ಮಕರಂದ/ದೋಣಿ

ಬೋಧಿವೃಕ್ಷವೂ ರಾತ್ರಿ ನಿದ್ದೆ ಮಾಡುತ್ತದೆ!

ಹಲವಾರು ಕತೆಗಳಿವೆ, ನೀತಿಗಳಿವೆ, ಪಾತ್ರಗಳಿವೆ... ಎಲ್ಲದರ ನಡುವೆ ನನ್ನನ್ನು ತುಂಬಾ ಕಾಡುವ ಪಾತ್ರ ಬುದ್ಧನ...

ಹಲವಾರು ಕತೆಗಳಿವೆ, ನೀತಿಗಳಿವೆ, ಪಾತ್ರಗಳಿವೆ... ಎಲ್ಲದರ ನಡುವೆ ನನ್ನನ್ನು ತುಂಬಾ ಕಾಡುವ ಪಾತ್ರ ಬುದ್ಧನ ಮಗ ರಾಹುಲನದ್ದು. ಕೆಲವೊಮ್ಮೆ ನತದೃಷ್ಟ ಎಂಬ ಪದಕ್ಕೆ ಇನ್ನೊಂದು ಅರ್ಥವೇ ಅವನೇನೋ ಅನ್ನಿಸುವಷ್ಟು ಆ ಪಾತ್ರ ನನ್ನನ್ನು ಕಾಡಿದೆ.
ಮಧ್ಯ ರಾತ್ರಿಯಲ್ಲಿ ಮನೆ ಬಿಟ್ಟು ಹೋಗಿ ಬೋಧಿವೃಕ್ಷದ ಕೆಳಗೆ ಕೂತು ಜ್ಞಾನವನ್ನು ಪಡೆದು ಆಸೆಯೇ ದುಃಖಕ್ಕೆ ಮೂಲ ಎಂದು ಬೋಧಿಸುತ್ತ ಹೊರಟ ಬುದ್ಧನನ್ನು ನೆನೆದರೆ ವಿರಾಗಿ, ಜ್ಞಾನಿ ಎನಿಸುತ್ತದೆ. ನಿಜ, ಆದರೆ ಒಂದು ಸಲ ಬುದ್ಧನ ಮಗನ ಸ್ಥಾನದಲ್ಲಿ ನಿಂತು ನೋಡಿ...
ರಾತ್ರಿ ಮಲಗುವಾಗ ತಾನು ತಲೆ ಇಟ್ಟಿದ್ದ ತೋಳುಗಳು ಮಾಯ. ತಾನು ಕೈ ಚಾಚಿ ತಬ್ಬಿದ್ದ ಅವನಪ್ಪನ ಎದೆಬಡಿತವಿಲ್ಲ. ಕೈತುಂಬಾ ಹಿಡಿದು ನಡೆಯುತ್ತಿದ್ದ ಅಪ್ಪನ ಕೈಯ ತೋರು ಬೆರಳಿಲ್ಲ. ಅಸಲಿಗೆ 'ಅಪ್ಪ' ಎಂಬ ಪಾತ್ರವೇ ಅವನ ಪಾಲಿಗೆ ಸತ್ತು ಹೋಗಿದೆ. ಐಶ್ವರ್ಯವಿದೆ, ವೈಭೋಗವಿದೆ, ಅಧಿಕಾರವಿದೆ... ಎಲ್ಲದಕ್ಕೂ ಅನಾಥಪ್ರಜ್ಞೆಯ ಗಾಢ ನೆರಳಿದೆ. ಅಪ್ಪ ಕಣ್ಣೆದುರಿಗೇ ಇದ್ದೂ ತನ್ನ ಪಾಲಿಗೆ ಮಾತ್ರ ಇಲ್ಲವಾದಂಥ ಅಸಹಾಯಕ ಪರಿಸ್ಥಿತಿ. ತನ್ನಪ್ಪ ಹೇಳುವ ಆಸೆಯೇ ದುಃಖಕ್ಕೆ ಮೂಲ ಎಂಬ ಮಾತು, ನನಗೆ ಅಪ್ಪ ಬೇಕು ಎಂಬ ಆಸೆಯೇ ತಪ್ಪಾ ಎಂಬ ಅನುಮಾನದ ಸ್ಥಿತಿ. ಎಲ್ಲರೂ ತನ್ನಪ್ಪನ ಕಾಲಿಗೆರಗುವಾಗ ಒಮ್ಮೆ ಹೋಗಿ ತೊಡೆ ಏರುವ, ಭುಜದ ಮೇಲೆ ಮಲಗುವ ತೀರದ ಹಂಬಲ.
