ಜ್ಯೋತಿಷಿಗಳನ್ನು, ದೇವರನ್ನು ಸ್ವಾಮೀಜಿಗಳನ್ನು ಸುತರಾಂ ನಂಬದ, ಅದನ್ನ ಹೀಗಳೆಯುವ ನಂದೀಶನಿಗೆ ಪ್ರತಿದಿನ ಅಲ್ಲದಿದ್ದರೂ, ಆಗಾಗ್ಗೆ ತಮಾಷೆಗಾಗಿ ದಿನಪತ್ರಿಕೆಗಳಲ್ಲಿ ಪ್ರಕಟವಾಗೋ ದಿನ ಭವಿಷ್ಯವನ್ನು ನೋಡುವ ಹುಚ್ಚಿತ್ತು. ಬೇರೆ ಯಾವುದಕ್ಕೂ ಅಲ್ಲ. ತಮಾಷೆ ಮಾಡಿ ನಗಲು... ದೇವರಲ್ಲಿ ತುಂಬಾ ಅಲ್ಲದಿದ್ದರೂ ಸ್ವಲ್ಪ ಮಟ್ಟಿನ ಭಕ್ತಿ ಇದ್ದ ಪತ್ನಿ ಲತಾಗೆ ನಂದೀಶನ ಈ ವರ್ತನೆ ಕಿರಿಕಿರಿ ಮಾಡ್ತಾ ಇತ್ತು.... ಹಾಗೆಯೇ ಇವತ್ತು ಕೂಡ ದಿನ ಭವಿಷ್ಯ ನೋಡಿ ತಮಾಷೆ ಮಾಡಿದ್ದ. ಅದನ್ನ ಮರೆತೂ ಬಿಟ್ಟಿದ್ದ...
ತನ್ನ ಹೊಸ ಯಾಮಾಹಾ ಬೈಕ್ನಲ್ಲಿ ಜಾಲಹಳ್ಳಿ ಕ್ರಾಸ್ ದಾಟಿ, ತುಮಕೂರು ರೋಡ್ನಲ್ಲಿ ಹೋಟೆಲ್ ತಾಜ್ ವಿವಾಂತಾಗೆ ಮುಂಚೆ ಲೆಫ್ಟ್ ತಗೊಂಡು ಕಂಠೀರವ ಸ್ಟುಡಿಯೋ ಕಡೆ ಹೋಗ್ತಿರಬೇಕಾದ್ರೆ, ಕಣ್ಣಿಗೆ ಬಿದ್ದ ಅಪಘಾತಕ್ಕೀಡಾದ ಹಳೆ ಮೆಟಾಡೋರ್ ವಾಹನ ಅವನಿಗೆ ಅಂದು ಬೆಳಗ್ಗೆ ನೋಡಿದ ಭವಿಷ್ಯವನ್ನು ನೆನಪಿಸ್ತು.......
ಹೌದು, ಸ್ವಲ್ಪ ಹೊತ್ತಿನ ಮುಂಚೆ ಜಾಲಹಳ್ಳಿ ಸಿಗ್ನಲ್ನಲ್ಲಿ ಬಸ್ಸೊಂದು ರೋಡ್ ಡಿವೈಡರ್ಗೆ ಡಿಕ್ಕಿ ಹೊಡೆದು ನಿಂತಿತ್ತು... ಅಂದ್ರೆ ಇಲ್ಲಿ ನಾನು ನೋಡ್ತಿರೋ ಮೆಟಡೋರ್ ವಾಹನ ಇಂದು ನಾನು ನೋಡ್ತಿರೋ ಎರಡನೇ ಆಕ್ಸಿಡೆಂಟ್...ಅಂದ್ಕೊಂಡ ನಂದೀಶ.
ಅಂದ್ರೇ, ನಂದೀಶ ಅಂದು ಬೆಳಗ್ಗೆ ನೋಡಿದ್ದ ಭವಿಷ್ಯವಾಣಿ ಹೀಗಿತ್ತು... ಅಪಘಾತಗಳಿಗೆ ಸಾಕ್ಷಿಯಾಗೋ ಸಾಧ್ಯತೆ, ಎಚ್ಚರಿಕೆ ಅವಶ್ಯಕ.
ಮೈಗಾಡ್... ಇದೊಳ್ಳೆ ಕಥೆಯಾಯ್ತಲ್ಲ, ಅದ್ಹೇಗೆ ಸಾಧ್ಯ ಈ ಥರದ ಸ್ಕ್ರಾಪ್ ಭವಿಷ್ಯಗಳು ನಿಜವಾಗಲು?ಬುಲ್ಶೀಟ್... ಈ ಥರದ ಸಂದರ್ಭಗಳಲ್ಲಿ ಯಾವಾಗ್ಲೂ ನೆನಪಿಗೆ ಬರೋ ಒಂದು ಪದ ನೆನಪಿಗೆ ಬಂತು... ಹೌದು, ಕಾಕತಾಳೀಯ ಅಷ್ಟೇ...
