ದಂಡಕಾರಣ್ಯ ಎಂಬುದು ಸಾವಿರಾರು ವರ್ಷಗಳ ಹಿಂದೆ ಯಾವ ಹೆಸರಿಲ್ಲದ ವಿಂದ್ಯ ಪರ್ವಾತಾಗ್ರಹದ ಶ್ರೇಣಿಯಾಗಷ್ಟೆ ಇದ್ದಿತ್ತು. ಆದರೆ ಆ ಅರಣ್ಯದ ಆಸುಪಾಸಿನ ರಾಜ್ಯವನ್ನಾಳುತ್ತಿದ್ದ ಸೂರ್ಯವಂಶದ ಇಕ್ಷ್ವಾಕುವಿನ ನೂರು ಜನ ಮಕ್ಕಳಲ್ಲಿ ಒಬ್ಬನಾದ ದಂಡಕ ಅಲ್ಲಿದ್ದ. ಅವನನ್ನು ಆ ಕಾಡಿನಲ್ಲಿ ಬಿಡಲೂ ಒಂದು ಕಾರಣ ಇತ್ತು. ಸ್ವಭಾವತಃ ದುಷ್ಟನೂ ಆಗಿದ್ದ ದಂಡಕ, ರಾಜ್ಯದ ಪ್ರಜೆಗಳನ್ನು ಕಾಡಿಸಿ ಪೀಡಿಸಿ ಗೋಳು ಹೊಯ್ದುಕೊಳ್ಳುತ್ತಿದ್ದ. ಎಲ್ಲೆಂದರಲ್ಲಿ ದಾಳಿ ಇಟ್ಟು ತನ್ನ ಪುಂಡ ಸ್ನೇಹಿತರೊಂದಿಗೆ ಮರೆಯುತ್ತಾ ದಿನಗಳೆಯುತ್ತಿದ್ದ. ಉಳಿದ ತೊಂಭತ್ತೊಂಬತ್ತು ಸಹೋದರರರೂ ಕೂಡಾ ಅವನ ಉಪಟಳ ತಡೆಯದೆ ಅವನ ಉಸಾಬರಿಯೇ ಬೇಡ ಎಂದು ಸುಮ್ಮನುಳಿದು ಬಿಡುತ್ತಿದ್ದರು. ಅವನ ಕಾರಣದಿಂದಾಗಿ ಇವತ್ತಲ್ಲ ನಾಳೆ ತಾನು ಸಮಾಜದ ವಿರೋಧವನ್ನು ಎದುರಿಸಬೇಕಾಗಿ ಬರಬಹುದೆನ್ನುವ ಆಲೋಚನೆಯಿಂದ ಇಕ್ಷ್ವಾಕು ದೊರೆ, ಅವನನ್ನು ತೊರೆದು ಬಿಡಲು ಯೋಚಿಸಿದ. ಅದಕ್ಕಾಗಿ ಅವನಿಗೆ ವಿಂದ್ಯ ಮತ್ತು ಶೈವಲ ಪರ್ವತ ನಗರಗಳ ಮಧ್ಯೆ ಒಂದು ನಗರವನ್ನು ನಿರ್ಮಿಸಿದ.
ದಟ್ಟ ಕಾಡಿನಲ್ಲಿ ಹಸಿರಿನ ಮಧ್ಯೆ ಪ್ರಫುಲ್ಲವಾಗಿ ಕಂಗೊಳಿಸುತ್ತಿದ್ದ ಅದು "ಮಧು ಮಂತ ನಗರ" ಎಂದು ಕರೆಯಲ್ಪಟ್ಟು ಸಕಲ ಸೌಭಾಗ್ಯಗಳಿಂದ ನೋಡುವವರನ್ನು ಆಕರ್ಷಿಸತೊಡಗಿತ್ತು. ಅಲ್ಲಿಗೆ ಹೊಸ ನಗರದ ನಿರ್ವಹಣೆಗಾಗಿ ಅದರ ಸುಪರ್ದಿಗಾಗಿ ಎಂದು ದಂಡಕನನ್ನು ತನ್ನ ರಾಜ್ಯದ ವ್ಯಾಪ್ತಿಯಿಂದ ದೂರ ಮಾಡಿ ಕಳುಹಿಸಿದ. ಮಧುವಂತ ನಗರದಲ್ಲಂತೂ ಅವನನ್ನು ಹೇಳುವವರು ಕೇಳುವವರು ಯಾರೂ ಇಲ್ಲವಾಗಿ ದಂಡಕ ಇನ್ನಷ್ಟು ಕೊಬ್ಬಿ ಮೆರೆಯತೊಡಗಿದ. ಸಹಜವಾಗೇ ದೈತ್ಯರ ಗುರು ಶುಕ್ರಾಚಾರ್ಯರು ಅವನಿಗೂ ಗುರುವಾಗಿಯೇ ಇದ್ದರು. ಹಾಗಾಗಿ ಆಗಾಗ ರಾಜಕಾರಣ ನಿಮಿತ್ತ ದಂಡಕ ಶುಕ್ರಾಚಾರ್ಯರನ್ನು ಭೇಟಿಯಾಗಲು ಆಶ್ರಮಕ್ಕೆ ಹೋಗಿ ಬರುತ್ತಿದ್ದ.
ಹಾಗೆ ಹೋದಾಗೆಲ್ಲಾ ಅಲ್ಲಿರುತ್ತಿದ್ದ ಶುಕ್ರಾಚಾರ್ಯರ ಮಗಳು ಅರಿಜೆ ಅವನ ಕಣ್ಣಿಗೆ ಬೀಳದಿರುತ್ತಿರಲಿಲ್ಲ. ಮೊದಲ ನೋಟಕ್ಕೆ ಮರುಳಾಗಿ ಗುರುಗಳಿಲ್ಲದ ಸಮಯದಲ್ಲಿ ಆಶ್ರಮವನ್ನು ಪ್ರವೇಶಿಸಿ ಅರಿಜೆಯನ್ನು ರಮಿಸಲು ಪ್ರಯತ್ನಿಸತೊಡಗಿದ. ಆದರೆ ದಂಡಕನ ಇತಿಹಾಸವನ್ನು ತಿಳಿದಿದ್ದ ಅರಿಜೆ, ಅವನನ್ನು ಆಶ್ರಮದಿಂದ ಹೊರಗಿಡತೊಡಗಿದಳು. ಗುರುಗಳಿಗೆ ಈತನ ಕಿರಿಕಿರಿಯ ಬಗ್ಗೆ ತಿಳಿದರೆ ಅವನನ್ನು ಶಪಿಸಿ ಸಾಯಿಸಿಬಿಟ್ಟಾರು ಎಂದು ಅರಿಜೆಯೂ ಯಾಕೆ ಅಷ್ಟೆಲ್ಲಾ ರಗಳೆ ಎಂದು ಸುಮ್ಮನಾಗಿ ಬಿಟ್ಟಿದ್ದಳು. ಇದನ್ನು ಅಪಾರ್ಥ ಮಾಡಿಕೊಂಡ ದಂಡಕ ಒಮ್ಮೆ ಶುಕ್ರಾಚಾರ್ಯರು ಇಲ್ಲದ ವೇಳೆಯಲ್ಲಿ ಆಶ್ರಮಕ್ಕೆ ಬಂದು ಅರಿಜೆಯನ್ನು ಪ್ರೇಮಿಸುವಂತೆ ಒತ್ತಾಯಿಸಿದ. ಆದಾಗದಿದ್ದಾಗ ಯಾರ ಪ್ರತಿಭಟನೆಯನ್ನೂ ಲೆಕ್ಕಿಸದೆ ಅವಳನ್ನು ಬಲಾತ್ಕರಿಸಿ ಬಿಟ್ಟ.
ಕೆಲ ಸಮಯದ ನಂತರ ಆಶ್ರಮಕ್ಕೆ ಮರಳಿದ ಗುರುಗಳಿಗೆ ನಡೆದದ್ದೇನೆಂದು ಅರ್ಥವಾಯಿತು. ಕೋಪಾವಿಷ್ಟರಾದ ಶುಕ್ರಾಚಾರ್ಯರು ಕೂಡಲೇ ಒಂದು ವಾರ ಕಾಲ ಎಡಬಿಡದೆ ಒಂದು ಹುಲ್ಲು ಕಡ್ಡಿಯೂ ಉಳಿಯದಂತೆ, ಅಲ್ಲಿರುವ ಒಂದು ಜೀವ ರಾಶಿಯೂ ತಪ್ಪಿಸಿಕೊಳ್ಳದಂತೆ ಧೂಳು ಮಣ್ಣು ಸುರಿದು ಮಧುಮಂತ ನಗರ ಮಣ್ಣು ಪಾಲಾಗಲಿ ಎಂದು ಶಪಿಸಿಬಿಟ್ಟರು. ಇದರಿಂದಾಗಿ ಸತತ ಏಳು ದಿನಗಳ ಕಾಲ ಧೂಳು ಮಣ್ಣಿನ ಸುರಿಮಳೆಗೆ ಸಿಲುಕಿ ದಂಡಕ ಅವನ ಪರಿಹಾರ ಆದಿಯಾಗಿ ಸಂಪೂರ್ಣ ಮುಚ್ಚಿ ಹೋಗಿ ಅಲ್ಲೆಲ್ಲಾ ಬರೀ ಧೂಳಿನ ಪರ್ವತ ಉಳಿಯಿತು.
ಕಾಲಕ್ರಮೇಣ ಅದರ ಮೇಲೆ ಮಳೆ ಸುರಿದು ಮತ್ತೆ ಭೂಮಿ ಚಿಗುರಿತು. ಕಾಡು ಮೆಲ್ಲನೆ ಉಸಿರಾಡತೊಡಗಿತು. ಸಾಕಷ್ಟು ವರ್ಷಗಳೂ ಉರುಳಿ ಹೋದವು. ಶತಮಾನಗಳು ಕಳೆದರೂ ಶುಕ್ರಾಚಾರ್ಯರ ಭಯದಿಂದಾಗಿ ಯಾರೊಬ್ಬರೂ ಅಲ್ಲಿಗೆ ಕಾಲಿಡುವ ಧೈರ್ಯ ಮಾಡಲಿಲ್ಲ. ಅಲ್ಲಿಗೆ ಅದೊಂದು ಅತ್ಯಂತ ದಟ್ಟವಾದ, ಭಯಾನಕ ಕಾಡಾಗಿ ಬೆಳೆಯಿತು. ದಂಡಕನಿಂದಾಗಿ ಬೆಳೆದ ಅರಣ್ಯ ಕಾಲಾನಂತರದಲ್ಲಿ ದಂಡಕಾರಣ್ಯ ಎಂದು ಪ್ರಚಲಿತಕ್ಕೆ ಬಂದಿತು.
= ಸಂತೋಷಕುಮಾರ ಮೆಹೆಂದಳೆ