ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಚೆನ್ನಣ್ಣ ವ್ಯೋಮಾಕಾರ!

Lingaraj Badiger
Updated On : 13 Apr 2013, 4:00 am

ಚೆನ್ನಣ್ಣ ವಾಲೀಕಾರ ಬರೆದ 1030 ಪುಟಗಳ ಬೃಹತ್ ಪ್ರಾಯೋಗಿಕ ಕಾವ್ಯ 'ವ್ಯೋಮಾವ್ಯೋಮ'. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ವಾಕ್ಯ, ಎಲ್ಲೂ ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಇತ್ಯಾದಿ ಬಳಸದಿರುವುದು ಇದರ ಪ್ರಯೋಗಗಳು. ವಾಲೀಕಾರರಿಗಿಂದು 70ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವ್ಯೋಮಾವ್ಯೋಮ ಲೋಕಾರ್ಪಣೆಯಾಗುತ್ತಿದೆ.

ಚೆನ್ನಣ್ಣನನ್ನು ನಾನು ಅನೇಕ ವರ್ಷಗಳಿಂದ ಬಲ್ಲೆ. ಆತ ನನಗಿಂತ ಹಿರಿಯ ತಲೆಮಾರಿನವನಾದರೂ ನನ್ನನ್ನು ತನ್ನ ಒಡಹುಟ್ಟಿದ ತಮ್ಮನಂತೆ ಭಾವಿಸಿರುವುದರಿಂದ ನಾನಾದರೂ ಅವನಿಗೆ ಏಕವಚನದಲ್ಲಿಯೇ ಅಣ್ಣನೆಂದು ಕರೆಯುತ್ತೇನೆ. ನನ್ನಂತೆ ಕನಿಷ್ಟ ಒಂದೆರಡು ಸಾವಿರ ತಮ್ಮಂದಿರುಗಳಾದರೂ ಅವನಿಗೆ ಕರ್ನಾಟಕದಲ್ಲಿ ಇರಬಹುದು.
ಚೆನ್ನಣ್ಣನನ್ನು ನಾನು ಮೊದಲು ನೋಡಿದ್ದು ಆತನ ಬರವಣಿಗೆಯ ಮುಖಾಂತರ. 1972ರಲ್ಲಿ ಚೆನ್ನಣ್ಣ ತನ್ನ ವಿಭಿನ್ನ ಬರವಣಿಗೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದ. ಆತನ ಬರೆಹಗಳೆಲ್ಲ ನೆಲ ಮೂಲದಿಂದ ಹುಟ್ಟಿದ ಯೋಚನೆಗಳಾಗಿದ್ದವು. ಅಲ್ಲಿಯವರೆಗೆ ನವ್ಯಕವಿಗಳ ಚಿತ್ರವಿಚಿತ್ರವಾದ ಕವಿತೆಗಳಿಂದ ತಲೆಕೆಟ್ಟು ಹೋಗಿದ್ದ ನಮ್ಮ ತಲೆಮಾರು ಚೆನ್ನಣ್ಣನ ಹೊಸ ಅನುಭವಗಳನ್ನು ಆತನ ಸಾಹಿತ್ಯದಲ್ಲಿಯ ತಾಜಾತನವನ್ನು ವಿಸ್ಮಯದಿಂದ ನೋಡಹತ್ತಿದೆವು. ಈ ಕಾಲದಲ್ಲಿ ಆತ ರಾಯಚೂರಿನ ಕಾಲೇಜಿನಲ್ಲಿ ಕನ್ನಡ ಕಲಿಸುತ್ತಿದ್ದ. ಆತನ ಕವಿತೆಗಳಲ್ಲಿ ಕತ್ತಲೆ ಲೋಕದ ಕಥೆಗಳಿದ್ದವು. ಅವುಗಳನ್ನು ಕಥೆಗಳೆಂದು ಹೇಳುವುದಕ್ಕಿಂತ ವ್ಯಥೆಗಳೆಂದು ಹೇಳಿದರೇ ಸರಿ ಎನ್ನಿಸುತ್ತದೆ.
ಇದೇ ಕಾಲಕ್ಕೆ ಕನ್ನಡ ಸಾಹಿತ್ಯದಲ್ಲಿ ದಲಿತ ಸಾಹಿತ್ಯದ ಗಾಳಿ ಬೀಸಲಾರಂಭಿಸಿತು. ಮಹಾರಾಷ್ಟ್ರದಲ್ಲಿ ಸುತ್ತುತ್ತಿದ್ದ ಈ ಗಾಳಿಯನ್ನು ಕನ್ನಡಕ್ಕೆ ತಂದವರಲ್ಲಿ ಪ್ರಮುಖನಾದವನೇ ಚೆನ್ನಣ್ಣ. ಹೊಸ ಹೊಸ ವಿಚಾರಗಳಿಗೆ ಸದಾ ಸ್ಪಂದಿಸುವ, ಹೊಸ ಕವಿಗಳಿಗೆ ಉತ್ಸಾಹ ತುಂಬುವ ಡಾ. ಬುದ್ದಣ್ಣ ಹಿಂಗಮಿರೆ ಜೊತೆಗೂಡಿ ಚೆನ್ನಣ್ಣ 'ದಲಿತ' ಎಂಬ ಅನಿಯತಕಾಲಿಕವನ್ನು ಹೊರತಂದ. ಅದರ ಇನ್ನೊಬ್ಬ ಸಂಪಾದಕ ಡಾ. ಸೋಮಶೇಖರ ಇಮ್ರಾಪುರ. ಮುಂದೆ ಅದು ಒಂದು ಸಾಹಿತ್ಯಧಾರೆಯನ್ನೇ ಸೃಷ್ಟಿಸುವಲ್ಲಿ ಕಾರಣವಾಯಿತು. ಎರಡು ವರ್ಷ ನಡೆಯಿತು. ಈ ಎಲ್ಲ ಸಂಚಿಕೆಗಳಲ್ಲಿ ನಾನು ಮರಾಠಿ ದಲಿತ ಸಾಹಿತಿಗಳ ಬರಹಗಳನ್ನು ಅಖಂಡವಾಗಿ ಬರೆದೆ. ಈ ಕಾಲದಲ್ಲಿ ಚೆನ್ನಣ್ಣ ನನಗೆ ಇನ್ನಷ್ಟು ಸಮೀಪದವನಾದ.
 ಚೆನ್ನಣ್ಣ ಭಾಷೆಯನ್ನು ದೆವ್ವದಂತೆ ಬಳಸಿಕೊಳ್ಳುತ್ತಾನೆ ಎಂದು ಡಾ. ಹಿಂಗಮಿರೆ ಒಂದು ಸಂದರ್ಭದಲ್ಲಿ ಮೆಚ್ಚುಗೆಯ ಮಾತು ಆಡಿದ್ದರು. ಆತನ ಮೊದಲ ಕವನ ಸಂಕಲನ -ಕರಿತಲಿ ಮಾನವನ ಜೀಪದ-ದಲ್ಲಿ ಆತನ ಭಾಷೆಯ ಕಸುವು, ತಾಕತ್ತನ್ನು ನೋಡಬಹುದು. ಈ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯ ಬಹುಮಾನ ಪ್ರಕಟವಾದಾಗ ಚೆನ್ನಣ್ಣನ ಭಾಷಾ ಪ್ರತಿಭೆ ಕನ್ನಡನಾಡಿನ ಪ್ರತಿ ಮನೆ ಮನೆ ಹೊಕ್ಕಿತು. ಆದರೆ ಚೆನ್ನಣ್ಣನ ಈ ರೀತಿಯ ಬೆಳವಣಿಗೆ ಹೈದ್ರಾಬಾದ ಕರ್ನಾಟಕದ ಹಲಕೆಲ ಸವರ್ಣೀಯ ಸಾಹಿತಿಗಳಿಗೆ ಪಚನವಾಗಲಿಲ್ಲ. ಚೆನ್ನಣ್ಣನ ಚಾರಿತ್ರ್ಯಹನನಕ್ಕೆ ಬಗೆಬಗೆಯಾಗಿ ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಆತನ ಬೆನ್ನಿಗೆ ನಿಂತು ಕಾಪಾಡಿದವರು ಹುಬ್ಬಳ್ಳಿ-ಧಾರವಾಡದ ಆತನ ಗೆಳೆಯರು, ತಮ್ಮಂದಿರು. ಅಲ್ಪಕಾಲ ಮೋಡದ ಮುಸುಕಿಗೆ ಸೇರಿದ್ದ ಚೆನ್ನಣ್ಣ, ಕವಿದ ಮೋಡವನ್ನು ಹರಿದೊಗೆದು ಹೊರಗೆ ಬಂದ.

