ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಫಡಕೆ ಮರ

ಇಂದು ಅಲ್ಲೊಬ್ಬರು, ಇಲ್ಲೊಬ್ಬರು ಆದರ್ಶ ಶಿಕ್ಷಕರು ಸಿಗುತ್ತಾರೆ. ಹಿಂದಿನ 'ಆದರ್ಶ' ಪರಂಪರೆ ಕಾಣುವುದು ಇಂದು ತೀರಾ ಅಪರೂಪ. ಈ ....

Rashmi Kasaragodu
Updated On : 20 Apr 2013, 2:28 am

ಇಂದು ಅಲ್ಲೊಬ್ಬರು, ಇಲ್ಲೊಬ್ಬರು ಆದರ್ಶ ಶಿಕ್ಷಕರು ಸಿಗುತ್ತಾರೆ. ಹಿಂದಿನ 'ಆದರ್ಶ' ಪರಂಪರೆ ಕಾಣುವುದು ಇಂದು ತೀರಾ ಅಪರೂಪ. ಈ ಗುರುಗಳು ಹಣ ಸಂಪಾದನೆಗಾಗಿ ಶಿಕ್ಷಕ ವೃತ್ತಿಗೆ ಬಂದವರಲ್ಲ. ಪ್ರಸಿದ್ಧಿ, ಪಾರಿತೋಷಕ ಪಡೆಯಲು ಬಂದವರಲ್ಲ. ನಿತ್ಯವೂ ದಣಿವಿಲ್ಲದೇ ಈ ಅತಿ ಉದಾತ್ತ ವ್ಯವಸಾಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದವರು. ಅಂಥವರಲ್ಲಿ ಅಥಣಿಯ ಕೆ.ಬಿ. ಫಡಕೆಯವರೂ ಒಬ್ಬರು...

ನಮಗೆ ಹತ್ತಿರದವರೊಬ್ಬರು ಈ ಜಗತ್ತಿನಿಂದ ನಮಗೆ ಗೊತ್ತಿಲ್ಲದ ಬೇರೆ ಜಗತ್ತಿಗೆ ಪಯಣಿಸಿದಾಗ ನಮ್ಮ ಜೀವನದಲ್ಲೊಂದು ಶೂನ್ಯ ನಿರ್ಮಾಣಗೊಳ್ಳುತ್ತದೆ. ಅದೊಂದು ವಿಸ್ಮಯಕಾರಿ ಶೂನ್ಯ. ಆ ವ್ಯಕ್ತಿಗೆ ಸಂಬಂಧಿಸಿದ ಅನೇಕಾನೇಕ ನೆನಪುಗಳಿಂದ ತುಂಬಿ ತುಳುಕುವ ಶೂನ್ಯ. ನಾನು ಈಗ ಏನಿದ್ದೇನೋ ಅದನ್ನು ರೂಪಿಸುವಲ್ಲಿ ಆ ವ್ಯಕ್ತಿಯ ಕೊಡುಗೆಯ ಕುರಿತು ವಿಚಾರಗಳು ಕೂಡಿರುವ ಶೂನ್ಯ. ಅದಲ್ಲದೆ ಸಾವಿನ ಕುರಿತೇ ಆದ ದಿಗ್ಭ್ರಮೆಗೊಳಿಸುವ ಊಹಾಪೋಹಗಳ ಸಾಂದ್ರತೆ ಇರುವ ಶೂನ್ಯ. ಉದಾಹರಣೆಗೆ, ಸಾವು ಹಲವಾರು ರೀತಿಯಲ್ಲಿ ಬಂದರೂ ಜೀವ ಕೊನೆಗೊಳ್ಳುವ ರೀತಿ ಒಂದೇ ಹೇಗೆ?
