ಹಣ್ಣಾಗಿಲ್ಲ ಸ್ವಲ್ಪ ಕಾsssಯಿ...
ಯಾರಿಗಾಗಿ ಹಂಬಲಿಸುತ್ತಿದ್ದೇನೆಂಬ ಅರಿವೂ ಆಕೆಗೆ ಇದ್ದಂತಿಲ್ಲ. ಅದು ರಾಮನೇ ಇದ್ದಿರಬಹುದೇ? ಆ ಗೋಂಡಾರಣ್ಯದಲ್ಲಿ ದಿಕ್ಕಿಲ್ಲದೇ, ಧೇನಿಸುತ್ತಾ ಕುಳಿತು ಅದೆಷ್ಟು ಹೊತ್ತಾಗಿದ್ದಿರಬಹುದೆಂಬ (ದಿನ, ವರ್ಷ, ಯುಗಗಳಿರಲಿಕ್ಕಿಲ್ಲವೇನೋ. ಏಕೆಂದರೆ ಕಾಯುವ ಕಾಯಕಕ್ಕೆ ಒಂದೊಂದು ಕ್ಷಣಕ್ಕೂ ಯುಗವೇ) ಸ್ಮರಣೆಯಂತೂ ಇಂಥ ವಯಸ್ಸಿನಲ್ಲಿ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲ. ಆದರೂ ಹಾಗೆಯೇ ಕಾಯುತ್ತಲೇ ಇದ್ದಾಳೆ ಆಕೆ; ಒಂದಿನಿತೂ ತಾಳ್ಮೆಗೆಡದೇ. ಹೊತ್ತಲ್ಲದ ಹೊತ್ತಲ್ಲಿ ಒಂದೇ ಒಂದು ಕ್ಷಣ ತೂಕಡಿಸಿದರೂ ಆತ ಹಾದು ಹೋಗಿಬಿಟ್ಟರೆ... ಹಾಗಾಗಿ ಕಣ್ಮುಚ್ಚಲೂ ಹಿಂಜರಿಕೆ. ಬ್ಲಾಕ್ ಎಂಡ್ ವೈಟ್ ಸಿನೆಮಾದ ಹಳೆಯ ಕಾಪಿಗಳಲ್ಲಿನ ಅಸ್ಪಷ್ಟ ಚಿತ್ರಗಳಂತೆ ಏನೇನೋ ಕಣ್ಣೆದುರು ಹಾದು ಹೋಗುತ್ತಿದೆ. ಕಂಡೂ ಕಾಣದಂತಿರುವ ಆ ದೃಶ್ಯಗಳನ್ನು ಏನೆಂದೂ ಅರ್ಥೈಸಿಕೊಳ್ಳಲಾಗುತ್ತಿಲ್ಲ. ಯಾವುದೂ ತರ್ಕಕ್ಕೆ ಸಿಗುತ್ತಿಲ್ಲವೆಂದಾದ ಮೇಲೆ ಅದರಲ್ಲಿ ಬಂದು ಹೋಗುತ್ತಿರುವ ವ್ಯಕ್ತಿಗಳನ್ನು ಇಂಥವರೇ ಎಂದು ನಿರ್ಧರಿಸುವುದು ದೂರವೇ ಉಳಿಯಿತು. ಒಂದು ರೀತಿಯಲ್ಲಿ ರಾಜಧಾನಿ ಎಕ್ಸ್ಪ್ರೆಸ್ಗಿಂತಲೂ ವೇಗದಲ್ಲಿ ದೃಶ್ಯ ಸಾಗುತ್ತಿದೆ. ಅದು ನಿಜವೋ ಭ್ರಮೆಯೋ ಒಂದನ್ನೂ ಅರ್ಥ ಮಾಡಿಕೊಳ್ಳಲು ಆಕೆಯಿಂದ ಸಾಧ್ಯವಾಗುತ್ತಿಲ್ಲ. ಏಕೆಂದರೆ ಆಕೆ ವೃದ್ಧೆ. ವಿವೇಚನೆಯೂ ಕೈಕೊಡುವಷ್ಟು ವಯಸ್ಸಾಗಿ ಹೋಗಿದೆ. ಆದರೂ ನಿಜವೆಂದೇ ನಿರ್ಧರಿಸಿದ್ದಾಳೆ. ಏಕೆಂದರೆ ಏನೇನೋ ಕಂಪನದ ಅನುಭವ ತಾನು ಕುಳಿತ ನೆಲದಲ್ಲಿ ಆಗುತ್ತಿದೆ. ಹೀಗಾಗಿ ಬಹಳಷ್ಟು ಚಲನೆ ಅಲ್ಲಿ ನಡೆದಿದೆ. ಅದರಲ್ಲಿ ಯಾವುದಾದರೂ ಒಂದು ರಾಮನ ಆಗಮನದಿಂದಲೇ ಆಗಬಹುದು ಎಂಬ ಆಶಾಭಾವದಿಂದ ಅದನ್ನೂ ದಿಟ್ಟಿಸುತ್ತಲೇ ಇದ್ದಾಳೆ. ಕುಳಿತೂ ಕುಳಿತೂ ಕೈಕಾಲುಗಳು ಮರಗಟ್ಟಿಕೊಂಡುಬಿಟ್ಟಿವೆ. ಒಮ್ಮೆ ಯಾದರೂ ಒಂದೆರಡು ಹೆಜ್ಜೆ ಹಿಂದೆ ಮುಂದೆ ಆಡಿದರೆ ಸ್ವಲ್ಪವಾದರೂ ನಿರಾಳವಾಗಬಹುದು. ಆದರೆ ಆಕೆಗೆ ವಯಸ್ಸಾಗಿ ಹೋಗಿದೆ. ಏಳಲೇ ಸಾಕಷ್ಟು ಸಮಯ ಹಿಡಿಯುತ್ತದೆ. ಏಕಾಗ್ರತೆಯಿಂದ ಊರುಗೋಲನ್ನು ಆಧರಿಸಿ ಬಿಗಿಯಾಗಿ ಹಿಡಿದು ಏಳಬೇಕು. ಒಮ್ಮೆ ಎದ್ದರೆ ಮತ್ತೆ ಕೂರಲು ಕಸರತ್ತು ಮಾಡಬೇಕು. ಇಂಥ ಪ್ರಕ್ರಿಯೆಗೆ ಹಿಡಿಯುವ ಸಮಯದಲ್ಲಿ ರಾಮ ಬಂದು ಹೋಗಿಬಿಟ್ಟರೆ? ಏಕೆಂದರೆ ಅಷ್ಟು ಸಮಯ ಮತ್ತಿನ್ನೆಲ್ಲೂ ನೋಡಲು ಆಕೆಗೆ ಆಗುವುದಿಲ್ಲ. ಅತ್ತಿತ್ತ ನೋಡಿದರೆ ದೇಹ ಸಮತೋಲನ ಕಳೆದುಕೊಂಡು ಬಿದ್ದು ಬಿಡುತ್ತಾಳೆ. ಹೀಗಾಗಿ ಆಕೆ ಏಳದೇ ಕುಳಿತಲ್ಲಿಯೇ ಕುಳಿತಿದ್ದಾಳೆ. ತಾನು ಓಡಾಡುತ್ತಿದ್ದ ದಿನಗಳಿಗಿಂತಲೂ ಈಗಿನ ಯುಗ ಸಿಕ್ಕಾಪಟ್ಟೆ ವೇಗವಾಗಿದೆ ಎಂಬುದು ಆಕೆಗೆ ಗೊತ್ತು. ಅದು ಎಷ್ಟು ವೇಗದ್ದಿರಬಹುದು ಎಂಬುದನ್ನು ಆಕೆಯಿಂದ ಅಳೆಯಲಿಕ್ಕಾಗುತ್ತಿಲ್ಲ. ಆಕೆಯ ಚರ್ಮ ಸ್ಪರ್ಶ ಜ್ಞಾನವನ್ನು ಕಳೆದುಕೊಂಡಿದೆ. ಹೀಗಾಗಿ ಸಂಚಾರ ದಟ್ಟಣೆಯಿಂದ ನೆಲ ನಡುಗುತ್ತಲೇ ಇದ್ದರೂ ಅದೆಲ್ಲೋ ಪುಟ್ಟದಾಗಿ ಅನುಭವಕ್ಕೆ ಬರುತ್ತಿದೆ. ರಣಗುಡುವ ಬಿಸಿಲು ನೆತ್ತಿಯ ಮೇಲೆ ಸುಡುತ್ತಿದ್ದರೂ ಆಕೆಯ ಸುಕ್ಕುಗಟ್ಟಿದ ತೊಗಲಿಗೆ ಅದರ ತೀವ್ರತೆ ಮುಟ್ಟಬೇಕಲ್ಲಾ? ಅಂಥ ಬಿಸಿಲಿನಲ್ಲಿಯೇ ಮುರುಕು ಮನೆಯ (ಮನದ ಎಂದೂ ಹೇಳಬಹುದೇನೋ? ಏಕೆಂದರೆ ಮನಸ್ಸು ಸಹ ಈಗಾಗಲೇ ಸಾಕಷ್ಟು ನೋವಿನಿಂದ ಮುರಿದು ಕುಳಿತದ್ದೂ ಸುಳ್ಳಲ್ಲ) ಮುಂದೆ ಅವನದ್ದೇ ಧ್ಯಾನದಲ್ಲಿ ಕುಳಿತಿದ್ದಾಳೆ. ಯಾರೆಂದರೆ ಯಾರೂ ಆಕೆಯತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಏಕೆಂದರೆ ಆ ಮುದುಕಿಯ ಬಳಿ ಏನೂ ಇಲ್ಲವೆಂದು ಗೊತ್ತಿದೆ. ಹಾಗೆಂದು ಆಕೆ ಒಂದಷ್ಟನ್ನು ಸಂಗ್ರಹ ಮಾಡಿಕೊಂಡಿಟ್ಟಿದ್ದಾಳೆ. ಹಾಗೆ ಕೈಲಾಗದೇ ಕಾಯುತ್ತ ಕುಳಿತುಕೊಳ್ಳುವ ಮೊದಲೇ ಮೂಲೆ ಮೂಲೆಗಳನ್ನು ಅಲೆದು ಶ್ರಮದಿಂದ ಒಂದಷ್ಟನ್ನು (ಹಣ್ಣು) ಆಯ್ದು ತಂದು ತನ್ನೆದುರು ಸಂಗ್ರಸಿಕೊಂಡಿದ್ದಾಳೆ. ಅಷ್ಟೇ ಅಲ್ಲ. ಅದರಲ್ಲಿ ಅಮೂಲ್ಯವಾದುದನ್ನು ಹೆಕ್ಕಿ ತೆಗೆದು, ಮತ್ತೆ ಮತ್ತೆ ಪರೀಕ್ಷಿಸಿ ನಿಜಕ್ಕೂ ಮೌಲ್ಯಯುತವಾದುದೇ ಎಂಬುದನ್ನು ಖಚಿತಪಡಿಸಿಕೊಂಡು ತನ್ನೆದುರಿನ ಹಳೆಯ ಬುಟ್ಟಿಯಂತಿರುವ ಶಿಬ್ಬಲಿನಲ್ಲಿ ಹಾಕಿಟ್ಟುಕೊಂಡು ಕುಳಿತಿದ್ದಾಳೆ. ಅದರ ಮೇಲೆ ಹಳೆಯ ಹರಕು ಚಂಪೆಯಂತಾದ ಸೀರೆಯ ಸೆರಗನ್ನು ಹಾಸಿ ಮುಚ್ಚಿಟ್ಟುಕೊಂಡಿರುವುದುರಿಂದ ಅಲ್ಲಿ ಸುಳಿದಾಡುವ ರಕ್ಕಸರಿಗೆ ತಿಳಿದಿಲ್ಲ. ಕೆಲ ರಕ್ಕಸರ ಗಮನಕ್ಕೆ ಬಂದಿದ್ದರೂ 'ಅಯ್ಯೋ, ಹಣ್ಣು ಮುದುಕಿಯ ಬಳಿ ಇನ್ನೇನಿದ್ದೀತು?' ಎಂಬ ಅಸಡ್ಡೆಯಿಂದ ಹೋಗಿದ್ದಾರೆ. ಹೀಗಾಗಿ ಅದನ್ನು ರಾಮ ಬಂದರೆ ಆತನಿಗೇ ಕೊಡಬೇಕೆಂದು ಕಾಯುತ್ತಾ ಕುಳಿತಿದ್ದಾಳೆ. ಬಂದರೆ ರಾಮನೇ ಬರಬೇಕು. ಅಲ್ಲದಿದ್ದರೆ ಬೇರಿನ್ನಾರೂ ಆಕೆಯತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಏಕೆಂದರೆ ಒಂದೊಮ್ಮೆ ಆಕೆಯ ಬಳಿ ಹೋದಾಗಲೇ ಆಕೆ ಪ್ರಾಣ ಬಿಟ್ಟುಬಿಟ್ಟರೆ ಸುಖಾ ಸುಮ್ಮನೆ ಅಪ ವಾದ ಕೇಳುವುದು ಏಕೆಂಬ ಭಯದಿಂದ ಬೇರಾರೂ ಆಕೆಯ ಗೊಡವೆಗೆ ಹೋಗಿಲ್ಲ. ಹಾಗೆಂದು ಅವಳಿಗೆ ಭಯವಿಲ್ಲ. ಆ ದಟ್ಟ (ಕಾಂಕ್ರೀಟ್) ಕಾಡಿನಲ್ಲಿ ನಿರಂತರ ಕೇಳಿ ಬರುತ್ತಿರುವ ಕರ್ಕಶ ಶಬ್ದಕ್ಕೂ ಆಕೆ ಎಂದಿಗೂ ಬೆಚ್ಚಿ ಬಿದ್ದಿಲ್ಲ. ಭೋರ್ಗರೆಯುತ್ತಲೇ ಇರುವ ಚಿತ್ರವಿಚಿತ್ರ ಧ್ವನಿ ಆಕೆಗೆ ಅಷ್ಟೇನೂ ಸ್ಪಷ್ಟವಿಲ್ಲ. ಒಮ್ಮೊಮ್ಮೆ ಸಿಗ್ನಲ್ ಸಿಕ್ಕಾಗ ಕಿವಿಗಡಚಿಕ್ಕುವ, ಮತ್ತೊಮ್ಮೆ ಹಾವು ಬುಸುಗುಡುವಂತೆ ಬುಸುಗುಡುತ್ತಾ ಹಠಹೊತ್ತು ಕುಳಿತುಬಿಡುತ್ತಿದ್ದ ಹಳೆಯ ರೇಡಿಯೋಗಳಂತೆ ಆಕೆಗೆ ಅನುಭವವಾಗುತ್ತಿದ್ದರೂ ಅದರಲ್ಲಿ ತನ್ನ ರಾಮನ ಹೆಜ್ಜೆಯ ಸಪ್ಪಳ ಕೇಳೀತೆಂಬ ಆಸೆಯಿಂದ ಕಿವಿಗೊಟ್ಟು ಕೇಳುತ್ತ ಕುಳಿತಿದ್ದಾಳೆ.... ಶಬ್ದಕ್ಕೆ ಕಿವಿ ಹಚ್ಚಿದ್ದಕ್ಕೆ ಶ್ರವಣ ಶಕ್ತಿ ಕಳಕೊಂಡಿದ್ದಲ್ಲ. ವಯಸ್ಸಿಗನುಗುಣ ಕಿವುಡದು...
ಹೀಗೆ ಮೈಯಲ್ಲಾ ಕಣ್ಣಾಗಿ, ಕಿವಿಯಾಗಿ ತದೇಕ ಧ್ಯಾನದಿಂದ ಕುಳಿತು ಯುಗಗಳಾದರೂ ರಾಮ ಬಂದಿಲ್ಲ. ಏಕೆಂದರೆ ಆಧುನಿಕ ರಾಮನಿಗೆ ಶಬರಿಯೇ ಬೇಕಿಲ್ಲ. ಹಾಗೂ ಬೇಕಿದ್ದರೆ ಅವರಿಗಾಗಿ ವೃದ್ಧಾಶ್ರಮದಲ್ಲಿ ಸೀಟು ರಿಸರ್ವ್ ಮಾಡಿಸಿದ್ದಿದೆ. ಅದನ್ನು ರಿನ್ಯೂ ಮಾಡಿಸಿಕೊಡುತ್ತಾರೆ. ವರ್ಷದ ಫೀಸನ್ನೂ ಅವರೇ ತುಂಬುತ್ತಾರೆ. ವರ್ಷಕ್ಕೊಂದು ಬಾರಿ ಮಕ್ಕಳೊಟ್ಟಿಗೆ ಬಂದು, ಕೇಕು ಕತ್ತರಿಸಿ 'ಹ್ಯಾಪಿ ಬರ್ಥ್ ಡೇ ಟು ಯೂ...' ಹಾಡಿ ಹೋಗುತ್ತಾರೆ. ಹೆತ್ತ ಸುಮಿತ್ರೆಯೇ ಬೇಡವಾದವನಿಗೆ ಶಬರಿಯ ಹಂಗಾದರೂ ಯಾಕಿದ್ದೀತು? <
= ರಾಧಾ ಸೋಚನಿ
abhyagatha@yahoo.co.in
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.