ಕತ್ತಲಲ್ಲಿ ಹೊಳೆದ ಕಣ್ಣುಗಳು
ಸಂಜೆ ಬೆಳಕಿನಲ್ಲಿ ಹೊಳೆದು ಮಾಯವಾದ ಆ ಪ್ರಾಣಿ ನಾಯಿ ಎಂಬುದರಲ್ಲಿ ಯಾರಿಗೂ ಸಂದೇಹವಿರಲಿಲ್ಲ. ಸರೋವರದ ಪಕ್ಕದಲ್ಲೇ ದೂರದಲ್ಲಿ ಒಂದು ಕಡೆ ಹಿಂಡು ಕುರಿಗಳನ್ನು ಮೇಯಿಸುತ್ತ ಒಬ್ಬ ಮುದುಕನಿದ್ದ. ಆತ ಕರೆತಂದ ನಾಯಿಯಾಗಿರಬಹುದೆಂದು ಊಹಿಸಿದೆವು. ಆದರೆ ವಾಸ್ತವ ಅದಾಗಿರಲಿಲ್ಲ. ಕೊಳದ ತಡಿಯಲ್ಲೇ ಫಲಕ ನೆಟ್ಟಿದ್ದರು: 'ಇದು ಬತಾಲ್ ಸಂರಕ್ಷಿತಾರಣ್ಯ ಪ್ರದೇಶ. ಇಲ್ಲಿ ಕಾಡುನಾಯಿ, ಭರಾಲ್, ಐಬೆಕ್ಸ್, ಬೆಟ್ಟಕರಡಿ, ಹಿಮಚಿರತೆ ಓಡಾಡುತ್ತವೆ...' ಜತೆಗೆ ಅವುಗಳ ಚಿತ್ರಗಳಿದ್ದವು.
ನಾವು ನೋಡಿದ ನಾಯಿ ಆ ಫಲಕದ ಚಿತ್ರದಲ್ಲಿ ನಗುತ್ತಿತ್ತು. ಬಾಯಾರಿಕೆ ಕಳೆಯಲು ಬಂದಿದ್ದ ಈ ಸ್ಥಳದ ಸಹಜ ನಿವಾಸಿಯಾಗಿದ್ದ ಅದಕ್ಕೆ ಪರದೇಶಿಗಳಾದ ನಾವು ಕಿರಿಕಿರಿ ಮಾಡಿದ್ದೆವು. ಇನ್ನೂ ಕೊಂಚ ಹೊತ್ತು ಇಲ್ಲಿದ್ದರೆ ಇನ್ಯಾವುದಾದರೂ ಪ್ರಾಣಿ ಕಾಣಿಸಬಹುದಾ ಎಂಬ ಆಶೆ ಮನದಲ್ಲಿ. 'ರಾತ್ರಿ ಇಲ್ಲೆಲ್ಲ ಹಿಮಚಿರತೆ ಓಡಾಡುತ್ತದೆ ಸಾರ್' ತಶಿ ಹೇಳಿದ್ದು ನೆನಪಿನಲ್ಲಿತ್ತು. ಆದರೆ ಬಂದ ದಾರಿಯೂ ಕಾಣಿಸದಂತೆ ಕತ್ತಲೆ ಕವಿಯುತ್ತಿತ್ತು. ಹಿಂದಿರುಗಿದೆವು.
ಬೆಟ್ಟವೇರಿ ಬೆಟ್ಟವಿಳಿದು ಕ್ಯಾಂಪ್ ಏರಿಯಾಕ್ಕೆ ಬಂದಾಗ ಗಂಟೆ ಏಳು. ಚಳಿ ನಡುಗಿಸತೊಡಗಿತ್ತು. ನಿಮಿಷ ನಿಮಿಷಕ್ಕೂ ನಡುಕ ಏರತೊಡಗಿತು. ಸೂರ್ಯ ಕಂತಿದ. ಬೆಟ್ಟಗಳು ಗಾಢ ಮೌನವನ್ನೂ ದಟ್ಟ ಕತ್ತಲೆಯನ್ನೂ ಹೊದ್ದು ಇದ್ದೂ ಇಲ್ಲದಂತೆ ನಮ್ಮನ್ನು ಸುತ್ತುವರಿದಿದ್ದವು. ನಾಲ್ಕೂ ಕಡೆಗೆ ಕೋಲು ಕೊಟ್ಟು ನಿಲ್ಲಿಸಿದ ಹತ್ತಾರು ಪ್ಲಾಸ್ಟಿಕ್ ಡೇರೆಗಳು. ನಮ್ಮ ಡೇರೆ ಹೊಕ್ಕು ಅಂಗಿ ಮೇಲೊಂದಂಗಿ, ಅದರ ಮೇಲೊಂದಂಗಿ, ಅದರ ಮೇಲೆ ಜರ್ಕಿನ್ನು, ಮೇಲೆ ಕ್ಯಾಂಪಿಗರು ಕೊಟ್ಟ ಬೆಡ್ಶೀಟ್ ಹೊದ್ದು ನಡುಗುತ್ತಾ ಕೂತೆವು. ಕ್ಯಾಂಪಿನ ಬಾಣಸಿಗ, ನಮ್ಮ ಡೇರೆಗೇ ಬಿಸಿಬಿಸಿ ಸೂಪ್ ತಂದುಕೊಟ್ಟ. ಅಟಕಾಯಿಸಿದ ಚಳಿಯ ನಡುವೆ ಬಿಸಿ ಸೂಪ್ ಹೀರುವಂಥಾ ಆನಂದಮಯ ಅನುಭವ ಬೇರೊಂದು ಇರಲು ಸಾಧ್ಯವಿಲ್ಲ.