ತಿಂಗಳಿಗೂ ಹೆಚ್ಚು ದಿನಗಳ ಹಿಂದೆ ನಾನು ಬೆಳಗಾವಿಯ ನನ್ನೂರು ಅಥಣಿಗೆ ಹೋಗಿದ್ದೆ. ಊರಿಗೆ ಹೋದಾಗೆಲ್ಲ ನನ್ನ ಗುರುಗಳಾದ ಫಡಕೆ ಸರ್ ಮನೆಗೆ ಹೋಗಿ, ಅವರಿಗೆ ಹಾಗೂ ಗುರುಪತ್ನಿ 'ವೈನೀ' ಅವರಿಗೆ ನಮಸ್ಕಾರ ಮಾಡಿ ಅವರೊಂದಿಗೆ ತಾಸೊಪ್ಪತ್ತು ಕಳೆಯುವುದು ನನ್ನ ತಪ್ಪಿಸಲಾಗದ ರೂಢಿ. ಅವರ ಹೆಸರು ಕೆ.ಬಿ. ಫಡಕೆ. ಆದರೆ ಊರಿನ ಜನರಿಗೆ ಹಾಗೂ ಅಥಣಿ ತಾಲೂಕಿನ ಹಳ್ಳಿಗರೆಲ್ಲರಿಗೆ ಅವರ ಪರಿಚಯ 'ಫಡಕೆ ಸರ್‌' ಅಷ್ಟೇ. ಆ ಹೆಸರಿನಲ್ಲಿ ಅದೆಷ್ಟು ಆದರ, ಅದೆಷ್ಟು ಆತ್ಮೀಯತೆ. ಊರಿನ ಅತಿ ಹಳೆಯ, ನೂರು ವರ್ಷದ ಗೌರವಪೂರ್ಣ ಇತಿಹಾಸವಿರುವ ಶಾಲೆ ಜಾದವಜಿ ಆನಂದಜಿ ಹೈಸ್ಕೂಲಿನಲ್ಲಿ ನಾಲ್ಕು ದಶಕಗಳವರೆಗೆ ಅತ್ಯಂತ ನಿಷ್ಠೆಯಿಂದ ಕಲಿಸಿದ, ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ತುಂಬಿದ ಶಿಕ್ಷಕ. ಸಣ್ಣ ಊರಿನ ಸಣ್ಣ ರಸ್ತೆಗಳ ಓಣಿಯೊಂದರಲ್ಲಿ ಹಳೆಯ ಮನೆಯಲ್ಲಿ ಅವರ ವಾಸ. ಫಡಕೆ ಮಾಸ್ತರರ ಮನೆ, ವಿದ್ಯಾರ್ಥಿಗಳಿಗೂ ಮನೆಯೇ!
ನಾನು ಅವರನ್ನು ಕೊನೆಯ ಬಾರಿಗೆ ಕಂಡಾಗ ಅವರ ವಯಸ್ಸು 96. ಬಾಗಿದ ತಲೆ. ಹಣ್ಣಾದ ದೇಹ. ಮನೆಯಲ್ಲಿ ಅತ್ತಿತ್ತ ತಾವಾಗಿಯೇ ನಡೆಯುತ್ತಿದ್ದರೂ, ಹೆಚ್ಚಾಗಿ ಪಲ್ಲಂಗದ ಮೇಲೆ ಕುಳಿತಿರುವ ಅವಸ್ಥೆ. ಕಳೆದ ಕೆಲವು ಸಮಯದಿಂದ ಆರೋಗ್ಯ ಚೆನ್ನಾಗಿರದಿದ್ದರೂ ಮನಸ್ಸಿನ ಚಟುವಟಿಕೆ, ಮುಖದ ಮೇಲಿನ ಉಲ್ಲಾಸ ಕಾಯಮ್ಮಾಗಿತ್ತು. ನನ್ನೊಂದಿಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ ಬಳಿಕ, ಜೀವನದುದ್ದಕ್ಕೂ ತನ್ನೊಂದಿಗೆ ತಾನೇ ಅಂತರ್ಮುಖಿಯಾಗಿ ಸಂವಾದಿಸಿದ ನನ್ನ ಗುರುಗಳು ನನಗೆ ಹೇಳಿದರು, 'ನಾನಿನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಇರಲಾರೆ'. ಆಗ ಅವರ ದನಿಯಲ್ಲಿ ಲವಲೇಶವೂ ಖೇದ ಇರಲಿಲ್ಲ.