ಬಟ್ ದಟ್ ವಾಸ್ ನಾಟ್ ದ ಎಂಡ್... ಇವತ್ತು ಬೆಳಗ್ಗೆ ಪೇಪರ್ನಲ್ಲಿ ಬಂದ ಭವಿಷ್ಯವಾಣಿಯನ್ನು ನಿಜವಾಗಿಸಲು ಯಾರೋ ಪಣ ತೊಟ್ಟಂತೆ ಕಾಣಿಸ್ತು. ಕಂಠೀರವ ಸಿಗ್ನಲ್ ದಾಟಿದ ತಕ್ಷಣ ಕಂಡ ರಸ್ತೆ ಮೇಲಿನ ಕ್ರೌಡು...ಇಲ್ಲಿ ಸಿಕ್ಕಿ ಬಿದ್ದಂತೆಯೇ ಅನ್ನಿಸಿ, ಎರಡನೆ ಯೋಚ್ನೆ ಕೂಡ ಮಾಡದೇ ಬೈಕ್ನ ಸರ್ವಿಸ್ ರೋಡ್ ಕಡೆಗೆ ತಿರುಗಿಸಿ, ನಂತರ ಸ್ವಲ್ಪ ಸ್ಲೋ ಮಾಡಿ ಅಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನನ್ನ ಕೇಳ್ದ, 'ಏನಾಯ್ತು ಸಾರ್?'
'ಅಕ್ಸಿಡೆಂಟ್'. 'ಯಾರಿಗೇನಾದ್ರೂ ಗಾಯ ಗೀಯ?'. 'ಸ್ಪಾಟ್ ಔಟ್ ಸಾರ್... ಲಾರಿ ಹೊಡೆದು ಬೈಕ್ನಲ್ಲಿದ್ದ ವಿದ್ಯಾರ್ಥಿ ಔಟ್.'
ನಂದೀಶನ ಮನಸ್ಸು ಒಂದು ಕ್ಷಣ ಬೆಚ್ಚಿ ಬಿತ್ತು. ಆದರೆ, ಬೆಂಗಳೂರಿನ ಬಹುತೇಕ ಸತ್ಪ್ರಜೆಗಳಂತೆ ಬೈಕ್ನಿಂದ ಇಳಿಯಲೂ ಹೋಗದೆ ಗೇರ್ ಚೇಂಜ್ ಮಾಡಿದ.
ಬೈಕ್ನ ವೇಗದೊಂದಿಗೆ ಸ್ಪರ್ಧೆಗಿಳಿದಂತೆ ನಂದೀಶನ ಮನಸ್ಸು ಯೋಚನೆಗೆ ಬಿತ್ತು. ಇದೇನು ಹೀಗೆ? ಇದಕ್ಕೇನಾದ್ರೂ ಅರ್ಥ ಇದೆಯಾ? ಈ ಮರಣಗಳು? ಈ ಅವಘಡಗಳು? ಪೂರ್ವ ನಿರ್ಧಾರಿತವಾ? ಅಥವಾ ಕಾರಣಗಳೇ ಇಲ್ಲದ ಅಥವಾ ಕ್ಷುಲ್ಲಕ ಕಾರಣಗಳಿಗಾಗಿ ಪ್ರಾಣ ತೆತ್ತ ಕ್ಷುದ್ರ ಜೀವಿಗಳಾ...? ಇವತ್ತಿನ ಭವಿಷ್ಯ ಬರೆದ ಆ ವ್ಯಕ್ತಿಗೆ ಇದೆಲ್ಲ ಮುಂಚೇನೆ ಗೊತ್ತಿತ್ತಾ?
ಕಾಕತಾಳೀಯ... ಅಷ್ಟೇ. ಬೆಂಗಳೂರಿನಂಥ ಮಹಾನಗರದಲ್ಲಿ ದಿನಕ್ಕೆ ನಾಲ್ಕೋ ಐದೋ ಅಪಘಾತವಾಗೋದು, ಅದ್ರಲ್ಲಿ ಒಬ್ರೋ ಇಬ್ರೋ ಪ್ರಾಣ ಕಳಕೊಳ್ಳೋದು, ಕೆಲವೊಬ್ರು ಕೈ ಕಾಲು ಮುರಿದುಕೊಳ್ಳೋದು ತೀರಾ ಕಾಮನ್. ಎಲ್ಲ ಜಸ್ಟ್ ಹ್ಯಾಪನ್ಸ್ ಅಷ್ಟೇ. ಯಾವುದೇ ಕಾರ್ಯ ಕಾರಣ ಸಂಬಂಧ ಇಲ್ಲದೇ... ಆ ಭವಿಷ್ಯಾನೋ ಒಂದು ಬೊಗಳೆ.
