ಕನ್ನಡ ಕುಲಪುರೋಹಿತ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದವರು ಆಲೂರು ವೆಂಕಟರಾಯರು. ಕನ್ನಡಿಗರನ್ನು ಜಾಗೃತಗೊಳಿಸುವ ಸದಾಶಯದಿಂದ 1906ರಲ್ಲಿ ವಾಗ್ಭೂಷಣ, 1922ರಲ್ಲಿ ಜಯ ಕರ್ನಾಟಕ ಎಂಬ ಪತ್ರಿಕೆಗಳನ್ನು ಆರಂಭಿಸಿದರು. ಕಿರಿಯ ಬರಹಗಾರರನ್ನು ಆ ಹಿರಿಯರು ಹೇಗೆ ಪ್ರೋತ್ಸಾಹಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಪುಟ್ಟ ಬರಹವೊಂದು ಇಲ್ಲಿದೆ. ಈ ಬರಹದ ಕರ್ತೃ ಜಡೆ ರಂಗರಾವ್. ವಿಶೇಷವೇನೆಂದರೆ, ಈ ಬರಹ ಹಳೆಹಳೆ ಹಳೆ ಹಳೆಯ 'ಕಸ್ತೂರಿ' ಸಂಚಿಕೆಯಿಂದ ಆಯ್ದುಕೊಂಡಿದ್ದು.
ಮೂವತ್ತು ವರ್ಷಗಳ ಹಿಂದಿನ ವಿಷಯ. ನಾನಾಗ ಮೈಸೂರಿನಲ್ಲಿ ಎಂಟ್ರೆನ್ಸ್ (ಈಗಿನ ಇಂಟರ್) ಓದುತ್ತಿದ್ದೆ. ಹಿಂದಿನ ದಿನವೇ ನಮ್ಮ ತಂದೆಯವರಿಂದ ನನಗೆ ಪತ್ರ ಬಂದಿತ್ತು. ಈ ದಿನ ಮತ್ತೆಬಂದ ಪತ್ರ ನೋಡಿ ಹೆದರಿಕೆ, ಆಶ್ಚರ್ಯ ಎರಡೂ ಆಯಿತು. ಕವರು ಒಡೆಯಲೂ ಕೈನಡುಕ. ಕಾಗದ ಓದಿದೆ.
ದಾವಣಗೆರೆ
ತಾ....................
ರಂಗಣ್ಣ,
ಈ ದಿನ ಇನ್ನೂ ಬೆಳಕು ಹರಿಯುತ್ತಿರುಂತೆಯೇ ಒಬ್ಬರು ನಮ್ಮ ಮನೆಯನ್ನೇ ಹುಡುಕಿಕೊಂಡು ಬಂದರು.
'ತಾವೇ ಏನು ರಾಮರಾಯರು?' ಎಂದರು.
'ಹೌದು. ತಾವಾರೋ ತಿಳಿಯಲಿಲ್ಲ, ಬನ್ನಿ ಒಳಗೆ' ಎಂದು ಕರೆದುಕೊಂಡು ಹೋದೆ.
'ರಂಗಣ್ಣ ಎನ್ನುವವರು ತಮ್ಮ ಚಿರಂಜೀವರೋ?'
ನನಗೆ ಆಶ್ಚರ್ಯ. ನೀನೆಲ್ಲಿ ಏನೋ ತಂಟೆಗೆ ಸಿಕ್ಕಿಕೊಂಡಿರುವೆ ಎಂದುಕೊಂಡೆ.
'ಅವರಿದ್ದಾರೇನು?' ಎಂದರು ಅವರೇ.
'ಇಲ್ಲಿಲ್ಲ, ಅವನೀಗ ಮೈಸೂರಿನಲ್ಲಿ ಓದುತ್ತಿದ್ದಾನೆ.'
'ಸರಿ, ಸರಿ. ಏನೂ ಇಲ್ಲ. ಹುಡುಗ ಸೂಟಿಯಾಗಿದ್ದಾನೆ. ಕನ್ನಡ ಎಂದರೆ ಅಭಿಮಾನವಿದೆ. ನೋಡಿ. ಅವನು ನಮ್ಮ ರಾಷ್ಟ್ರಕವಿ ಟಾಗೂರರ "ದಿ ರನ್ವೇ" ಎಂಬುದನ್ನು "ಓಡಿ ಹೋದ ಬಾಲಕ" ಎಂದು ಕನ್ನಡಿಸಿ ನಮ್ಮ "ಜಯಕರ್ನಾಟಕಕ್ಕೆ" ಎರಡು ವರ್ಷಗಳ ಕೆಳಗೇ ಕಳಿಸಿದರು. ಅದನ್ನೀಗ ಪ್ರಕಟಿಸಿದ್ದೇವೆ. ಇಗೋ, ಇದೇ ಆ ಸಂಚಿಕೆ. ಭಾಷಾಂತರಕ್ಕಿಂತ ಸ್ವಂತದ್ದು ಬರೆದು ಕಳಿಸೆಂದು ಹೇಳಿ. ಶಕ್ತಿ ಇದೆ. ತಪ್ಪು ಹೆಜ್ಜೆ ಇಟ್ಟರೂ ದಿಟ್ಟ ಹೆಜ್ಜೆ ಇಡಲಿ. ಕನ್ನಡ ಮಾತೆಯ ಸೇವೆಗೆ ಇಂತಹ ಮಕ್ಕಳೇ ಬೇಕು' ಎಂದರು. ನಾನು ಏನೂ ಹೇಳಲಾರದೆ ಇದ್ದೆ.
'ನೆನ್ನೆ ಇಲ್ಲಿಗೆ ಬರುವ ಪ್ರಸಂಗ ಬಿತ್ತು. ಹಾಗೆಯೇ ಈ ಮಗುವನ್ನೂ ನೋಡಿ ಹೋಗೋಣವೆನ್ನಿಸಿತು. ಬಂದೆ. ನನ್ನ ಹೆಸರು ಆಲೂರ ವೆಂಕಟರಾಯ. ಬರುತ್ತೇನೆ ಸ್ವಾಮಿ, ನಮಸ್ಕಾರ' ಎಂದು ಹೊರಟೇ ಬಿಟ್ಟರು.
ನಿನಗೆ ನಾನು ಹೆಚ್ಚೇನು ಬರೆಯಲಿ? ಈ ದೊಡ್ಡವರ ನಡತೆಯೇ ನಿನಗೆ ಮೇಲ್ಪಂಕ್ತಿಯಾಗಿರಲೆಂದು ಆಶೀರ್ವದಿಸುತ್ತೇನೆ.
ಇತಿ
ನಿನ್ನ ಅಣ್ಣ