ಅದೃಶ್ಯ
ಬೆವರು ಒರೆಸಿಕೊಳ್ಳುತ್ತಿದ್ದ
ಒಂದು ಬೆಳಗು
ಕೊಡೆ ಹಿಡಿದು ಕಪ್ಪ ಕನ್ನಡಕದ
ಮೊರೆ ಹೊಕ್ಕು
ಅಂಗಳದ ಹೊರಕ್ಕೆ ಅಡಿಯಿಟ್ಟೆ
ಮುದಿ ರಾಜನಂತೆ ಮಲಗಿ ಕಾಲು
ಒತ್ತಿಸಿಕೊಳ್ಳುತ್ತಿತ್ತು ಉದ್ದನೆಯ ಹಾದಿ
ಪಕ್ಕದಲ್ಲೇ ನಿಗಿನಿಗಿ ಕೆಂಡದ ಕಾವಿಗೆ
ಕೊತಕೊತನೆ ಕುದಿಯುತ್ತಿದ್ದವು
ಡಾಮರು ಹೊತ್ತು ನಿಂತ ಡಬ್ಬಿಗಳು
ಕತ್ತಲೆಯೂ ಬೆದರುವ ಹಾಗೆ
ಕಪ್ಪಿಟ್ಟ ಅವರುಗಳು
ಖಾಲಿ ಕೈಗಳಿಂದ ಎತ್ತಿ ಎತ್ತಿ
ಸೊಂಟ ಬಗ್ಗಿಸಿ ತಾರೆಣ್ಣೆಯ
ರಸ್ತೆಯ ಮುಖಕ್ಕೆ ಸವರುತ್ತಿದ್ದರು
ಮನದಿ ಶಪಿಸುತ್ತಲೇ ನಡೆದು
ತಂಪು ಗಾಳಿಯ ಕಚೇರಿಯ
ಆರಾಮ ಕುರ್ಚಿಗೆ ಒರಗಿ
ನಿರಾಳವಾದೆ
ಸಂಜೆ ಹಿಂತಿರುಗಿ ಬರುವಾಗ ಅಲ್ಲಿ
ಯಾರೂ ಕಾಣಲಿಲ್ಲ
ಯುವರಾಜನಂತೆ ಶೃಂಗರಿಸಿ ಕೂತಿದ್ದ
ದಾನಿಯ ಅಲಂಕಾರದಲಿ ಕರಗಿ
ಹೋದದ್ದು ಅವರೋ ಡಾಮರೋ?
-ದೀಪ್ತಿ ಭದ್ರಾವತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.