ಹಕ್ಕಿಗಳಿಗಾಗಿ ಕಾದಿದ್ದಾನೆ
ತನ್ನ ಮನೆಯ ಅಂಗಳಕ್ಕೆ ಬರುವ ಹಕ್ಕಿಗಳನ್ನು ಹುಡುಗ ನೋಡಿ ನೋಡಿ ಆನಂದಿಸುತ್ತಿದ್ದ. ಒಳಗಿನಿಂದ ಕಾಳುಗಳನ್ನು ತಂದು ಚೆಲ್ಲುತ್ತಿದ್ದ. ಕಾಳಿಗಾಗಿ ಬಂದ ಹಕ್ಕಿಗಳು ದಿನವೂ ಹುಡುಗನ ಸಂತೋಷವನ್ನು ಕಾಳು ಆರಿಸುತ್ತ ಆರಿಸುತ್ತ ಅಳೆಯುತ್ತಿದ್ದವು.
ಹೀಗೆ ಹುಡುಗ ಹಕ್ಕಿಗಳಿಗಾಗಿ, ಹಕ್ಕಿಗಳು ಕಾಳುಗಳ ಮೂಲಕ ಹುಡುಗನಿಗಾಗಿ ಕಾಯುತ್ತಿದ್ದವು. ಕಾದು ಕಾಳು ಕುಕ್ಕುತ್ತಿದ್ದವು.
ಒಂದು ದಿನ ಹುಡುಗ ಬೆಳಗ್ಗೆ ಕಾಳು ಹಿಡಿದು ಅಂಗಳಕೆ ಬಂದಾಗ ಹಕ್ಕಿಗಳ ಬದಲು ಒಬ್ಬ ಭಿಕ್ಷುಕ ಬಂದಿದ್ದ. ಅಂಗಳದಲ್ಲಿ ಹರಡಿಕೊಂಡು ಹುಡುಗನಿಗೆ ಮತ್ತು ಹಕ್ಕಿಗಳಿಗೆ ಮಾತ್ರ ಕಾಣಬಹುದಾಗಿದ್ದ ಕಾಳುಗಳು ಭಿಕ್ಷುಕನ ಜೋಳಿಗೆ ಸೇರಿದವು. ಜೋಳಿಗೆಗೆ ಕಾಳುಗಳನ್ನು ಸುರಿದ ಹುಡುಗ ಹಕ್ಕಿಗಳಿಗಾಗಿ ಕಾದು ಕೂತ.
ಭಿಕ್ಷುಕನ ಜತೆ ಕೇವಲ ಹುಡುಗ ಕೊಟ್ಟ ಕಾಳುಗಳು ಮಾತ್ರ ಇರಲಿಲ್ಲ. ತಾನೇ ನೇಯ್ದ ಬಲೆಯೂ ಇತ್ತು.
ಹುಡುಗ ಪ್ರತಿನಿತ್ಯ ಅಂಗಳದಲ್ಲಿ ಕಾಳು ಚೆಲ್ಲಿ ಹಕ್ಕಿಗಳನ್ನು ಕರೆಯುವಾಗ ಆ ಭಿಕ್ಷುಕ ಬಲೆ ನೇಯುತ್ತಿದ್ದ.
ಈಗವನು ಅವೇ ಹಕ್ಕಿಗಳನ್ನು ಹಿಡಿದು ಸಂತೆಗೆ ತಂದು ಮಾರುತ್ತಿದ್ದಾನೆ.
ಹುಡುಗ ಇನ್ನೂ ಮೆಟ್ಟಿಲ ಮೇಲೆ ಕೂತು ಹಕ್ಕಿಗಳಿಗಾಗಿ ಕಾದಿದ್ದಾನೆ.
-ಸಿ.ವಿ.ಶೇಷಾದ್ರಿ ಹೊಳವನಹಳ್ಳಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.