ಭರತನ ಪಕ್ಷಿ ಪ್ರೇಮ
ಅಂದು ಭಾನುವಾರವಾದ್ದರಿಂದ ಭರತನಿಗೆ ರಜೆ. ಆತ ಅಪ್ಪನೊಡನೆ ದನ ಮೇಯಿಸಲು ಹೊಲದ ಕಡೆ ಹೋಗಿದ್ದ. ಏಪ್ರಿಲ್ ಮೊದಲ ವಾರ ಉರಿಬಿಸಿಲು! ಹನ್ನೊಂದು ಗಂಟೆಯಾಗುತ್ತಿದ್ದಂತೆ ಬಾಯಾರಿಕೆ ಹೆಚ್ಚಾಯಿತು. 'ಅಪ್ಪಾ, ತುಂಬಾ ದಾಹವಾಗುತ್ತಿದೆ, ನೀರು ಕುಡಿಯಬೇಕು' ಎಂದ. 'ಇಲ್ಲೆಲ್ಲಿಯೂ ನೀರು ಸಿಗುವುದಿಲ್ಲ, ಮನೆಗೆ ಹೋಗಿಯೇ ಕುಡಿಯಬೇಕು'. 'ಹಾಗಾದರೆ ದನಗಳಿಗೆ ಎಲ್ಲಿ ನೀರು ಕುಡಿಸುವುದು?' 'ಹಟ್ಟಿಯಲ್ಲಿಯೇ ಕುಡಿಸಬೇಕು. ನೀರಿಗೆ ಬಹಳ ಕಷ್ಟ ಬಂದಿದೆ' ಎಂದ ಅಪ್ಪ. 'ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳು ನೀರಿಲ್ಲದೆ ಹೇಗೆ ಬದುಕುತ್ತವೆ?' ಎಂದಾಗ, 'ಅವುಗಳಿಗೆ ಆ ದೇವರ ಕೃಪೆಯಿದೆ. ಯಾವ ಕೆರೆ-ಕಟ್ಟೆ, ಕುಂಟೆಯಲ್ಲಿಯೂ ಗುಟುಕು ನೀರಿಲ್ಲ. ಈ ಹಕ್ಕಿ-ಪಕ್ಷಿಗಳು ಹೇಗೆ ಬದುಕುತ್ತವೋ ಆ ದೇವರೇ ಬಲ್ಲ. ನಾವು ಸಣ್ಣವರಾಗಿದ್ದಾಗ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳೆಲ್ಲ ತುಂಬಿ ಹರಿಯುತ್ತಿದ್ದವು. ವರ್ಷಪೂರ್ತಿ ನೀರಿಗೆ ತೊಂದರೆ ಇರಲಿಲ್ಲ. ಈಗ ದುಡ್ಡು ಕೊಟ್ಟು ನೀರು ಕುಡಿಯುವ ಕಾಲ ಬಂದಿದೆ' ಎಂದು ಅಪ್ಪ ಹೇಳಿದಾಗ ಭರತ ತನ್ನ ಬಾಯಾರಿಕೆ ಮರೆತೇಬಿಟ್ಟ. ಹಕ್ಕಿ-ಪಕ್ಷಿಗಳ ಬಗ್ಗೆಯೇ ಚಿಂತಿಸತೊಡಗಿದ.
ಅದೇ ಸಮಯಕ್ಕೆ ಮಾವಿನ ಮರದ ಮೇಲೆ ಹಕ್ಕಿಯೊಂದು ಕೂಗುತ್ತಿತ್ತು. 'ಅಪ್ಪ, ಆ ಹಕ್ಕಿ ಯಾವುದು? ಏಕೆ ಆ ರೀತಿ ಕೂಗುತ್ತಿದೆ?' ಬಿಸಿಲು ಹೆಚ್ಚಾಗುತ್ತಿದೆ. ಕುಡಿಯಲು ನೀರು ಸಿಗುತ್ತಿಲ್ಲ. ಬಿಸಿಲ ತಾಪ ತಡೆಯಲಾರದೆ ಅದು ಅರಚುತ್ತಿದೆ ಎಂದನು ಅಪ್ಪ. ಹೊತ್ತು ನೆತ್ತಿಗೆ ಬರುತ್ತಿದ್ದಂತೆ ಪಕ್ಷಿಗಳ ಕೂಗು ಇನ್ನೂ ಹೆಚ್ಚಾಯಿತು. ಭರತನಿಗೆ ಅರ್ಥವಾಯಿತು, ಅವುಗಳಿಗೆ ನೀರಡಿಕೆ ಹೆಚ್ಚಾಗಿ ಒಂದೇ ಸಮನೆ ಕೂಗುತ್ತಿವೆ ಎಂದು.
'ಯಾಕಪ್ಪ ಮಳೆ ಹುಯ್ಯುತ್ತಿಲ್ಲ?'. ಜನರಲ್ಲಿ ಕೆಟ್ಟ ಬುದ್ಧಿ ಹೆಚ್ಚಾಗಿದೆ. ಗುಡ್ಡ-ಬೆಟ್ಟವೆಲ್ಲ ಊರಾಗಿವೆ, ಮರ-ಗಿಡವೆಲ್ಲ ಹಾಳಾಗಿವೆ. ಮಳೆ ಹುಯ್ಯಿ ಎಂದರೆ ಎಲ್ಲಿಂದ ಹುಯ್ಯುತ್ತಪ್ಪ? ಎಂದ ಅಪ್ಪ.
ಅಷ್ಟು ಹೊತ್ತಿಗೆ, ಮಟಮಟ ಮಧ್ಯಾಹ್ನವಾಗಿತ್ತು. ದನಗಳೆಲ್ಲ ಬಿಸಿಲಿನ ತಾಪ ತಾಳಲಾರದೇ ಒದ್ದಾಡತೊಡಗಿದವು. ದನಗಳಿಗೆ ನೀರು ಕುಡಿಸಬೇಕು. ನಡೆ ಮನೆಗೆ ಹೋಗೋಣ ಎಂದು ಅಪ್ಪ ಹೇಳಿದ. ದನಗಳು ಕೊಟ್ಟಿಗೆಗೆ ಬಂದೊಡನೇ ಬಿಂದಿಗೆಗಟ್ಟಲೆ ನೀರನ್ನು ಕುಡಿದವು. ಭರತ ಸಹ ನೀರು ಕುಡಿದು 'ಉಷ್' ಎಂದು ಕುಳಿತುಕೊಂಡ.
ಆ ದಿನ ರಾತ್ರಿ ಭರತನಿಗೆ ನಿದ್ರೆ ಬರಲೇ ಇಲ್ಲ. ನಾಲ್ಕನೇ ತರಗತಿಯಲ್ಲಿ 'ಸಲೀಂ ಅಲಿ' ಬಗ್ಗೆ ಓದಿದ್ದನ್ನು ನೆನಪು ಮಾಡಿಕೊಂಡ. ಸಲೀಂ ಅಲಿ ಅವರು ಪಕ್ಷಿಗಳ ಬಗ್ಗೆ ನಡೆಸಿದ ಅಧ್ಯಯನ ಹಾಗೂ ಅವರ ಸಾಧನೆಗಳನ್ನು ನೆನಪು ಮಾಡಿಕೊಂಡ. ಪಕ್ಷಿ ಪ್ರೇಮದ ಬಗ್ಗೆ ಪಾಠ ಮಾಡುತ್ತಿದ್ದ ಶಿಕ್ಷಕರು ಪಕ್ಷಿಗಳ ರಕ್ಷಣೆಯ ಬಗ್ಗೆಯೂ ತಿಳಿಸಿದ್ದರು. ಇದೆಲ್ಲವನ್ನೂ ನೆನಪು ಮಾಡಿಕೊಂಡು 'ನಾನೂ ಏನಾದರೂ ಮಾಡಬೇಕು' ಎಂದು ನಿರ್ಧರಿಸಿದ.
ಬೆಳಗ್ಗೆ ಎದ್ದೊಡನೆ ಒಂದು ದೊಡ್ಡ ಪ್ಲಾಸ್ಟಿಕ್ ತಟ್ಟೆ ತೆಗೆದುಕೊಂಡು ಅದರ ತುಂಬಾ ನೀರು ತುಂಬಿಸಿ ಮನೆಯ ಛಾವಣಿಯ ಮೇಲೆ ಇಟ್ಟು, ಅದರ ಸುತ್ತ ಅಕ್ಕಿ-ರಾಗಿ ಚೆಲ್ಲಿ ಶಾಲೆಗೆ ಹೋದ. ಶಿಕ್ಷಕರು 'ಅರಣ್ಯ ರಕ್ಷಣೆ' ಪಾಠ ಮಾಡುತ್ತ 'ಅರಣ್ಯ ನಾಶದಿಂದಲೇ ಮಳೆ ಇಲ್ಲದೆ ಬರಗಾಲ ಬಂದಿದೆ. ಹಕ್ಕಿ-ಪಕ್ಷಿಗಳಿಗೆ ಕುಡಿಯಲೂ ನೀರಿಲ್ಲ. ಪ್ರಾಣಿ ಸಂತತಿ ನಾಶವಾಗುತ್ತಿದೆ. ಇದರ ಬಗ್ಗೆ ನಾವು ಜಾಗೃತರಾಗದಿದ್ದರೆ ಪ್ರಾಣಿ-ಪಕ್ಷಿಗಳನ್ನು ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ. ಮನುಷ್ಯನು ಕೂಡ ವಿನಾಶದ ಅಂಚಿಗೆ ಹೋಗಬೇಕಾಗುತ್ತದೆ'ಎಂದು ಹೇಳಿದರು.
'ಸಾರ್ ಮಳೆ ಹುಯ್ಯಲು ಏನು ಮಾಡಬೇಕು?' 'ಈಗಲೂ ಕಾಲ ಮಿಂಚಿಲ್ಲ. ಮನೆಗೊಂದು ಮರ ಬೆಳೆಸಬೇಕು. ಎಲ್ಲ ಕಡೆಮರ-ಗಿಡಗಳು ಹೆಚ್ಚಾದರೆ ಮಳೆ ಬರುತ್ತದೆ. ಕೆರೆ-ಕಟ್ಟೆಗಳು ತುಂಬುತ್ತವೆ. ಪ್ರಾಣಿ-ಪಕ್ಷಿಗಳಿಗೆ ನೀರು ಸಿಗುತ್ತದೆ. ನೀವೆಲ್ಲರೂ ಈಗಲೇ 'ನಾವು ಮರ ಬೆಳೆಸುತ್ತೇವೆ' ಎಂದು ಪ್ರತಿಜ್ಞೆ ಮಾಡಿ' ಎಂದು ಶಿಕ್ಷಕರು ಹೇಳಿದಾಗ ಮಕ್ಕಳೆಲ್ಲ ಪ್ರತಿಜ್ಞೆ ಮಾಡಿದವು.
ಸಂಜೆ ಶಾಲೆ ಮುಗಿಸಿ ಭರತ ಮನೆಗೆ ಬಂದು ಛಾವಣಿಯ ಮೇಲೆ ಇಟ್ಟಿದ್ದ ತಟ್ಟೆಯನ್ನು ನೋಡಿದ. ತಟ್ಟೆಯಲ್ಲಿ ಒಂದು ಹನಿ ನೀರೂ ಇರಲಿಲ್ಲ. ಮತ್ತೆ ನೀರು ತಂದು ತುಂಬಿಸಿ ಕೆಳಗಿಳಿಯುತ್ತಿದ್ದಂತೆ ಎಂಟ್ಹತ್ತು ಪಕ್ಷಿಗಳು ಹಾರಿ ಬಂದು ನೀರು ಕುಡಿಯಲಾರಂಭಿಸಿದವು. ಇದನ್ನು ನೋಡಿ ಭರತ ಬಹಳ ಖುಷಿಪಟ್ಟ. ಅಂದಿನಿಂದ ದಿನವೂ ನೀರು ತುಂಬಿಸತೊಡಗಿದ. ವಿವಿಧ ಜಾತಿಯ ಹಕ್ಕಿ-ಪಕ್ಷಿಗಳು ಭರತನ ಮನೆಯ ಛಾವಣಿಯ ಮೇಲೆ ಬಂದು ಕುಳಿತುಕೊಂಡವು. ಮನೆಯ ಹಿಂದೆ ಮರಗಿಡಗಳಿದ್ದುದರಿಂದ ಪಕ್ಷಿಗಳಿಗೆ ಬಹಳ ಅನುಕೂಲವಾಯಿತು. ನೀರು ಕುಡಿದು ಹಿತ್ತಲ ಮರ-ಗಿಡಗಳಲ್ಲಿ ಕುಳಿತು ಆನಂದದಿಂದ ಹಾಡಲಾರಂಭಿಸಿದವು. ಇಲ್ಲಿಯವರೆಗೆ ತಾನು ನೋಡಿರದ ಪಕ್ಷಿಗಳನ್ನು ನೋಡಿ ಭರತ ಹಿರಿಹಿರಿ ಹಿಗ್ಗಿದ. ಬಿದಿಯ ಹುಡುಗರೆಲ್ಲ ಬಂದು ನೋಡಿದರು. ಭರತನಂತೆ ತಾವೂ ಮಾಡಲಾರಂಭಿಸಿದರು. ಭರತನ ಪಕ್ಷಿಪ್ರೇಮವನ್ನು ಶಾಲೆಯ ಶಿಕ್ಷಕರೂ ಕೊಂಡಾಡಿದರು.
= ಸಾ.ಮ. ಶಿವಮಲ್ಲಯ್ಯ, ಸಾಸಲಾಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.