1 ಆತ್ಮವಂಚನೆ
ಒಂದು ನಿಟ್ಟುಸಿರಿಗೆ ಬೆಲೆ ಕಟ್ಟಲು ಹೊರಟವರು ಬದುಕಿನ ಸಂತೆಯಲ್ಲಿ ಒಳಗೊಳಗೇ ನಗುವ ಸುಖವನ್ನೂ ಬಿಕರಿಗಿಟ್ಟಿದ್ದಾರೆ.
2 ಇತಿಹಾಸ
ಹಳೆಯ ದಾರಿಗಳಲ್ಲಿ ನನಗಷ್ಟೇ ಕೇಳುತ್ತಿದ್ದ ಮಾತುಗಳಿದ್ದವು. ನನಗಷ್ಟೇ ಕಾಣುತ್ತಿದ್ದ ಕೌತುಕಗಳಿದ್ದವು. ನನ್ನ ಕಂಡರಷ್ಟೇ ನಗುತ್ತಿದ್ದ ಅವರ ನೋವುಗಳಿದ್ದವು.
3 ಅವಳು
ಅವಳ ನಗು ಪಕ್ಕದ ಬೀದಿಯಲ್ಲಿದೆ. ಅವಳ ಹೆಜ್ಜೆ ಗುರುತು ಮುಂದಿನ ತಿರುವಿನಲ್ಲಿದೆ. ಅವಳ ಅಳು ಸುರಿಯುತ್ತಿರುವ ಮಳೆಹನಿಯಲ್ಲಿದೆ. ಅವಳ ಕನಸು ಮುಖದ ಮೇಲೆ ಬೀಳುತ್ತಿರುವ ನೀರ ಹನಿಯ ತಂಪಿನಲ್ಲಿದೆ. ಅವಳು ಮಾತ್ರ ನನ್ನೊಳಗಿದ್ದಾಳೆ.
5 ಚಿಂತೆ
ನಾಳೆಯ ನೋವಿಗೆ ಇಂದೇ ಮುಲಾಮು ತಿಕ್ಕಿಕೊಂಡ ಮನಸ್ಸು ಈ ಕ್ಷಣದಿಂದಲೇ ರೋಗಗ್ರಸ್ತವಾಗಿದೆ.
6 ವಿಪರ್ಯಾಸ
ಹಸಿವಿಗೆ ಬಹಿಷ್ಕಾರ ಹಾಕಿದ ಊರಲ್ಲಿ ಉಣ್ಣಲಾಗದ ನೋವು ತಾಂಡವಾಡುತ್ತಿದೆ
7 ಮಳೆ
ಕಾರಿನ ಚಕ್ರಕ್ಕೆ ಸಿಲುಕಿ ನಜ್ಜುಗುಜ್ಜಾಗಿ ಜೀವ ತ್ಯಜಿಸಿದ ಅಳಿಲಿನ ಶವಸಂಸ್ಕಾರ ನಡೆಯುತ್ತಿದೆ.
= ಎಚ್. ಕೆ. ಶರತ್