ಹುಡುಗಿ ತಾಯಿಯಾಗುವ ಹಾಗೆ...
ಕೃತಿ: ಕಪ್ಪೆ ನುಂಗಿದ ಹುಡುಗ
ಲೇ: ಶ್ರೀನಿವಾಸ ವೈದ್ಯ
ಪ್ರಕಾರ: ಕಥಾಸಂಕಲನ
ಪ್ರಕಾಶಕರು: ಅಂಕಿತ ಪುಸ್ತಕ
ಪುಟ: 104, ಬೆಲೆ: 80 ರು.
ಶ್ರೀನಿವಾಸ ವೈದ್ಯ ಅವರ 'ಕಪ್ಪೆ ನುಂಗಿದ ಹುಡುಗ' ಕಥಾಸಂಕಲನದಲ್ಲಿ ಐದು ಕಥೆಗಳಿವೆ. 'ಕೆಲವಂ ಬಲ್ಲವರಿಂದ' ಮೊದಲ ಕಥೆಯಾದರೆ, 'ತರಬೇತಿಯ ದಿನಗಳು' ಸಂಕಲನದ ಕೊನೆಯ ಕಥೆ. ಸುಮ್ಮನೆ ಈ ಎರಡು ಕಥೆಗಳ ಶೀರ್ಷಿಕೆಗಳನ್ನು ಗಮನಿಸಿದರೆ, ಏನೋ ಒಂದು ತಾರ್ಕಿಕ ಸಂಬಂಧ ಇದ್ದ ಹಾಗಿದೆ ಇಲ್ಲಿನ ಕಥೆಗಳಲ್ಲಿ. ಇವೆರಡರ ನಡುವೆ ಬರುವ ಉಳಿದ ಮೂರು ಕಥೆಗಳು ಬದುಕು ಕಲಿಸುವ ಅನುಭವದ ಕಥನಗಳಾಗಿದ್ದು, ಒಟ್ಟಾರೆಯಾಗಿ ಇವು ಜೀವನದ ಪಾಠಗಳೇ ಆಗಿವೆ.
ಕೆಲವು ಕಣ್ಣೆದುರು ನಡೆದ ಘಟನೆಗಳಂತಿದ್ದರೆ, ಇನ್ನೂ ಕೆಲವು ಸ್ವತಃ ಅನುಭವಿಸಿ ಜೀವಪಡೆದಂತಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಘಟ್ಟದಿಂದ ಹಿಡಿದು, ಈವತ್ತಿನ ಇಂಟರ್ನೆಟ್ ಯುಗದವರೆಗೂ ಕಥೆಗಳ ಹರವು ಹರಡಿಕೊಂಡು ಹರಿದಿದೆ. ಹಾಗೆ ಹರಿಯುವಾಗ ಕೆಲವೆಡೆ ನೆರೆ ಬಂದು ಮೈತುಂಬಿ ಹರಿದಿದ್ದರೆ, ಮತ್ತೆ ಕೆಲವೆಡೆ ಬಸವಳಿದು ಮುಂದೆ ಸಾಗಿದೆ. ಬಾಲ್ಯದ ಬೆರಗುಗಣ್ಣಿಗೆ ಕಂಡ ನೆನಪುಗಳಿವೆ, ಗಂಡ-ಹೆಂಡತಿಯರ ನಡುವಿನ ಪ್ರೀತಿ ಕಾಲದ ಜೊತೆ ಸೇರಿ ಕರಗಿ ಕಣ್ಮರೆಯಾಗಿ ನಿತ್ಯ ಶತ್ರುಗಳ ಹಾಗೆ ದ್ವೇಷಿಸುತ್ತ ಬದುಕುವ ವಿಚಿತ್ರ ಆದರೂ ಸತ್ಯ ಅನ್ನಿಸುವ ಘಟನೆಗಳ ಅನುಭವದ ಸಾಂದ್ರತೆಯೂ ಇದೆ. ಇಲ್ಲಿ ಸಿಕ್ಕದ್ದು ಬೇರೆಲ್ಲಿಯಾದರೂ ಸಿಕ್ಕೀತೇನೋ ಎಂದುಕೊಂಡು ಹುಡುಕುವ ಹಪಹಪಿಯಿದೆ. ತಾಯಿ ಅಂದರೆ ಕರುಣೆ, ತಾಯಿ ಅಂದರೆ ಇನ್ನೊಬ್ಬರಿಗಾಗಿ ಭಾವಿಸುವುದು, ಬದುಕುವುದು, ಅದು ತನಗೇ ಎನ್ನುವಂತೆ. ಇಂಥ ತಾಯಂದಿರ ಸಹಜ ನಿಸ್ವಾರ್ಥ ಗುಣಗಳ ಕಥನವೂ ಇಲ್ಲಿದೆ. ಹೊರಗೆ ಮಾತ್ರ ರಾಜಕೀಯ, ಭ್ರಷ್ಟತೆ ಇಲ್ಲ. ಅದು ನಿಜಕ್ಕೂ ಇರುವುದು ನಮ್ಮೊಳಗೆ ಎಂದು ಅಂಗೈಹುಣ್ಣಿಗೆ ಕನ್ನಡಿ ಹಿಡಿದು ತೋರುವ ಪ್ರಯತ್ನವೂ ಇಲ್ಲಿದೆ. ಸಾಧನೆಗೆ ಹಾದಿ ಯಾವುದಾದರೇನು ಗುರಿ ಮುಖ್ಯ ಎನ್ನುವ ಆಧುನಿಕ ವಿಕೃತ ಮನಸ್ಸಿಗೆ ಔಷಧಿ ಇಲ್ಲವಲ್ಲ ಎನ್ನುವ ವಿಷಾದ ಭಾವವೂ ವೈದ್ಯರ ಈ ಕಥೆಗಳಲ್ಲಿದೆ. ಮಳೆ ತುಂಬಿದ ಮೋಡ ಭಾರವಾಗಿದೆ, ಮಳೆಗರೆಯಬೇಕು. ಎಲ್ಲೆಲ್ಲೋ ಅಲೆದು ಬಂದಿದೆ. ಇನ್ನು ಒಡಲೊಳಗಿಟ್ಟುಕೊಂಡು ಅಲೆಯುವುದಕ್ಕಾಗುವುದಿಲ್ಲ. ನಾನು ಏನನ್ನೋ ನೋಡಿದ್ದೇನೆ, ಬದುಕನ್ನು ಅನುಭವಿಸಿದ್ದೇನೆ, ನನಗೆ ಏನೋ ಗೊತ್ತಾಗಿದೆ, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿದೆ, ಬನ್ನಿ ನನ್ನ ಜೊತೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಎನ್ನುವಂತಿದೆ ವೈದ್ಯರ ಕಥೆ ಹೇಳುವ ಧೋರಣೆ ಈ ಸಂಕಲನದಲ್ಲಿ.
ಇದಕ್ಕೆ ಪೂರಕವೆನ್ನುವಂತೆ, ಬೆನ್ನುಡಿಯಲ್ಲಿ ಕಥೆಗಾರ ಮತ್ತು ಸೂಕ್ಷ್ಮ ಮನಸ್ಸಿನ ಕವಿ ಜಯಂತ ಕಾಯ್ಕಿಣಿ 'ವೈದ್ಯರ ಕತೆ ಕಾದಂಬರಿಗಳನ್ನು ಓದುವುದೆಂದರೆ ಎಂದೋ ಎಲ್ಲೋ ಕಾಣೆಯಾಗಿದ್ದ ಬಂಧುಬಳಗದವರನ್ನೆಲ್ಲ ದಾರಿಯಲ್ಲಿ ಮತ್ತೆ ಭೆಟ್ಟಿಯಾದಂತೆ' ಎಂದು ಹೇಳಿದ್ದಾರೆ. ಎಷ್ಟೊಂದು ಅರ್ಥಗರ್ಭಿತ ಮಾತು ಇದು.
ಅಪರೂಪಕ್ಕೆ, ಅದರಲ್ಲೂ ದಾರಿಯಲ್ಲಿ ಸಿಕ್ಕ ಬಂಧುಬಳಗದವರು. ಎಲ್ಲಿಗೋ ಹೊರಟಿದ್ದಾರೆ; ಥಟ್ಟನೆ ನೆನಪಿನ ಬುತ್ತಿ ಬಿಚ್ಚಿ ಹಂಚಿಕೊಳ್ಳುವುದಕ್ಕೆ ಆರಂಭ. ಇಲ್ಲಿನ ಎಲ್ಲದೂ ನಮ್ಮದೇ, ನಮ್ಮಗಳ ಮನೆಯಲ್ಲೇ ನಡೆದದ್ದು, ನಡೆಯುತ್ತಿರುವುದು- ಹೊರಗಿನದು ಯಾವುದೂ ಇಲ್ಲ. ನಿಜಕ್ಕೂ ಈ ಕಥೆಗಳಲ್ಲಿರುವುದೆಲ್ಲ ನಮ್ಮ ನಿಮ್ಮ ಅನುಭವಗಳೇ.
'ಕೆಲವಂ ಬಲ್ಲವರಿಂದ' ಕಥೆಯ 'ಅವನಿಗೆ' ಇನ್ನೂ ಹನ್ನೊಂದು; ಹೆಣ್ಣಿನ ಬಗ್ಗೆ ಏನೇನೂ ಗೊತ್ತಿಲ್ಲ. ಆ ವಯಸ್ಸಿನಲ್ಲಿ ಆಗುವುದೇ ಹಾಗೆ; ಹೊರಗಿನ ಪ್ರಭಾವ ಅವನಲ್ಲಿ ಅವನಿಗೇ ಗೊತ್ತಿಲ್ಲದ ಹಾಗೆ ಹೊಸ ಜಗತ್ತೊಂದನ್ನು ಪರಿಚಯಿಸುತ್ತಾ ಹೋಗುತ್ತದೆ. ಇವನು ಎಲ್ಲರಿಗಿಂತ ಚಿಕ್ಕವನು, ಅವನ ಗುಂಪಿನಲ್ಲಿ. ಗುಂಪಿನ ಹಿರಿಯ ಮಾತಾಡುತ್ತಾನೆ ಹೆಣ್ಣಿನ ಬಗ್ಗೆ. ಹೀಗೆಯೇ ಹುಡುಗನೊಬ್ಬನಿಗೆ ಹೆಣ್ಣು ಪರಿಚಯವಾಗುವುದು. ಅಲ್ಲಿಂದ ಮುಂದೆ ಉದ್ಯೋಗ ಕಲಿತುಕೊಳ್ಳುವ ಕಿರಿಯ ಅಪ್ರೆಂಟಿಸ್ನ ಹಾಗೆ ಹೆಣ್ಣಿನ ಮುಖಾಂತರವೇ ಹುಡುಗ ಜಗತ್ತನ್ನು ನೋಡುವುದು- ಒಳ್ಳೆಯದು-ಕೆಟ್ಟದ್ದು, ಕಾಮ-ಪ್ರೇಮ, ನೋವು-ನಲಿವು, ಶ್ರದ್ಧೆ ಮತ್ತು ಕ್ರೌರ್ಯ- ಈ ಎಲ್ಲವನ್ನೂ ತಿಳಿದುಕೊಳ್ಳುತ್ತಲೇ ತನ್ನನ್ನು ತಾನು ಅರಿತುಕೊಳ್ಳುತ್ತಾ ಹೋಗುವುದು. ಹೆಣ್ಣು ಅವನಿಗೆ ಒಂದು ಆಟ, ಮುಂದೆ ಒಂದು ಸಾಹಸದ ಯಾತ್ರೆ. ಜೊತೆಗೆ ಹೆಣ್ಣು ಅವನಿಗೊಂದು ಪರೀಕ್ಷೆ. ಅವನಿಗೆ ಜಗತ್ತಿನ ಎಲ್ಲ ಮಹತ್ವದ್ದೂ ಇರುವುದು ಅವಳ ಮುಖಾಂತರವೇ. ಅವನೆಲ್ಲ ಬಯಕೆಗಳು ಅವಳು. ಅವನು ಪಡೆಯಬೇಕೆನಿಸಿದ ಎಲ್ಲವೂ ಅವಳೇ. ಅವಳೇ ಅವನ ಪ್ರೇರಣೆ- ಎಲ್ಲ ಒಳ್ಳೆಯದಕ್ಕೆ ಹಾಗೂ ಕೆಟ್ಟದ್ದಕ್ಕೂ. ಅವಳು ಸೇವಕಿಯೂ ಹೌದು, ಸಂಗಾತಿಯೂ ಹೌದು. ಹದಿಹರೆಯಕ್ಕೆ ಕಾಲಿಡುವ ಹುಡುಗನೊಬ್ಬನ ಕುತೂಹಲ, ಬೆರಗು ಮತ್ತು ಸಹಜವಾಗಿ ಆ ವಯಸ್ಸಿನಲ್ಲಿ ಹೆಣ್ಣೊಬ್ಬಳ ಬಗ್ಗೆ, ಅವಳು ವಯಸ್ಸಿನಲ್ಲಿ ದೊಡ್ಡವಳೇ ಆಗಿದ್ದರೂ, ಮೂಡುವ ಅನುಕಂಪ- ಇವೆಲ್ಲವನ್ನು ಸಹಜವಾಗಿ ಹೇಳುತ್ತ ಕಥೆ ಕಟ್ಟುತ್ತಾರೆ, ವೈದ್ಯರು. ವೇಶ್ಯೆಯರಿಗೆ ಮಕ್ಕಳನ್ನು ಕಂಡರೆ ಅಪಾರ ಪ್ರೀತಿ, ಸಹಜ ವಾತ್ಸಲ್ಯ- ತಾಯ್ತನದ ಬಯಕೆ ಇದಕ್ಕೆ ಕಾರಣವೋ ಅಥವಾ ಮಕ್ಕಳಲ್ಲದ ಇತರೆಯವರ ಬಗ್ಗೆ ಅವರಿಗಿರುವ ಜುಗುಪ್ಸೆಯೋ? ವೈದ್ಯರು ಸಂಶೋಧನೆಗೆ ಇಳಿಯದೆ ಸಂಗತಿಗಳನ್ನು ಮಂಡಿಸಿ ತೀರ್ಪಿಗೆ ಜಾಗ ಬಿಟ್ಟು ಕಾರ್ಪೊರೇಟ್ ಜಗತ್ತಿನತ್ತ ಮುಖ ಮಾಡುತ್ತಾರೆ...
ಕಾರ್ಪೊರೇಟ್ ಜಗತ್ತಿನಲ್ಲಿ ನೈತಿಕತೆ ಹುಡುಕುತ್ತ ಹೊರಡುವ 'ಉದ್ಯೋಗ ಪರ್ವ' ಕಥೆ ಸಂಕಲನದ ಕಥೆಗಳಲ್ಲೇ ಭಿನ್ನ. ಈ ಕಥೆ ಓದುವಾಗ ಚಿತ್ತಾಲರ, ಶಾಂತಿನಾಥ ದೇಸಾಯಿಯವರ ಕಥೆಗಳು ಚಿತ್ತದಲ್ಲಿ ಹಾದು ಹೋಗುತ್ತವೆ. ಈ ಜಗತ್ತಿನ ಅಂತರಂಗದಲ್ಲಿ ಪ್ರೀತಿಗೆ, ವಿಶ್ವಾಸಕ್ಕೆ ಜಾಗವಿಲ್ಲ. ಎಲ್ಲ ತೋರುಗಾಣಿಕೆ. ಸದಾ ಸ್ಪರ್ಧೆಗೆ ಸಿದ್ಧತೆ; ಮೆಟ್ಟಿಲುಗಳಾದವರನ್ನೇ ಝಾಡಿಸಿ ತಳ್ಳುವುದು ಇಲ್ಲಿ ನಿಯಮಬಾಹಿರವಲ್ಲ. ಯಾರು ಹೇಗೆ? ಯಾವಾಗ ದಾಳ ಉರುಳಿಸುತ್ತಾರೆ? ತಿಳಿಯುವುದಿಲ್ಲ. ಏಕಾಂಗಿತನ ನೀಗಿಸಿಕೊಳ್ಳಲು ಯಾರ ಹೆಗಲಾದರೂ ನಡೆಯುತ್ತದೆ. ಸ್ಥಾನಮಾನ ಮುಖ್ಯ, ಸಂಪಾದನೆ ಮುಖ್ಯ, ಏಣಿಯ ಕೊನೆಯ ಮೆಟ್ಟಿಲು ಮುಟ್ಟುವುದು ಮುಖ್ಯ- ತನ್ನಾಕೆಯನ್ನು ಇನ್ನೊ ಬ್ಬರ ತೆಕ್ಕೆಗೆ ತಳ್ಳಿಯಾದರೂ ಸರಿ. ದುರಂತವೆಂದರೆ, ಇಲ್ಲಿ ಹೆಣ್ಣು ಗಂಡಿಗೆ ಸಹಕರಿಸುವುದು. ನೈತಿಕ- ಅನೈತಿಕ ಪ್ರಶ್ನೆ ಉದ್ಭವಿಸದಿರುವುದು. ಈವತ್ತಿನ ಬದುಕು ಮುಖ್ಯ. ಅದಕ್ಕೆ, ಕೊನೆಗೆ ವೈದ್ಯರು ಹೇಳುತ್ತಾರೆ, 'ಸುಮ್ಮನ ಅವರಷ್ಟಕ್ಕ ಅವರೂ ನಮ್ಮಷ್ಟಕ್ಕ ನಾವು ಅಂತ ಮುಗಿಸೋದು ಚೊಲೋ!'
ಬಹುಶ- ವೈದ್ಯರಿಗೆ ವಿಶ್ಲೇಷಣೆ ಅಷ್ಟೊಂದು ಮುಖ್ಯ ಅನ್ನಿಸುವುದಿಲ್ಲವೆಂದು ಕಾಣುತ್ತದೆ. ಅವರದು ಕಣ್ಣಿಗೆ ಕಂಡದ್ದನ್ನು ದಾಖಲಿಸುವ ಮನಸ್ಸು.
ಹೀಗೆ ದಾಖಲಿಸುತ್ತಲೇ ವೈದ್ಯರು, ಈ ಸಂಕಲನದ ಒಳ್ಳೆಯ ಕಥೆ- 'ಕಬಡ್ಡಿ... ಕಬಡ್ಡಿ' ಕಟ್ಟುತ್ತಾರೆ. ಪೂರ್ಣಚಂದ್ರ ತೇಜಸ್ವಿಯವರ 'ತಬರನ ಕಥೆ' ಮನಸ್ಸಿನಲ್ಲಿ ಹಾದುಹೋದರೂ, ಇದು ಬೇರೆಯದೇ ಕಥೆ. ತಬರ ತೀರಾ ಕೆಳಹಂತದ ನೌಕರ. ಈ ಕಥೆಯಲ್ಲಿನ ತಬರ -ಶಿರಹಟ್ಟಿ ಮಾಸ್ತರು. ಇವರಿಗೆ ವೃತ್ತಿಯಿಂದ ನಿವೃತ್ತಿಯಾದರೂ, ಜವಾಬ್ದಾರಿಗಳು ಇನ್ನೂ ಹೆಗಲುಬಿಟ್ಟು ಇಳಿದಿಲ್ಲ; ಇರಲೊಂದು ಮನೆ ಕಟ್ಟಿಸುವ ಕೆಲಸಕ್ಕೆ ಕೈಹಾಕಿದ್ದಾರೆ, ಅದು ಅಪೂರ್ಣವಾಗಿದೆ. ಸರೀಕರ ಎದುರು ತಾವು ಕಡಿಮೆಯಿಲ್ಲ ಎಂದು ತೋರಿಸಿಕೊಳ್ಳುವ ಅದಮ್ಯ ಬಯಕೆಗಳಿವೆ ಅವರ ಹೆಂಡತಿ- ಸುಬ್ಬಕ್ಕನಿಗೆ. ಕೈ-ಬೆಚ್ಚಗೆ ಮಾಡದೆ ಪಿಂಚಣಿ ಮಂಜೂರಾಗುವಂತೆ ಕಾಣುತ್ತಿಲ್ಲ, ಜವಾನ ಗೂರಪ್ಪ ಮಾಸ್ತರರ ಹೆಗಲ ಮೇಲೆ ಕೈಯಿಟ್ಟು ಮಾತಾಡುವ ಮಟ್ಟಕ್ಕಿಳಿದು ಸಲಿಗೆ ತೆಗೆದುಕೊಳ್ಳುವುದು, ಶಿರಹಟ್ಟಿಯ ಮಾಸ್ತರರ ಆತ್ಮಾಭಿಮಾನವನ್ನು ಕೊಂದು ಹಾಕುತ್ತಿದೆ, ಅವರು ಭೂಮಿಗಿಳಿದು ಹೋಗಿದ್ದಾರೆ. ಕೊನೆಗೆ ಆಸರೆಗೆ ಮಕ್ಕಳತ್ತ ನೋಡಿದರೆ, ಆರ್ಥಿಕ ದಿವಾಳಿಯಿಂದಾಗಿ, ವಿದೇಶದಲ್ಲಿರುವ ಅವರು ಕೆಲಸ ಕಳೆದುಕೊಂಡಿದ್ದಾರೆ. ಮಕ್ಕಳು ಕಷ್ಟದಲ್ಲಿದ್ದಾರೆ ಎಂದು ತಿಳಿಯುತ್ತಲೇ, ಸುಬ್ಬಕ್ಕ ತನ್ನೆಲ್ಲ ಕನಸುಗಳಿಗೆ ಕೊಳ್ಳಿ ಇಟ್ಟು, ತೀರ್ಮಾನಿಸುತ್ತಾರೆ; ಅಪೂರ್ಣವಾಗಿರುವ ಮನೆಯನ್ನು ಮಾರಾಟ ಮಾಡಿ ಹಾವೇರಿಗೆ ಹೋಗುವುದು; ಅಲ್ಲಿಗೆ ಮಕ್ಕಳನ್ನೂ ಕರೆಸಿಕೊಳ್ಳುವುದು, ಎಲ್ಲರೂ ಒಂದು ಕಡೆ ಇರೋದು. ಸುಬ್ಬಕ್ಕ ಹೆಣ್ಣಾಗಿ, ತಾಯಿಯಾಗಿ ಬೆಳೆಯುವ ಕಥೆ ಮನಸ್ಸನ್ನು ಹಿಡಿದು ಅಲ್ಲಾಡಿಸುತ್ತದೆ. ತಾಯಿ ನೆನಪಾಗುತ್ತಾಳೆ.
ಇಲ್ಲಿಂದ ಮುಂದೆ ವೈದ್ಯರು, ಹೆಣ್ಣು- ಗಂಡಿನ ಸಂಬಂಧಗಳತ್ತ ಹೊರಳುತ್ತಾರೆ. ಪ್ರೀತಿ, ನೆಮ್ಮದಿ, ಅಂತಃಕರಣವನ್ನು ಹೆಣ್ಣಿನಿಂದ ಬಯಸುವ ಗಂಡಿಗೆ ತಾನು ಅವಳಿಗೆ ಕೊಟ್ಟಿದ್ದೆಷ್ಟು? ಎನ್ನುವ ಪ್ರಶ್ನೆಯೇ ಕಾಡುವುದಿಲ್ಲ ಅನ್ನಿಸುತ್ತದೆ ಅವರಿಗೆ. ಪಡೆಯುವುದಷ್ಟು ಮಾತ್ರ ಗಂಡಿಗೆ ಗೊತ್ತೇ? ಸದಾ ಅವನು ಬೇಡುತ್ತಲೇ ಹೋಗುವುದು ವಿಚಿತ್ರವೆನಿಸಿದರೂ ಸತ್ಯ ಅನ್ನಿಸುತ್ತದೆ ಅವರಿಗೆ. ಯಾವುದೇ ತಾತ್ವಿಕತೆಗೂ ಅಂಟಿಕೊಳ್ಳದೆ, ಸೂಕ್ಷ್ಮ ಸಂವೇದನೆಗಳಿರುವ ಆದರೆ ಹೊರಗೇ ನಿಂತು ನೋಡಿದ ಕಥೆ- 'ಕಪ್ಪೆ ನುಂಗಿದ ಹುಡುಗ'. ಸಂಬಂಧಗಳು ಹೇಗೆ, ಯಾವಾಗ, ಏಕೆ? ಹುಟ್ಟುತ್ತವೆಯೆಂದು ಹೇಳುವುದು ಕಷ್ಟ. ಗಂಡು- ಹೆಣ್ಣು ಹತ್ತಿರ ಬರುವುದಕ್ಕೆ ಕಾರಣಗಳು ಬೇಕಾಗುವುದಿಲ್ಲ; ಎರಡು ಅಪರಿಚಿತ ಜಗತ್ತುಗಳು ಹೇಗೋ ಸನಿಹಕ್ಕೆ ಬಂದುಬಿಡುತ್ತವೆ. ಸಮಸ್ಯೆಗಳು ಶುರುವಾಗುವುದು ಅಲ್ಲಿಂದಲೇ, ನಿರೀಕ್ಷೆಗಳು ಹುಟ್ಟಿ ಹತಾಶೆ ಮೂಡಿಸುತ್ತವೆ. ಅವನು ಮದುವೆಯಾದವನು, ಅವನಿಗೆ ಹೆಂಡತಿಯಿದ್ದಾಳೆ ಎನ್ನುವುದು ಗೊತ್ತು ಅವಳಿಗೆ; ಆಗ ಅವಳಿಗೆ ಅದೊಂದು ಅಡ್ಡಗೋಡೆ ಅನ್ನಿಸುವುದಿಲ್ಲ. ಈ ಸಂಬಂಧದಿಂದಾಗಿ ಹೊಣೆಗಾರಿಕೆ ಹೆಗಲೇರುತ್ತಿದೆ ಅನ್ನಿಸುತ್ತಿದ್ದ ಹಾಗೆ, ಗಂಡು ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ನೋಡುವುದು, ಹೆಣ್ಣು ಅವನನ್ನು ಕಟ್ಟಿಹಾಕುವುದಕ್ಕೆ ಯಾವ ಮಟ್ಟಕ್ಕಾದರೂ ಇಳಿಯುವುದು, ದ್ವೇಷ ಎಡೆಯಾಡುವುದು- ಅವರಿಬ್ಬರ ನಡುವೆ ಯಾವುದೇ ಪ್ರೀತಿ ಇರಲಿಲ್ಲವೆನ್ನುವುದನ್ನು ಸಾಬೀತು ಪಡಿಸುತ್ತವೆ. ಈ ಕಥೆಯಲ್ಲಿ ಬರುವ ಪಾತ್ರಗಳು ತಮ್ಮೊಳಗನ್ನು ಶೋಧಿಸಿಕೊಳ್ಳುವುದಿಲ್ಲ. ಹೀಗಾಗಿ, ಅವು ಅನುಭವಿಸುವ ಮಾನಸಿಕ ತಲ್ಲಣ ಓದುಗರನ್ನು ತಟ್ಟುವುದಿಲ್ಲ.
ನೆನಪುಗಳನ್ನು ಬಿಚ್ಚಿಡುತ್ತ ಬೆಳೆಯುವ ಕಥೆ 'ತರಬೇತಿಯ ದಿನಗಳು'. ಈ ಕಥೆಯ ಕ್ವಾನ್ವಾಸ್ ತುಸು ದೊಡ್ಡದು. ಕಣ್ಣಿಗೆ ಕಂಡದ್ದನ್ನೆಲ್ಲ ಸೆರೆ ಹಿಡಿದು ವಿವರಿಸುವ ಶೈಲಿ ಇಲ್ಲಿದೆ. ಜಯಂತ ಕಾಯ್ಕಿಣಿಯವರ ಕಥೆಗಳಲ್ಲಿ ಬರುವ ಮುಂಬಯಿ ಇಲ್ಲಿಯೂ ಬರುತ್ತದೆ, ತನ್ನ ಅಗಾಧ ನಿಗೂಢತೆಯೊಂದಿಗೆ.
ವೈದ್ಯರ ಕಥೆಗಳು ಒಂದೇ ಉಸಿರಿನಲ್ಲಿ ಹೇಳಿಮುಗಿಸುವ ಧಾವಂತದಲ್ಲಿ ಬರೆದಂಥ ಕಥೆಗಳಲ್ಲ. ಒಂದು ತತ್ವಕ್ಕೆ, ಸಿದ್ಧಾಂತಕ್ಕೆ ಬದ್ಧವಾಗಿ, ತನ್ನ ಸುತ್ತ ತಾನೇ ಬಲೆ ಹೆಣೆದುಕೊಂಡ ಕಥೆಗಳೂ ಅಲ್ಲ. ಅವು ಒಬ್ಬ ಹುಡುಗಿ ತಾಯಿಯಾಗುವ ಹಾಗೆ ರೂಪುಗೊಂಡಿವೆ. <
= ಎಂ.ಎಸ್. ರುದ್ರೇಶ್ವರಸ್ವಾಮಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.