ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಯಕ್ಷಗಾನದ ಮೋಹನ ತರಂಗ

ಜಾನಪದ ಕಲೆಗಳಲ್ಲಿ ಹೆಚ್ಚು ಶಾಸ್ತ್ರೀಯವೆನಿಸಿರುವ ಮತ್ತು ಪ್ರಚಾರ ಪಡೆದಿರುವ ಯಕ್ಷಗಾನ ಕಲೆಯ ಕುರಿತು ಈಗಾಗಲೆ ಹಲವಾರು ಕೃತಿಗಳು...

Rashmi Kasaragodu
Updated On : 20 Apr 2013, 6:29 am

ಜಾನಪದ ಕಲೆಗಳಲ್ಲಿ ಹೆಚ್ಚು ಶಾಸ್ತ್ರೀಯವೆನಿಸಿರುವ ಮತ್ತು ಪ್ರಚಾರ ಪಡೆದಿರುವ ಯಕ್ಷಗಾನ ಕಲೆಯ ಕುರಿತು ಈಗಾಗಲೆ ಹಲವಾರು ಕೃತಿಗಳು ಬಂದಿವೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಮೋಹನ ಕುಂಟಾರ್ ಅವರು ಸ್ವತಃ ವೇಷ ಕಟ್ಟಿ ಯಕ್ಷಗಾನದಲ್ಲಿ ಕುಣಿದವರು. ಯಕ್ಷಗಾನದ ಬಗ್ಗೆ ನಿರಂತರ ಅಧ್ಯಯನ ನಡೆಸುತ್ತ ಬಂದವರು. 'ಯಕ್ಷಗಾನ ವಾಚಿಕಾಧ್ಯಯನ' ಮತ್ತು 'ಯಕ್ಷಗಾನ ಆಹಾರ್ಯ' ಎಂಬ ಕೃತಿಗಳನ್ನು ಈಗಾಗಲೆ ರಚಿಸಿರುವ ಅವರು ಇದೀಗ 'ಯಕ್ಷಗಾನ ಸ್ಥಿತ್ಯಂತರ' ಎಂಬ ಕೃತಿಯನ್ನು ರಚಿಸಿರುವರು. ಎಲ್ಲ ಜನಪದ ಕಲಾಪ್ರಕಾರಗಳಂತೆ ಯಕ್ಷಗಾನ ಕೂಡ ಸಂಕೀರ್ಣವಾದದ್ದು ಮತ್ತು ವಿವಿಧ ಆಯಾಮಗಳನ್ನು ಒಳಗೊಂಡಿರುವಂಥದ್ದು. ಯಕ್ಷಗಾನದ ವಿವಿಧ ಅಂಗಗಳ ಬಗೆಗೆ ವಿವರಣಾತ್ಮಕ ಮಾಹಿತಿಗಳನ್ನು ಮೋಹನ ಕುಂಟಾರ್ ಅವರು ಈ ಕೃತಿಯಲ್ಲಿ ಒದಗಿಸಿದ್ದಾರೆ.
ಇದರಲ್ಲಿ ಒಟ್ಟು 23 ಲೇಖನಗಳಿವೆ. ಎಲ್ಲ ಕಲೆಗಳ ಹುಟ್ಟು ಹಾಗೂ ಅವುಗಳ ಸಮಕಾಲೀನ ಪ್ರಸ್ತುತತೆಯ ಚರ್ಚೆಯೊಂದಿಗೆ ಈ ಕೃತಿಯ ಆರಂಭವಾಗುತ್ತದೆ. ಮನುಷ್ಯರ ಆಸಕ್ತಿಗಳಿಗನುಗುಣವಾಗಿ ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಿರುವ ಕಲಾಪ್ರಕಾರಗಳು ಸಮಕಾಲೀನ ಸಾಂಸ್ಕೃತಿಕ ಸನ್ನಿವೇಶದ ಪ್ರತಿಬಿಂಬವೂ ಆಗಿರುತ್ತದೆ. ಆದರೆ ಶಾಸ್ತ್ರೀಯ ಕಲಾರೂಪಗಳಲ್ಲಿ ಸಾಮಾನ್ಯವಾಗಿ ಗತ ಸಾಂಸ್ಕೃತಿಕ ಸನ್ನಿವೇಶದಲ್ಲಿ ಸುಭದ್ರವಾದ ಚೌಕಟ್ಟನ್ನು ರೂಪಿಸಿಕೊಂಡಿರುತ್ತವೆ ಎಂದು ಹೇಳುವ ಕುಂಟಾರರು, ಶಿಷ್ಟದಿಂದ ಜನಪದ ಕಲೆ ಎಲ್ಲಿ ಭಿನ್ನವಾಗುತ್ತದೆ ಎಂಬ ಹುಡುಕಾಟ ನಡೆಸಿದ್ದಾರೆ.
