ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಕಣ್ಣೀರಾದ ಖಾನ್! ಭೈರವಿ ಸ್ವರದ ಸಂತ

Lingaraj Badiger
Updated On : 13 Apr 2013, 4:16 am

ಆಳ ಹಾಗೂ ವಿಶಾಲ- ಪಂಡಿತಾ ಕಿಶೋರಿ ಆಮುನ್ಕರ್ ತಮ್ಮ ಒಂದು ಲೇಖನದಲ್ಲಿ ಸಂಗೀತದಲ್ಲಿ ಬೆಳವಣಿಗೆಯ ಬಗ್ಗೆ ಹೀಗೊಂದು ಸುಂದರವಾದ ಚಿಂತನೆಯನ್ನೊದಗಿಸುತ್ತಾರೆ. ಸಂಗೀತವನ್ನು ಕೂಡ ಎರಡು ವಿಧವಾಗಿ ಬೆಳೆಸುತ್ತ ಭವ್ಯತೆಯತ್ತ ಸಾಗಬಹುದು. ಒಂದು ವಿಶಾಲ (ಹೊರಿಜೊಂಟಲ್), ಇನ್ನೊಂದು ಆಳ(ವರ್ಟಿಕಲ್). ವಿವಿಧ ಘರಾನೆಗಳು, ಸಾವಿರಾರು ಬಂದಿಶ್‌ಗಳು, ಹೊಸ ಹೊಸ ರಾಗಗಳು, ಸಂಗೀತದ ಪ್ರಕಾರಗಳು, ಅನೇಕ ಶೈಲಿಗಳು- ಹೀಗೆ ಬೆಳೆಸುತ್ತ ಬೆಳೆಸುತ್ತ ಎಣೆಯಿಲ್ಲದೆ ವಿಶಾಲವಾಗಬಹುದು ಅಥವಾ ಕೆಲವೇ ರಾಗಗಳನ್ನು ಆಯ್ದುಕೊಂಡು ಆಳವಾಗಿ ಇಳಿಯುತ್ತ, ಅಪಾರವಾದ ಮೆಹೆನತ್‌ನಿಂದ, ಹೊಸ ಹೊಸ ಅನುಭವ ಪಡೆಯುತ್ತ, ರಾಗಗಳನ್ನು ಶ್ರೀಮಂತಗೊಳಿಸುತ್ತ, ಸಕ್ಷಾತ್ಕಾರದೆಡೆಗೆ ಎಣೆಯಿಲ್ಲದಷ್ಟು ಸಾಗಬಹುದು. ಹೀಗೆ ಆಳಕ್ಕಿಳಿದು ಎಷ್ಟೋ ಕಲಾವಿದರು ಆಯಾ ರಾಗಗಳೊಂದಿಗೇ ತಮ್ಮನ್ನು ಗುರುತಿಸಿಕೊಂಡಿದ್ದೂ ಇದೆ. ಎರಡೂ ಅನಂತವೇ! ಎರಡರಲ್ಲೂ ಸಾಧಕ ತಲುಪುವುದು ಸಂಗೀತದ ಅಗಾಧತೆಯನ್ನೇ!
ಆಳಕ್ಕಿಳಿಯುತ್ತ ಬೆಳೆದು ಅಜರಾಮರರಾದ ಅನೇಕ ಮಹನೀಯರಲ್ಲಿ ಉಸ್ತಾದ್ ಮೊಯಿಜುದ್ದೀನ್ ಖಾನ್ ಅವರ ಒಂದು ಘಟನೆ ಉಲ್ಲೇಖನೀಯ. ಉತ್ತಮ ಠುಮ್ರಿ ಹಾಗೂ ಖಯಾಲ್ ಗಾಯಕರಾಗಿದ್ದ ಇವರ ವಿಶೇಷತೆ ಎಂದರೆ, 'ರಾಗ ಭೈರವಿ'. ಇವರಂತೆ ಯಾರೂ ಅದನ್ನು ಹಾಡಿಲ್ಲ- ಹಾಡುವುದೂ ಇಲ್ಲ ಎಂಬಷ್ಟು ಆ ಒಂದು ರಾಗದಲ್ಲಿ ಇಳಿದು ಬೆಳೆದವರಿವರು. ಕೇವಲ ಭೈರವೀ ಒಂದನ್ನು ಹಾಡಲೆಂದೇ ಮೊಯಿಜುದ್ದೀನ್ ಖಾನ್ ಅವರನ್ನು ಕರೆಸುತ್ತಿದ್ದರಂತೆ!
