ನೆಲದ ಮೇಲೆ ನೀಲಿ ತುಣುಕು
ಬತಾಲ್‌ನಿಂದ ಚಂದ್ರತಾಲ್‌ಗೆ ಹೋಗುವ ಹಾದಿಯಲ್ಲಿ ನಾವೀಗ ಸಾಗಿದ್ದೆವು. ಅದಂತೂ ಥೇಟ್ ಮಂಗಳನ ಅಂಗಳದಿಂದ ಎತ್ತಿ ಹಿಮಾಲಯಕ್ಕೆ ಒಗೆದ ಒಂದು ತುಣುಕಿನಂತೇ ಇತ್ತು. ಮಾರ್ಗದ ತುಂಬಾ ಕಲ್ಲುಗಳು, ಹಳ್ಳ ದಿಣ್ಣೆಗಳು, ಗುಂಡಿ ಗೊಟರುಗಳು... ಜೀಪು ಎತ್ತಿ ಎತ್ತಿ ಕುಲುಕುತ್ತಿತ್ತು. ಮೈಕೈ ಹಣ್ಣು. ಬತಾಲ್‌ನಿಂದ ಚಂದ್ರತಾಲ್‌ಗೆ 13 ಕಿಲೋಮೀಟರ್. ತೆಗೆದುಕೊಂಡ ಅವಧಿ ಎರಡು ಗಂಟೆ.
ಸರೋವರ ಹತ್ತಿರವಾಗುತ್ತಲೂ ವಾತಾವರಣ ಏಕ್‌ದಂ ತಣ್ಣಗಾಗತೊಡಗಿತು. ಬೆಟ್ಟಗಳ ಮಧ್ಯದ ಬಯಲಿನಲ್ಲಿ ಹತ್ತಾರು ಕ್ಯಾಂಪ್ ಹಾಕಿದ್ದರು. ಸಾಲಾಗಿದ್ದ ಬಿಡಾರಗಳಲ್ಲಿ ಎರಡು ನಮಗೆ. ಅದರಲ್ಲಿ ನಮ್ಮ ಲಗ್ಗೇಜನ್ನಿಟ್ಟು ಕೊಳದ ತಡಿಗೆ ಧಾವಿಸಿದೆವು. ತಶಿ ನಮ್ಮನ್ನು ಗುಡ್ಡ ಹತ್ತಿಸಿದ, ಗುಡ್ಡ ಇಳಿಸಿದ. ತೇಕುತ್ತ ತೇಕುತ್ತಲೇ ಜರ್ರನೆ ಇಳಿಯುತ್ತಿದ್ದ ನಾಲ್ಕೂ ಜನರ ಕಾಲಿಗೆ, ಸರೋವರವನ್ನು ಕಂಡದ್ದೇ ಥಟ್ಟನೆ ಬ್ರೇಕ್ ಬಿತ್ತು.
ಸರೋವರದ ಚೆಲುವಿನ ಬಗ್ಗೆ ತಶಿ ನಮಗೆ ಸಾಕಷ್ಟು ಸಲ ಹೇಳಿದ್ದ; ಹೊರಡುವ ಮುನ್ನ ಇಂಟರ್‌ನೆಟ್ ಕೂಡ ನಮ್ಮ ಜೋಳಿಗೆಗೆ ಬೇಕಾದಷ್ಟು ಮಾಹಿತಿಯನ್ನೂ ಬಿಂಬಗಳನ್ನೂ ಕೊಟ್ಟಿತ್ತು. ಆದರೆ ಈಗ ನಮ್ಮ ಕಣ್ಣ ಮುಂದೆ ಕಾಣಿಸಿದ್ದು ಮಾತ್ರ ಅದ್ಯಾವುದೂ ಆಗಿರಲಿಲ್ಲ. ಅದು ನೆಲದ ಮೇಲೆ ಕತ್ತರಿಸಿಬಿದ್ದ ನೀಲನಭದ ತುಂಡು; ಮಧ್ಯದಲ್ಲೆಲ್ಲೋ ಹೂವಿನೆಸಳು ಬಿದ್ದರೂ ಸಣ್ಣ ಕಂಪನದ ಅಲೆಗಳನ್ನು ದಡದತ್ತ ಕಳಿಸುವ ಪ್ರಶಾಂತ ಸರೋವರ; ಚಂದ್ರನೂ ಚಿಕ್ಕೆಗಳೂ ತಮ್ಮ ಮುಖ ನೋಡಿಕೊಳ್ಳಬಹುದಾದ ಅಪ್ಪಟ ಶುಭ್ರ ನೀರಧಿ; ಸುತ್ತಲ ಪರ್ವತಗಳಿಗೆ ಜೀವನದ ಸ್ಪರ್ಶವನ್ನು ಕೊಟ್ಟ, ಅವುಗಳಿಂದ ನಿಶ್ಚಲ ಗಂಭೀರತೆಯನ್ನು ತಾನು ಪಡೆದುಕೊಂಡ ಜೀವಂತ ಮಿಡಿತ; ನಮ್ಮ ಮನದ ಆಳದಾಳದ ಅಧ್ಯಾತ್ಮದ ಹಸಿವನ್ನು ಇನ್ನಷ್ಟು ಸ್ಫುಟವಾಗಿ ನಮಗೇ ಕಾಣಿಸುವ ದಿವ್ಯಗಂಭೀರ ಕನ್ನಡಿ... ಏನು ಹೇಳಿದರೂ ಆ ಸರೋವರದ ಚೆಲುವಿಗೆ ಸಾಟಿಯಾಗದು.