ಕಲೆ ಜನಪದವಾಗುವ, ಜನಪದದಿಂದಲೇ ಹೊಸ ರೂಪು ಪಡೆಯುವ ಕಲಾರೂಪಗಳು ಸಮಕಾಲೀನ ಸಮುದಾಯಕ್ಕೆ ನಿರಂತರ ಪ್ರಸ್ತುತವೆನಿಸುತ್ತಲೇ ಬರುತ್ತವೆ. ಅಂತಹ ಕಲಾ ರೂಪಗಳಲ್ಲಿ ನಿರ್ದಿಷ್ಟ ಸಮುದಾಯದ ಅಸ್ತಿತ್ವದ ಪ್ರಶ್ನೆಯೂ ಅಡಗಿರುತ್ತದೆ ಎಂದು ವಿಶ್ಲೇಷಿಸುತ್ತಾರೆ.
ಈ ಗ್ರಹಿಕೆಯೊಂದಿಗೆ ಯಕ್ಷಗಾನದ ಅನುಸಂಧಾನ ಮಾಡಿದಾಗ ಅವರ ಕಾಣ್ಕೆಗಳು ಬಹು ಉಪಯುಕ್ತ ಎನಿಸುತ್ತವೆ. ಯಕ್ಷಗಾನಕ್ಕೆ ದಕ್ಷಿಣ ಕನ್ನಡದಲ್ಲಿ ಪ್ರಚಲಿತದಲ್ಲಿರುವ ನಾಗಾರಾಧನೆಯು ಪ್ರೇರಣೆಯೇ? ಎಂಬ ಚರ್ಚೆಯನ್ನು ಅವರು ನಡೆಸುತ್ತಾರೆ. ನಾಗಾರಾಧನೆಯ ಯಾವುದೋ ಒಂದು ಸಂಪ್ರದಾಯವನ್ನು ಯಕ್ಷಗಾನ ಕೂಡ ತನ್ನ ವಿಕಾಸದ ಸಂದರ್ಭದಲ್ಲಿ ಅಳವಡಿಸಿಕೊಂಡಿದೆ ಎಂಬ ವಾದವನ್ನು ಅವರು ಮಂಡಿಸುತ್ತಾರೆ. ಪೂರ್ವರಂಗದಲ್ಲಿ ಅನೇಕ ವೇಷ ವಿಧಾನಗಳಿವೆ. ಸುಬ್ರಾಯ ವೇಷ. ಅರ್ಧನಾರೀ ವೇಷ ಮೊದಲಾದವು ನಾಗಾರಾಧನೆಯ ಭಾಗವೆಂಬುದರ ಸ್ಪಷ್ಟ ಕುರುಹುಗಳಿವೆ ಎನ್ನುತ್ತಾರೆ ಅವರು.
ಯಕ್ಷಗಾನದ ಕಲೆಯೊಳಗೆ ನಾಗಾರಾಧಾನೆಯ ಪಳೆಯುಳಿಕೆಗಳು, ಬೌದ್ಧ ಮತ್ತು ಶೈವ ಧರ್ಮದ ನರ್ತನ ಪ್ರಧಾನ ಆಚರಣ ಸಂಪ್ರದಾಯಗಳು, ನಂತರದಲ್ಲಿ ಮಾಧ್ವಮತದ ಕಥನ ನಿರೂಪಣ ಕಲೆಗಳು ಸೇರಿಕೊಂಡಂತೆ ಭಾಸವಾಗುತ್ತದೆ ಎಂದು ಕುಂಟಾರ್ ಊಹಿಸುತ್ತಾರೆ. ತಮ್ಮ ಅಭಿಪ್ರಾಯ ಮಂಡನೆಗೆ ಮೊದಲು ಇತರರು ಆ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಅವರು ಚರ್ಚಿಸುತ್ತಾರೆ.
ತೆಂಕುತಿಟ್ಟಿನ ಯಕ್ಷಗಾನದ ಸಾಂಸ್ಕೃತಿಕ ಹಿನ್ನೆಲೆಯನ್ನು ಚರ್ಚಿಸುವಾಗ, ಕಾಸರಗೋಡು ಭಾಗದ ತೆಯ್ಯಂನ ವೇಷ ಭೂಷಣಗಳು ದೈವಗಳ ಬಣ್ಣಗಾರಿಕೆಗಳು ಹಾಗೂ ಯಕ್ಷಗಾನದ ಆಹಾರ್ಯಗಳೊಡನೆ ಪರಸ್ಪರ ಕೊಡುಕೊಳುಗೆಗಳು ನಡೆದಿವೆ ಎಂಬ ಮಾತನ್ನು ಕುಂಟಾರ್ ಅವರು ಹೇಳಿದ್ದಾರೆ.
'ಯಕ್ಷಗಾನ ಸ್ಥಿತ್ಯಂತರ' ಲೇಖನದಲ್ಲಿ ಯಕ್ಷಗಾನದ ಮೂಲವನ್ನು ಅವರು ತಡಕಾಡಿದ್ದಾರೆ. ಜಗತ್ತಿನ ಎಲ್ಲ ಕಲೆಗಳೂ ಆರಾಧನೆಯ ಅಂಗವಾಗಿ ರೂಪುಗೊಂಡಿರುವುದರಿಂದ ಯಕ್ಷಗಾನವೂ ಅಂಥ ಒಂದು ಆರಾಧನೆಯ ಭಾಗವಾಗಿ ಬೆಳೆದುಬಂದಿರಬಹುದು ಎಂಬ ಮಾತನ್ನು ಹೇಳಿದ್ದಾರೆ. ನಾಗಾರಾಧನೆ, ಶಿವನ ಆರಾಧನೆಯ ಯಕ್ಷಗಾನದಲ್ಲಿ ವಿಷ್ಣುವಿನ ಪ್ರಭಾವ ಹೇಗಾಯಿತು ಎಂಬ ಕುರಿತು ಕುತೂಹಲಕಾರಿ ಚರ್ಚೆಯೂ ಇಲ್ಲಿದೆ.
ಜಾಗತೀಕರಣದ ಪ್ರಭಾವ ಯಕ್ಷಗಾನದ ಮೇಲೂ ಆಗಿದೆ. ವೇಷಭೂಷಣಗಳಲ್ಲಿ ಕುಸುರಿಗಾರಿಕೆ ಹೆಚ್ಚಿದೆ, ರಂಗವಿನ್ಯಾಸ, ಬೆಳಕಿನ ವ್ಯವಸ್ಥೆ ಬದಲಾಗಿದೆ. ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೆ ನಡೆಯುತ್ತಿದ್ದ ಯಕ್ಷಗಾನ ಹೇಗೆ ಕಾಲ ಮಿತಿಗೆ ಒಳಪಟ್ಟು ಆಕುಂಚನಗೊಂಡಿತು ಎಂಬ ಚರ್ಚೆಯಿದೆ.
ಜನಸಮುದಾಯದ ಕಲೆಯಾದ ಯಕ್ಷಗಾನವನ್ನು ಜನಶಿಕ್ಷಣಕ್ಕಾಗಿ ಇಂದು ಕೆಲವು ಯೋಜನೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕೆಲವು ಮಾರಕ ರೋಗಗಳು, ಸಾಮಾಜಿಕ ಪಿಡುಗುಗಳ ಕುರಿತು ಎಚ್ಚರಿಸಲು ಯಕ್ಷಗಾನ ಬಳಕೆಯಾಗುತ್ತಿದೆ. ಯಕ್ಷಗಾನದ ಇನ್ನೊಂದು ಶಕ್ತಿ 'ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ'ನ್ನಾಗಿ ಜನಸಾಮಾನ್ಯರನ್ನು ಪರಿವರ್ತಿಸುವ ಅದರ 'ಗುರು'ತ್ವ. 'ಯಕ್ಷಗಾನದ ಇತ್ತೀಚಿನ ಒಲವುಗಳು' ಲೇಖನದಲ್ಲಿ ಈ ಎಲ್ಲ ಅಂಶಗಳ ಕಡೆಗೆ ಗಮನ ಹರಿಸಿದ್ದಾರೆ.
ಜಾನಪದಕ್ಕೆ ಸಂಬಂಧಿಸಿದ ಯಾವುದೇ ಅಧ್ಯಯನವಿರಲಿ, ಹೀಗಿತ್ತು, ಹೀಗಿದೆ ಎಂಬುದಕ್ಕಷ್ಟೇ ಸೀಮಿತವಾಗಿದ್ದರೆ ವಾಸಿ. ಹೀಗೇ ಇದ್ದರೆ ಸರಿ ಎಂದು ಕಟ್ಟಳೆ ವಿಧಿಸಲು ಹೋಗಬಾರದು. ಜಾನಪದ ಯಾವಾಗಲೂ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಪ್ರಸ್ತುತವಾಗುತ್ತ ಬಂದಿದೆ. ಅದೇ ಶಿಷ್ಟಕ್ಕೂ ಜಾನಪದಕ್ಕೂ ಇರುವ ಅಂತರ. ಆ ಎಚ್ಚರ ಕುಂಟಾರ್ ಅವರಲ್ಲಿ ಇದೆ.
ಕುಂಟಾರ್ ಅವರು ಇಲ್ಲಿ ಎತ್ತಿರುವ ಹಲವು ಚರ್ಚೆಗಳನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಸಾಧ್ಯವಿದೆ. ಹೊಸ ಚಿಂತನೆಗಳ ಕಡೆ ಮನಸ್ಸು ತೊಡಗಿಸುವಂತೆ ಮಾಡುವುದರಲ್ಲಿಯೇ ಅಧ್ಯಯನಗಳ ಸಾರ್ಥಕತೆ ಇರುವುದು. ಯಕ್ಷಗಾನದ ಬಗ್ಗೆ ಹಲವು ಒಳನೋಟಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ಲೇಖಕರ ಅಪಾರವಾದ ಬೌದ್ಧಿಕ ಶ್ರಮವನ್ನು ಗುರುತಿಸಬಹುದು. ಯಕ್ಷಗಾನವು ಹೆಚ್ಚುಹೆಚ್ಚು ಶಿಷ್ಟವಾಗುತ್ತ ತನ್ನ ಜಾನಪದೀಯ ಗುಣಗಳನ್ನು ಕಳೆದುಕೊಳ್ಳುವುದೋ ಎಂಬ ಆತಂಕ ಮೂಡುತ್ತಿರುವ ಹೊತ್ತಿನಲ್ಲಿ ಕುಂಟಾರರ ಈ ಕೃತಿ ಹೆಚ್ಚು ಪ್ರಸ್ತುತವೆನಿಸುತ್ತದೆ.

