ಕೊಪ್ಪರಿಗೆ ಕೊಡುಗೆ
ಉಪನಿಷತ್ ಹೇಳುವಂತೆ, ಒಂದು ಹಕ್ಕಿ ಇನ್ನೊಂದನ್ನು ನೋಡಿ ಅದರಂತೆ ಆಗಿ ಬಿಟ್ಟ ಲೌಕಿಕ ಉದಾಹರಣೆ ಸಿಗುವುದಿದ್ದರೆ ಅದು ...
ಉಪನಿಷತ್ ಹೇಳುವಂತೆ, ಒಂದು ಹಕ್ಕಿ ಇನ್ನೊಂದನ್ನು ನೋಡಿ ಅದರಂತೆ ಆಗಿ ಬಿಟ್ಟ ಲೌಕಿಕ ಉದಾಹರಣೆ ಸಿಗುವುದಿದ್ದರೆ ಅದು ಡಾ. ಉಪಾಧ್ಯಾಯ ದಂಪತಿಗಳದ್ದು ಮಾತ್ರ. ಉಡುಪಿ ಜಿಲ್ಲೆಯ ಉಳಿಯಾರು ಗ್ರಾಮದ ಡಾ. ಯು. ಪಿ. (ಉಳಿಯಾರು ಪದ್ಮನಾಭ) ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ದಂಪತಿಗಳದು ಋಷಿಸದೃಶ ಜೀವನ. ಇಬ್ಬರೂ ಭಾಷಾವಿಜ್ಞಾನಿಗಳಾಗಿ, ಜಾನಪದ ತಜ್ಞರಾಗಿ ಜೀವನಪೂರ್ತಿ ಜತೆಯಾಗಿ ದುಡಿದವರು. ತಮ್ಮ ವೈಯಕ್ತಿಕ ಬದುಕಿನ ಭದ್ರತೆಗೆ ಗಮನ ಕೊಡದೆ ಕೆಲಸದಲ್ಲೇ ಮಗ್ನರಾಗಿ ಬದುಕು ತೇಯುತ್ತ ಗಂಧವಾದವರು. ಅವರಿಗೆ ಇದೇ ಡಿ.26ರಂದು ಉಡುಪಿಯಲ್ಲಿ ಅಭಿಮಾನಿಗಳು ಮತ್ತು ಶಿಷ್ಯರು ಕೊಪ್ಪರಿಗೆ ಎಂಬ ಅಭಿನಂದನ ಗ್ರಂಥ ಅರ್ಪಿಸಿದ್ದಾರೆ.
ಭಾಷಾ ವಿಜ್ಞಾನದ ವಿದ್ವತ್ ವಲಯದಲ್ಲಿ ಉಪಾಧ್ಯಾಯ ದಂಪತಿಗಳ ಹೆಸರು ಅಳಿಯದೆ ಉಳಿಯುತ್ತದೆ. ಡಾ. ಯು. ಪಿ. ಉಪಾಧ್ಯಾಯರು ಕನ್ನಡದ ಆಡುನುಡಿಯಂತಿರುವ ಕುರುಬರ ಭಾಷೆ ಒಂದು ಸ್ವತಂತ್ರ ಭಾಷೆ ಎಂದು ಅಧ್ಯಯನದ ಮೂಲಕ ಸಂಶೋಧಿಸಿದ್ದಾರೆ. ಹಲವಾರು ಉಪಭಾಷೆಗಳ ಅಧ್ಯಯನ ನಡೆಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಗಳನ್ನು ಕಲಿಯಲು ಮಾರ್ಗದರ್ಶಿಕೆಗಳನ್ನು ಬರೆದಿದ್ದಾರೆ. ತುಳು ಸಾಂಸ್ಕೃತಿಕ ಲೋಕದಲ್ಲಿ ಉಪಾಧ್ಯಾಯರು ಸಂಪಾದಿಸಿದ ಆರು ಸಂಪುಟಗಳ ಬೃಹತ್ ತುಳು ನಿಘಂಟು ಕನ್ನಡದ ಕಿಟೆಲ್ ಕೋಶದಂತೆ ಅಜರಾಮರವಾಗಿ ಉಳಿಯಲಿದೆ.
ಡಾ. ಸುಶೀಲಾ ಉಪಾಧ್ಯಾಯರು ಬಹುಭಾಷಾ ವಿಶಾರದೆ. ಬ್ಯಾರಿ ಭಾಷೆಯನ್ನು ಸ್ವತಂತ್ರ ಭಾಷೆಯೆಂದು ಗುರುತಿಸಿದ ಕೀರ್ತಿ ಅವರದು. ಭಾಷಾ ವಿಜ್ಞಾನಿಯಾಗಿ ಅವರು ಮಾಡಿದ ಕ್ಷೇತ್ರಕಾರ್ಯ ಮಿಷನರಿಗಳಂತಹದು. ತುಳು ನಿಘಂಟಿನ ರಚನೆ ಸಂದರ್ಭ ಸುಶೀಲಾ ಉಪಾಧ್ಯಾಯರು ಹಳ್ಳಿ ಹಳ್ಳಿಗಳನ್ನು ತಿರುಗಿ ಎಷ್ಟೋ ರಾತ್ರಿಗಳನ್ನು ಹಳ್ಳಿಗರ ಮನೆಯಲ್ಲಿಯೇ ಕಳೆದವರು. ಉಡುಪಿಯ ರಥಬೀದಿಯಲ್ಲಿ ಹುಚ್ಚಿಯೊಬ್ಬಳು ವ್ಯಗ್ರಳಾದಾಗ ತುಳುವಿನಲ್ಲಿ ಓತಪ್ರೋತವಾಗಿ ಅಭೂತಪೂರ್ವವಾಗಿ ಬೈಯುತ್ತಾಳೆ ಎಂದು ತಿಳಿದಾಗ ಆ ಹುಚ್ಚಿಯ ಬೈಗಳನ್ನು ದಾಖಲಿಸಿಕೊಳ್ಳಲೆಂದೇ ವಾರಗಟ್ಟಲೆ ರಥಬೀದಿಯಲ್ಲಿ ಎಡತಾಕಿದ ಅವರ ಅನುಭವವಂತೂ ರೋಚಕವಾಗಿದೆ. ಸುಶೀಲಾ ಉಪಾಧ್ಯಾಯರು ಸಂಗ್ರಹಿಸಿ ಹಾಡಿದ ತುಳು ಪಾಡ್ದನಗಳು ಕೂಡಾ ಮುಂದಿನವರಿಗೆ ಮಾರ್ಗದರ್ಶಕ ಸಾಹಿತ್ಯವಾಗಿ ಉಳಿಯಲಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಈ ಭಾಷಾ ವಿಜ್ಞಾನಿಗಳು ತಮ್ಮ ಬದುಕಿನಲ್ಲಿ ಉದ್ಯೋಗದ ಭದ್ರತೆಯಾಗಲಿ, ಹೇಳಿಕೊಳ್ಳುವಂತಹ ಗೌರವಧನವಾಗಲಿ, ಪಿಂಚಣಿ ಮುಂತಾದ ಭವಿಷ್ಯದ ದಾರಿದೀಪಗಳಾಗಲಿ ಇಲ್ಲದೆ ನಿರ್ಭಯವಾಗಿ ತುಳು ನಿಘಂಟಿನಂತಹ ಯೋಜನೆಯಲ್ಲಿ ತೊಡಗಿಕೊಳ್ಳಲು ಸೆನೆಗಲ್‌ನ ಡಕಾರ್ ವಿಶ್ವವಿದ್ಯಾಲಯದ ತಮ್ಮ ಉದ್ಯೋಗವನ್ನು ಬಿಟ್ಟು ಉಡುಪಿಗೆ ಬಂದು ನೆಲೆಸಿದುದು ಒಂದು ಅಭೂತಪೂರ್ವ ನಿರ್ಧಾರ. ನಿಘಂಟಿನ ಕೆಲಸ ಮುಗಿದ ನಂತರ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಪಿಎಚ್.ಡಿ. ಮಾರ್ಗದರ್ಶಕರಾಗಿ ಈ ಭಾಗದ ಕೆಲವಾರು ಸಂಶೋಧಕರಿಗೆ ನೆರವಾದರು.
ಕೊಪ್ಪರಿಗೆ ಕೃತಿಯಲ್ಲಿ, ಉಪಾಧ್ಯಾಯ ದಂಪತಿ ನಡೆಸಿದ ಸಂಶೋಧನೆಗಳ ಬಗ್ಗೆ ವಿದ್ವಾಂಸರು ಬರೆದ ಲೇಖನಗಳಿವೆ. ನಿಘಂಟು ಹಾಗೂ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ ಕಿಟೆಲ್, ಮರಿಯಪ್ಪ ಭಟ್ಟ, ಪಾ. ವೆಂ. ಆಚಾರ್ಯ ಇವರ ಕೊಡುಗೆಯ ಬಗ್ಗೆ ಬರಹಗಳಿವೆ. ಹೀಗೆ ಈ ಸಂಪುಟ ಡಾ. ಉಪಾಧ್ಯಾಯ ದಂಪತಿಗಳ ಕೊಡುಗೆಯ ದಾಖಲೆಯಾಗಿರುವಂತೆ, ಒಂದು ಜನಾಂಗದ ವಿದ್ವತ್‌ಕಾರ್ಯರ್ಯದ ದಾಖಲೆಯಾಗಿಯೂ ಪ್ರಸ್ತುತಗೊಳ್ಳುತ್ತದೆ.ಟಿ
-ಡಾ.ಬಿ. ಜನಾರ್ದನ ಭಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.