ಸಂಜೆ
ಸುಡುವ ಅಪರಾಹ್ನಕ್ಕೆ ಬೆನ್ನುಡಿ
ಮಂಜಿನ ಮುಂಜಾನೆಗೆ ಮುನ್ನುಡಿ
ನಕ್ಷತ್ರ
ಇರುಳ ಜಡೆಗೆ ಮುಡಿಸಿದ
ಮಲ್ಲಿಗೆಯೆಸಳು
ಚಂದ್ರ
ಹೊಳೆವ,
ಹತ್ತಿರ ಹೋದರೆ
ಅಳುವ
ಏಕಾಂಗಿ
ಸೂರ್ಯ
ಎರಡು ಮನೆಗೆ
ಬೆಳಕ ತರುವ
ಇಬ್ಬರ ಹೆಂಡಿರ
ಮುದ್ದಿನ ಗಂಡ
ಪ್ರಕೃತಿ
ಸರ್ವಾಧಿಕಾರಿಯಾದರೂ
ತಣ್ಣಗೆ ಗಾಳಿ ಬೀಸುವ
ನಿರಹಂಕಾರಿ
ಕಾಮನಬಿಲ್ಲು
ಇಳೆ ಮಳೆಯ ಕಾಮದಾಟದಲ್ಲಿ
ಮೂಡಿದ ಬಣ್ಣ ಬಣ್ಣದ ಚಿತ್ತಾರ
ಮೋಡ
ಸೂರ್ಯ ಹೊಂಡಕ್ಕೆ ಇಳುಗಿ
ಮೈಮರೆತು ಈಜಿ
ಸುಖಿಸಿದಾಗ
ಕಟ್ಟಿದ ನೀರ ಹೆರುವ ಗರ್ಭ
ಮಿಂಚುಹುಳ
ಕತ್ತಲನ್ನು ಸೀಳುವ
ಛಲಗಾರ
ಹಣತೆ
ನನ್ನಿರುವಿಕೆಯನ್ನು
ನಿನಗೆ ತೋರಿಸಿ
ನನಗೊಂದು
ಮಿತಿ ಹಾಕಿಕೊಟ್ಟ
ನಿಯಂತ್ರಕ
= ಮೋಹನ್ ವಿ. ಕೊಳ್ಳೆಗಾಲ