ಕನ್ನಡತನದ ಬಿರುಕು
'ಹಿತ್ತಲ ಗಿಡ ಮದ್ದಲ್ಲ' ಗಾದೆ ಮಾತಿನಂತೆ ಸುಲಭವಾಗಿ ಸಿಗುವ ವಸ್ತುವಿನ ಬೆಲೆ ಗೊತ್ತಾಗುವುದು ಅದು ಸಿಗದಿದ್ದಾಗ ಮಾತ್ರ. ಅದರಂತೆ ಕರ್ನಾಟಕದಲ್ಲಿದ್ದಾಗ ನೆನಪಾಗದ ಭಾಷೆ ಮತ್ತು ಬಾಂಧವ್ಯದ ವಿಷಯ ರಾಜ್ಯ ಬಿಟ್ಟು ದೂರಾದಾಗ ನೆನಪಾಗುತ್ತದೆ. ಇದು ಎಲ್ಲರಿಗೂ ಅನ್ವಹಿಸುವುದಿಲ್ಲವಾದರೂ ಹೆಚ್ಚಿನವರ ವಿಷಯದಲ್ಲಿ ಸತ್ಯ.
ಕನ್ನಡ ಸಂಘಗಳು ಹೊರನಾಡಿನ ಎಲ್ಲೆಡೆ ಇವೆ. ಕೆಲವು ದೇಶಗಳಲ್ಲಿ ಶತಕಗಳಿಗೂ ಹಳೆಯದಾದ ಕನ್ನಡ ಸಂಘಗಳಿವೆ ಎನ್ನುವುದು ಮತ್ತೂ ಸಂತಸದ ವಿಚಾರ. ಆದರೆ, ಹೊರನಾಡ ಕನ್ನಡಿಗರ ಸಣ್ಣ ಸಣ್ಣ ಬಿರುಕುಗಳು ಎಷ್ಟೋ ಸಂಘಗಳನ್ನು ಮುಳುಗಿಸಿವೆ ಅನ್ನೋದು ನಿಜಕ್ಕೂ ದುರಂತ.
ದೂರದ ದೇಶದಲ್ಲಿದ್ದ ಕನ್ನಡ ಸಂಘದ್ದೂ ಅದೇ ಕಥೆ. ಅದಕ್ಕೆ ದಶಕಗಳ ಇತಿಹಾಸ. ಬಹುತೇಕ ಸದಸ್ಯರು ಹಣವಂತರು. ಅವರು ತಮಗೆ ಬೇಕಾದವರನ್ನಷ್ಟೇ ಮಾತನಾಡಿಸುತ್ತಿದ್ದರು. ಹೊಸಬರಲ್ಲಿದ್ದ ಹೊಸ ಯೋಚನೆಗಳಿಗೆ ಬೆಲೆ ಕೊಡಲಿಲ್ಲ. ಆ ದೇಶಕ್ಕೆ ಬಂದ ಹೊಸಬರ ತಂಡ ಬೇರೆ ಹೆಸರಿನ ಕನ್ನಡ ಸಂಘ ಮಾಡಿ, ಎರಡು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿತು. ಹಲವು ಕನ್ನಡ ಸಿನಿಮಾಗಳನ್ನು ಬಿಡುಗಡೆಮಾಡಿಸಿತು. ದೊಡ್ಡ ಸಂಘದ ಆ ಹಣವಂತರೆಲ್ಲ ಈ ಹೊಸ ಮುಖಗಳ ಎದುರು ಮಂಕಾದರು. ಚೆನ್ನಾಗಿ ಕೆಲಸ ಮಾಡಿದ ಹೊಸ ಗುಂಪಿಗೆ ಬಹಳ ಹಿರಿಯರ ಬೆಂಬಲವಿದ್ದರೂ, ಕೆಲವು ಅಹಂ ತುಂಬಿದವರಿಂದ ಕುಹಕವೂ ಇತ್ತು. ಪ್ರಪಂಚದಲ್ಲಿ ಹೆಸರುವಾಸಿಯಾಗಿರುವ ಈ ದೇಶದ ಪ್ರಮುಖ ನಗರದಲ್ಲಿರುವ ಎರಡು ಕನ್ನಡ ಸಂಘಗಳು ವೈಮನಸ್ಯ ಹೆಚ್ಚಿಸಿಕೊಂಡು ಕನ್ನಡವನ್ನು ಒಗ್ಗಟ್ಟಾಗಿ ಸಂಭ್ರಮಿಸದೆ ಸಣ್ಣ ಸಣ್ಣದಾಗಿ ಆಚರಿಸುವ ಸ್ಥಿತಿಗೆ ತಲುಪಿದ್ದಾರೆ.
