ಶ್ರೀರಾಮನು ಸೀತೆಯೊಂದಿಗೆ ವನವಾಸಕ್ಕೆ ಹೊರಟಾಗ ಅನುಜ ಲಕ್ಷ್ಮಣನೂ ಅಣ್ಣ-ಅತ್ತಿಗೆಯ ರಕ್ಷಣೆಗಾಗಿ ಅರಮನೆಯ ವೈಭೋಗ, ಆಗ ತಾನೇ ಮದುವೆಯಾದ ಹೆಂಡತಿಯನ್ನೂ ಬಿಟ್ಟು ಹೊರಟ. ಕಾಡಿನಲ್ಲಿ ಪರ್ಣಕುಟಿ ನಿರ್ಮಿಸಿ, ರಾಮ ಸೀತೆಯರಿಗೆ ಕಾಲ ಕಾಲಕ್ಕೆ ಬೇಕಾದ ತಾಜಾ ಹಣ್ಣು - ಹಂಪಲುಗಳನ್ನು ತಂದು ಕೊಡುತ್ತಿದ್ದ. ಒಮ್ಮೆ ಹೀಗೆ ಹಣ್ಣುಗಳನ್ನು ತಂದು 'ಅಣ್ಣಾ, ಈ ಹಣ್ಣುಗಳು ಬಹಳ ರುಚಿಯಾಗಿವೆ. ಇದರ ಸವಿ ಅದ್ಭುತ!' ಎಂದ ಆಗ ರಾಮನು 'ಹೌದಾ... ನೀನಾಗಲೇ ತಿಂದು ರುಚಿ ನೋಡಿದ್ದೀಯಾ..?' ಎಂದ. ಆಗ 'ಲಕ್ಷ್ಮಣನಿಗೆ ಛೇ.... ನಾನೆಂಥಾ ತಪ್ಪು ಮಾಡಿದೆ. ಅಣ್ಣ - ಅತ್ತಿಗೆಯರಿಗೆ ಕೊಡದೇ ತಿಂದು ಬಿಟ್ಟೆನಲ್ಲಾ....' ಅನ್ನಿಸಿತು. ನಂತರದ ದಿನಗಳಲ್ಲಿ ರಾಮನು ನೀನೂ ತಿನ್ನು ಎಂದು ಹೇಳಲಿಲ್ಲ.... ಲಕ್ಷ್ಮಣನೂ ತಿನ್ನಲಿಲ್ಲ. ಹದಿನಾಲ್ಕು ವರುಷಗಳ ಕಾಲವೂ ಉಪವಾಸವೇ....
ಒಮ್ಮೆ ರಾಮ- ಸೀತೆ- ಲಕ್ಷ್ಮಣ ಬೆಳಗಿನ ಕುಶಲೋಪರಿ ಮಾತನಾಡುತ್ತಾ ಕುಳಿತಿರುವಾಗ, ಲಕ್ಷ್ಮಣನು 'ಅಣ್ಣಾ, ರಾತ್ರಿ ಕನಸಿನಲ್ಲಿ...' ಎಂದು ತನಗೆ ಕಂಡ ಕನಸನ್ನು ತಿಳಿಸಿದ, ಇದನ್ನು ಆಲಿಸಿದ ರಾಮನು 'ಲಕ್ಷ್ಮಣಾ, ನೀನು ರಾತ್ರಿ ಮಲಗಿದ್ಯಾ...' ಎಂದು ತಮಾಷೆಯಾಗಿ ಕೇಳಿದ. ಆಗ ಲಕ್ಷ್ಮಣನಿಗೆ... 'ಹೌದಲ್ಲಾ... ನಾನು ಬಂದಿರೋದು, ಅಣ್ಣ-ಅತ್ತಿಗೆಯರ ರಕ್ಷಣೆಗೆ. ರಾತ್ರಿ ಮಲಗಿ ನಿದ್ರಿಸುವುದು ತಪ್ಪಲ್ಲವೇ...!' ಎನಿಸಿತು. ನಂತರದ ದಿನಗಳಲ್ಲಿ ರಾತ್ರಿಯ ವೇಳೆ ಆತ ನಿದ್ರಿಸಲೇ ಇಲ್ಲ. ನಂತರ ಸೀತಾಪಹರಣವಾಯಿತು. ಶ್ರೀ ರಾಮ ಕಪಿಸೇನೆಯೊಂದಿಗೆ ಲಂಕೆಗೆ ಹೋಗಿ, ರಾವಣನ ಮೇಲೆ ಯುದ್ಧ ಸಾರಿದಾಗ, ಮಾಯಾವಿಯಾದ ಇಂದ್ರಜಿತುವನ್ನು ಸಂಹರಿಸಲು ರಾಮನಿಂದಲೂ ಸಾಧ್ಯವಾಗಲಿಲ್ಲ. ಕಾರಣ ಅವನು ಪಡೆದುಕೊಂಡಿದ್ದ ವರ. ತನಗೆ ಸಾವು ಬರುವುದಾದರೆ ಹದಿನಾಲ್ಕು ವರುಷ ಆಹಾರ-ನಿದ್ರೆ ಇಲ್ಲದವರಿಂದ ಮಾತ್ರ ಎಂಬ ವರವನ್ನು ಇಂದ್ರಜಿತು ಪಡೆದುಕೊಂಡಿದ್ದ. ಆಗ ಲಕ್ಷ್ಮಣನು ಯುದ್ಧದಲ್ಲಿ ಇಂದ್ರಜಿತುವನ್ನು ಸಂಹರಿಸಿ, ರಾಮನ ಮುಂದೆ ವಿನೀತನಾಗಿ ನಿಂತ.
- ನವಿಲೂರು ಪ್ರಕಾಶ್