ಹೇ ಹುಡುಗ,
'ಆ ದಿನ' ನೀನು ನನ್ನ ಕಣ್ಣಲ್ಲಿ ಖಂಡಿತಾ ಕಣ್ಣೀರು ತರಿಸುವೆ. ಅದು ನನಗೆ ಖಚಿತವಾಗಿದೆ. ನೀನು ನನಗೆ ಎಷ್ಟು ಬಾರಿ ಆಣೆ ಮಾಡಿದ್ದೀಯಾ? 'ನಾನು ನಿನ್ನ ಕಣ್ಣಲ್ಲಿ ಎಂದಿಗೂ ಕಣ್ಣೀರು ಬರಿಸುವುದಿಲ್ಲ' ಎಂದು... ಅದೆಲ್ಲ ಬೊಗಳೆ. ನೀನು ಈ ಜಗತ್ತಿಗೇ ಸಾರಿ ಸಾರಿ ಈ ಮಾತನ್ನು ಹೇಳಿದರೂ, 'ಆ ದಿನ' ನನ್ನ ಕಣ್ಣಲ್ಲಿ ಬರುವ ಆ ಕಂಬನಿಗಳಿಗೆ ಅವರೆಲ್ಲರೂ ಖಂಡಿತವಾಗಿಯೂ ಸಾಕ್ಷಿಯಾಗುತ್ತಾರೆ. ಅದೂ ಹೇಗೆ ಗೊತ್ತು ಅಂತೀಯಾ? 'ಆ ದಿನ' ನನ್ನ- ನಿನ್ನ ಪ್ರೇಮವನ್ನು ಇನ್ನೂ ಗಟ್ಟಿಗೊಳಿಸುವ ದಿನ. ನನ್ನ- ನಿನ್ನ ಜೀವನದ ಅತೀ ಸಂತೋಷದ ದಿನ. ಅಷ್ಟು ಜನರ ಮುಂದೆ ಚೂರೂ ನಾಚಿಕೆಯಿಲ್ಲದೆ ಆದಷ್ಟು ಹತ್ತಿರ ಬರುವ ನಿನ್ನ ಎರಡೂ ಕೈಗಳಿಂದ ಆ ಪ್ರೇಮ ಬಂಧನದ ಸಂಕೇತವಾದ ತಾಳಿಯನ್ನು ಕಟ್ಟುವ ದಿನ. ನನಗೆ ಇನ್ನೂ ಒಂದು ಅನಿಸುತ್ತೆ ಆದ್ರೆ, ಒಂದು ಬೇಜಾರು ಅಂದ್ರೆ, ನೀನು ಅಷ್ಟು ಹತ್ತಿರ ಬಂದೂ ಏನೂ ಕೊಡದೇ ಹೋಗ್ತೀಯಲ್ಲ ಅಂತ. ಇರಲಿ ಬಿಡು. ಅದೊಂದು ಬಾರಿ ತಾನೆ ಹಾಗೆ ಮಾಡೋದು? ಪರವಾಗಿಲ್ಲ. ಆದರೆ ಜೀವನದುದ್ದಕ್ಕೂ ಅಷ್ಟು ಸನಿಹ ಬಂದೂ ಏನೂ ಕೊಡದೆ ಹೋಗುವುದಿಲ್ಲ ಅಂತ ನಂಬಿಕೆ ಇದೆ!
ಅಯ್ಯೋ ಮುಖ್ಯವಾದ ವಿಷಯಾನೇ ಮರೆತೆ. ಅದೇ ಆ ಕಣ್ಣೀರಿನ ಬಗ್ಗೆ. ನನಗೆ 'ಆ ದಿನ' ನಿಜವಾಗಿಯೂ ದುಃಖವಾಗುತ್ತೆ. ಏಕೆಂದರೆ, ಅಷ್ಟು ಬೆಳೆಸಿದ ನಮ್ಮ ಪ್ರೀತಿಯೆಂಬ ತೋಟದಲ್ಲಿ ಇನ್ನೂ ಮುಂದೆ ನನ್ನ ಹಾಗೂ ನನ್ನ ಅಪ್ಪ-ಅಮ್ಮ ಎಂಬ ಹೆಮ್ಮರಗಳ ಸೇರ್ಪಡೆಯಾಗಲಿವೆ. ಅದರ ಜೊತೆಗೆ ನಿನ್ನ ಹಾಗೂ ನನ್ನ ಪ್ರೀತಿಯ ತೋಟಕ್ಕೆ ನಮ್ಮಿಬ್ಬರ ಬಂಧುಗಳು, ಅಣ್ಣ- ತಮ್ಮಂದಿರು, ಅಕ್ಕ- ತಂಗಿಯರು, ಸ್ನೇಹಿತರೂ ಸೇರಿ ನಮ್ಮ ತೋಟ ಇನ್ನೂ ಹಚ್ಚ ಹಸಿರಾಗಲಿ ಎಂದು ಹರಸುತ್ತಾರೆ. 'ಆ ದಿನ' ನಾನು ಎಷ್ಟೇ ತಡೆಹಿಡಿದರೂ ಕೆಲವು ಕಂಬನಿಗಳಾದರೂ ನನ್ನ ಕಣ್ಣಿಂದ ಬಂದದ್ದನ್ನು ನೀನು ಗಮನಿಸುತ್ತೀಯ. ಅದೇ ಕ್ಷಣ ಅದನ್ನು ಒರೆಸಲು ಹೋಗುವೆ. ಅದು ಮತ್ತೂ ರೊಮ್ಯಾಂಟಿಕ್ ಅನ್ನಿಸುತ್ತೆ. ಇದೆಲ್ಲ ಖಂಡಿತವಾಗಿ ನಡೆಯುತ್ತೆ ಅಂತ ನನಗೆ ಗೊತ್ತು. ನಿನಗೆ ಇನ್ನೂ ಒಂದು ವಿಷಯ ಗೊತ್ತಾ? ಅದೇನೆಂದರೆ, ಮದುವೆಯಾದ ಮೇಲೆ ನಿನ್ನ ಪ್ರೀತಿಯ ಗುಂಗಿನಲ್ಲಿ ಬೀಳುವ ನನಗೆ ಇಷ್ಟೆಲ್ಲಾ ಬರೆಯೋದಿಕ್ಕೆ ಪುರುಸೊತ್ತಾದರೂ ಎಲ್ಲಿ ಸಿಗುತ್ತೆ? ಅಲ್ವಾ? ಅದಕ್ಕೆ ಈಗಲೇ ಇದನ್ನ ಬರೀತಿದ್ದೀನಿ!
= ಅಮೂಲ್ಯ, ತುಮಕೂರು