ಏ.3ರಂದು ಫಡಕೆ ಸರ್ ತೀರಿಕೊಂಡರು. ಸಾವು ಬಂದದ್ದು ಅಕಸ್ಮಾತ್ತಾಗಿ, ಅತಿ ವೇಗದಿಂದ. ಒಂದೆರಡು ಮಿನಿಟುಗಳಲ್ಲಿಯೇ. ಮುಂಜಾನೆಯೆಲ್ಲ ಮನೆಯವರೊಂದಿಗೆ ದಿನದಂತೆಯೇ ಆನಂದದಿಂದ ಮಾತನಾಡಿದ ಅವರು ಒಮ್ಮೆಲೇ ದೊಡ್ಡ ಮರದ ಹಣ್ಣಾದ ಎಲೆಯೊಂದು ಸೌಮ್ಯವಾಗಿ ನೆಲಕ್ಕೆ ಬೀಳುವ ಹಾಗೆ ಕೊನೆಯುಸಿರೆಳೆದರು. ನಂತರ ಅವರ ಪಾರ್ಥಿವ ಶರೀರವನ್ನು ಅವರ ದೇಹದಾನದ ಇಚ್ಛೆಯ ಮೇರೆಗೆ, ಸಮೀಪದ ವಿಜಾಪುರದ ಮೆಡಿಕಲ್ ಕಾಲೇಜಿಗೆ ವೈದ್ಯಕೀಯ ಸಂಶೋಧನೆಗಾಗಿ ಕಳುಹಿಸಲಾಯಿತು. ಬದುಕಿನಲ್ಲೂ, ಸಾವಿನಲ್ಲೂ ಅವರು ಪರಂಪರೆಗೆ ಸವಾಲು ಹಾಕಿದವರೇ.
ಶಿಕ್ಷಣ ಅಂದರೆ ಏನು? ಅದ್ಯಾರೋ ಇದರ ಉತ್ತರ ಹೀಗೆ ಕೊಟ್ಟಿದ್ದಾರೆ. 'ಶಾಲೆ- ಕಾಲೇಜುಗಳ ಕೋಣೆಗಳಲ್ಲಿ ಕಲಿತದ್ದರ ಬಹ್ವಂಶವನ್ನು ಮರೆತ ನಂತರ ನೀವು ಹಿಡಿದಿಟ್ಟುಕೊಂಡ ಸಾರವೇ ಶಿಕ್ಷಣ'. ನಾನು ನನ್ನ ಬಾಲ್ಯದ ಕಡೆ ಹಿಂತಿರುಗಿ ನೋಡಿದಾಗ ನನಗೆ ನಿಶ್ಚಿತವಾಗಿ ಕಾಣುವ ಸತ್ಯವೆಂದರೆ ಜೀವನದಲ್ಲಿ ನಾನು ಪಡೆದ ನಿಜವಾದ ಶಿಕ್ಷಣದಲ್ಲಿ ಅತಿ ಹೆಚ್ಚು ಪಾಲು ಫಡಕೆ ಸರ್ ಅವರದೇ.

ಆರನೇ ಇಯತ್ತೆಯಿಂದ, ಹತ್ತನೇ ಇಯತ್ತೆಯವರೆಗೆ ಅವರು ನನಗೆ ಶಿಕ್ಷಕರಾಗಿದ್ದರು. ಆದರೆ ನನ್ನ ವಿದ್ಯಾರ್ಥಿ ಜೀವನದಲ್ಲಿ, ಹಾಗೆಯೇ ಅವರ ಕೈಯಲ್ಲಿ ಕಲಿತ ನೂರಾರು ಮಕ್ಕಳ ಜೀವನದಲ್ಲಿ, ಅವರ ಸ್ಥಾನ ಕ್ಲಾಸ್‌ರೂಮಿನಲ್ಲಿ ವಿವಿಧ ವಿಷಯಗಳ ಪಾಠ ಹೇಳಿದ ಶಿಕ್ಷಕರಿಗಿಂತ ತುಂಬಾ ಭಿನ್ನವಾಗಿತ್ತು. ಶಿಕ್ಷಣದ ನಿಜವಾದ ಉದ್ದೇಶ 'ರಾಷ್ಟ್ರ ನಿರ್ಮಾಣಕ್ಕಾಗಿ ಮನುಷ್ಯ ನಿರ್ಮಾಣ' ಎಂಬ ಸ್ವಾಮಿ ವಿವೇಕಾನಂದರ ಸೂಕ್ತಿಯನ್ನು ತಮ್ಮ ಮಟ್ಟಿಗೆ ಸಾಕಾರಗೊಳಿಸುವದಕ್ಕಾಗಿ ಶಿಕ್ಷಕ ವೃತ್ತಿಯನ್ನು ನಡೆಸಿದವರು ಫಡಕೆ ಮಾಸ್ತರರು.