ಅಪ್ಪ ಕ್ರೂರಿ ಅಂಗುಲಿಮಾಲನಾಗಿದ್ದರೂ ಎಂದೋ ಒಂದು ದಿನ ಬುದ್ಧ ಬಂದು ಪರಿವರ್ತಿಸುವ ಸಾಧ್ಯತೆ ಇತ್ತು. ಅಪ್ಪ ಬುದ್ಧನೇ ಆದರೆ ಅಗಲಿಕೆ ಅನಿವಾರ್ಯ. ಅಪ್ಪನಲ್ಲದ ಅಪ್ಪ ಜಗತ್ತಿಗೆ ಮಹಾನ್ ವ್ಯಕ್ತಿ. ನತದೃಷ್ಟ ಮಗ ಎಂದೂ ಬೆಳಕಿಗೆ ಬಾರದ ನಿರಂತರ ದುಃಖಿ.
-
ಜಗತ್ತು ನಿರ್ವಿಕಾರ, ನಿರ್ಲಿಪ್ತ, ನಿಶ್ಚಲ. ಸೂರ್ಯನನ್ನು ಭೂಮಿ ಸುತ್ತುತ್ತದೆ ಎಂಬುದು ವೈಜ್ಞಾನಿಕ ಸತ್ಯವಾದರೂ ಬೆಳಗ್ಗೆ ಎದ್ದೊಡನೆ ಸೂರ್ಯ ಹುಟ್ಟಿ ಬಂದಂತೆ ಭಾಸವಾಗುತ್ತದೆ. ಅಲ್ಲಿಗೆ ಆಯುಷ್ಯದ ಮತ್ತೊಂದು ದಿನ ಶುರು. ಮತ್ತದೇ ಆಸೆ, ಮತ್ತದೇ ಕನಸು ಮತ್ತು ಅದರ ಹಿಂದೆ ಓಟ... ಎಜುಕೇಟೆಡ್ ಸ್ಲಂಗಳಾದ ಅಪಾರ್ಟ್‌ಮೆಂಟ್‌ಗಳಿಂದ ಹಿಡಿದು ಸ್ಲಂಗಳಲ್ಲಿ ವಾಸಿಸುವ ಅನ್‌ಎಜುಕೇಟೆಡ್ ತನಕ ಎಲ್ಲರೂ ಕಾಡಿದ ಕನಸನ್ನು ನನಸಾಗಿಸಲು ಹೊರಟವರೇ.