ಜಮಖಂಡಿಯಲ್ಲಿ ಒಮ್ಮೆ ಗಣೇಶ ಹಬ್ಬದ ಪ್ರಯುಕ್ತ ದೊಡ್ಡ ಸಂಗೀತ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ಜಮಖಂಡಿ ಸಂಸ್ಥಾನಿಕರು ಸ್ವತಃ ಉತ್ತಮ ಕಲಾಪ್ರೇಮಿಗಳು, ಕಲಾಪೋಷಕರೂ ಆಗಿದ್ದರಿಂದ ದೇಶದ ವಿವಿಧ ಭಾಗಗಳಿಂದ ಆಗಿನ ಕಾಲದ ಮಹಾನ್ ಮಹಾನ್ ಸಂಗೀತ ದಿಗ್ಗಜರನ್ನೆಲ್ಲ ಆಹ್ವಾನಿಸಲಾಗಿತ್ತು. ಉಸ್ತಾದ್ ಅಲ್ಲಾದಿಯ ಖಾನ್, ಉಸ್ತಾದ್ ಅಬ್ದುಲ್ ಕರೀಮ್ ಖಾನ್, ಪಂಡಿತ್ ಸವಾಯಿ ಗಂಧರ್ವ, ಪಂಡಿತ್ ಗುರುರಾವ್ ದೇಶಪಾಂಡೆ... ಹೀಗೆ ಇನ್ನೂ ಅನೇಕ ಕಲಾವಿದರಿಂದ ಸತತ ಒಂದು ವಾರಗಳ ಕಾಲ ಅದ್ಭುತ ಸಂಗೀತದ ಅನಾವರಣ. ಒಬ್ಬೊಬ್ಬರೂ ಶಾಸ್ತ್ರೀಯ ಸಂಗೀತದ ಘಟಾನುಘಟಿಗಳು. ಪ್ರತಿಯೊಬ್ಬರು ಹಾಡುವಾಗಲೂ ಅವರವರ ವಿದ್ವತ್ತು, ವಿಚಾರ, ವಿಶೇಷತೆಗಳಿಂದ ಒಂದೊಂದು ಲೋಕವನ್ನೇ ಸೃಷ್ಟಿಸುತ್ತಿದ್ದರು. ರಸಿಕರೆಲ್ಲ ಗಂಧರ್ವ ಲೋಕದಲ್ಲಿ ವಿಹರಿಸುತ್ತ ಕಾರ್ಯಕ್ರಮದ ಕೊನೆಯ ಭಾಗಕ್ಕೆ ಬಂದಿದ್ದರು. ಕೊನೆಯಲ್ಲಿ ರಾಗ ಭೈರವಿಯನ್ನು ಹಾಡಲು ಉಸ್ತಾದ್ ಮೊಯಿಜುದ್ದೀನ್ ಖಾನ್ ಅವರನ್ನು ಆಹ್ವಾನಿಸಲಾಗಿತ್ತು. (ಭೈರವಿ ರಾಗವನ್ನು ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಕೊನೆಯಲ್ಲಿ ಹಾಡಲಾಗುತ್ತದೆ). ಎಲ್ಲ ಮಹಾನ್ ದಿಗ್ಗಜರೂ ಹಾಡಿ ಮುಗಿದಿದ್ದರಿಂದ ಎಲ್ಲರಲ್ಲೂ ಒಂದು ವಿಧವಾದ ಕಾರ್ಯಕ್ರಮದ ಮುಕ್ತಾಯದ ಭಾವ ಮೂಡಿತ್ತು.