ಶ್ರೀಮಂತ ಕುಟುಂಬದವರೇ ಇರಲಿ, ಬಡ ಕುಟುಂಬದವರೇ ಇರಲಿ (ನನ್ನ ಪರಿವಾರ ಅತ್ಯಂತ ಬಡತನದಲ್ಲಿ ಇದ್ದ ಕಾಲ ಅದು)... ಎಲ್ಲ ಮಕ್ಕಳ ಮೇಲೂ ಸಮಾನ ಪ್ರೀತಿ, ಕಾಳಜಿ ಅವರದು. ಗಾಂಧೀಜಿ ಮತ್ತು ಟಾಲ್‌ಸ್ಟಾಯ್ ಹೇಳುವಂತೆ ವಿದ್ಯಾರ್ಥಿಗಳಲ್ಲಿ ಶಾರೀರಿಕ ಶ್ರಮದ ಬಗ್ಗೆ ಆದರ ಹುಟ್ಟಬೇಕು, ಸ್ವಯಂಸೇವಾ ಸಮಾಜ ಕಾರ್ಯದಲ್ಲಿ ಒಲವು ಬೆಳೆಯಬೇಕು ಎನ್ನುವುದು ಅವರ ಕಳಕಳಿ. ಅದಕ್ಕಾಗಿ ಅವರು ಮಕ್ಕಳಲ್ಲಿ ಶ್ರಮದಾನದ ಹುಚ್ಚು ಹಾಕಿದರು. ಆಗ ನಮ್ಮ ಶಾಲೆಗೆ ಸೇರಿದ ಮಹಾದಾನಿ ಭೋಜರಾಜ್ ದೇಸಾಯಿಯವರು ಕೊಟ್ಟ ವಿಶಾಲ ಮೈದಾನದ ಅವಸ್ಥೆ ಚೆನ್ನಾಗಿರಲಿಲ್ಲ. ಏರುಪೇರಿನ, ಕಲ್ಲುಗಳಿಂದ ತುಂಬಿದ ಜಮೀನು. ಅದು ಸ್ವಚ್ಛವಾಗಬೇಕು, ಸಮವಾಗಬೇಕು. ಅಲ್ಲಿ ಮಕ್ಕಳು ಆಡುವಂತಾಗಬೇಕು ಎಂಬುದು ಫಡಕೆ ಸರ್ ಅವರ ಆಶೆ. ಈ ಕೆಲಸಕ್ಕಾಗಿ ನಮ್ಮ ಮಕ್ಕಳ ಟೋಳಿಯನ್ನು ಅವರು ಹುರಿದುಂಬಿಸಿದರು. ಶಾಲೆಯ ತಾಸುಗಳು ಮುಗಿದ ನಂತರ ಹಾಗೂ ಬಿಡುವಿನ ದಿನಗಳಲ್ಲಿ ಗುದ್ದಿಗೆ ಸನಿಕೆ ಬುಟ್ಟಿ ಹಿಡಿದು ನಮ್ಮ ಕೆಲಸ ಶುರು. ನಮ್ಮ ಜತೆಗೆ, ನಮ್ಮ ಗುರುಗಳೂ ಉತ್ಸಾಹಮೂರ್ತಿಯಾಗಿ, ಉತ್ಸಾಹವರ್ಧಕರಾಗಿ ಶ್ರಮದಾನದಲ್ಲಿ ಸೇರಿಕೊಂಡವರೇ. ಆ ಮೈದಾನದ ಚಿತ್ರ ಇಂದು ತುಂಬಾ ಬದಲಾಗಿದೆ. ಇನ್ನೊಬ್ಬ ಮಹಾದಾನಿ ಸುಧಾಮೂರ್ತಿಯವರ ಕೃಪೆಯಿಂದಾಗಿ ಅವರ ತಂದೆ ಡಾಕ್ಟರ್ ಅರ್.ಎಚ್. ಕುಲಕರ್ಣಿ ಅವರ ಹೆಸರಿನಲ್ಲಿ ಅಲ್ಲಿ ಒಂದು ಸುಂದರವಾದ ಸಭಾಗೃಹ ತಯಾರಾಗಿದೆ. ಜಾಧವಜಿ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳ ಶಾಲೆಯ ಹೊರತಾಗಿ ಕೆ.ಎ. ಲೋಕಾಪುರ್ ಕಾಲೇಜು ಶುರುವಾಗಿದೆ. ಈ ವಾಸ್ತುಗಳ ಹಿಂದೆ ಆಕರ್ಷಕ ಕ್ರೀಡಾಂಗಣ ಕಾಣುತ್ತದೆ. ಆದರೆ ಈಗಲೂ ನಾನು ಅಥಣಿಗೆ ಹೋದಾಗ, ಆ ಮೈದಾನದ ಕಡೆ ಕಣ್ಣು ಹಾಯಿಸಿದಾಗ 40 ವರ್ಷಗಳ ಹಿಂದೆ ನಮ್ಮ ನೆಚ್ಚಿನ ಗುರುಗಳೊಂದಿಗೆ ನಾವು ಮಾಡಿದ ಅಳಿಲು ಸೇವೆಯ ನೆನಪಾಗಿ ಹೆಮ್ಮೆಯಾಗುತ್ತದೆ.
ಫಡಕೆ ಸರ್‌ರ ಸಲಹೆ ಪ್ರೇರಣೆಯಿಂದಾಗಿಯೇ ನಾನು ಆಗ ಅಥಣಿಯ ಸಿದ್ಧೇಶ್ವರ ಮೊಫತ್ ವಾಚನಾಲಯದಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡಲು ಶುರುಮಾಡಿದೆ. ವಾರಕ್ಕೆರಡು ಸಲ ಸಂಜೆಗೆ ವಾಚನಾಲಯಕ್ಕೆ ಹೋಗುವುದು, ಅಲ್ಲಿ ಬರುವ ಜನರಿಗೆ ಪುಸ್ತಕಗಳನ್ನು ಕೊಡುವುದು, ನೋಂದಣಿ ಮಾಡುವುದು, ವಾಚನಾಯವನ್ನು ಪುಸ್ತಕಗಳ ಕಪಾಟುಗಳನ್ನು ಸ್ವಚ್ಛವಾಗಿಡುವುದು, ಇವೆಲ್ಲವೂ ನನ್ನ ಹಾಗೂ ಫಡಕೆ ಸರ್ ಅವರಿಂದ ಪ್ರೇರಣೆ ಪಡೆದು ಕೆಲಸ ಮಾಡುವ ಇತರ ನನ್ನ ಒಡನಾಡಿಗಳ ಕೆಲಸವಾಗಿದ್ದವು. ಈ ಕೆಲಸಗಳಲ್ಲೆಲ್ಲ ನನಗೆ ಅತಿ ಇಷ್ಟ. ಇದಕ್ಕೆ ಒಂದು ಕಾರಣವೆಂದರೆ ವಾಚನಾಲಯದಲ್ಲಿಯ ಅನೇಕ ಉತ್ಕೃಷ್ಟ ಕನ್ನಡ ಪುಸ್ತಕಗಳನ್ನು ಓದುವ ಭಾಗ್ಯ ನನಗೆ ದಕ್ಕಿತು. ಶಿವರಾಮ ಕಾರಂತರ ಕಾದಂಬರಿಗಳು, ವಿಶೇಷವಾಗಿ ಅವರ 'ಬಾಳ್ವೆಯೇ ಬೆಳಕು', 'ವಿಜ್ಞಾನ ವಿಶ್ವಕೋಶ' ನನ್ನ ಮೇಲೆ ಗಾಢ ಪ್ರಭಾವ ಬೀರಿದವು. ಕುವೆಂಪು ಅವರ 'ಮಲೆನಾಡಿನ ಚಿತ್ರಗಳು', ಅನಂತಮೂರ್ತಿಯವರ 'ಸಂಸ್ಕಾರ', ಗೋಪಾಲಕೃಷ್ಣ ಅಡಿಗರ 'ಕಟ್ಟುವೆವು ನಾವು' ಇತ್ಯಾದಿ ರಚನೆಗಳನ್ನು ಓದಿ ಅವುಗಳ ಪ್ರಭಾವವನ್ನು ದೀರ್ಘಕಾಲದ ವರೆಗೆ ಅನುಭವಿಸಿದ್ದು ಆಗಲೇ. ನಮ್ಮದು ಕನ್ನಡ ಮಾಧ್ಯಮದ ಶಾಲೆಯಾಗಿದ್ದರಿಂದ ಆಗ ನನಗೆ ಇಂಗ್ಲಿಷಿನ ಗಂಧ ಅಲ್ಪವೇ. ಆದರೂ ಅಲೆಕ್ಸಾಂಡರ್ ಡುಮಾನ 'ದಿ ಕೌಂಟ್ ಆಫ್ ಮೊಂಟೆ ಕ್ರಿಸ್ಟೋ', ಚಾರ್ಲ್ಸ್ ಡಿಕೆನ್ಸ್‌ನ 'ಎ ಟೇಲ್ ಆಫ್ ಟು ಸಿಟೀಸ್‌' ಹಾಗೂ ಶೆರ್ಲಾಕ್ ಹೋಮ್ಸ್‌ನ ಪತ್ತೇದಾರಿ ಕಾದಂಬರಿಗಳನ್ನು ಓದುವ ಸಾಹಸ ಮಾಡಿದ್ದೆ. ಜತೆಗೆ ಮರಾಠಿ ಪುಸ್ತಕಗಳನ್ನು ಓದುವ ಹವ್ಯಾಸವನ್ನೂ ಬೆಳೆಸಿಕೊಂಡೆ. ಇಂತಹ ಶಾಲೆಯ ಪುಸ್ತಕಗಳ ಹೊರಗಿನ ಓದುವಿಕೆ ಫಡಕೆ ಸರ್ ಅವರ ಪ್ರೋತ್ಸಾಹನೆಯಿಂದಾಗಿ ಇನ್ನೂ ಹೆಚ್ಚಾಯಿತು.
ಆದರೆ ಪುಸ್ತಕಪ್ರೇಮಿಗಳು ಮಾತ್ರ ಉತ್ತಮ ವಿದ್ಯಾರ್ಥಿಗಳು ಎಂಬುದರಲ್ಲಿ ಅವರ ನಂಬುಗೆ ಇರಲಿಲ್ಲ. ಮಕ್ಕಳು ಹಳ್ಳಿಯ ಜೀವನ ಅರಿತುಕೊಳ್ಳಬೇಕು, ಅನುಭವಿಸಬೇಕು, ಹೊಲ- ತೋಟಗಳಲ್ಲಿ ಕೆಲಸ ಮಾಡಬೇಕು, ಹಾಗೂ ಆಟ-ಪಾಠಗಳಲ್ಲಿ, ಚಿತ್ರಕಲೆ ಮತ್ತು ಇತರ ಕಲೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಹೆಸರು ಗಳಿಸಬೇಕು ಎಂಬುದು ಅವರಾಸೆ. ಅವರೊಂದಿಗೆ ಸೈಕಲ್ ಮೇಲೆ ಅಥವಾ ಕಾಲ್ನಡಿಗೆಯಿಂದ ಅಥಣಿಯ ಸುತ್ತಮುತ್ತಲಿನ ವೀಕ್ಷಣೀಯ ಸ್ಥಳಗಳಿಗೆ ಹೋಗುವುದು, ಬೆಳದಿಂಗಳು ರಾತ್ರಿಯಲ್ಲಿ ಬುತ್ತಿ ಕಟ್ಟಿಕೊಂಡು ಸಹಭೋಜನ ಮಾಡುವುದು, ಇವಂತೂ ನನ್ನ ಶಾಲೆಯ ಜೀವನದ ಅತ್ಯಂತ ಸವಿಯಾದ ನೆನಪಿನ ಬುತ್ತಿಗಂಟುಗಳಾಗಿ ನನ್ನೊಂದಿಗಿವೆ. ಬಾಳಿನ ಯಾತ್ರೆ ನನ್ನನ್ನು ದೇಶ- ವಿದೇಶಗಳಲ್ಲಿ ಎಲ್ಲೆಲ್ಲೋ ಒಯ್ದಿದ್ದರೂ ಕೂಡ, ಬಾಲ್ಯಕಾಲದ ಆ ಕಿರುಪ್ರವಾಸಗಳ ಸ್ಮರಣೆ ಇಂದಿಗೂ ಇಷ್ಟೇಕೆ ಅಮೂಲ್ಯವಾಗಿ ಉಳಿದುಕೊಂಡಿದೆ.
ಅವರಿಂದ ನಾನು ಕಲಿತ ಮತ್ತೊಂದು ಅತಿ ಮಹತ್ವದ ಮಾತಿದೆ. ಭಾಷೆ, ಜಾತಿ, ಪಂಥ ಇವುಗಳ ಬಗ್ಗೆ ದುರಭಿಮಾನ, ಸಂಕುಚಿತತೆ ತಪ್ಪು ಎಂಬುದು ಅವರ ದೃಢ ನಂಬಿಕೆ. ಅವರ ಮಾತೃಭಾಷೆ ಮರಾಠಿ. ತಮ್ಮ ಭಾಷೆಯ ಬಗ್ಗೆ ಅವರಿಗೆ ಅಭಿಮಾನವಿತ್ತು. ಅವರ ಮನೆಯ ಭಾಷೆ ಮರಾಠಿಯೇ. ಮರಾಠಿ ಸಾಹಿತ್ಯ, ಅಧ್ಯಾತ್ಮ ಕೃತಿಗಳ ಅವರ ಅಧ್ಯಯನ ಆಳವಾಗಿತ್ತು. ಆದರೂ ಅವರು ಕನ್ನಡದಲ್ಲಿ ನಿರರ್ಗಳವಾಗಿ ಕಲಿಸುತ್ತಿದ್ದರು. ಆಗಿನ ಅಥಣಿಯಲ್ಲಿ ಕನ್ನಡ- ಮರಾಠಿ ಭಾಷೆಗಳ ನಡುವಿನ ಸಂಬಂಧ ಸಹೋದರಿಯರ ಸಂಬಂಧವಾಗಿತ್ತು. ಕರ್ನಾಟಕ-ಮಹಾರಾಷ್ಟ್ರಗಳ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆ ನಂತರದ ವರ್ಷಗಳಲ್ಲಿ ಭಾಷಾ ವಿವಾದದ ಸುಳಿಯಲ್ಲಿ ಸಿಕ್ಕಿದ್ದರಿಂದ ನಾನು ಈ ವಿಷಯವನ್ನು ಇಲ್ಲಿ ನಮೂದಿಸುತ್ತಿದ್ದೇನೆ.
ನನ್ನ ಜೀವನದಲ್ಲಿ ಫಡಕೆ ಸರ್ ಮತ್ತು ಅವರ ಮನೆಯ ನೆನಪು ಅಚ್ಚಳಿಯದೆ ಉಳಿಯುವುದಕ್ಕೆ ಇನ್ನೂ ಮಹತ್ವದ ಕಾರಣವೊಂದಿದೆ. ನನ್ನ ಪ್ರಿಯ ಸಖಿ ಮತ್ತು ಭವಿಷ್ಯದಲ್ಲಿ ನನ್ನ ಬಾಳಿನ ಸಂಗಾತಿಯಾದ ಕಾಮಾಕ್ಷಿಯನ್ನು ನಾನು ಕಂಡಿದ್ದು, ಪಡೆದದ್ದು ಇಲ್ಲಿಯೇ. ನನ್ನ ಹಾಗೆ ಅವಳೂ ಗುರುಗಳ ನೆಚ್ಚಿನ ವಿದ್ಯಾರ್ಥಿ. ನಮ್ಮ ಪ್ರೇಮದಲ್ಲಿ ಗುರುಗಳ ಜೀವನದ ಆದರ್ಶಗಳು ನೆಲೆಗೊಂಡಿದ್ದರಿಂದ ಅದು ಇನ್ನೂ ಆಳವಾಯಿತು. ನಂತರದ ವರ್ಷಗಳಲ್ಲಿ ನಾವು ಅವರನ್ನು ಕೂಡಿಯಾಗಿ ಆಗಲಿ ಇಲ್ಲವೇ ಬೇರೆ ಬೇರೆಯಾಗಿ ಆಗಲಿ ಭೆಟ್ಟಿಯಾದಾಗ, ಫಡಕೆ ಸರ್ ನಮಗೆ ತಪ್ಪದೇ ಕೇಳುತ್ತಿದ್ದರು- 'ನೀವು ಸಮಾಜಕ್ಕಾಗಿ ಸಲ್ಲಿಸುತ್ತಿರುವ ಸೇವೆ ಏನು? ಎಷ್ಟು? ನಿಮ್ಮಷ್ಟು ಒಳ್ಳೆಯ ಭಾಗ್ಯ ಹೊಂದಿರದ ಸಾಮಾನ್ಯ ಜನರ ಋಣವನ್ನು ನೀವು ಹೇಗೆ ತೀರಿಸುತ್ತಿದೀರಿ?'. ನನ್ನ ರಾಜಕೀಯ, ಸರಕಾರಿ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿನ ಕಾರ್ಯದ ಬಗ್ಗೆ ಅವರು ಎಂದಿಗೂ ಪೂರ್ಣ ಸಮಾಧಾನ ವ್ಯಕ್ತಪಡಿಸಲಿಲ್ಲ. 'ನಿನ್ನಿಂದ ಇನ್ನೂ ಹೆಚ್ಚು ಅಪೇಕ್ಷೆ ನನಗಿದೆ' ಎಂದೆನ್ನುತ್ತಿದ್ದರು. 'ದಿಲ್ಲಿ ಮುಂಬಯಿಗೆ ಹೋದ ನಂತರ ಗ್ರಾಮೀಣ ಭಾರತದ ಕಟು ಪರಿಸ್ಥಿತಿಯಿಂದ ನೀನು ದೂರಗೊಂಡಿದ್ದೀ' ಎಂದು ದೂರುತ್ತಿದ್ದರು. 'ಇಲ್ಲಿಯ ಅನೇಕ ಜನ ನೀರಿಗಾಗಿ ತಪತಪಿಸುತ್ತಿದ್ದಾರೆ. ಒಂದಿಷ್ಟು ಕಲಿತವರು ಹಳ್ಳಿಯಲ್ಲಿ ಇರಬಯಸುವುದಿಲ್ಲ. ಒಕ್ಕಲುತನವಂತೂ ದಿನ ದಿನಕ್ಕೂ ಹೆಚ್ಚು ಕಠಿಣವಾಗುತ್ತ ನಡೆದಿದೆ. ಹಳ್ಳಿಗರ ಈ ಸಮಸ್ಯೆಗಳ ಕಡೆಗೆ ನೋಡಲು ದೊಡ್ಡ ದೊಡ್ಡ ಶಹರುಗಳಲ್ಲಿರುವ ಶ್ರೀಮಂತರಿಗೆ, ರಾಜ್ಯಕರ್ತರಿಗೆ ಮನಸ್ಸಿಲ್ಲ...'.
ನಮ್ಮ ಸಂಭಾಷಣೆ ಈ ಥರದ ವಿಷಯಗಳ ಕಡೆ ಹೊರಳಿದಾಗೆಲ್ಲ- ಅವರೊಂದಿಗಿನ ಕೊನೆಯ ಭೇಟಿಯಲ್ಲಿ ಕೂಡ ಅವರು ಈ ಮಾತನ್ನು ಹೇಳಿದ್ದರು- ಅವರ ದನಿಯಲ್ಲಿ ನೋವು ಹಾಗೂ ಸುಪ್ತ ಆಕ್ರೋಶ ಕೇಳಿ ಬರುತ್ತಿತ್ತು. ಆದರೆ, ಇಂದು ಅವರೊಬ್ಬರ ನೋವು, ಸಿಟ್ಟು ಅಲ್ಲ. ನಮ್ಮ ದೇಶದ ಲಕ್ಷಾವಧಿ ಪ್ರಾಮಾಣಿಕ ಸಾಮಾನ್ಯ ನಾಗರಿಕರಲ್ಲಿ ಇದೇ ಅಸಹಾಯದ ದನಿ ಕೇಳಿ ಬರುತ್ತದೆ. ಅಲ್ಲವೇ? ಒಳ್ಳೆಯ ಶಿಕ್ಷಕರೇ ನಿಜವಾದ ರಾಷ್ಟ್ರ ನಿರ್ಮಾತೃ. ಅವರಲ್ಲಿ ಬಹುಸಂಖ್ಯರು ಯಾವುದೇ ಥರದ ಮನ್ನಣೆ ಗೌರವ ಇಲ್ಲದೆ ತೆರೆಯ ಹಿಂದೆ ಹೋಗಿ ಬಿಡುತ್ತಾರೆ. ಜಾಧವಜಿ ಆನಂದಜಿ ಹೈಸ್ಕೂಲಿನಲ್ಲಿಯೇ ಇಂಥ ಅನೇಕ ಆದರ್ಶ ಶಿಕ್ಷಕರು ಆಗಿಹೋಗಿದ್ದಾರೆ. ಫಡಕೆ ಸರ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸುವ ಈ ಲೇಖನ ಬರೆಯುವಾಗ ನನ್ನ ಇನ್ನೊಂದು ಉದ್ದೇಶವೆಂದರೆ, ಭಾರತದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಅವರಂಥ ಎಲ್ಲ ಆದರ್ಶ ಶಿಕ್ಷಕರಿಗೂ ಅಪ್ರತ್ಯಕ್ಷವಾಗಿ ನಾನು ವಂದಿಸಬೇಕು ಅಂತ. ಟಿ


-ಸುಧೀಂದ್ರ ಕುಲಕರ್ಣಿ
sudheenkulkarni@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments