ನನ್ನೆದೆ ಬಡಿತವೇ...
'ಯುವರ್ ಅಟೆನ್ಷನ್ ಪ್ಲೀಸ್, ಬೆಂಗಳೂರಿಗೆ ಹೋಗುವ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲು ಪ್ಲಾಟ್ ಫಾರಂ ನಂ. ಒಂದರಲ್ಲಿ ಬರಲಿದೆ' ಎಂಬ ಸುಮಧುರ ಕಂಠದ ಧ್ವನಿ ಮೊಳಗಿ ಸುಮ್ಮನಾಯಿತು. ನನ್ನ ಲಗೇಜುಗಳನ್ನೆಲ್ಲ ತೆಗೆದುಕೊಂಡು ಕಿಕ್ಕಿರಿದ ಜನಸಂದಣಿಯೊಳಗೆ ರೈಲಿನ ನಿರೀಕ್ಷೆ ಮಾಡುತ್ತಾ ಧಾರವಾಡದ ನಿಲ್ದಾಣದಲ್ಲಿ ನಿಂತೆ. ಬಂದ ರೈಲಿಗೆ ಜನರ ನೂಕುನುಗ್ಗಲಿನ ನಡುವೆ ರೈಲೇರಿ ಸ್ಥಳಕ್ಕಾಗಿ ಅರಸುತ್ತಿರುವಾಗ, ಒಂದೆಡೆ ಬ್ಯಾಗಿಟ್ಟು ಕಿಟಿಕಿಯಾಚೆ ದಿಟ್ಟಿಸುತ್ತಿದ್ದ ನೀನು ಕಂಡೆ. 'ಎಕ್ಸ್ಕ್ಯೂಸ್ ಮಿ, ನಾನಿಲ್ಲಿ ಕೂಡಬಹುದಾ?' ಎಂಬ ಪ್ರಶ್ನೆಗೆ ನನ್ನತ್ತ ತಿರುಗಿ, ಏಕಾಂತಕ್ಕೆ ಭಂಗತಂದದ್ದಕ್ಕೆ ಮುಖ ಸಿಂಡರಿಸಿಕೊಂಡು ಸಿಟ್ಟಿನಲ್ಲಿ 'ಕೂಡಿ' ಎಂದೆ. ಅಬ್ಬಾ! ಸಿಕ್ತಲ್ಲಪ್ಪ ಸೀಟು ಎಂಬ ನಿರಾಳತೆಯೊಂದಿಗೆ ಕೂತವನು ಕೆಲಕಾಲ ಕಣ್ಮುಚ್ಚಿದೆ.
ರೈಲು ಯಾವ ಗೊಡವೆಯೂ ಇಲ್ಲದೆ ತನ್ನಷ್ಟಕ್ಕೆ ತಾನು ಸಿಳ್ಳೆ ಹಾಕುತ್ತಾ, ಸದ್ದು ಮಾಡುತ್ತಾ ಸಾಗುತ್ತಿತ್ತು. ಹೊಟ್ಟೆಪಾಡಿಗೆ ಕೆಲಸ ಹುಡುಕಿ ಬೆಂಗಳೂರೆಂಬ ಮಾಯಾನಗರಿಗೆ ಹೊರಟಿದ್ದೆ. ಬೆನ್ನಿಗೆ ಬಿದ್ದ ಇಬ್ಬರು ತಂಗಿಯರ ಸಾಕಿ ಸಲುಹಬೇಕಾಗಿತ್ತು. ಅದೇ ಯೋಚನೆಯಲ್ಲಿ ಮಗ್ನನಾದವನಿಗೆ 'ಮಿಸ್ಟರ್, ಸ್ವಲ್ಪ ನೀರಿದ್ರೆ ಕೊಡ್ತೀರಾ... ಬಾಯಾರಿಕೆಯಾಗಿದೆ' ಎಂದದ್ದು ಕೇಳಿಸಿತು. ಬ್ಯಾಗಿನಲ್ಲಿದ್ದ ವಾಟರ್ ಬಾಟಲ್ ತೆಗೆದುಕೊಟ್ಟೆ. ಆನಂತರದಲ್ಲಿ ಶುರುವಾಯ್ತು ನೋಡು ಮಾತಿನ ಕಲರವ. ನಾನೇ ನಾನಾಗಿ ಯಾರನ್ನೂ ಮಾತನಾಡಿಸಿದ ಉದಾಹರಣೆನೇ ಇಲ್ಲ. ಅವ್ರೇ ಪರಿಚಯ ಮಾಡಿಕೊಂಡ್ರೆ ಮಾತ್ರ ನನ್ನ ಮಾತಿಗೆ ಫುಲ್ ಸ್ಟಾಫ್ ಇರ್ತಿರಲಿಲ್ಲ. "ನನ್ನ ಹೆಸ್ರು ರಾಗಿಣಿ ಅಂತ. ಬೆಂಗಳೂರ್ ಯೂನಿರ್ವಸಿಟೀಲಿ ಎಂ.ಎ. ಓದ್ತಾ ಇದ್ದೀನಿ. ಡ್ಯಾಡಿ- ಮಮ್ಮಿ ಬೆಳಗಾವಿಯಲ್ಲಿದ್ದಾರೆ. ನೀವು ಎಲ್ಲಿಗೆ ಹೊರಟಿದ್ದೀರಾ...?" ಎಂಬ ಪ್ರಶ್ನೆಯಷ್ಟೇ ಸಾಕಾಗಿತ್ತು. ನನ್ನ ಫುಲ್ ಡೀಟೇಲ್ಸ್ನ ನಿನ್ನ ಮುಂದೊಪ್ಪಿಸಿಬಿಟ್ಟೆ. ಕೇಳಿದವಳ ಕಣ್ಣಲ್ಲಿ ಸಣ್ಣಗೆ ಜಿನುಗುವ ನೀರು.