ಹೀಗೆ ಅಂದ್ಕೊಂಡು ಹೋಗ್ತಾ ಇರಬೇಕಾದ್ರೆ, 'ಇನ್ನು ಒಂದು ಅಕ್ಸಿಡೆಂಟ್ ಕಣ್ಣಿಗೆ ಬಿದ್ರೆ ಆ ಜ್ಯೋತಿಷ್ಯವನ್ನು ಒಪ್ಕೋತಿಯಾ?' ಎಂದು ಮನಸ್ಸು ಪ್ರಶ್ನಿಸಿತ್ತು. ಹಮ್ ಸಾಧ್ಯಾನೇ ಇಲ್ಲ. ಇಲ್ಲಿ ಎಲ್ಲವನ್ನು ನಂಬೋಕೆ ಹೇಗೆ ಕಾರಣಗಳಿವೆಯೋ.. ಹಾಗೆಯೇ ನಂಬದೇ ಇರೋಕೆ ಕೂಡ ಕಾರಣಗಳಿವೆ. ಯಾರೂ ಯಾರನ್ನೂ ನಂಬಿಸೋಕೆ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಎಲ್ಲರೂ ತಂತಮ್ಮ ನಂಬಿಕೆಗಳ ಬಂಧಿಗಳು ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡ ನಂದೀಶ.
'ಅಲ್ವಾ... ಹಾಗಾದ್ರೆ ಸುಮ್ನೆ ಮುಚ್ಕೊಂಡ್ ಗಾಡಿ ಓಡ್ಸ್ಸು. ಲೋಕದ ಗೊಡವೆ ನಿಂಗ್ಯಾಕೆ?' ಅಂತ ನಂದೀಶ ತನ್ನದೇ ಮನಸ್ಸಿಗೆ ನಿರ್ದೇಶನ ಕೊಡ್ತಿರಬೇಕಾದ್ರೆ, ಅತ್ಯಂತ ಸರಾಗ ವೇಗದ ಆ ರಸ್ತೆಯಲ್ಲಿ ತಾನು ವೇಗದ ಮಿತಿಯನ್ನು ದಾಟಿರುವುದು ಗಮನಕ್ಕೆ ಬಂದು, ಇನ್ನೇನು ಸ್ಪೀಡ್ ಕಡಿಮೆ ಮಾಡಬೇಕು ಅನ್ನುವಷ್ಟರಲ್ಲಿ ನಾಲ್ಕೈದು ಹೈಸ್ಕೂಲ್ ಹುಡುಗಿಯರು ಸೈಕಲ್ ಜೊತೆಗೆ ರಸ್ತೆ ದಾಟ್ತಾ ಇರೋದು ಕಂಡು ಸಡನ್ನಾಗಿ ಬ್ರೇಕ್ ಹಾಕಿದ. ಆದ್ರೆ ತಿರುವಿನಲ್ಲಿ ಲಾರಿಯೊಂದು ಇದ್ಯಾವುದನ್ನೂ ನಿರೀಕ್ಷೆ ಮಾಡದೇ, ಸರ್ರನೆ ನುಗ್ಗಿಬಂದು, ಯಾವುದೇ ಪಾಪ ಪ್ರಜ್ಞೆಯಿಲ್ಲದೇ ತನ್ನ ಯಮಸ್ವರೂಪಿ ಟೈರ್ಗಳನ್ನು ನಂದೀಶನ ಮೇಲೆ ಹತ್ತಿಸಿತ್ತು.
ತಮ್ಮೆದುರಿಗೇ ನಡೆದ ಈ ಭೀಕರ ದುರಂತವನ್ನು ಅರಗಿಸಿಕೊಳ್ಳಲಾಗದ ಹೈಸ್ಕೂಲ್ ಹುಡುಗಿಯರು ಭಯದಿಂದ ತತ್ತರಿಸಿ ಸೈಕಲ್ ಹತ್ತಿದರು. ಇನ್ನು ದೂರದ ಸಿಗ್ನಲ್ನಲ್ಲಿ ಇದ್ದ ಟ್ರಾಫಿಕ್ ಪೊಲೀಸ್, ಭಯಾನಕ ಸದ್ದು ಕೇಳಿ ಇತ್ತ ತಿರುಗಿ... 'ಥತ್, ಇದು ಇವತ್ತು ಬೆಳಗ್ಗೆಯಿಂದ ನಾನು ನೋಡ್ತಾ ಇರೋ ಐದನೇ ಅಕ್ಸಿಡೆಂಟ್... ಏನೋ ಎಡವಟ್ಟಾಗಿದೆ ಇವತ್ತು ಬೆಂಗಳೂರಿಗೆ' ಅಂತ ಗೊಣಗಿ, ಮುಂದಿನ ಕೆಲಸದ ಕಡೆ ಕಾರ್ಯತತ್ಪರನಾದ.
ಯೆಸ್, ನಂದೀಶ ಮಗದೊಂದು ಅಕ್ಸಿಡೆಂಟ್ಗೆ ಸಾಕ್ಷಿಯಾಗಿದ್ದ. ಆದ್ರೆ ಸಾಕ್ಷ್ಯ ಹೇಳಲಾಗಲಿ, ಚರ್ಚೆ ಮಾಡಲಾಗಲೀ, ನಾಳೆಯ ಭವಿಷ್ಯವನ್ನು ವ್ಯಂಗ್ಯ ಮಾಡಲಾಗಲೀ ಆತ ಉಳಿದಿರಲಿಲ್ಲ.
- ಗೌರೀಶ್ ಎಸ್. ಅಕ್ಕಿ