ಇದು ಒಂದು ವರ್ಷದ ಹಿಂದೆ ಕೇಳಿದ ಕಥೆ. ಕಣ್ಣಾರೆ ಕಂಡ ನಾನು ಕಂಗಾಲಾಗಿ ಹೋದೆ. ಕೆಲವು ವರ್ಷಗಳಿಂದ ನಡೆದು ಬರುತ್ತಿದ್ದ ಒಂದು ಹೊರದೇಶದ ಕನ್ನಡ ಸಂಘ ಶುರುವಾಗಿದ್ದು ಬಹಳ ಸಣ್ಣದಾಗಿ. ಕೆಲವೇ ಕೆಲವರಿಂದ ಶುರುವಾದ ಸಂಘವು ತನ್ನ ಮಿತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಹತ್ತಾರು ಜನರಿದ್ದ ಸಂಘಕ್ಕೆ ನೂರಾರು ಜನರ ಬಲ ಬಂದಾಗ ಕೆಲವರ ಸಣ್ಣ ಬುದ್ಧಿ ಸಂಕಟಕ್ಕೆ ಕಾರಣವಾಗುತ್ತದೆ.
ಇಂಥ ವೇಳೆ ನೆನಪಾಗುವುದು ಶಿಕಾರಿಪುರ ಹರಿಹರೇಶ್ವರ ಅವರು. ಅಮೆರಿಕದಲ್ಲಿ 'ಅಕ್ಕ' ಹುಟ್ಟು ಹಾಕಿದ ಅನೇಕರಲ್ಲಿ ಇವರೂ ಪ್ರಮುಖರು. ಅವರ ಜೀವಿತಾವಧಿಯಲ್ಲಿ ಪ್ರತಿ ಕನ್ನಡಿಗನಿಗೆ ಅವರು ನೀಡಿದ ಪ್ರೋತ್ಸಾಹ ಮಾದರಿ. ಅವರು ಎತ್ತರೆತ್ತರಕ್ಕೆ ಬೆಳೆದಂತೆ ಹೊಸಬರನ್ನೂ ಪ್ರೋತ್ಸಾಹಿಸಿದರು. ಹೊಸ ಆಲೋಚನೆಗಳು ಯಾರದ್ದೇ ಆದರೂ ಅದನ್ನು ಸ್ವಾಗತಿಸಿದರು. ಅಮೆರಿಕ ಬಿಟ್ಟು ಮೈಸೂರಿಗೆ ಬಂದರೂ ಹೊರನಾಡಿನ ಕನ್ನಡಿಗರ ಸಹಾಯಕ್ಕೆ ನಿಂತಿದ್ದರು.
ಎಲ್ಲ ಹೊರನಾಡಿನ ಕನ್ನಡ ಸಂಘದಲ್ಲಿ ಹರಿಹರೇಶ್ವರರ ನೆರಳು ಕಾಣಲಿ. ಅಹಂ ಅಳಿದು, ಸಂಘಟನೆಯಲ್ಲಿ ಕನ್ನಡ ಬೆಳೆಯಲಿ. ಮಾನವ ತತ್ವ ಉಳಿಯಲಿ ಎನ್ನುವ ಆಶಯ ನನ್ನದು.
= ಪ್ರಶಾಂತ್ ಬೀಚಿ, ತಾನ್ಜಾನಿಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.