ನಮಗೆ ಹುಚ್ಚೇ ಹಿಡಿದಿತ್ತು. ಮೊದಲ ಸಲ ನೀರು ಕಂಡವರಂತೆ ಅದರ ಹತ್ತಿರ ಓಡಿದೆವು. ಮುಟ್ಟಿದಾಗ ಮಾತ್ರ ಕರೆಂಟ್ ಸೋಕಿದಂತಾಯಿತು. ನೀರು ತಣ್ಣಗೆ ಕೊರೆಯುತ್ತಿತ್ತು. ಗಂಗಾ ತೀರ್ಥವೆಂಬಂತೆ ನೆತ್ತಿಗೆ ಪ್ರೋಕ್ಷಿಸಿಕೊಂಡೆವು. ಕುಡಿದೆವು. ಪರಸ್ಪರ ಎರಚಿಕೊಂಡೆವು. ನುಣುಪು ರಂಗೋಲಿ ಪುಡಿಯಂತೆ ಹಬ್ಬಿದ್ದ ತಡಿಯ ಮರಳಿನಲ್ಲಿ ಹೊರಳಾಡಿದೆವು. ನಾನು ಪದ್ಮಾಸನ ಹಾಕಿ, ಊರಿನಿಂದ ದೂರದ ಈ ಹಿಮಾಲಯದ ಮಡಿಲ ಚಂದ್ರಕೊಳದ ದಡದಲ್ಲಾದರೂ ನನಗೆ ಜ್ಞಾನೋದಯವಾಗುತ್ತದೋ ಎಂದು ಪರಿಶೀಲಿಸತೊಡಗಿದೆ. ಮಹೇಶ್ ಕೊಳದ ಮುಂದೆ ಜಿಗಿದು ಜಿಗಿದು ಫೋಟೋ ತೆಗೆಸಿಕೊಂಡ. ಅದು ಫೇಸ್‌ಬುಕ್‌ನಲ್ಲಿ ಹಾಕಿಕೊಳ್ಳುವುದಕ್ಕಂತೆ. ರಾಧಿಕಾ ಮತ್ತು ಪ್ರಿಯಾ ಒಳ್ಳೆಯ ಪೋಸ್ ನೀಡುವಂತೆ ಕ್ಯಾಮೆರಾ ಹಿಡಿದು ಸರೋವರಕ್ಕೆ ಬೆದರಿಕೆ ಹಾಕಲಾರಂಭಿಸಿದರು.
ಅದು ಈಗಷ್ಟೇ ಒಲಿದ ಪ್ರೇಮಿಯಂತೆ ನಾಚಿಕೊಳ್ಳುತ್ತಾ ತನ್ನ ಸ್ವರೂಪವನ್ನು ತುಸುತುಸುವೇ ತೆರೆದು ತೋರಿಸತೊಡಗಿತು. ನಾವು ಇಲ್ಲಿಗೆ ಬಂದಾಗ ಸಂಜೆ ನಾಲ್ಕು ಗಂಟೆ. ಸೂರ್ಯ ತುಸುವೇ ಪಶ್ಚಿಮದತ್ತ ವಾಲಿದ್ದ. ನೀರು ನೇರ ಆಗಸಕ್ಕೆ ಕನ್ನಡಿ ಹಿಡಿದಿತ್ತು. ಕೊಳ ನೀಲಿ ಹರಳಿನಂತೆ ಕಂಗೊಳಿಸುತ್ತಿತ್ತು. ರವಿ ಇನ್ನಷ್ಟು ಪಶ್ಚಿಮಕ್ಕೆ ಸರಿದ. ಈಗ ಸುತ್ತಲಿನ ಪರ್ವತಗಳು ಕೊಳಕ್ಕಿಳಿದಂತೆ... ಸರೋವರ ಹಸಿರಿಗೆ ತಿರುಗತೊಡಗಿತು. ಕ್ಷಣದಲ್ಲಿ ಸಂಪೂರ್ಣ ಹಸಿರಾಯ್ತು. ತದನಂತರ ನಿಧಾನವಾಗಿ ನೇರಳೆಬಣ್ಣಕ್ಕೆ... ದಟ್ಟ ನೇರಳೆ ಬಣ್ಣ ದಡದಿಂದ ದಡಕ್ಕೆ ವ್ಯಾಪಿಸಿತು. ಅಲ್ಲಿಗೇ ನಿಲ್ಲಲಿಲ್ಲ. ನೇರಳೆ ನಿಧಾನವಾಗಿ ಕಂದುಬಣ್ಣಕ್ಕೆ ತಿರುಗತೊಡಗಿತು. ತುಸುಹೊತ್ತಿನಲ್ಲಿ ಸಂಪೂರ್ಣ ಕಂದುಮಯವಾಯ್ತು.
ಚಂದ್ರತಾಲ್ ಬಣ್ಣ ಬದಲಿಸುತ್ತದೆ ಎಂದು ತಶಿ ಹೇಳಿದ್ದನ್ನು ನಾವು ನಂಬಿರಲಿಲ್ಲ. ಈಗ ನಂಬಲೇಬೇಕಾಯ್ತು. ಸರೋವರದ ಊಸರವಳ್ಳಿ ಗುಣಕ್ಕೆ ಕಾರಣ ಏನೆಂಬುದು ಅರ್ಥವಾಗಲಿಲ್ಲ. ಅದನ್ನೇ ಚಿಂತಿಸುತ್ತಾ ನಾವು ಕೊಳದ ದಡದಲ್ಲಿ ಉದ್ದಕ್ಕೆ ನಡೆದೆವು. ಒಂದು ಕಡೆ ಹಸಿರು ಹುಲ್ಲು, ಹೂವುಗಳು ಬೆಳೆದಿದ್ದವು. ಅವುಗಳ ಮಧ್ಯೆ ಕಾಲ್ದಾರಿ. ನಡೆಯುತ್ತಾ ನಡೆಯುತ್ತಾ ಕತ್ತಲಾವರಿಸತೊಡಗಿತು. ತಶಿ ಮಾಯವಾಗಿದ್ದ. ಇನ್ನೂ ಮುಂದೆ ಹೋದರೆ ಹಿಂದಿರುಗಲು ಸಾಧ್ಯವಾಗದೇನೋ ಎಂಬ ಆತಂಕ. 'ನಾಳೆ ಮುಂಜಾನೆ ಬೇಗನೆ ಎದ್ದು ಬರೋಣ' ಎಂದು ತೀರ್ಮಾನಿಸಿ ಬಂದ ದಾರಿಯಲ್ಲೇ ಹಿಂದೆ ಹೆಜ್ಜೆ ಹಾಕತೊಡಗಿದೆವು.
ಇದ್ದಕ್ಕಿದ್ದಂತೆ, ಕೊಳದಲ್ಲಿ ನೀರು ಕುಡಿಯುತ್ತಿದ್ದ ಕಾಡುನಾಯಿಯನ್ನು ಹೋಲುವ ಆಕೃತಿಯೊಂದು ನಮ್ಮ ಮುಂದಿನ ದಾರಿಯನ್ನು ದಾಟಿಕೊಂಡು ಬೆಟ್ಟದ ಮೇಲೆ ಓಡಿ ಅದೃಶ್ಯವಾಯಿತು.
-ಹರೀಶ್ ಕೇರ
harishkera@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.