ನ್ಯಾನೋ ಕಥೆಗಳು
ಕಳಚಿಕೊಳ್ಳಲು ಅಣಿಯಾಗಿ ನಿಂತ ಹಣ್ಣು, ಮರದ ಮೇಲೇ ಕೊಳೆಯುತ್ತಿದೆ. ಬುಟ್ಟಿಗಾಗಿ ಕಾಯುತ್ತಿದೆ.
'ನಂಟುಗಳನ್ನು ಗಂಟು ಹಾಕಿಕೊಳ್ಳದೇ ಬದುಕುವುದು ಒಂಥರಾ ಒಳ್ಳೆಯದು' ಅವನು ಹೇಳಿದ. 'ಸುಲಭವಾಗಿ ಕಳಚಿ ಬೀಳಬಹುದು' ಅವಳು ಪ್ರತಿಕ್ರಿಯಿಸಿದಳು.
ಪ್ರತಿದಿನ ಗಾಡಿ ಎಳೆಯುತ್ತಿದ್ದ ಎತ್ತಿನ ಮೂಗುದಾರ ಬಿಚ್ಚಿ ಅವನು ಬೀದಿಗೆ ಅಟ್ಟಿದ. ಎತ್ತು ಸ್ವಾತಂತ್ರ್ಯದ ಅಂಗಳದಲ್ಲಿ ಅನಾಥವಾಯಿತು.
ನಿನ್ನೆ ಅತ್ತ ನೆನಪು ನಾಳೆ ಸಾಯಬಹುದು. ನಾಳೆ ಸಾಯುವ ನೆನಪು ಮಾಡಿದ್ದು ಮತ್ತೆ ಹುಟ್ಟಬಹುದು. ಸತ್ತಂತೆ ನಟಿಸುವ ನೆನಪುಗಳಿಗೆ ಸಾವಿಲ್ಲ. ನಾವು ಸಾಯುವವರೆಗೂ...
ಹಾಲು ಕುಡಿಯುತ್ತಿರುವ ಕರುವಿನ ಕಣ್ಣಂಚಲ್ಲಿ ದುಗುಡ ಮತ್ತು ಧಾವಂತ....ಈಗ ನಿಜವಾಗಿದೆ. ಕೆಚ್ಚಲ ಮೇಲೆ ಅವನ ಕೈ ಬೆರಳುಗಳು ಸರಿದಾಡುತ್ತಿವೆ.
-ಎಚ್.ಕೆ. ಶರತ್