ಮಕರಂದ/ದೋಣಿ

ಬೇಸರಾಗಿದೆ ಮಾತು ಗಾಢವಾಗಿದೆ ಮೌನ...

ಭಾವನಾ...
ನಿನ್ನ ಮೇಲೆ ಮುನಿಸು, ಕೆಂಡದಂಢ ಕೋಪ. ಕಾರಣ ಹೇಳ್ತಿನಿ ಕೇಳು. ಇಷ್ಟು ದಿನ, ಇಷ್ಟು ಕ್ಷಣ ನನ್ನ ನೆನಪಿಲ್ಲದೆ, ಒಂದು ಕರೆ ಮಾಡದೆ, ಪತ್ರ ಕೂಡ ಹಾಕದೆ ತೆಪ್ಪಗಿರುವೆಯಲ್ಲ! ಅದೆಷ್ಟು ಸಹನಾಮಯಿ ನೀನು. ಹೆಣ್ಣು ಮಕ್ಕಳಿಗೆ ಸಹನೆ ಹೆಚ್ಚು ಅನ್ನೋದು ಇದೇ ಕಾರಣಕ್ಕೇ ಇರಬೇಕು! ನೀವು ಪ್ರೀತಿಸುವವನ ನೋಯಿಸಿ ಕಾಡಿಸಿ, ಪೀಡಿಸುತ್ತೀರಿ. ಅವನ ಹೊಯ್ದಾಟ, ಚಡಪಡಿಕೆ, ಕನವರಿಕೆ ನಿಮಗೆಲ್ಲ ತಮಾಷೆ ಅನಿಸುತ್ತಿದೆ. ಅಲ್ಲವೇ ? ತಿಂಗಳಾಯ್ತು ನಿನ್ನ ನಗು ಮೊಗದ ದರ್ಶನವಾಗಿ.. ಕಾಲೇಜು ಅಲೆದೆ. ಮನೆಯ ಪ್ರದಕ್ಷಿಣೆ ಹಾಕಿದೆ. ಇದ್ದಬದ್ದ ಗುಡಿ ಗೋಪುರಗಳನ್ನೂ ಸುತ್ತಿದ್ದಾಯ್ತು. ಲೈಬ್ರೆರಿಯಲ್ಲಿ ಕೂಡಾ ಇಣುಕಿದ್ದಾಯ್ತು. ನಿನ್ನ ಗೆಳತಿಯರನ್ನೆಲ್ಲ ವಿಚಾರಣೆ ಮಾಡಿದ್ದಾಯ್ತು. ಊಹುಂ.... ನಿನ್ನ ಸುಳಿವು ಮಾತ್ರ ಸಿಗಲಿಲ್ಲ! ಸಿಕ್ಕ ಸಿಕ್ಕಲ್ಲೆಲ್ಲಾ ಅಲೆದಾಡುವ ಅಬ್ಬೇಪಾರಿಯಂತಾಯ್ತು ನನ್ನ ಪರಿಸ್ಥಿತಿ.
ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನಿಲಬಾರದೇ....
ಎರಡು ನರಳಿಕೆ ನಾವಿಬ್ಬರೂ ಒಂದೇ
ಬಳಿ ನೀನು ಬರಬಾರದೇ...