ಕೆಲವೊಮ್ಮೆ ನನಗನ್ನಿಸುತ್ತದೆ, ನಾವೆಲ್ಲರೂ ಎಗ್ಸಿಬಿಶನ್‌ನಲ್ಲಿ ನಿಂತಿದ್ದೇವೆ. ಎಲ್ಲದಕ್ಕೂ ಎಂಟ್ರೆನ್ಸ್ ಫೀ, ಅದಕ್ಕೊಂದು ಕ್ಯೂ. ಆದರೆ ಕೆಲವರು ಮಾತ್ರ ಎಂಜಾಯ್ ಮಾಡುತ್ತಿದ್ದಾರೆ. ಹಣವಿಲ್ಲವೆಂದ ಮಾತ್ರಕ್ಕೆ ಆಸೆಗಳಿಲ್ಲ ಎಂದೇನಲ್ಲ. ಅದನ್ನು ತೀರಿಸಿಕೊಳ್ಳಲು ದಾರಿಗಳಿಲ್ಲ. ಕಷ್ಟ ಪಟ್ಟು ಹಣ ಹೊಂದಿಸಿ ಜೈಂಟ್‌ವ್ಹೀಲ್‌ನಲ್ಲಿ ಕುಳಿತಾಗ ಅದರ ವೇಗಕ್ಕೆ ತಲೆ ಸುತ್ತುತ್ತದೆ, ಸ್ವಲ್ಪ ಭಯವಾಗುತ್ತದೆ. ಇಷ್ಟಕಾಗಿಯೇ ನಾ ಅಷ್ಟೊಂದು ಕಾತರಿಸಿದೆನಾ ಎನಿಸುತ್ತದೆ. ಆದರೆ ಮತ್ತ್ಯಾರೋ ಅನುಭವ ಕೇಳಿದರೆ ಅದ್ಭುತವಾಗಿತ್ತು ಎಂಬಂತೆ ವಿವರಿಸಿ ಬಿಡುತ್ತೇವೆ. ಮತ್ತ್ಯಾರಿಗೋ ಅದರಲ್ಲಿ ಕೂರುವ ಕನಸಿನಾಸೆಯ ವರ್ಗಾವಣೆ, ಅದಕ್ಕಾಗಿ ಓಟ.
ಸಿನಿಮಾಗಳಲ್ಲಿ ಮಳೆಯನ್ನು ಸುಂದರವಾಗಿ ತೋರಿಸುತ್ತಾರೆ, ಪ್ರತಿ ಹನಿಯಲ್ಲೂ ಏನೋ ಪುಳಕ ಇದೆ ಎಂಬಂತೆ. ಅದನ್ನು ನೋಡುವಾಗೆಲ್ಲ ಮನೆಯಲ್ಲಿ ಸೋರುವ ಜಾಗ, ಅಲ್ಲಿಟ್ಟ ಪಾತ್ರೆ, ಅದರೊಳಗೆ ಪ್ರತಿ ಹನಿ ಬಿದ್ದಾಗಲೂ ಅದರಿಂದ ಬರುವ ಶಬ್ದ ಯಾತನೆ ನೀಡುತ್ತದೆ. ಆಗೆಲ್ಲ ಮಳೆ ಗಾಳಿಗೆ ಜಗ್ಗದ ಮನೆ ಕಟ್ಟುವಂಥ ಆಸೆ ಒಡಲಾಳದಲ್ಲಿ ಹೊಮ್ಮುತ್ತದೆ. ಶಾಲೆಗಳಲ್ಲಿ ಸಮವಸ್ತ್ರ ಹಾಕಿಸಿ ಪ್ರಾರ್ಥನೆ ಮಾಡಿಸುತ್ತಾರೆ, ನಾವೆಲ್ಲರೂ ಸಮಾನರು ಎಂಬ ಭಾವನೆ ಬರಲಿ ಅಂತ. ಆದರೆ ದೊಡ್ಡವರಾದ ಮೇಲೆ ಯಾವುದೇ ವ್ಯಕ್ತಿಗೆ ವೈಯಕ್ತಿಕ ಗೌರವ ಎಂಬುದೇ ಇರುವುದಿಲ್ಲ. ಕೇವಲ ಅವನ ವೃತ್ತಿಯೇ ಅವನ ಯೋಗ್ಯತೆಯನ್ನು ಅಳೆಯುತ್ತದೆ. ಸಿಇಟಿ ರ್ಯಾಂಕ್ ಥರ ಎಲ್ಲರಿಗೂ ಒಂದೊಂದು ರ್ಯಾಂಕ್. ಈ ರ್ಯಾಂಕ್ ಯಾರಾದರು ಕೊಟ್ಟಿದ್ದಾ, ಇಲ್ಲಾ ನಾವೇ ಪಡೆದ್ದಿದ್ದಾ ಎಂಬ ಪ್ರಶ್ನೆ ಕಗ್ಗಂಟಾಗುತ್ತದೆ. ಊರಿಗೆ ಬರುವಾಗ ಬಸ್‌ನಲ್ಲಿ ಸಿಕ್ಕ ಗೆಳೆಯ, ನಮ್ಮ ಕ್ಲಾಸ್‌ಮೇಟ್ ಒಬ್ಬ ಊರಲ್ಲೇ ಉಳಿದು ಅಲ್ಲೇ ಕೆಲಸಕ್ಕೆ ಸೇರಿ ತುಂಬಾ ಹಣ ಉಳಿಸುತ್ತಿದ್ದು ನಾವು ಪಟ್ಟಣಕ್ಕೆ ಬಂದು ಸಾಧಿಸಿದ್ದೇನು ಎಂದು ಪ್ರಶ್ನಿಸಿದಾಗ ಇಬ್ಬರೊಳಗೂ ಉತ್ತರ ಸಿಗದ ಮೌನ. ಮನೆಗೆ ಬರುವ ದಾರಿಯಲ್ಲಿ ಸಿಕ್ಕಿ ಆತ್ಮೀಯವಾಗಿ ವಿಚಾರಿಸಿದವರು ನಾ ಊರಲ್ಲೇ ಇದ್ದಾಗ ಒಮ್ಮೆಯೂ ನನ್ನನ್ನು ಮಾತಾಡಿಸಿರಲಿಲ್ಲ ಎಂಬುದು ನಗು ತರಿಸುತ್ತದೆ.
ಚಿಕ್ಕವನಿದ್ದಾಗ ಅಮ್ಮ ಹಾವು ಮುಂಗುಸಿಯ ಕತೆ ಹೇಳುವಾಗ ಮುಂಗುಸಿಯನ್ನು ಮನೆಯೊಡತಿ ಅನುಮಾನದಿಂದ ಸಾಯಿಸಿದ್ದನ್ನು ಹೇಳುತ್ತಿದ್ದರೆ ಅಳು ಬರುತ್ತಿತ್ತು. ಬೇರೆ ಕತೆಗಳಲ್ಲಿ ಬರುವಂತೆ ಮಂತ್ರವಾದಿಯಾದರೂ ಬಂದು ಮುಂಗುಸಿಯನ್ನು ಬದುಕಿಸಲಿ ಎಂದು ಆಸೆಯಾಗುತ್ತಿತ್ತು. ಆದರೆ ಅಮ್ಮ ಮುಂಗುಸಿ ಸತ್ತಲ್ಲಿಗೆ ಕತೆ ಮುಗಿಸುತ್ತಿದ್ದಳು. ಅಂದು ಅವಳಿಗೆ ನನ್ನ ಆಸೆ ಅರ್ಥವಾಗಿರಲಿಲ್ಲ. ಆ ಕತೆ ಆ ಮಟ್ಟಕ್ಕೆ ನನ್ನನ್ನು ಕಾಡಲು ಇಂದು ಸಾಧ್ಯವಿಲ್ಲ. ಇಂದಿನ ಆಸೆ, ಇಂದಿನ ಕನಸು ನಾಳೆಗೆ ಏನೂ ಅಲ್ಲದಿರಬಹುದು. ಆದರೆ ಇಂದಿಗೆ ಮಾತ್ರ ಅದೇ ನಾಳೆಯತ್ತ ಕೊಂಡೊಯ್ಯುವ, ಭರವಸೆ ನೀಡುವ ಸರಕು. ಬೋಧಿವೃಕ್ಷವೂ ರಾತ್ರಿ ನಿದ್ದೆ ಮಾಡುತ್ತದೆ. ಯಾವುದೋ ಕನಸು ಬೆಳಗಿನ ಹೊತ್ತಿಗೆ ಮರೆತು ಹೋಗಿರುತ್ತದೆ. ಬುದ್ಧನ ಮಗನನ್ನು ಹುಡುಕಿ ಅವನ ಆಸೆಯನ್ನು ಕೇಳಿದರೆ ಎಲ್ಲರ ದುಃಖಕ್ಕೆ ಕಾರಣ ಸಿಗುತ್ತದೆ!


- ಶಶಾಂಕ ಜೋಯಿಸ್
yesjois@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್