ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಕರಂದ/ದೋಣಿ

ಕ್ಷಮಿಸಿತು ಕಾಡಾನೆ

ಸುಮಾರು ಮೂವತ್ತು ವರುಷಗಳ ಹಿಂದೆ. ಅದು ಕರ್ನಾಟಕ- ತಮಿಳುನಾಡು ಗಡಿಯ ನೀಲಗಿರಿ ತಪ್ಪಲು. ಆಗ ಡಾ.ವಸಂತ ಕುಮಾರ ಪೆರ್ಲ ...

Rashmi Kasaragodu
Updated On : 19 Jan 2014, 1:32 am

ಸುಮಾರು ಮೂವತ್ತು ವರುಷಗಳ ಹಿಂದೆ. ಅದು ಕರ್ನಾಟಕ- ತಮಿಳುನಾಡು ಗಡಿಯ ನೀಲಗಿರಿ ತಪ್ಪಲು. ಆಗ  ಡಾ.ವಸಂತ ಕುಮಾರ ಪೆರ್ಲ ಅವರು ವಿಠಲ ಬಂಟ್ವಾಳ ಸಂಪಾದಕತ್ವದ 'ಪ್ರಜಾಪ್ರಭುತ್ವ' ಪತ್ರಿಕೆಯಲ್ಲಿ ವರದಿಗಾರರು. ಪೆರ್ಲರಿಗೆ ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್‌ನಲ್ಲಿ ವಿಜ್ಞಾನಿಯಾಗಿದ್ದ ಸೂರ್ಯನಾರಾಯಣ ಸ್ನೇಹಿತರು. ಸೂರ್ಯನಾರಾಯಣರಿಗೆ ಬಂಡೀಪುರ- ನೀಲಗಿರಿ ತಪ್ಪಲಿನ 50 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಸಂಶೋಧನೆ ಮಾಡುವ ಯೋಜನೆಯ ಹೊಣೆ ಬಿತ್ತು. ಸ್ವತಃ ಸಾಹಸಪ್ರಿಯರಾದ ವಸಂತ ಕುಮಾರ್ ಸ್ನೇಹಿತನೊಂದಿಗೆ ಬಂಡೀಪುರ ಕಾಡಿಗೆ ಹೊರಟರು.
ಅಲ್ಲೊಂದು ಉಪನದಿ ಇದೆ. ಇಂಗ್ಲಿಷಿನ 'ವಿ' ಆಕಾರದಲ್ಲಿ ಹರಿಯುವ ಇದಕ್ಕೆ 'ಮೋಯಾರ್‌' ಎಂದು ಹೆಸರು. ನಮ್ಮ ಕಾವೇರಿಯನ್ನು ಸೇರಿಕೊಳ್ಳುತ್ತದೆ ಇದು. 8-10 ಕಿ.ಮೀ.ನಷ್ಟು ಉದ್ದಕ್ಕೆ 1 ಕಿ.ಮೀ. ಆಳದಲ್ಲಿ ಬಂಡೆಯ ತಳವನ್ನು ಹೊಂದಿ ಹರಿಯುವ ಮೋಯಾರ್ ನದಿ ಮೇಲೆ ಸೂರ್ಯರಶ್ಮಿ ಬೀಳುವಾಗ ಬಿಸಿಲಿಗೆ ಬೆಳ್ಳಿಯ ತಂತಿ ಹರಿದಂತೆ ಭಾಸವಾಗುತ್ತದೆ. ಈ ಪ್ರದೇಶ ಇರುವುದು ದಟ್ಟ ಅರಣ್ಯದೊಳಗೆ. ಡಾ. ಪೆರ್ಲ ಅವರಿಗೆ ಇದನ್ನು ನೋಡುವ ಕುತೂಹಲ.
ಜೀಪಿನ ಚಾಲಕ, ವಿಜ್ಞಾನಿ ಸೂರ್ಯನಾರಾಯಣ, ಅವರ ಸಹಾಯಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಬಂಡೀಪುರ ಅರಣ್ಯದೊಳಕ್ಕೆ ಜೀಪಿನಲ್ಲಿ ಹೊರಟರು. ಅಭಯಾರಣ್ಯದ 25 ಕಿ.ಮೀ. ಒಳಗೆ ಮೋಯಾರ್ ಹರಿಯುತ್ತದೆ. ಒಂದು ಜೀಪು ಮಾತ್ರ ಸಾಗುವಷ್ಟು ಅಗಲ ಕಿರಿದಾದ ರಸ್ತೆಯಲ್ಲಿ ದಟ್ಟ ಅರಣ್ಯದೊಳಗೆ ಜೀಪಿನಲ್ಲಿ ಹೋಗುವಾಗ ಹಗಲೇ ಪ್ರಾಣಿಗಳು ದರ್ಶನ ಕೊಡುತ್ತವೆ.
ಸುಮಾರು 18 ಕಿ.ಮೀ. ಸಾಗಿದ ಬಳಿಕ ಹಠಾತ್ ದಾರಿಗೆ ಅಡ್ಡವಾಗಿ ಒಂದು ಆನೆ ಕಾಣಸಿತು. ಅದನ್ನು ಕಂಡು ಆಸಕ್ತರಾದ ಪೆರ್ಲ, ಜೀಪಿನಿಂದ ಇಳಿದು ಬಾನೆಟ್ ಮೇಲೆ ಹತ್ತಿ ಆನೆಯ ಚಿತ್ರಸೆರೆ ಹಿಡಿಯತೊಡಗಿದರು. ಆಗವರಿಗೆ ಮುಂದೆ ಕಾದ ಅಪಾಯದ ಸುಳಿವಿರಲಿಲ್ಲ. ಫೋಟೊ ಕ್ಲಿಕ್ಕಿಸಿದ ಬಳಿಕ ಏಕಾಏಕಿ ಸುತ್ತಲೂ ನೋಡುವಾಗ ದಿಗ್ಮೂಢರಾದರು.
ಸುತ್ತಮುತ್ತ ದಾರಿಯ ಅಕ್ಕಪಕ್ಕ ಮರಿಯಾನೆಗಳೂ ಸೇರಿದಂತೆ 25-30 ಆನೆಗಳ ಹಿಂಡೇ ನಿಂತಿತ್ತು. ಇವರಿಗೆಲ್ಲ ದಿಕ್ಕೇ ತೋಚಲಿಲ್ಲ.
ಮರಿಯಾನೆಗಳಿರುವ ಕಾಡಾನೆ ಹಿಂಡು ಬಲು ಡೇಂಜರ್. ದಾಳಿ ನಡೆಸೇಬಿಡುತ್ತವೆ. ಇವರನ್ನು ನೋಡಿದ ಕಾಡಾನೆಗಳು ಒತ್ತೊತ್ತಾಗಿ ನಿಂತು ಗುಂಪು ಸೇರಿದವು. ಸೂಕ್ಷ್ಮವಾಗಿ ಇವರನ್ನೇ ಗಮನಿಸುತ್ತಾ ದಾಳಿಗೆ ಸಜ್ಜಾದವು. ವಾಪಸು ಸದ್ದಿಲ್ಲದೆ ಬರೋಣವೆಂದರೆ ಅಲ್ಲಿ ಜೀಪು ತಿರುಗಿಸಲು ಜಾಗವೇ ಇರಲಿಲ್ಲ. ಜೀಪನ್ನು ರಿವರ್ಸ್ ತರಲೆಂದು ಡ್ರೈವರ್ ಟ್ರೈ ಮಾಡಿದ. ದುರಂತ,. 15 ನಿಮಿಷ ಜೀಪು ಸ್ಟಾರ್ಟೇ ಆಗಲಿಲ್ಲ. ಅರ್ಧ ಫರ್ಲಾಂಗ್ ರಿವರ್ಸ್ ಬಂದಿದ್ದರೆ ಬೇರೆ ದಾರಿ ಸಿಗುತ್ತಿತ್ತು. ಆದರೆ, ಜೀಪೇ ಸ್ಟಾರ್ಟ್ ಆಗುತ್ತಲ್ಲವಲ್ಲ.
ಜೀಪಿನಲ್ಲಿದ್ದವರೆಲ್ಲ ಇದ್ದ ದೇವರನ್ನೆಲ್ಲ ನೆನೆದರು. ಜೀಪಿನ ಚಾಲಕ ಈ ಹುಡುಗರನ್ನು ಬಯ್ಯತೊಡಗಿದ. 'ನೀವೇನೋ ಹುಡುಗರು, ಪ್ರಾಣದ ಭಯವಿಲ್ಲ. ನಂಗೆ ಕುಟುಂಬ, ಮಕ್ಳೆಲ್ಲ ಇದ್ದಾರೆ.... ಥತ್ ನಿಮ್ಮ' ಎಂದು ಶಪಿಸತೊಡಗಿದ. ಕ್ಷಣ ಕಾಲದ ನಂತರ ಅಂತೂ ಆತನಿಗೆ ಧೈರ್ಯ ಬಂತು. ಜೀಪಿನಿಂದಿಳಿದು ಬಾನೆಟ್ ಎತ್ತಿ ಏನೇನೋ ಕಸರತ್ತು ಮಾಡಿ ಜೀಪನ್ನು ಸ್ಟಾರ್ಟ್ ಮಾಡಿಯೇಬಿಟ್ಟ. ಜೀಪನ್ನು ರಿವರ್ಸ್ ತಂದು ಇನ್ನೊಂದು ದಾರಿಯಲ್ಲಿ ಗಮ್ಯ ತಲುಪಿ ಆಯಿತು.
ಅಂತೂ ಅವರೆಲ್ಲರ ಪ್ರಾಣ ಉಳಿದಿತ್ತು.


- ಕೃಷ್ಣಮೋಹನ ತಲೆಂಗಳ
kmohant@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments