ಮೊದಲ ತಿರುವಿನಲ್ಲಿ ಕುರುಚಲು ಬಿಳಿ ಗಡ್ಡದ ಸಿಂಗಲ್ ಸೀಟಿನ ಬಜಾಜ್ ಚೇತಕ್ ಸ್ಕೂಟರ್ ಮೇಲೆ ಕುಳಿತಿರುವ ಸಮ ಪ್ರಾಯದ ವ್ಯಕ್ತಿಯೊಬ್ಬರು ತರಕಾರಿ ಅಂಗಡಿಯ ಹೆಂಗಸಿನೊಂದಿಗೆ ಅದೇನೇನೋ ಗೊತ್ತಿಲ್ಲ, ಸಂಭಾಷಣಾ ನಿರತರಾಗಿದ್ದಾರೆ. ಅವಳೋ, ಇಲ್ಲ ಸಾಹುಕಾರ್ರೇ ಚೆನ್ನಾಗೈತೆ ನೋಡಿ ಎಂದು ಒಂದೊಂದು ತರಕಾರಿಗಳ ಸಮಾಚಾರ ವಿವರಿಸುತ್ತಿದ್ದಾಳೆ. ನಾನೋ ಈ ದೃಶ್ಯ ಕಣ್ಣಿಗೆ ಬೀಳುತ್ತಲೇ 'ಅಪ್ಪಾ, ಕಣಚೂರ ಮಾವ ಹೇಳಿತ್ತಲ್ಲ ತೇಜಸ್ವಿ ಅಂತ; ನೋಡಲ್ಲಿ ಇವರೇ. ಏನಾದ್ರೂ ಆಗಲಿ ಮಾತನಾಡಿಸೋಣ ಬಾ...!' ಎಂದೆ.
ನನ್ನ ಅಪ್ಪ ಮುಂದೆ ಮುಂದೆ. ನಾನು ಅವರ ಹಿಂದೆ ಹಿಂದೆ ಎಂಬಂತೆ ತೇಜಸ್ವಿ ಬಳಿಗೆ ತೆರಳಿ ಹಲ್ಲುಗಿಂಜುತ್ತ ನಿಂತೆವು. ನಮ್ಮ ಪರಿಸ್ಥಿತಿ ಅರಿವಾಗುತ್ತಲೇ 'ಏನು?' ಎಂಬ ಪ್ರಶ್ನಾರ್ಥಕ ದೃಷ್ಟಿ ಬೀರಿದರು ತೇಜಸ್ವಿ ಸಾರ್. ಆ ಕ್ಷಣ ನನ್ನ ಅಪ್ಪನಿಗೆ ಏನಾಯ್ತೋ ಗೊತ್ತಿಲ್ಲ 'ನಮಸ್ಕಾರ ಅಜ್ಜಯ್ಯ' ಎನ್ನಬೇಕೆ! ಆಗಲೇ ನನ್ನ ಬೆವರು ಸುರಿವ ಪುಕ್ಕಲು ಮುಖವನ್ನು ನೋಡಿದ ತೇಜಸ್ವಿ 'ಏನಯ್ಯ' ಎಂದರು. 'ಅದು ಸಾರ್ ನಾನು ಕವನ, ಕತೆ ಬರೆದಿದ್ದೀನಿ. ಅದ್ನ ಪ್ರಕಟ ಮಾಡಬೇಕು. ಅದು ಹೇಗೇ ಪ್ರಕಟಿಸಬೇಕು, ಪ್ರಕಾಶಕರು ಎಲ್ಲಿ ಸಿಕ್ತಾರೆ ಸಾರ್?' ಎಂದು ಉಗುಳು ನುಂಗುತ್ತ ಒಂದೇ ಉಸಿರಿಗೆ ಪಾಠ ಒಪ್ಪಿಸುವ ಹುಡುಗನಂತೆ ಹೇಳಿ ಮುಗಿಸಿದೆ.
ಬಡಹುಡುಗನ ಪಡಿಪಾಟಲು ಪರಿಸ್ಥಿತಿ ಕಂಡು ಯಾರಿಗೆ ತಾನೆ ಕರುಣೆ ಹುಟ್ಟುವುದಿಲ್ಲ ಹೇಳಿ? ತೇಜಸ್ವಿಯವರಿಗೂ ಹಾಗೆ ಅನಿಸಿರಬೇಕು. ಮನೆಗೆ ನಿನ್ನ ರಚನೆಗಳನ್ನು ತೆಗೆದುಕೊಂಡು ಬಾ ನೋಡೋಣವೆಂದರು. ದೂರವಾಣಿ ಸಂಖ್ಯೆ ಬರೆದುಕೋ ಎಂದು ಹೇಳಿ ಹೊರಟುಹೋದರು. ನಂತರ ಅಪರೂಪಕ್ಕೊಮ್ಮೆ ಅವರ ಮನೆಗೆ ಹೋಗುವುದು, ಅವರಿಲ್ಲದಿದ್ದಾಗ ಅಥವಾ ಕಾರ್ಯನಿರತರಾಗಿದ್ದಾಗ 'ರಾಜೇಶ್ವರಿ ಮೇಡಮ್'ಗೆ ನನ್ನ ಹಸ್ತಿಕೆಗಳನ್ನು ನೀಡಿ ಸರ್ಗೆ ಕೊಡಿ ಮೇಡಂ, ಬರ್ತೀನಿ ಮೇಡಂ! ಎನ್ನುವುದು ಸಾಮಾನ್ಯವಾಯಿತು.
ಈಗ ತೇಜಸ್ವಿ ನಮ್ಮೊಂದಿಗಿಲ್ಲ. ಆದರೆ ಪ್ರತಿ ವರ್ಷವೂ ಸೆಪ್ಟಂಬರ್ 8 ಬಂತೆಂದರೆ ಸಾಕು; ಅವರ ನೆನಪಿನ ಗಂಟಿನ ತುತ್ತಿನ ಅಗುಳುಗಳು ಮತ್ತೆ ಮತ್ತೆ ಅದೇನೇನೋ ಕತೆಗಳನ್ನು ಹೇಳಹೊರಡುತ್ತವೆ. ಹೀಗೇ ಒಮ್ಮೆ ತೇಜಸ್ವಿಯವರ ಆಪ್ತ ಒಡನಾಡಿ ರೇಖಾಚಿತ್ರ ಕಲಾವಿದ ಬಾಪು ದಿನೇಶ್ ಅವರನ್ನು ಮೂಡಿಗೆರೆ ದರ್ಪಣ ಪತ್ರಿಕೆ ಕಚೇರಿಯಲ್ಲಿ ಮಾತಿಗೆಳೆದಾಗ ಅವರು ಹೇಳಿದ್ದು ಹೀಗೆ- 'ಒಮ್ಮೆ ನಾನು ಮತ್ತು ತೇಜಸ್ವಿಯವರು ಜನ್ನಾಪುರದ ಸಮೀಪ ಅವರ ಸೀಟಿಲ್ಲದ ಸ್ಕೂಟರ್ನಲ್ಲಿ ಪಯಣ ಬೆಳೆಸಿದ್ದೆವು. ರಸ್ತೆ ಉಬ್ಬನ್ನು ಲೆಕ್ಕಿಸದೇ ಅದೇನೋ ಚಿಂತೆಯಲ್ಲಿ ಮಗ್ನರಾಗಿದ್ದ ತೇಜಸ್ವಿ ಸ್ಕೂಟರ್ನ ವೇಗವನ್ನು ಕಡಿಮೆ ಮಾಡದೆ ಮುಂದೆ ನುಗ್ಗಿಯೇಬಿಟ್ಟರು. ಅದರ ಹಿಂದೆ ಮೈ ಮರೆತು ಕುಳಿತಿದ್ದ ನಾನು ಅಂಗಾತವಾಗಿ ಕೆಳಗೆ ಬಿದ್ದುಬಿಟ್ಟೆ. ಅಲ್ಪಸ್ವಲ್ಪ ಗಾಯಗಳೊಂದಿಗೆ ಮೇಲೆದ್ದ ನನ್ನನ್ನು ದೂಷಿಸುತ್ತ ಎಂಥಾ ಯೋಚನೆ ಮಾಡ್ತಾ ಕುಳಿತಿದ್ದೀ ಮಾರಾಯ? ಎಂದು ಗದರಿದವರೇ ಸೀದಾ ಅಲ್ಲೇ ಇದ್ದ ಒಂದು ಪಶುಪಾಲನಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದವರೇ ಅಲ್ಲಿದ್ದ ಸಿಬ್ಬಂದಿಯಿಂದ ಟಿಂಚರ್, ಹತ್ತಿ ಕೇಳಿ ಪಡೆದು ಗಾಯಕ್ಕೆ ಹಚ್ಚಿಕೋ ವಾಸಿ ಆಗುತ್ತೆ. ಅದೇನೂ ಭಾರಿ ಗಾಯ ಅಲ್ಲ ಬಿಡು' ಎಂದರು. ನಾನು ಹಾಗೇ ಮಾಡಿದೆ. ಮತ್ತೆ ಅವರೊಂದಿಗೆ ಪಯಣ ಮುಂದುವರಿಸಿದ ನಾನು 'ಏನ್ ಸಾರ್? ದನದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟ್ರೀಟ್ಮೆಂಟ್ ಕೊಡಿಸಿಬಿಟ್ರಲ್ಲ!' ಎಂದರೇ 'ನೀನು ಮನುಷ್ಯನಾ? ಸರಿಯಾಗಿ ಕುಳಿತಿದ್ದರೆ ನಿನಗೆ ಈ ಪರಿಸ್ಥಿತಿ ಎದುರಾಗುತ್ತಿತ್ತಾ?' ಪ್ರಶ್ನಿಸಿ ನಗಾಡಿದರಂತೆ.