ಕ್ಷಣ ಕಾಣದಿದ್ದರೂ ಆಕಾಶವೇ ಕಳಚಿಬಿದ್ದಂತೆ ಕನವರಿಸುತ್ತಿದ್ದ ನೀನು, ತಿಂಗಳುಗಟ್ಟಲೇ ಸಂಪರ್ಕಕ್ಕೆ ಸಿಗದೆ, ಒಂದು ಮಾತೂ ತಿಳಿಸದೆ ನಡೆದದ್ದಾದರೂ ಎಲ್ಲಿಗೆ ಎಂಬ ಅಸಂಖ್ಯ ಪ್ರಶ್ನೆಗಳು ಚಿಂತೆ ಹಬ್ಬಿಸಿವೆ. ಅಥವಾ ನನ್ನ ಪ್ರೀತಿ ಪರೀಕ್ಷೆ ಮಾಡುತ್ತಿರಬಹುದೇ ಎಂಬ ಸಂದೇಹ ಕೂಡಾ ಸುಳಿದು ಮಾಯವಾಗುತ್ತದೆ. ಇವೆಲ್ಲಕ್ಕೂ ಉತ್ತರ ಹೇಳಬೇಕಾದ ನೀನೇ ಇಲ್ಲ. ನಿನ್ನ ಒಂದು ನಗೆಗಾಗಿ, ಕಣ್ಣ ನೋಟಕ್ಕಾಗಿ, ಅಂತಃಕರಣ ತುಂಬಿದ ಮಾತಿಗಾಗಿ, ವೇದನೆ ಕರಗಿಸುವ ಮೃದು ಸ್ಪರ್ಶಕ್ಕಾಗಿ ಹಗಲಿರುಳು ಪರಿತಪಿಸುವಂತೆ ಮಾಡಿಬಿಟ್ಟೆಯಲ್ಲ? ಇದು ನ್ಯಾಯವೇ? ಅಂದು ನೀನು ಜೊತೆಗೂಡಿ ಆಡಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿವೆ. 'ಆದಿ, ನಿನ್ನ ಮಡಿಲಲ್ಲಿ ಮಲಗಿ ಭವಿಷ್ಯದ ಕನಸುಗಳ ಹೆಣೆಯುವಾಗ ಅದೆಷ್ಟು ಹಿತವಾಗುತ್ತೆ ಗೊತ್ತಾ? ಜಗತ್ತಿನ ಎಲ್ಲ ಸಂಪ್ರದಾಯಗಳನ್ನು, ನೀತಿ-ನಿಯಮಗಳನ್ನು ಧಿಕ್ಕರಿಸಿ, ನಿನ್ನ ನೀಳ ತೋಳುಗಳಲ್ಲಿ ನಿರ್ಭಯದಿಂದ ಮೈ ಮರೆಯಬೇಕು. ನಮ್ಮಿಬ್ಬರನ್ನೂ ಬೇರ್ಪಡಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಈ ಮುಕ್ತ ವಾತಾವರಣ, ಸ್ವಚ್ಛಂದ ಗಾಳಿ, ಪಕ್ಷಿಗಳ ಕಲರವ, ತಾರೆಗಳ ಮಿನುಗು, ನದಿಯ ನಿನಾದ... ವಾಹ್! ಅದ್ಭುತ, ಅದ್ಭುತ! ನಿನ್ನ ಪುಟ್ಟ ಕಂಗಳಿಂದ ಜಿನುಗುತ್ತಿರುವ ಒಲವಿನ ಮೇಲಾಣೆ ನಿನ್ನನ್ನು ಬಿಟ್ಟು ಒಂದರೆಕ್ಷಣ ಕೂಡಾ ನಾನಿರಲಾರೆ. ಹಾಗೇನಾದರೂ ಅಂತಹ ಸಂದರ್ಭ ಬಂದರೆ ನನ್ನ ಉಸಿರು ನಿಂತು ಹೋಗಿರುತ್ತೆ' ಎಂದು ನೀನು ನನ್ನ ತಲೆಗೂದಲಲ್ಲಿ ಬೆರಳಾಡಿಸುತ್ತಾ ಹೇಳುತ್ತಿದ್ದುದನ್ನು ನೆನೆದುಕೊಂಡರೆ ಕಣ್ಣಂಚುಗಳು ಒದ್ದೆಯಾಗುತ್ತವೆ. ಇಷ್ಟು ಪ್ರೀತಿಸುತ್ತಿದ್ದ ಹುಡುಗಿ ಕಾರಣ ಹೇಳದೇ ಹೋದದ್ದಾದರೂ ಏಕೆ ಎಂಬ ಪ್ರಶ್ನೆ ಗಿರಕಿ ಹೊಡೆಯುತ್ತದೆ.
ಬೇಸರಾಗಿದೆ ಮಾತು ಗಾಢವಾಗಿದೆ ಮೌನ...
ನೋವು ಕರಗಿದೆ ಕಣ್ಣಲಿ...

ಹೇಳಬೇಕೆಂದ ಭಾವಗಳೆಲ್ಲ ಎದೆಯ ಗೂಡೊಳಗೆ ಕುಳಿತು ಅಣಕಿಸುತ್ತಿವೆ. ಮಾಡಿಕೊಂಡ ಆಣೆ ಪ್ರಮಾಣಗಳೆಲ್ಲ ಒಳಗೊಳಗೆ ಚುಚ್ಚುತ್ತಿವೆ. ನಾವು ಸುತ್ತಿದ ಜಾಗಗಳೆಲ್ಲ ನನ್ನ ಕಂಡೊಡನೆ ಮುಸಿ ಮುಸಿ ನಗುತ್ತಿವೆ. ಒಬ್ಬಂಟಿಯಾಗಿ ನಾನು ಅಲೆದಾಡುವುದನ್ನು ಕಂಡ ಗೆಳೆಯರೆಲ್ಲ ಗೇಲಿ ಮಾಡುತ್ತಿದ್ದಾರೆ, ಪ್ಲೀಸ್, ಒಂದು ಸಾರಿಯಾದರೂ ನಿನ್ನ ನಗುವದನ ತೋರಿಸಿ ಹೋಗು. ನಿನ್ನ ನಗೆಯನ್ನು ಎದೆಯ ಗೂಡೊಳಗೆ ಬಚ್ಚಿಟ್ಟುಕೊಳ್ಳುತ್ತೇನೆ. ಬರ್ತೀಯ ತಾನೇ ? <
ನಿನ್ನವನು.....

- ನಾಗೇಶ್ ಜೆ. ನಾಯಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