2

1979ರಲ್ಲಿ ಚೆನ್ನಣ್ಣ ಇನ್ನೊಂದು ಕೋಲಾಹಲಕ್ಕೆ ಕಾರಣನಾದ. ಅನೇಕ ವಿಚಾರಗಳು, ಚಳವಳಿಗಳು ಕರ್ನಾಟಕದ ಸಾಂಸ್ಕೃತಿಕ ವಾತಾವರಣವನ್ನು ರೂಪಿಸಲಾರಂಭಿಸಿದ್ದವು. ಸಾಹಿತ್ಯದಲ್ಲಿ ಹೊಸ ಹೊಸ ದನಿಗಳು ತಮ್ಮ ಅಸ್ತಿತ್ವಕ್ಕಾಗಿ ಧಡಪಡಿಸುತ್ತಿದ್ದವು. ಯಜಮಾನಿಕೆ ಸಂಸ್ಕೃತಿಯು ಸಾಯುವ ಹಂತದಲ್ಲಿದ್ದರೂ ಇನ್ನೂ ತನ್ನ ಅಟ್ಟಹಾಸ ಮೆರೆಯುವದರಲ್ಲಿ ಧನ್ಯತೆ ತಾಳುತ್ತಿತ್ತು.


ಇದೇ ಕಾಲಕ್ಕೆ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧರ್ಮಸ್ಥಳದಲ್ಲಿ ನಡೆಯುವದೆಂದು ಘೋಷಿಸಿತು. ಅಧ್ಯಕ್ಷರಾಗಿ ಗೋಪಾಲಕೃಷ್ಣ ಅಡಿಗರು ಆಯ್ಕೆಗೊಂಡರು.
ಚೆನ್ನಣ್ಣ ಆಗಿನ ಕಸಾಪ ಅಧ್ಯಕ್ಷರಾಗಿದ್ದ ಹಂಪನಾ ಅವರಿಗೆ ಪತ್ರವೊಂದನ್ನು ಬರೆದು, ಈ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿಯೊಂದನ್ನು ಇಡಬೇಕೆಂದು ಕೇಳಿಕೊಂಡ. ಆದರೆ ಹಂಪನಾ ಅವರು ಸಾಹಿತ್ಯದಲ್ಲಿ ದಲಿತ, ಕಲಿತ, ಬಲಿತಗಳೆಂಬ ಪ್ರಬೇಧಗಳೇ ಇಲ್ಲವೆಂದು ಚೆನ್ನಣ್ಣನ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಚೆನ್ನಣ್ಣ ಹಂಪನಾಗೆ ಬರೆದ ಪತ್ರ, ಅದಕ್ಕೆ ಹಂಪನಾ ನೀಡಿದ ಉತ್ತರ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಚಾರ ಪಡೆದವು. ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರಿಗೆ ಈ ವಿಷಯ ಜಿಜ್ಞಾಸೆಗೆ ತೊಡಗಿಸಿತು. ಅವರು ಹಂಪನಾರಿಗೆ ಸಮ್ಮೇಳನದಲ್ಲಿ ದಲಿತ ಸಾಹಿತ್ಯಗೋಷ್ಠಿ ಇಡಲು ಸೂಚಿಸಿದರು. ಮುಖ್ಯಮಂತ್ರಿ ಹೇಳುತ್ತಾರೆಂದು ಹಂಪನಾ ಅದಕ್ಕೆ ಒಪ್ಪಿಕೊಂಡರು. ಆದರೆ ಈ ಇಡೀ ಪ್ರಸಂಗ ಸಾಹಿತಿಗಳನ್ನು ಆತ್ಮವಿಮರ್ಶೆಗೆ ಹಚ್ಚಿತು. ಸಾಹಿತಿಯೊಬ್ಬ ಬೇಡಿಕೆ ಇಟ್ಟರೆ ಅದನ್ನು ತಿರಸ್ಕರಿಸುವ, ಅದೇ ಬೇಡಿಕೆಯನ್ನು ಮುಖ್ಯಮಂತ್ರಿ ಇಟ್ಟರೆ ಅದನ್ನು ಸ್ವಾಗತಿಸುವ ಧೋರಣೆ ಪ್ರಶ್ನೆಗೆ ಕಾರಣವಾಯಿತು. ಈ ಎಲ್ಲದರ ಪರಿಣಾಮವಾಗಿ ಪ್ರಗತಿಪರ ಸಾಹಿತಿಗಳೆಲ್ಲ ಒಂದಾಗಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಹುಟ್ಟುಹಾಕಿದರು. ಬಂಡಾಯ ಸಾಹಿತ್ಯ ಸಂಘಟನೆ ಕನ್ನಡ ಸಾಹಿತ್ಯದಲ್ಲಿ ಹೊಸ ಮನ್ವಂತರವನ್ನೇ ಬರೆಯಿತು. ಮಾತು ಕಳೆದುಕೊಂಡ ಜನರಿಗೆ ಅದು ಧ್ವನಿಯಾಗಿ ಕೆಲಸ ಮಾಡಿತಲ್ಲದೆ ಅನೇಕ ಹೊಸ ಲೇಖಕರನ್ನು ಹುಟ್ಟುಹಾಕಲು ಕಾರಣೀಭೂತವಾಯಿತು.
ಬಂಡಾಯ ಸಂಘಟನೆಯಲ್ಲಿ ಚೆನ್ನಣ್ಣ ಸಂಪೂರ್ಣವಾಗಿ ತೊಡಗಿಸಿಕೊಂಡ. ಅನೇಕ ಸಲ ಸಂಘಟನೆಯ ರಾಜ್ಯ ಸಂಚಾಲಕನಾಗಿ ಅದರ ಮುಂಚೂಣಿ ನಾಯಕನಾಗಿ ಕೆಲಸ ಮಾಡಿದ. ಸದಾ ಕೆಂಪು ಅಂಗಿ ಧರಿಸುತ್ತಿದ್ದ ಚೆನ್ನಣ್ಣ, ಹಸಿವಿನ ಬಗ್ಗೆ ಅನೇಕಾನೇಕ ಜೋಕುಗಳಿಗೆ ಕಾರಣಕರ್ತನಾಗಿದ್ದ ಮುಗ್ಧ ಸ್ವಭಾವದ ಮನುಷ್ಯ. ಆತ ಎಲ್ಲವನ್ನೂ ನಂಬುತ್ತಾನೆ. ಕತ್ತೆ, ಕುದುರೆ, ತೋಳ, ಹುಲಿ, ಸಿಂಹ, ಇಲಿ, ಹಂದಿ, ನಾಯಿ- ಹೀಗೆ ಎಲ್ಲವನ್ನೂ ನಂಬುತ್ತಾನೆ. ವಂಚನೆ, ನಯವಂಚನೆ ಮುಂತಾದ ಶಬ್ದಗಳಿಗೆ ಅವನ ಡಿಕ್ಷನರಿಯಲ್ಲಿ ಜಾಗವೇ ಇಲ್ಲ. ಯಾರಾದರಲ್ಲಿ ತುಸು ಮಾತ್ರವೂ ಪ್ರತಿಭೆ ಇದ್ದರೂ ಅವರ ಬೆನ್ನು ಹತ್ತಿ ಅವರ ಪ್ರತಿಭೆ ಹೊಳೆಯುವಂತೆ ಮಾಡುತ್ತಾನೆ. ಚೆನ್ನಣ್ಣ ಸದಾ ಪ್ರಯೋಗನಿರತ. ಆತ ಕನ್ನಡಕ್ಕೆ ಕರ್ಬಲಾ ಪದ್ಯಗಳನ್ನು ತಂದ.  ಮೊಹರಂ ಪದ್ಯಗಳನ್ನು ಪರಿಚಯಿಸಿದ. ಅಂಬೇಡ್ಕರ್ ಗಾಥಾವನ್ನು ಬರೆದ. ಆತನ ಬರೆಹವೆಂದರೆ ಗದ್ಯ ಮತ್ತು ಪದ್ಯಗಳ ಹಿತಮಿತವಾದ ಮಿಶ್ರಣ. ಅದನ್ನು ಆತ ಹಾಡುಗಬ್ಬವೆಂದು ಕರೆದುಕೊಂಡಿದ್ದಾನೆ.