2007 ಪೂರ್ಣ ಚಂದ್ರ ಇಹಲೋಕಕ್ಕೆ ರಜ ಹಾಕಿದ ವರ್ಷ ಅದು. 2008ರಲ್ಲಿ ಅವರ ಬದುಕು ಮತ್ತು ಬರಹ ಕುರಿತಾದ 'ಮೂಡಿಗೆರೆಯ ಮುದ್ದು ಹಕ್ಕಿ' ಎಂಬ ಕೃತಿಯೊಂದನ್ನು ಬೆಂಗಳೂರಿನ ಸುಮುಖ ಪ್ರಕಾಶನದ ಪ್ರಕಟಣೆಯೊಂದಿಗೆ ಹೊರತಂದೆ. ಈ ಪುಟ್ಟ ಪುಸ್ತಿಕೆಯನ್ನು ರಾಜೇಶ್ವರಿ ಮೇಡಂಗೆ ಕೊಡಲು ಹ್ಯಾಂಡ್ಪೋಸ್ಟ್ನ ಅವರ ನಿರುತ್ತರ ತೋಟದ ಮನಗೆ ಹೋದಾಗ ಅವರು ಕೇಳಿದ ಪ್ರಶ್ನೆ: 'ತೇಜಸ್ವಿ ಅಂದ್ರೆ ನಿಮಗ್ಯಾಕೆ ಅಷ್ಟು ಇಷ್ಟ?' ಅವರ ಕಣ್ಣುಗಳಲ್ಲಿ ನೀರ ಹನಿಗಳು... ದುಃಖವೋ? ಆನಂದ ಬಾಷ್ಪವೋ? ಒಟ್ಟಾರೆ ತುಂಬಿ ತೊಟ್ಟಿಕ್ಕಲು ಅಣಿಯಾದವು. ಆ ಕ್ಷಣ ಉತ್ತರ ಹೇಳಬೇಕೆಂದಿದ್ದ ನನ್ನ ಗಂಟಲು ಕಟ್ಟಿ ಮೌನ ವಹಿಸಿತು. ನಿಜ. ತೇಜಸ್ವಿ ಎಂದರೆ ಮಾತು ಮೌನವಾಗಿ ಉಳಿಯುತ್ತೆ. ಆ ಮೌನ ನೆನಪಾಗಿ ಕಾಡುತ್ತದೆ.
ಈಗ ತೇಜಸ್ವಿಯ ಜತೆಯಲ್ಲಿ ನಾನು ಬುಗುರಿ ಆಟವಾಡಿದ್ದೆ ಎಂದು ಯಾರಾದರೂ ಬರೆದುಕೊಳ್ಳಬಹುದಾದ ಕಾಲ! ಅದನ್ನು ಬೆಂಗಳೂರಿನ ಜನ ನಂಬುತ್ತಾರೆ! ಅಂಥ ವಿವರಣೆಯ ಬರಹಗಳು ಕೂಡ ಈಗ ಪ್ರಕಟಗೊಳ್ಳುತ್ತಿರುವುದು ವಿಷಾದನೀಯ. ನನಗೆ ಈಗೀಗ ತೇಜಸ್ವಿಯವರ ದಂತ ಕತೆಯಾದರೆ? ಎಂಬ ಗುಮಾನಿ ಕಾಡುತ್ತಿದೆ. ತೇಜಸ್ವಿಯವರು ಬದುಕಿದ್ದಾಗ ಅವರ ಬಗ್ಗೆ ಒಂದಕ್ಷರ ಬರೆಯಲೂ ಅಂಜಿಕೊಳ್ಳುತ್ತಿದ್ದ ಹಲವರು, ಅವರು ನಿಧನರಾದ ನಂತರದಲ್ಲಿ 'ನಾನೂ ತೇಜಸ್ವಿಯವರ ಸಂಪರ್ಕದಲ್ಲಿದ್ದೆ' ಎನ್ನುವುದರಿಂದ ಪ್ರಾರಂಭಿಸಿ ತೇಜಸ್ವಿಯವರ ಕತೆಯಲ್ಲಿ ಬರುವ ಪ್ಯಾರ ನಾನೇ ಎಂಬಲ್ಲಿಗೆ ನಿಲ್ಲಿಸುತ್ತಿರುವ ಉದಾಹರಣೆಗಳು ಕಾಣುತ್ತಿವೆ. ಅದೇನೆಯಿರಲಿ, ತೇಜಸ್ವಿಯವರ ನೀಜತ್ವ ಅವರ ಸಾವಿನೊಂದಿಗೆ ಅಂತ್ಯ ಕಾಣದಿರಲಿ ಎಂಬುದೆ ಈ ಹೊತ್ತಿನ ಸದಾಶಯ.
- ಸಂಪತ್ ಬೆಟ್ಟಂಗೆರೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.