ಕವಿಗಳು ಕಂಡಂತೆ ಬಾಪು....
ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಎರಡೇ ಮಾತುಗಳಿಂದ ಜಗತ್ತಿನ ಎಲ್ಲರನ್ನೂ ಗೆದ್ದವರು ಗಾಂಧೀಜಿ. ಅವರ ಕರುಣೆಯನ್ನು ಮೆಚ್ಚದವರಿಲ್ಲ. ಅವರ ಸರಳತೆಗೆ ಮಾರುಹೋಗದವರಿಲ್ಲ. 'ಯುಗ ಪುರುಷ' ಎಂಬ ಮಾತಿಗೆ ಅನ್ವರ್ಥವಾಗಿ ಬದುಕಿದ ಆ ಮಹಾಚೇತನಕ್ಕೆ ಶಿರಬಾಗಿ ನಮಿಸುತ್ತಾ, ಕನ್ನಡದ ಹಲವು ಕವಿಗಳು ಗಾಂಧಿಯನ್ನು, ಅವರ ಸೌಜನ್ಯ ಮತ್ತು ವ್ಯಕ್ತಿತ್ವವನ್ನು ಪದ್ಯದ ರೂಪದಲ್ಲಿ ಹಿಡಿದಿಟ್ಟಿದ್ದು ಹೀಗೆ:
ನಿನಗೇಕೆ ಸ್ಮಾರಕವು
ಶಿಲ್ಪಕೃತಿ ಹೂಮಾಲೆ
ಲೋಕವನೆ ಬೆಳಗುತಿದೆ
ನಿನ್ನ ಎಲುಬಿನ ಜ್ವಾಲೆ
= ದಿನಕರ ದೇಸಾಯಿ
ಜನಮನದ ಹಗೆತನದ ರೋಷ ಹಾಲಾಹಲದಿ
ಹಾಲುದಿಸಿ ಬರುವಂತೆ ಮೂಡಿಬಂದೆ.
= ಕುವೆಂಪು
ಮೂಲಭಕ್ತಿಯಲ್ಲಿ ಭಕ್ತ, ದೀನದಲಿತರಲ್ಲಿ ರಕ್ತ
ಭವದ ನೂರು ಎಳೆತ ಸೆಳೆತದಲ್ಲಿ ಕಲ್ಲಿನೊಲು ವಿರಕ್ತ
ಜರಿದವನನು ಹರಸಬಲ್ಲ, ಇರಿದವನನು ಉಳಿಸಬಲ್ಲ
ತಾನೆ ಬೆಂದು ತಾನೆ ನೊಂದು ಅರಿಯದೆಯನು ಅರಸಬಲ್ಲ
ನೀ ಮಹಾತ್ಮನು
= ಗೋಪಾಲಕೃಷ್ಣ ಅಡಿಗ
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ
= ಪುತಿನ
ನಿನಗಿಂತ ಹಿರಿಯರನು ಕಾಣೆ ಮಹಾತ್ಮ
ಮಿತಿಮೀರಿ ಏರಿರುವೆ, ಬಾಳಿಗೆ ದಕ್ಕದೆ ಮೀರಿರುವೆ
ಲೋಕವನೆ ದಹಿಸಿರುವ ಸೂರ್ಯನಿಗೆ ತಡೆಯಾಗಿ
ನಿನ್ನ ಕೊಡೆ ನೆತ್ತಿಯನು ಕಾಯುತಿರಲಿ.
= ಕೆ.ಎಸ್. ನಿಸಾರ್ ಅಹಮದ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.