'ಬದುಕಿನಲ್ಲಿ ಅದೆಷ್ಟೊಂದು ನೊಂದಿದ್ದೀರಿ ನೀವು? ನೊಂದವರ ನೋವಿಗೆ ನೊಂದವರಷ್ಟೇ ಸ್ಪಂದಿಸಬಲ್ಲರು ಅಂತಾರೆ. ಆದರೆ ಇಡೀ ಬದುಕನ್ನೇ ಖುಷ್ ಖುಷಿಯಲ್ಲಿ ಕಳೆದ ನಾನು ನಿಮ್ಮಕಷ್ಟದ ಕಥೆಗೆ ಕರಗಿಬಿಟ್ಟೆ. ನನ್ನಿಂದೇನಾದ್ರೂ ಹೆಲ್ಪ್ ಬೇಕಾದ್ರೆ ನಿಸ್ಸಂಕೋಚವಾಗಿ ಕೇಳಿ. ನನ್ನ ಕೈಲಾದಷ್ಟು ಸಹಾಯ ಮಾಡ್ತೀನಿ...' ಅಂದವಳ ಮಾತಿಗೆ ನಾನೂ ಮನಸೋತುಬಿಟ್ಟೆ.
ನಂತರ ಬೆಂಗಳೂರಿನಲ್ಲಿ ನನ್ನ ಪ್ರತಿಯೊಂದು ಹೆಜ್ಜೆಗೂ ಸಾಥ್ ನೀಡಿದವಳು ನೀನು. ಕೆಲವೊಂದು ದಿನಗಳವರೆಗೆ ನಿನ್ನ ಪಾಕೀಟ್ಮನಿ ನನ್ನ ಹೊಟ್ಟೆ ಹೊರೆದದ್ದು ನೆನಪಿದೆ. ನೀನು ಸಿಕ್ಕ ಮೇಲೆಯೇ ಅಲ್ಲವೇ ನನ್ನ ಗೆಲ್ಲುವ ಛಲ ಇಮ್ಮಡಿಯಾದದ್ದು. ಗಾಢ ದುಃಖದ ದಿನಗಳಲ್ಲಿ ನನ್ನನ್ನು ನಿನ್ನೆದೆಗವಿಚಿಕೊಂಡು ಸಂಸೈತಿದ್ದೀಯಾ. "ತಾಯಿಯ ಋಣ ತೀರಿಸಲಾಗುವುದಿಲ್ಲ" ಅಂತಿರ್ತಾರಲ್ಲ, ಅದು ನನಗೀಗ ಅರಿವಾಯ್ತು. ನಿನ್ನ ಪ್ರೀತಿಯ ರೀತಿಗೆ ಕಣ್ಣ ಹನಿಗಳ ವಿನಹ ಕೊಡಲು ನನಗೇನಿರಲಿಲ್ಲ ಕಣೇ. ಅಲ್ಪ ದಿನಗಳಲ್ಲೇ ಅದೆಷ್ಟೊಂದು ಹಚ್ಚಿಕೊಂಡು ಬಿಟ್ಟೆವು ನಾವು?
ನನಗೊಂದೇ ಭಯ, ನಮ್ಮ ಪ್ರೀತಿಯನ್ನು ನಿನ್ನ ತಂದೆ- ತಾಯಿ ಒಪ್ತಾರಾ ಅಂತ. ನಾನು ಬರೀಗೈ ಫಕೀರ, ಹೃದಯ ಶ್ರೀಮಂತಿಕೆಯೊಂದನ್ನು ಬಿಟ್ಟರೆ ನನ್ನ ಬಳಿ ಏನೆಂದರೆ ಏನೂ ಇಲ್ಲ. ನೀನು ಮಹಲಿನ ರಾಣಿ, ನಕ್ಷತ್ರ ಲೋಕದ ದೇವತೆ. ನಮ್ಮಿಬ್ಬರ ಮಿಲನ ಸಾಧ್ಯವೇ? ಎಂದಾಗಲೊಮ್ಮೆ 'ಪ್ರೀತಿಗೆ ಭೇದ ಇಲ್ಲ ಕಣೋ. ಸಂಪತ್ತನ್ನ ಹುಟ್ಟಿನಿಂದ ಯಾರಾದರೂ ಪಡೆದುಕೊಂಡು ಬಂದಿರ್ತಾರಾ?' ಸುಮ್ಕಿರು. ನಮ್ಮ ತಂದೆ- ತಾಯಿಯನ್ನ ನಾನು ಒಪ್ಪಿಸ್ತೀನಿ' ಎಂದು ಉತ್ತರಿಸಿ ನನ್ನ ಭಯಕ್ಕೆ ಧೈರ್ಯ ತುಂಬುತ್ತಿದ್ದೆ ನೀನು. ಈಸಲ ಊರಿಗೆ ಹೋದಾಗ ತಾಯಿಗೆ ನಿನ್ನ ಬಗ್ಗೆ ಎಲ್ಲ ಹೇಳ್ಬೇಕು ಅಂದುಕೊಳ್ಳುತ್ತಾ ದುಃಖ-ದುಗುಡಗಳ ಚಾದರವನ್ನು ಕೊಡವಿ ಮುಸುಕೆಳೆದು ನಿನ್ನನ್ನು ಕನಸಿಗೆ ಕರೆಯಲು ಅಣಿಯಾಗುತ್ತೇನೆ.
- ನಿನ್ನವನು
- ನಾಗೇಶ್ ಜೆ. ನಾಯಕ