ಅಲ್ಲಿಯವರೆಗೂ ಭಾಗವಹಿಸಿದ್ದ ಕಲಾವಿದರೆಲ್ಲ ಮುಂದಿನ ಸಾಲಿನಲ್ಲಿ ಕುಳಿತಿದ್ದರು! ಹಿಂದೆಲ್ಲ ಸಂಗೀತ ರಸಿಕರು. ಉಸ್ತಾದ್ ಮೊಯಿಜುದ್ದೀನ್ ಖಾನ್ ವೇದಿಕೆಯನ್ನೇರಿ ಭೈರವಿ ರಾಗವನ್ನು ಹಾಡಲಾರಂಭಿಸಿದರು. ಅವರು ಆ ಭೈರವಿ ರಾಗದಲ್ಲಿ ಎಷ್ಟು ಆಳಕಿಳಿದಿದ್ದರೆಂದರೆ ಅವರು ಹಾಡಲು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ, ಆ ಮಾಧುರ್ಯ- ಭಾವ ತೀವ್ರತೆಗೆ, ಮುಂದೆ ಕುಳಿತಿದ್ದ ಎಲ್ಲ ಕಲಾವಿದರನ್ನೂ ಸೇರಿಸಿ ಇಡೀ ಸಭಾಂಗಣದಲ್ಲಿ ಪ್ರತಿಯೊಬ್ಬರ ಕಣ್ಣಲ್ಲೂ ಧಾರಾಕಾರ ನೀರು! ಅವರ ಭೈರವಿ ಸ್ವರಗಳಿಂದ ಹೊರಟ ಆ ಭಾವತೀವ್ರತೆಯಿಂದ ಯಾರೂ ತಪ್ಪಿಸಿಕೊಳ್ಳಲಾಗಲಿಲ್ಲ! ತಮ್ಮ 'ಸ್ವರ ಭೈರವಿ' ಅವರ ಹೃದಯ ಕರಗಿಸಿದ್ದನ್ನು ನೋಡಿ ಉಸ್ತಾದ್ ಮೊಯಿಜುದ್ದೀನ್ ಖಾನ್ ಒಂದು ಕ್ಷಣ ತಡೆದು ಹೇಳಿದರಂತೆ- 'ನೀವು ಈಗ ಕಣ್ಣೀರು ಹಾಕಿದ್ದನ್ನು ನೋಡಿ ನನಗೇನೂ ಅನ್ನಿಸುವುದಿಲ್ಲ! ಯಾಕೆಂದರೆ ನಾನು ನನ್ನ ಜೀವಮಾನವಿಡೀ ಪ್ರತೀಕ್ಷಣ ಇದಕ್ಕಾಗಿ ಕಣೀರು ಸುರಿಸಿದ್ದೇನೆ'!
ಹೀಗೆ ಆಳಕ್ಕಿಳಿದವರಂತೆಯೇ ಪ್ರತೀಕ್ಷಣ ವಿಶಾಲವಾಗುತ್ತ ಆಗುತ್ತ ಸಂಗೀತಕ್ಕೆ ಹೊಸ ಹೊಸ ಆಯಾಮವನ್ನೇ ಬರೆದ ಕಲಾವಿದರೆಷ್ಟೋ...
ಅದೂ- ಇದೂ- ದೂರವೂ- ಹತ್ತಿರವೂ- ಅಣುವೂ- ಮಹತ್ತೂ ಎಲ್ಲವೂ ನೀನೇ ಎಂದು ವಿಶಾಲವಾಗುತ್ತ ಸಾಗಿದರೂ ಅರಿವಾಗುವುದು ಭಗವಂತನೇ; ಅದೂ ನೀನಲ್ಲ- ಇದೂ ಅಲ್ಲ- ಒಳಗಲ್ಲ- ಹೊರಗಲ್ಲ- ಅಲ್ಲ- ಅಲ್ಲ ಎಂದು ಮನವನ್ನು ಬಗೆಯುತ್ತ ಒಳಕ್ಕಿಳಿದರೂ ಅರಿವಾಗುವುದು ಭಗವಂತನೇ! ಸಪ್ರಪಂಚವಾದವೋ ಅಥವಾ ನಿಷ್ಪ್ರಪಂಚದ ದಾರಿಯೋ? ಆದರೆ ಕೊನೆ ಮಾತ್ರ ಅವನೇ!

-ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments