ಉಪ್ಪಿನಂಗಡಿ
ಪ್ರವಾಸದ ವಿಭಿನ್ನ ಅನುಭವ ನೀಡುವ ನಮ್ಮ ದೇಶದ ಅನೇಕ ಸ್ಥಳಗಳಲ್ಲಿ ಗುಜರಾತ್ನ 'ಲಿಟ್ಲ್ ರಣ್ ಆಫ್ ಕಛ್' ಕೂಡ ಒಂದು. ಸುಮಾರು 80 ...
-ಲಿಟ್ಲ್ ರಣ್ ಆಫ್ ಕಛ್
ಪ್ರವಾಸದ ವಿಭಿನ್ನ ಅನುಭವ ನೀಡುವ ನಮ್ಮ ದೇಶದ ಅನೇಕ ಸ್ಥಳಗಳಲ್ಲಿ ಗುಜರಾತ್ನ 'ಲಿಟ್ಲ್ ರಣ್ ಆಫ್ ಕಛ್' ಕೂಡ ಒಂದು. ಸುಮಾರು 80 ಕಿ.ಮೀ. ಸುತ್ತಳತೆಯಲ್ಲಿ ಹರಡಿಕೊಂಡಿರುವ ಇಲ್ಲಿ ಕಣ್ಣು ಸೋಲುವಷ್ಟು ಕಾಲು ಚಾಚಿಕೊಂಡಿರುವುದು ಬರೀ ಉಪ್ಪು ಉಪ್ಪು ಮತ್ತು ಉಪ್ಪು...
ಮರುಭೂಮಿ ಎಂದರೆ ಮರಳಿನ ಭೂಮಿಯ ಕಲ್ಪನೆ ಮೂಡುತ್ತದೆ. ಆದರೆ, 'ಉಪ್ಪಿನ ಮರುಭೂಮಿ'ಯೂ ಎಂಬುದಿದೆ! ಪ್ರವಾಸದ ವಿಭಿನ್ನ ಅನುಭವ ನೀಡುವ ನಮ್ಮ ದೇಶದ ಅನೇಕ ಸ್ಥಳಗಳಲ್ಲಿ ಗುಜರಾತ್ನ 'ಲಿಟ್ಲ್ ರಣ್ ಆಫ್ ಕಛ್' ಕೂಡ ಒಂದು. ಸುಮಾರು 80 ಕಿ.ಮೀ. ಸುತ್ತಳತೆಯಲ್ಲಿ ಹರಡಿಕೊಂಡಿರುವ ಇಲ್ಲಿ ಕಣ್ಣು ಸೋಲುವಷ್ಟು ಕಾಲು ಚಾಚಿಕೊಂಡಿರುವುದು ಬರೀ ಉಪ್ಪು ಉಪ್ಪು ಮತ್ತು ಉಪ್ಪು.
ಭೂ ವಿಜ್ಞಾನಿಗಳ ಪ್ರಕಾರ, ಕೆಲ ಶತಮಾನಗಳ ಹಿಂದೆ ಇದು ಅರಬ್ಬೀ ಸಮುದ್ರದ ಭಾಗವಾಗಿತ್ತು. ಆದರೆ ಪ್ರಕೃತಿ ವಿಕೋಪಗಳಿಂದ, ಭೂಮಿಯ ಉಷ್ಣಾಂಶ ಹೆಚ್ಚಳದಿಂದ ಸಮುದ್ರ ಹಿಂದೆ ಸರಿದು ಈ ಉಪ್ಪಿನ ಮರುಭೂಮಿ ನಿರ್ಮಾಣವಾಗಿದೆ. ಹೀಗೆ ಇದು ಸಮುದ್ರದ ಭಾಗವಾಗಿತ್ತು ಎಂಬುದಕ್ಕೆ ಪುರಾವೆಯಾಗಿ, ಹಳೆಯ ಕಾಲದ ಅಳಿದುಳಿದ ಬಂದರುಗಳು, ಹಡಗು ಕಟ್ಟೆಗಳು ಹಾಗೂ ಲೈಟ್ಹೌಸ್ಗಳ ಅವಶೇಷಗಳು ಈ ಉಪ್ಪಿನ ಮರುಭೂಮಿಯ ವ್ಯಾಪ್ತಿಯಲ್ಲಿ ಬರುವ ಜಿಂಜ್ಹ್ವಾಡ, ಖೋಡ್, ಟೆಕಾರ್ ಇತ್ಯಾದಿ ಹಳ್ಳಿಗಳಲ್ಲಿ ಇಂದಿಗೂ ಕಾಣಸಿಗುತ್ತವೆ.
ಸಹಸ್ರಾರು ವರ್ಷಗಳ ಕಾಲ ಸಮುದ್ರದಡಿಯಲ್ಲಿ ಇದ್ದುದರಿಂದಲೋ ಏನೋ ಇಲ್ಲಿನ ನೆಲದಾಳದಲ್ಲಿ ಶೇ. 18ರ ಸಾಂದ್ರತೆಯಿರುವ ಉಪ್ಪಿನ ನೀರಿದೆ! ಹೀಗಾಗಿ ಇಲ್ಲಿ ಮರಗಿಡಗಳಿಲ್ಲ! ಏನೂ ಬೆಳೆಯಲಾಗುವುದಿಲ್ಲ! ವಾಹನದಲ್ಲಿ ಕುಳಿತು ಮುಂದೆ ಸರಿಯುತ್ತಿದ್ದಂತೆ 'ದೂರದಲ್ಲಿ ನೀರಿದೆ' ಎಂದೆನಿಸುತ್ತದೆ. ಆದರೆ ಇದೊಂದು ಭ್ರಮೆ! ನೀರು ಇಲ್ಲಿ ಮರೀಚಿಕೆ. ಸಾಮಾನ್ಯವಾಗಿ ಮರುಭೂಮಿಯಲ್ಲಿ ಬಿಸಿಲಿನ ಝಳ ಸೃಷ್ಟಿಸುವ ಈ ಭ್ರಮೆಯೇ ಬಿಸಿಲ್ಗುದುರೆ. ಮರಳಿನ ಮರುಭೂಮಿಯಂತೆಯೇ ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 45 ಡಿಗ್ರಿಯಿಂದ 50 ಡಿಗ್ರಿ ಸೆಂಟಿಗ್ರೇಡ್ನಷ್ಟು.
ಇಂಥ ಕಠಿಣ ಹವಾಮಾನವಿದ್ದರೂ ಇಲ್ಲಿ ಜನವಸತಿಯುಂಟು. ಬರೋಬ್ಬರಿ ಒಂದು ಲಕ್ಷ ಜನ ವಾಸಿಸುತ್ತಿದ್ದಾರೆ. ಇಲ್ಲಿನ ಜನರ ಮುಖ್ಯ ಕಸುಬು- ಉಪ್ಪಿನ ಕೃಷಿ. ನಮ್ಮ ದೇಶದ ಒಟ್ಟು ಉಪ್ಪಿನ ಉತ್ಪಾದನೆಯಲ್ಲಿ ಗುಜರಾತ್ನ ಕೊಡುಗೆ ಶೇ.70. ಅದರಲ್ಲಿ ಶೇ.70ರಷ್ಟು ಉಪ್ಪಿನ ಉತ್ಪಾದನೆಯಾಗುವುದು ಈ ಲಿಟ್ಲ್ ರಣ್ ಆಫ್ ಕಛ್ನಲ್ಲಿ.
ಅದೃಷ್ಟದಾಟ
ಇಲ್ಲಿ ಉಪ್ಪಿನ ತಯಾರಿಕೆ ಸಂಪೂರ್ಣ ಶ್ರಮಿಕರ ಶ್ರಮವನ್ನಾಧರಿಸಿದೆ. ಆರೇಳು ಜನರ ಒಂದು ಕುಟುಂಬ. ವಿಸ್ತಾರವಾದ ಬಯಲಿನ ಒಂದೆಡೆಯಲ್ಲಿ ಗುಡಿಸಲು ಕಟ್ಟಿ ವಾಸಿಸುತ್ತದೆ. ಗುಡಿಸಲಿನ ಎದುರು ಆ ಮನೆ ಮಂದಿ ಗುಂಡಿ ತೋಡಲು ಪ್ರಾರಂಭಿಸುತ್ತಾರೆ. ಕನಿಷ್ಠ 30 ಅಡಿ ಇಲ್ಲವೆ ಗರಿಷ್ಠ 60 ಅಡಿಗೆ ಇಲ್ಲಿ ನೀರು ಸಿಗುತ್ತದೆ. ಆದರೆ ಹಾಗೆ ನೀರು ಸಿಕ್ಕೇಬಿಡುತ್ತದೆಂಬ ಭರವಸೆ ಏನಿಲ್ಲ. ಸಿಕ್ಕದಿದ್ದರೆ ಆ ಕುಟುಂಬ ತನ್ನ ಅಷ್ಟೂ ದಿನದ ವ್ಯರ್ಥ ಶ್ರಮವನ್ನು ಮರೆತು ಇನ್ನೊಂದೆಡೆ ಉಪ್ಪಿನ ನೀರು ಸಿಗುವ ಜಾಗ ಹುಡುಕಿಕೊಂಡು ಹೋಗಬೇಕು! ಹೀಗಾಗಿ ಇಲ್ಲಿನ ಉಪ್ಪಿನ ಕೃಷಿಕರ ಬದುಕು ಅದೃಷ್ಟದಾಟದ ಮೇಲೆ ಅವಲಂಬಿತ.
ಇಲ್ಲಿ ಸಿಗುವ ಶೇ.18ರ ಸಾಂದ್ರತೆಯ ನೀರನ್ನು ಡೀಸೆಲ್ ಜನರೇಟರ್ನಿಂದ, ಚಲಿಸುವ ಪಂಪ್ನಿಂದ ಮೇಲೆತ್ತಿ ಸುತ್ತಲೂ ಬದು ಕಟ್ಟಿ ಮಾಡಿರುವ ಗದ್ದೆಗೆ ದಿನವಿಡೀ ಹಾಯಿಸುತ್ತಾರೆ. ಹೀಗೆ, ಒಂದರ ಪಕ್ಕ ಒಂದು ಎಂಟು ಗದ್ದೆಗಳಿರುತ್ತವೆ. ಹಾಯಿಸಿದ ನೀರು ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ಹರಿಯುತ್ತದೆ. ಹೀಗೆ ಎಂಟನೇ ಗದ್ದೆಗೆ ಬರುವ ಹೊತ್ತಿಗೆ ಅದರಲ್ಲಿರುವ ಉಪ್ಪಿನ ಸಾಂದ್ರತೆ ಹೆಚ್ಚಿ ಅದು ಶೇ.24ರಷ್ಟಾಗುತ್ತದೆ. ಇದನ್ನು ಸುಮಾರು 8 ತಿಂಗಳು ಒಣಗಿಸಿ ಹರಳುಗಟ್ಟಿಸುತ್ತಾರೆ. ನಂತರ ಬಿಳಿಯ ಹರಳುಪ್ಪು ಸಿದ್ಧವಾಗುತ್ತದೆ.
ಬದುಕು- ಬವಣೆ
ನಮ್ಮೆಲ್ಲರ ಅಡುಗೆಗೆ, ತಿಂಡಿ ತಿನಿಸುಗಳಿಗೆ ರುಚಿ ನೀಡುತ್ತಿರುವ ಈ ಉಪ್ಪಿನ ಕೃಷಿಕರ ಬದುಕು ಮಾತ್ರ ತೀರಾ ಶೋಚನೀಯ ಸ್ಥಿತಿಯಲ್ಲಿದೆ. ಕಾರಣ, ನೆಲದಾಳದಿಂದ ನೀರೆತ್ತುವುದೊಂದನ್ನುಳಿದು, ಗುಂಡಿ ತೋಡುವುದು, ಗದ್ದೆ ಮಾಡುವುದು, ಹರಳುಗಟ್ಟುತ್ತಿರುವ ಉಪ್ಪನ್ನು ಕಾಲ ಕಾಲಕ್ಕೆ ಮಗುಚುವುದು, ನಂತರ ರಾಶಿ ಮಾಡಿ ಲಾರಿಗಳಿಗೆ ತುಂಬುವವರೆಗೆ ಎಲ್ಲವೂ ಶ್ರಮಿಕರ ಕೈ ಕಸುಬು. ಯಾವುದೂ ಯಾಂತ್ರೀಕೃತವಲ್ಲ! ಬಿಸಿಲಿನ ಝಳದಲ್ಲಿ, ಉಪ್ಪಿನ ನೀರಿನಲ್ಲಿ ಗಂಟೆಗಟ್ಟಲೆ ನಿಂತು ಕೆಲಸ ಮಾಡುವುದರಿಂದ ಇಲ್ಲಿನ ಕಾರ್ಮಿಕರಿಗೆ ಕಾಲು ಕೊಳೆಯುವ ರೋಗ (ಗ್ಯಾಂಗ್ರೀನ್) ಸಾಮಾನ್ಯ. ಅಂತೆಯೇ ಅಪೌಷ್ಟಿಕತೆ ಇಲ್ಲಿನ ಬಹುದೊಡ್ಡ ಪಿಡುಗು. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಜನರನ್ನು ಕಿತ್ತು ತಿನ್ನುತ್ತಿರುವ ಬಡತನ. ಎಂಟು ತಿಂಗಳು ವಿಪರೀತ ಹವಾಮಾನ ಪರಿಸ್ಥಿತಿಯಲ್ಲಿ ಮೈಮುರಿದು ದುಡಿದರೂ ಕೆ.ಜಿ. ಉಪ್ಪಿಗೆ ಇವರಿಗೆ ಸಿಗುವ ಹಣ ಕೇವಲ 25 ಪೈಸೆ! ಹೀಗಾಗಿ ಖರ್ಚೆಲ್ಲಾ ಕಳೆದು ಆರೇಳು ಜನರ ಒಂದು ಕುಟುಂಬಕ್ಕೆ ದಕ್ಕುವ ವಾರ್ಷಿಕ ಆದಾಯ 25 ರಿಂದ 30 ಸಾವಿರ ರು. ಮಾತ್ರ! ಜೊತೆಗೆ ಇಲ್ಲಿಗೆ ಡಾಂಬರು ರಸ್ತೆಗಳಿಲ್ಲ, ಬಸ್ ಸೌಕರ್ಯವಿಲ್ಲ, ವಿದ್ಯುಚ್ಛಕ್ತಿ ಇಲ್ಲ, ಹತ್ತಿರದಲ್ಲೆಲ್ಲೂ ಆಸ್ಪತ್ರೆಗಳಿಲ್ಲ, ಕಾಯಿಲೆ ಬಿದ್ದರೂ ಮೈಲುಗಟ್ಟಲೆ ನಡೆದೇ ಆಸ್ಪತ್ರೆಗೆ ಹೋಗಬೇಕು! ನೆಲದಾಳದಲ್ಲಿ ದೊರೆಯುವುದು ಉಪ್ಪು ನೀರಾದ್ದರಿಂದ, ಕುಡಿಯಲು, ಅಡುಗೆ ಮಾಡಲು ರಾಜ್ಯ ಸರ್ಕಾರ ಹದಿನೈದು ದಿನಗಳಿಗೊಮ್ಮೆ ಸರಬರಾಜು ಮಾಡುತ್ತಿರುವ ಟ್ಯಾಂಕರ್ ನೀರಿಗಾಗಿ ಕಾಯಬೇಕು. ಹೀಗಾಗಿ ನಮ್ಮ ದೇಶದಲ್ಲಿ ಅಪೌಷ್ಟಿಕತೆಯಿಂದ ಸಾಯುವವರಲ್ಲಿ ಹೆಚ್ಚಿನವರು ಈ ಉಪ್ಪಿನ ಕೃಷಿಕರು.
ಅಲ್ಲೊಂದು ಓಯಸಿಸ್
ಈ ಉಪ್ಪಿನ ಮರುಭೂಮಿಯಲ್ಲಿ ಮನುಷ್ಯರಂತೆ ಸಾಕಷ್ಟು ಪಶುಪಕ್ಷಿಗಳೂ ವಾಸ್ತವ್ಯ ಹೂಡಿವೆ. ಇವುಗಳಿಗೆಲ್ಲ ನೀರಿನ ಸೆಲೆಯಿರುವುದು ವೆಚ್ಚಾರ್ಜಿ ಬೆಟ್ನಲ್ಲಿರುವ ಸಿಹಿ ನೀರಿನ ಕೊಳ. ಅಲ್ಲಿ 70-75 ಸಾವಿರ ಫ್ಲೆಮಿಂಗೊ, ಹೌಬಾರಾ ಬಸ್ಟರ್ಡ್, ಬೂದು ಫೆಲಿಕಾನ್, ಕ್ವಿಲ್ಸ್ ಇತ್ಯಾದಿ ಪಕ್ಷಿಸಂಕುಲಗಳು ಸಂಸಾರ ಹೂಡಿವೆ. ಚಳಿಗಾಲದಲ್ಲಿ ಪಕ್ಷಿಪ್ರಿಯರಿಗೆ ಇದೊಂದು ಧರೆಗಳಿದ ಸ್ವರ್ಗದಂತೆ ಭಾಸವಾಗುತ್ತದೆ.
ಲಿಟ್ಲ್ ರಣ್ ಆಫ್ ಕಛ್ನ ಇನ್ನೊಂದು ಮುಖ್ಯ ಆಕರ್ಷಣೆ ಇಲ್ಲಿರುವ ಕಾಡು ಕತ್ತೆಗಳು (ಗ್ಝಿಟಜ ಆಡಡ). ಭಾರತದಲ್ಲಿ ಕಾಡುಕತ್ತೆಗಳ ಏಕೈಕ ನೆಲೆ ಈ ಲಿಟ್ಲ್ ರಣ್ ಆಫ್ ಕಛ್. ಕತ್ತೆಗಳೆಂದು ಕರೆಯಲ್ಪಟ್ಟರೂ, ನೋಡಲು ಇವು ಕುದುರೆಗಳಂತೆಯೇ ಕಾಣುತ್ತವೆ. ಕುದುರೆಗಳ ಸಂತತಿಗೆ ಸೇರಿದ ಒಂದು ಪ್ರಭೇದವಾದ ಇವುಗಳಿಗೆ ಕುದುರೆಗಳಿಗಿರುವ ಸೊಬಗಿನ ದೇಹ ರಚನೆಯಿದೆ ಹಾಗೂ ಇವುಗಳ ಓಟವೂ ಕುದುರೆಗಳ ಓಟದಂತೆ ಆಕರ್ಷಣೀಯ. ಈ ಕಾಡುಕತ್ತೆಗಳಲ್ಲದೆ ನೀಲ್ಗಾಯ್, ಚಿಂಕಾರ, ಬ್ಲಾಕ್ಬಕ್, ತೋಳ, ನರಿ, ಮರುಭೂಮಿ ಬೆಕ್ಕು ಹಾಗೂ ವಿವಿಧ ಜಾತಿಯ ಹಾವುಗಳೂ ಇಲ್ಲವೆ. ನಿಮಗೆ ಅದೃಷ್ಟವಿದ್ದರೆ ನೋಡಲು ಸಿಗುತ್ತವೆ.
ಹೋಗುವುದು ಹೇಗೆ?
ಅಹ್ಮದಾಬಾದ್ನಿಂದ ಕೇವಲ ನೂರು ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಸಾನಂದ್, ವೀರಂಗಾಂವ್, ದಸಾಡೆ ಮಾರ್ಗವಾಗಿ ಇಲ್ಲವೇ ಸಾನಂದ್, ಪಾಟಡಿ ಖಾರಾಗೋಡ ಮಾರ್ಗವಾಗಿ ಟ್ಯಾಕ್ಸಿಯಲ್ಲಿ ತೆರಳಬಹುದು. ನಿಮ್ಮ ಜೇಬುಗಟ್ಟಿಯಿದ್ದರೆ ಲಿಟ್ಲ್ ರಣ್ ಆಫ್ ಕಚ್ನ ಸುತ್ತಮುತ್ತಲಿನ ಪಟ್ಟಣಗಳಾದ ಪಾಟಡಿ, ದಸಾಡ, ಸುರೇಂದ್ರನಗರ ಇತ್ಯಾದಿಗಳಲ್ಲಿ ಸಾಕಷ್ಟು ರೆಸಾರ್ಟ್ಗಳಿವೆ. ಅವುಗಳಲ್ಲಿ ಒಂದು ದಿನದ, ಎರಡು ದಿನದ 'ಸಫಾರಿ ಪ್ಯಾಕೇಜ್ ಟೂರ್' ಲಭ್ಯವಿದೆ. ಅನುಕೂಲಕ್ಕೆ ತಕ್ಕಂತೆ ದಿನಕ್ಕೆ ಒಬ್ಬರಿಗೆ 2,500- 5,000 ರು. ವರೆಗೆ ದರ ವಿಧಿಸುತ್ತಾರೆ. ಆದರೆ ಅವರದೇ ವಾಹನದಲ್ಲಿ ಅವರ ಗೈಡ್ ಜೊತೆಗೆ ತೆರಳುವುದರಿಂದ ಪ್ರಾಣಿ, ಪಕ್ಷಿಗಳ ವೀಕ್ಷಣೆ ಸುಲಭ ಹಾಗೂ ಖಚಿತ. ನಾವೇ ಟ್ಯಾಕ್ಸಿ ಮಾಡಿ ಹೋಗುವುದಾದರೆ ಸುತ್ತಮುತ್ತಲ ಪಟ್ಟಣಗಳಲ್ಲಿ ಗೈಡ್ಗಳು ಸಿಗುತ್ತಾರೆ. ಅವರೊಂದಿಗೆ ಹೋಗುವುದು ಸೂಕ್ತ. ಇಲ್ಲದಿದ್ದರೆ ವಿಶಾಲ ಬಯಲು ಪ್ರದೇಶದಲ್ಲಿ ದಾರಿ ತಪ್ಪುವ ಸಂಭವ ಹೆಚ್ಚು. ರೈಲು ಮಾರ್ಗವಾಗಿ ಹೋಗುವುದಾದರೆ ವೀರಂಗಾಂವ್ ಇಲ್ಲಿಗೆ ಹತ್ತಿರದ ರೈಲು ನಿಲ್ದಾಣ. ಇದು ವಸಾಡಕ್ಕೆ ಕೇವಲ 30 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಹಾಗೂ ದೇಶದ ಇತರ ನಗರಗಳಿಂದ ನೇರ ರೈಲುಗಳಿವೆ.
ಅಕ್ಟೋಬರ್ ತಿಂಗಳಿನಿಂದ ಫೆಬ್ರುವರಿ ಇಲ್ಲಿನ ಪ್ರವಾಸಕ್ಕೆ ಸೂಕ್ತ ಸಮಯ.
-ಎಚ್.ಎಸ್. ನಂದಕುಮಾರ್
ಮುಂಬೈ
sunabha@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.