ಭಾಷೆಯಲ್ಲಿಯ ಆತನ ಪ್ರಯೋಗವೂ ಅನನ್ಯವಾದುದು. 1976ರಲ್ಲಿ ಆತ  'ಬೆಳ್ಯ' ಎಂಬ ಕಿರು ಕಾದಂಬರಿಯನ್ನು ಪ್ರಕಟಿಸಿದ. ಕಾದಂಬರಿಯಲ್ಲಿ ಹೈದ್ರಾಬಾದ್ ಕರ್ನಾಟಕದ ದಲಿತರು ಮಾತನಾಡುವ ಭಾಷೆಯನ್ನೇ ಉಪಯೋಗಿಸಲಾಗಿತ್ತು. ದಲಿತ ಸಮುದಾಯದ ನಡಾವಳಿಗಳಿಗೆ ಮಹತ್ವ  ನೀಡಲಾಗಿತ್ತು. ಚೆನ್ನಣ್ಣ ಆಗಿನ ಮಡಿವಂತ ಸಾಹಿತ್ಯದ ಮೇಲೆ ಹೈಡ್ರೋಜನ್ ಬಾಂಬನ್ನು ಹಾಕಿದ್ದ. ಈ ಕಾದಂಬರಿಯನ್ನು ಸಭ್ಯ ವಿಮರ್ಶಕ ಲೋಕ ತಿರಸ್ಕರಿಸಿತು. ನಂಜನಗೂಡು ಭಾಗದ ದಲಿತರ ಮಾತುಗಳನ್ನೇ ಬಳಸಿ ದೇವನೂರು ಮಹಾದೇವ ಬರೆದ 'ಒಡಲಾಳ'ವನ್ನು ತಲೆಯ ಮೇಲಿಟ್ಟು ಕುಣಿದ ಸಭ್ಯ ವಿಮರ್ಶಕರು ಚೆನ್ನಣ್ಣನ 'ಬೆಳ್ಯ'ಕ್ಕೆ ಘೋರ ಅವಮಾನ ಮಾಡಿದರು. ಬೆಳ್ಯನನ್ನು ಓದಿದ ನನ್ನಂಥವರಿಗೆ ಬೆಳ್ಯನ ಮೂಲಕ ಚೆನ್ನಣ್ಣ ಕನ್ನಡ ಸಾಹಿತ್ಯದ ಪಡೆನುಡಿಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾನೆಂದು ಅನ್ನಿಸಿತ್ತು. ಈ ಹಿಂದೆ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಈ ರೀತಿಯ ಹುಡುಕಾಟವನ್ನು ಯಾರೂ ಮಾಡಿರಲಿಲ್ಲ. ಬೆಳ್ಯ-ಬಸವ್ವನ ಮೂಲಕ ಮನುಷ್ಯ ಸಂಬಂಧಗಳ ಹುಡುಕಾಟ ಇಲ್ಲಿ ಸಾಕಾರಗೊಂಡಿದೆ. ಶೋಷಣೆ ಇಲ್ಲಿಯ ಮುಖ್ಯ ಸಮಸ್ಯೆ. ಬೆಳ್ಯನ ಹೆಂಡತಿ ಬಸವ್ವಳನ್ನು ಸಾಹುಕಾರನ ಮಗ ಸಂಗ್ಯಾ ಬಲೆಗೆ ಹಾಕಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅವರಿಬ್ಬರೂ ಒಂದೆಡೆ ಮಲಗಿದ್ದನ್ನು ಕಣ್ಣಾರೆ ಕಂಡ ಬೆಳ್ಯ ಹುಚ್ಚು ಹಿಡಿದವರಂತೆ ಊರೂರು ಅಲೆಯಲಾರಂಭಿಸುತ್ತಾನೆ. ಗುಡ್ಡದಲ್ಲಿರುವ ಸಾಧುಗಳ ಒಂದು ಗುಂಪು ಸೇರುತ್ತಾನೆ. ಅಲ್ಲಿ ಸಾಧುಗಳು ಚಿಲ್ಮಿ ಸೇದುವಾಗ ಒಬ್ಬ ಸಾಧು 'ನಮ ಗುರು ನಮ್ಗೊಂದ್ ಹುಸ್ಯಾರಿ ಹೇಳತಾನೆ, ಮನಿಕಸ ಹೊಡ್ಕೊಂಡು ಜಳಜಳ ಇರು ಅಂತಾನೆ' ಎಂದು ಹಾಡುವುದನ್ನು ಕೇಳಿದ ಬೆಳ್ಯ ಮತ್ತೆ ಮನೆಯ ನೆನಪಾಗಿ ಬಸವ್ವನ ಎಲ್ಲ ಕೆಟ್ಟ ಕೆಲಸಗಳನ್ನು ಕ್ಷಮಿಸಿ ಮನೆಗೆ ಮರಳುತ್ತಾನೆ. ಬಸವ್ವಳ ಮೈ ರುಚಿ ಕಂಡ ಸಂಗ್ಯಾ, ಬೆಳ್ಯನನ್ನು ಇನ್ನಿಲ್ಲದಂತೆ ಕಾಡುತ್ತಾನೆ. ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧಗಳು ಇಲ್ಲಿ ಹೊಸ ಆವಿಷ್ಕಾರವನ್ನು ಪಡೆಯುತ್ತವೆ. ಬಡತನ ಮತ್ತು ಶೋಷಣೆ ಇವುಗಳು ತಮ್ಮನ್ನು ಈ ಅಧಃಪತನಕ್ಕೆ ತಳ್ಳುತ್ತಿವೆಯೆಂಬ ಅರಿವು ಬೆಳ್ಯನಿಗೂ ಇದೆ, ಬಸವ್ವಳಿಗೂ ಇದೆ. ಪಾಳೇಗಾರಿಕೆ ಪದ್ಧತಿ, ಜಾತೀಯತೆ ಒಂದು ಹಳ್ಳಿಯನ್ನು ಹೇಗೆ ನಾಶಪಡಿಸುತ್ತದೆಂಬ ವಿವರವನ್ನು ಕಾದಂಬರಿಯುದ್ದಕ್ಕೂ ಲೇಖಕ ನೀಡುತ್ತ ಹೋಗುತ್ತಾನೆ. ಕೊನೆಯಲ್ಲಿ ಗೆಲ್ಲುವುದು ಮಾನವೀಯತೆ. ಆದರೆ ಮಾನವೀಯತೆಯೆಂದರೇನೆಂದು ಗೊತ್ತಿರದ ಪಾತ್ರಗಳು ಕಾದಂಬರಿಯಲ್ಲಿ ದಾಂಧಲೆಯನ್ನು ಹಾಕುತ್ತವೆ.
ಚೆನ್ನಣ್ಣ ಈ ಕಾದಂಬರಿಯನ್ನು ಜನರ ಭಾಷೆಯಲ್ಲಿ ಬರೆದ. ಜನರ ಭಾಷೆಯ ಬಗ್ಗೆ ಉಪೇಕ್ಷೆ ಪಡುವ ಸಾಹಿತ್ಯವೃಂದ ಕಾದಂಬರಿಗೆ ನೀಡಬೇಕಾದ ಗೌರವ ನೀಡಲಿಲ್ಲ. ಇದು ಚೆನ್ನಣ್ಣನ ಸೋಲಾಗದೇ ಮಡಿವಂತ ಸಾಹಿತ್ಯ ಲೋಕದ ಸೋಲೆಂದು ನಾನು ಭಾವಿಸಿದ್ದೇನೆ.
-ಡಾ. ಸರಜೂ ಕಾಟ್ಕರ್
sarjookatkar@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments