ನೆಲಕಚ್ಚಿ ನಗುತ್ತಿರುವ ಪ್ರೀತಿಯೆದುರು ದೀನನಾಗಿ...
ಪ್ರತಿ ದಿನದಂತೆ ಈ ದಿನವೂ ಬಸ್ಸು ಒಳಗೆ ಕುಳಿತವರ ಭಾವನೆಗಳ ತಾಕಲಾಟದ ಅರಿವು ಇಲ್ಲದಂತೆ, ದೂರದುದ್ದಕ್ಕೂ ಬಾಚಿಕೊಂಡಿದ್ದ ಕಪ್ಪು ಟಾರು ರಸ್ತೆಯ ಮೇಲೆ ನಿರಾತಂಕವಾಗಿ ಸಾಗುತ್ತಿತ್ತು. ಎಲ್ಲಕ್ಕೂ ಮುಂದಿನ ಸೀಟಿನಲ್ಲಿ ಕುಳಿತ ನೀನು ಮುಗುಮ್ಮಾಗಿ ಕಿಟಕಿಯಾಚೆಗಿನ ದೃಶ್ಯಗಳತ್ತ ಕಣ್ಣರಳಿಸಿ ಕುಳಿತುಬಿಟ್ಟಿದ್ದೆ. ನಾನು ಮಾತ್ರ ಬಿಟ್ಟಗಣ್ಣು ಬಿಟ್ಟಂತೆ, ಕಣ್ತುಂಬಿಕೊಂಡ ನೀರು ಕೆನ್ನೆ ಮೇಲಿಳಿಯುತ್ತಿದ್ದರೂ ಲೆಕ್ಕಿಸದೆ ನಿನ್ನನ್ನೇ ದಿಟ್ಟಿಸುತ್ತಿದ್ದೆ. ಅಂದ ಹಾಗೆ ಪ್ರೀತಿ ಕುರುಡಾ? ಗೊತ್ತಿಲ್ಲ.
ಬಸ್ಸಿನ ಬಿರುಸಿನ ಓಟದ ಜೊತೆ ನನ್ನ ಸ್ಮೃತಿ ಸಂಪುಟದ ಗತದಿನಗಳ ನೆನಪು ಮನದ ಪರದೆಯ ಮೇಲೆ ಅಚ್ಚೊತ್ತುತ್ತಿದ್ದವು. ಆ ದಿನ ಈಗಲೂ ನನಗೆ ನೆನಪಿದೆ. ಕೆಂಪು ಚೂಡಿಯ ಮೇಲೆ, ಮೊಲದ ಬಿಳುಪಿನ ವೇಲ್ ಧರಿಸಿ ಏದುಸಿರು ಬಿಡುತ್ತಾ, ಚಲಿಸುತ್ತಿದ್ದ ಬಸ್ ಹತ್ತಿ, ಜಿಂಕೆಯ ಕಣ್ಣುಗಳನ್ನು ಅತ್ತಿತ್ತ ಹೊರಳಿಸುತ್ತಾ ನನ್ನ ಪಕ್ಕದ ಸೀಟ್‌ನಲ್ಲಿ ಬಂದು ಕುಳಿತೆ. ವಾರೆಗಣ್ಣಿಂದ ನೋಡಿದವನಿಗೆ ಸಾಕ್ಷಾತ್ ದೇವಲೋಕದ ಅಪ್ಸರೆಯೇ ಪಕ್ಕದಲ್ಲಿ ಬಂದು ಕುಳಿತಂತಾಗಿತ್ತು. ಪದೇ ಪದೆ ಹಣೆಯ ಮೇಲಿನ ಮುಂಗುರುಳು ನೇವರಿಸುತ್ತಾ, ಕೈಗಡಿಯಾರವನ್ನು ನೋಡಿಕೊಳ್ಳುತ್ತಿದ್ದ ನಿನ್ನ ಕಂಡು ಅಯ್ಯೋ ಪಾಪ, ಕಾಲೇಜಿಗೆ ಲೇಟಾಗಿರ್ಬೇಕು ಅಂದ್ಕೊಂಡಿದ್ದೆ. ಆದರೆ ನೀನು ಅವತ್ತೇ ಟೈಪಿಸ್ಟ್ ಹುದ್ದೆಗೆ ಜಾಯಿನ್ ಆಗೋಕೆ ಹೊರಟಿದ್ದೀಯಾ ಅಂತ ಅಮೇಲೆ ಗೊತ್ತಾಯಿತು. ನೀನು ಕಂಡಕ್ಟರ್ ಕೊಟ್ಟ ಟಿಕೀಟನ್ನು ಸುರುಳಿ ಮಾಡಿ ಉಂಗುರ ಬೆರಳಿನಲ್ಲಿ ಸಿಕ್ಕಿಸಿಕೊಂಡ ಪರಿ ನನ್ನನ್ನು ತುಂಬಾ ಆಕರ್ಷಿಸಿತು. ಒಂದು ಗಂಟೆಯ ಪ್ರಯಾಣದಲ್ಲಿ ಅದೆಷ್ಟು ಬಾರಿ ಮುಂಗುರುಳನ್ನು ನೇವರಿಸಿಕೊಂಡೆಯೋ? ಲೆಕ್ಕವಿಟ್ಟಿಲ್ಲ. ಬಸ್ ಇಳಿದಾದ ಮೇಲೆ "ಈ ಆಫೀಸ್ ಅಡ್ರೆಸ್ ಎಲ್ಲಿ ಬರುತ್ತೆ ಹೇಳಿ" ಎಂದು ನನ್ನನ್ನು ಕೇಳಿದಾಗ, ನಾನು ಕೆಲಸ ಮಾಡುತ್ತಿದ್ದ ಆಫೀಸಿಗಿಂತ ಅದು ಸ್ವಲ್ಪ ದೂರವಿದ್ದರೂ, 'ನಾನು ತೋರಿಸ್ತೇನೆ ಬನ್ನಿ' ಎಂದು ಹೇಳಿದ್ದೆ. ದಾರಿಯಲ್ಲಿ ಜೊತೆ ಜೊತೆಯಾಗಿ ಸಾಗುತ್ತಿದ್ದ ನಮ್ಮೀರ್ವರ ಮೇಲೆ ಸಾವಿರ ಕಣ್ಣುಗಳು ಸರಿದಾಡಿ ತಿಂದು ಹಾಕುತ್ತಿದ್ದುದ್ದು ಮುಜುಗರ ತಂದಿತ್ತು. ಅಂದು ಆದ ನಿನ್ನ ಪರಿಚಯ ಪ್ರೀತಿಗೆ ತಿರುಗಲಿಕ್ಕೆ ಬಹಳ ಸಮಯ ಬೇಕಾಗಲಿಲ್ಲ.
ಬಸ್ಸಿನ ಪ್ರಯಾಣ ನಮ್ಮ ಪ್ರೀತಿಯನ್ನು ಇನ್ನಷ್ಟು ಹತ್ತಿರ ಮಾಡಿತ್ತು. ನನಗಾಗಿ ನೀನು ಬಸ್ಸಿನಲ್ಲಿ ಸೀಟು ಹಿಡಿದು ಕೂತಿದ್ದು, ಬಾರದ ದಿನ ಮುನಿಸಿಕೊಂಡಿದ್ದು, ಸಹ ಪ್ರಯಾಣಿಕರ ಹೊಟ್ಟೆ ಕಿಚ್ಚು... ಇವೆಲ್ಲವೂ ಇಂದು ಬಿಟ್ಟು ಬಿಡದೆ ನೆನಪಾಗುತ್ತಿವೆ. ಅದೊಂದು ದಿನ ನೀನು ಗಾಢ ಮೌನಿಯಾಗಿ, ಆಧ್ಯಾತ್ಮದ ಮೊರೆ ಹೊಕ್ಕವಳಂತೆ ಮಾತಾಡಿದ್ದು ಕಂಡು ನನಗೆ ಆಶ್ಚರ್ಯ ತರಿಸಿತ್ತು. 'ಬದುಕು ಅನ್ನೋದು ಬಸ್ಸಿನಂತೆ ಕಣೋ, ಇದರಲ್ಲಿ ಯಾರ್ಯಾರೋ ಪ್ರಯಾಣಿಸುತ್ತಾರೆ. ಆದರೆ ಅವರವರ ನಿಲ್ದಾಣ ಬಂದ ಮೇಲೆ ತಡಮಾಡದೆ ಇಳಿದು ಹೋಗಿಬಿಡುತ್ತಾರೆ. ಅವರು ಇಳಿದು ಹೋದರು ಅಂತ ಬಸ್ಸು ನಿಂತೇ ಬಿಡುತ್ತಾ? ಇಲ್ಲ, ಬದುಕೆಂಬ ಬಸ್ಸು ಮುನ್ಸಾಗಲೇಬೇಕು'.
ಆಗ ನನಗೆ ನಿನ್ನ ಒಗಟಿನ ಮಾತುಗಳು ಅರ್ಥವಾಗಲಿಲ್ಲ. ಕ್ರಮೇಣ ಅದೇ ಬಸ್ಸಿನಲ್ಲೇ ನಾವು ಪ್ರಯಾಣಿಸಿದರೂ ಅಪರಿಚಿತರಂತೆ, ಮಾತೇ ಮರೆತು ಹೋದವರಂತೆ, ನಮ್ಮ ಕಣ್ಣುಗಳು ಕೂಡಾ ಸಂಧಿಸಲಾರದಂತೆ ಇರತೊಡಗಿದೆವು. ತುಂಬಾ ಹಚ್ಚಿಕೊಂಡವರು ಬೇಕಂತಲೇ ನಮ್ಮನ್ನು ನಿರ್ಲಕ್ಷ್ಯ ಮಾಡತೊಡಗಿದಾಗ ಆಗುವ ನೋವಿದೆಯಲ್ಲ; ಅದು ವಿವರಿಸಲಸಾಧ್ಯ ಕಣೇ. ಯಾವ ದರಿದ್ರ ಬದುಕಿನ ಕೇಡಿಗಣ್ಣು ಬಿತ್ತೋ ನಮ್ಮ ಪ್ರೀತಿಯ ಮೇಲೆ, ಒಲವಿನ ತುಂಬು ಹೊಳೆಯಲ್ಲಿ ತೇಲುತ್ತಿದ್ದ ಪ್ರೀತಿಯ ದೋಣಿ ನೆಲಕಚ್ಚಿ ನಗುತ್ತಿದೆ.
ನೀನು ಮಾತ್ರ ಏನೂ ಆಗದವಳಂತೆ, ಆಗಿದ್ದಕ್ಕೆ ಕಾರಣವೂ ಹೇಳದಂತೆ ಬಾಯಿಗೆ ಹೊಲಿಗೆ ಹಾಕಿಕೊಂಡು ಕೂತಿದ್ದೀಯಾ. ಬಸ್ಸಿನಲ್ಲಿ ಕೆಲವೇ ಕೆಲವು ಸೀಟುಗಳ ಅಂತರದಲ್ಲಿ, ಕೈಗೆಟುಕುವ ಹತ್ತಿರದಲ್ಲಿ ನೀನಿದ್ದರೂ ಪರಸ್ಪರ ಮಾತನಾಡದ, ತಿರುಗಿಯೂ ನೋಡದ ಹಂತವನ್ನು ನಾವು ತಲುಪಿಬಿಟ್ಟಿದ್ದೇವೆ. ನನ್ನ ಮನದೊಳಗಿನ ಮೂಕ ವೇದನೆಯ ಮರ್ಮರ ನಿನ್ನ ಕಲ್ಲೆದೆಯನ್ನು ಅದೆಂದು ಕರಗಿಸುತ್ತದೆಯೋ? ಗೊತ್ತಿಲ್ಲ.
ನಾಗೇಶ್ ಜೆ. ನಾಯಕ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.