ಎಂಟು ಗಂಟೆಯಾಯ್ತು. ಡೈನಿಂಗ್ಹಾಲ್ ಎಂಬ ಹೆಸರಿನ ಇನ್ನೊಂದು ಡೇರೆಗೆ ಬರಲು ಬುಲಾವ್ ಬಂತು. ಅಲ್ಲಿ ಊಟ. ಆದೂ ದಾರಿಬದಿಯ ಧಾಬಾಗಳ ಊಟದ್ದೇ ಇನ್ನೊಂದು ಆವೃತ್ತಿ. ಬೇಯದ ಅನ್ನ, ರುಚಿರುಚಿ ರೋಟಿ, ಸಬ್ಜಿ, ಆಚಾರ್, ಬಿಸಿಬಿಸಿ ಪಾಯಸ. ಕೈ ತೊಳೆಯಲು ಹೋದಾಗ ಮಾತ್ರ, ಯಾಕಾದರೂ ಊಟ ಮಾಡಿದೆವೋ ಅನಿಸಿಬಿಟ್ಟಿತು. ಬೆಟ್ಟದಿಂದ ಹರಿದುಬರುವ ಝರಿಯ ನೀರದು. ಮುಟ್ಟಿದ ಕೂಡಲೇ ಕೈ ಫ್ರೀಝ್!
ಹು ಹು ಹು ಎಂದು ನಡುಗುತ್ತಾ ಶಿಬಿರದತ್ತ ಓಡಿದೆವು. ಆಕಾಶ ನಿಚ್ಚಳವಾಗಿತ್ತು. ತಾರೆಗಳು ಈಗ ಕೈಗೆ ಸಿಗುತ್ತವೋ ಎಂಬಷ್ಟು ಹತ್ತಿರದಲ್ಲಿ ಹೊಳೆಯುತ್ತಿದ್ದವು. ಚಂದ್ರ ಅದ್ಯಾವುದೋ ಪರ್ವತದ ತುದಿಯಿಂದ ಮೆಲ್ಲನೆ ಇಣುಕುತ್ತಿದ್ದ. ಅದು ಕೃಷ್ಣಪಕ್ಷದ, ಯಾರೋ ಅರ್ಧ ತಿಂದು ಬಿಟ್ಟ ಇಡ್ಲಿಯ ಚೂರಿನಂಥ ಚಂದ್ರ. ಸರೋವರದ ಕಡೆಯಿಂದ ಯಾವುದೇ ಸದ್ದಿಲ್ಲ. ಅದು ಯಾವುದರ ಮುನ್ನಿನ ನಿಶ್ಶಬ್ದ? ಗಾಳಿಯೂ ಬೀಸದಿದ್ದರೂ ಅಸಹನೀಯ ಥಂಡಿ. ಆಕಾಶ ಮೇಲಿನಿಂದ ಒಂದೇ ಸಮನೆ ಥಂಡಿಯನ್ನು ಸುರಿಯುತ್ತಿದೆಯೊ? ಒಳಗೆ ಸ್ಲೀಪಿಂಗ್ ಬ್ಯಾಗ್ಗಳನ್ನು ಆಕ್ರಮಿಸಿಕೊಂಡೆವು.
ಪಕ್ಕದ ಕ್ಯಾಂಪ್ನಿಂದ ರಾಧಿಕಾ ಮತ್ತು ಮಹೇಶ ಗುಸುಗುಸು ಮಾತನಾಡುವುದು ಕೇಳುತ್ತಿತ್ತು. ಅದು ಬಿಟ್ಟರೆ ಬೇರೆ ಕ್ಯಾಂಪ್ಗಳಿಂದ ಯಾವುದೇ ಸದ್ದಿಲ್ಲ. ಎಲ್ಲರೂ ಆಗಲೇ ನಿದ್ರಾವಶರಾಗಿದ್ದಾರೋ? ಇದ್ದಕ್ಕಿದ್ದಂತೆ ಧಡಧಡನೆ ಮಹೇಶ ಓಡಿಬಂದು ಒಳಗೆ ನುಗ್ಗಿದ. ನಮಗೆ ಸ್ಲೀಪಿಂಗ್ ಬ್ಯಾಗ್ ಬಳಸುವುದು ಗೊತ್ತಿದೆಯೋ ಇಲ್ಲವೋ, ಇವರು ಯದ್ವಾತದ್ವಾ ಸಿಕ್ಕಿಸಿಕೊಂಡು ಉಸಿರುಗಟ್ಟಿ ಫಡ್ಜ ಆಗಿಬಿಟ್ಟರೆ ಎಂಬುದು ಅವನ ಕಾಳಜಿ. ಬಂದಷ್ಟೇ ಸ್ಪೀಡಾಗಿ ಮರಳಿ ಗೂಡು ಸೇರಿಕೊಂಡ.
ದಿನವಿಡೀ ಪ್ರಯಾಣಿಸಿ ಬಳಲಿದ್ದ ಪ್ರಿಯಾಗೆ ನಿದ್ರೆ ಆವರಿಸತೊಡಗಿತ್ತು. ನನಗೆ ನಿದ್ರೆ ಬರಲಿಲ್ಲ. ದಕ್ಷಿಣ ಭಾರತದ ನಾವು ಈ ಉತ್ತರದ ಹಿಮಾಲಯದ ಬೆಟ್ಟಗಳ ನಡುವೆ ಬರಿನೆಲದಲ್ಲಿ ಪ್ಲಾಸ್ಟಿಕ್ ಹಾಸಿಕೊಂಡು ಮಲಗಿರುವ ವೈಚಿತ್ರ್ಯವನ್ನೇ ಧ್ಯಾನಿಸುತ್ತಿದ್ದೆ. ಇರುಳು ಉರುಳುತ್ತಿತ್ತು. ತಾಪಮಾನ ಇನ್ನಷ್ಟು, ಮತ್ತಷ್ಟು ಇಳಿಯುತ್ತಾ ಕೆಳಗಿಳಿಯುತ್ತಾ ಹೋಯ್ತು. ಯಾವುದೋ ಒಂದು ಕ್ಷಣದಲ್ಲಿ ಅದು ತಡೆಯಲಾಗದ ಬಿಂದು ಮುಟ್ಟಿತು, ಬಹುಶಃ ಸೊನ್ನೆ ಡಿಗ್ರಿ ದಾಟಿರಬೇಕು. ಕ್ಯಾಂಪ್ ಮೇಲೆ ಹೌದೋ ಅಲ್ಲವೋ ಎಂಬಂತೆ ಹನಿಗಳು ಬೀಳುವ ಸದ್ದು. ಹಿಮ ಬೀಳುತ್ತಿದೆಯೆ? ನೋಡುವ ಹಂಬಲ ಉತ್ಕಟವಾಯ್ತು. ನಡುಗುತ್ತಾ ಎದ್ದು ಬೆಡ್ಶೀಟ್ ಹೊದ್ದುಕೊಂಡೇ ಶಿಬಿರದಿಂದ ಹೊರಗೆ ತಲೆಹಾಕಿದೆ.
ತುಸು ದೂರದಲ್ಲಿ, ನಾವು ಡೇರೆ ಹೂಡಿದ್ದ ಪರ್ವತದ ತಪ್ಪಲು ಅಂಚು ಏರುತ್ತಿದ್ದಲ್ಲಿ, ಇದ್ದಕ್ಕಿದ್ದಂತೆ ಎರಡು ನಸುಗೆಂಪು ಕಾಂತಿಯುತ ಬಿಂದುಗಳು ಉಜ್ವಲವಾಗಿ ಹೊಳೆದವು. ಚಳಿಯನ್ನೂ ಮೀರಿದ ನಡುಕವೊಂದು ನೆತ್ತಿಯಿಂದ ಕಾಲಿನವರೆಗೂ ಕಟಕಟನೆ ವ್ಯಾಪಿಸಿತು.
(ಮುಂದಿನ ವಾರ- ಅದೋ ಹಿಮಚಿರತೆ!)
= ಹರೀಶ್ ಕೇರ
harishkera@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.