ಕೃತಿ: ಯಕ್ಷಗಾನ ಸ್ಥಿತ್ಯಂತರ
ಪ್ರಕಾರ: ಸಂಶೋಧನೆ
ಏಕೆ ಓದಬೇಕು?: ಯಕ್ಷಗಾನ ಕಲೆ ಅರಿಯಲು
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ, ಪುಟಗಳು 272,
ಬೆಲೆ ರು. 200



--
ಮಹದೇವದೇವ
ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಳೆದ ಶತಮಾನದ 70ರ ದಶಕದಲ್ಲಿ ಒಂದು ಹೊಸ ತಿರುವನ್ನು ನೀಡಿದವರಲ್ಲಿ ದೇವನೂರ ಮಹದೇವ ಅವರು ಒಬ್ಬರು. ಅವರ 'ದ್ಯಾವನೂರು' ಕಥಾಸಂಕಲನ ಕನ್ನಡ ಸಾಹಿತ್ಯದಲ್ಲಿ ಹೊಸ ಸಂಚಲನವನ್ನುಂಟುಮಾಡಿತು. ಇಂಥ ಮಹತ್ವದ ಲೇಖಕರ ಅಧ್ಯಯನ ವಿವಿಧ ಸ್ತರಗಳಲ್ಲಿ ಇದುವರೆಗೂ ನಡೆದುಬಂದಿದೆ. ಆ ಸಾಲಿನಲ್ಲಿ ಉದಯಕುಮಾರ್ ಹಬ್ಬು ಅವರ 'ದೇವನೂರ ಮಹದೇವರ ಕಥೆಗಳು, ಕಾದಂಬರಿಗಳು' ಕೃತಿ ಹೊಸ ಸೇರ್ಪಡೆಯಾಗಿದೆ. 'ನೀಗ್ರೋ ಸಾಹಿತಿಗಳಂತೆ ದೇವನೂರು ತನ್ನ ಮೂಲ ತಾಯಿಬೇರಾದ ಪುರಾಣಕ್ಕೆ ಹೋಗದೆ ಆ ದಲಿತ ಪುರಾಣವನ್ನು ವರ್ತಮಾನಕ್ಕೆ ಹಾಗೂ ಅವರ ಸಾಂಸ್ಕೃತಿಕ, ಸಾಮಾಜಿಕ ಆಶಯಗಳಿಗೆ ಅನ್ವಯಿಸದಿರುವುದು... ಇವೆಲ್ಲ ಅವರನ್ನು ಉಳಿದ ದಲಿತ ಸಾಹಿತಿಗಳಿಗಿಂತ ಭಿನ್ನ ಸ್ಥಾನದಲ್ಲಿ ತಂದು ನಿಲ್ಲಿಸುತ್ತವೆ... ದೇವನೂರರು ದಲಿತ ಕಾವ್ಯ ಬರೆಯುತ್ತಿಲ್ಲ. ಅವರು ಉತ್ತಮ ಗದ್ಯ ಬರೆಯುತ್ತಿದ್ದಾರೆ' ಮೊದಲಾದ ಚರ್ಚೆಗೊಳಗಾಗಬೇಕಾದ ಆಲೋಚನೆಗಳು ಇಲ್ಲಿವೆ.
ಕೃತಿ: ದೇವನೂರು ಮಹದೇವರ ಕಥೆಗಳು, ಕಾದಂಬರಿಗಳು, ಪ್ರಕಾರ: ವಿಮರ್ಶೆ
ಏಕೆ ಓದಬೇಕು?: ದೇವನೂಬಗ್ಗೆ ತಿಳಿದುಕೊಳ್ಳಲು, ಪ್ರ: ಸಿಮಾನಸ ಬುಕ್‌ಹೌಸ್, ಮೈಸೂರು, ಪುಟಗಳು 132 ಬೆಲೆ ರು. 65
---


ಗುಹೆಯೊಳಗಿನ ದನಿ
ವೀರಶೈವ ತತ್ವಜ್ಞಾನದಲ್ಲಿ ಅಲ್ಲಮ ಪ್ರಭುಗಳಿಗೆ ವಿಶೇಷ ಸ್ಥಾನವಿದೆ. ಕಲ್ಯಾಣದಲ್ಲಿ ಶೂನ್ಯ ಸಿಂಹಾಸನವೇರಿ ಅರಿವಿನ ಸಾಮ್ರಾಜ್ಯ ಆಳಿದವರು ಅವರು. 'ಬಯಲು' ಎಂಬ ಪರಿಕಲ್ಪನೆಯನ್ನು ವಿಶೇಷ ಅರ್ಥಗಳೊಡನೆ ಪ್ರತಿಪಾದಿಸಿದ ಅಲ್ಲಮಪ್ರಭು ಇಂದಿಗೂ ಮನುಜಕುಲವನ್ನು ವಿವಿಧ ನೆಲೆಯಲ್ಲಿ ತಟ್ಟುತ್ತಲೇ ಇದ್ದಾರೆ. ಯು.ಎನ್. ಸಂಗನಾಳಮಠ ಅವರು 'ಅರಿವೆಂಬ ಅಲ್ಲಮ' ಕೃತಿಯಲ್ಲಿ 28 ಲೇಖನಗಳಲ್ಲಿ ಅಲ್ಲಮನ ಅರಿವನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಅಲ್ಲಮನ ಇತಿಹಾಸವಿದೆ, ಐತಿಹ್ಯವಿದೆ. ತತ್ವಜ್ಞಾನವನ್ನು ತರ್ಕದ ಒರೆಗಲ್ಲಿಗೆ ಹಚ್ಚುವ ಪ್ರಯತ್ನವಿದೆ. ಗುಹೇಶ್ವರರ ಗುಹೆಯ ಒಳಗೆ ನುಗ್ಗಿ ಆ ಕತ್ತಲ ಗರ್ಭದಿಂದ ಬೆಳಕಿನ ಕಿರಣವು ಹೊರಸೂಸುವಂತೆ ಮಾಡುವ ಪ್ರಯತ್ನವಿದೆ.
ಕೃತಿ: ಅರಿವೆಂಬ ಅಲ್ಲಮ, ಪ್ರಕಾರ: ಚಿಂತನ ಪ್ರಬಂಧ
ಏಕೆ ಓದಬೇಕು?: ಅಲ್ಲಮನ ಅರಿಯಲು
ಪ್ರ: ಸಿರಿವರ ಪ್ರಕಾಶನ, ಬೆಂಗಳೂರು, ಪುಟಗಳು 136 ಬೆಲೆ ರು. 100


 ---


ಗಾದೆಗಳು
ಕನ್ನಡದಲ್ಲಿ ಗಾದೆಗಳಿಗೆ ಪರ್ಯಾಯವಾಗಿ ಇನ್ನೂ ಕೆಲವು ಪದಗಳು ಬಳಕೆಯಲ್ಲಿವೆ. ಸಾಮತಿ, ಸೂಕ್ತಿ, ಲೋಕೋಕ್ತಿ, ಪ್ರಾಚೀನೋಕ್ತಿ, ಸಾರೋಕ್ತಿ, ನಾಣ್ಣುಡಿ ಇತ್ಯಾದಿ. ಬದುಕಿನ ಜೀವನಾನುಭವಗಳನ್ನು ಇತರರಿಗೆ ಮಾರ್ಗದರ್ಶಿಯಾಗುವಂತೆ ಸೂತ್ರರೂಪದಲ್ಲಿ ಹೇಳುವುದು ಗಾದೆಗಳು. ಗಾದೆಗಳನ್ನು ವೇದಗಳಿಗೆ ಸಮವೆಂದು ಹೇಳುವರು. ಜಗತ್ತಿನ ಯಾವ ಭಾಷೆಯನ್ನೇ ತೆಗೆದುಕೊಳ್ಳಿ ಅಲ್ಲಿ ಗಾದೆಗಳು ಇದ್ದೇ ಇರುತ್ತವೆ. ಗಾದೆಗಳು ಜನಪದರ ಜೀವನಾನುಭವದ ಸಾರ. ಗಾದೆಗಳಲ್ಲಿ ಪ್ರಾಸ ಸೇರಿರುವುದು ಪ್ರಮುಖ ಲಕ್ಷಣಗಳಲ್ಲಿ ಒಂದು. ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತೆ, ಉಕ್ಕಿ ಹೋದ ಹಾಲಿಗೆ ಬಿಕ್ಕಿಬಿಕ್ಕಿ ಅತ್ತರೇನು ಫಲ?, ನಾಲಿಗೆ ಒಳ್ಳೆಯಾದರೆ ನಾಡೆಲ್ಲ ಒಳ್ಳೆಯದು, ಓದು ಒಕ್ಕಾಲು ಬುದ್ಧಿ ಮುಕ್ಕಾಲು, ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆ ಎಳೆಯಿತು... ಹೀಗೆ. ಇವನ್ನೆಲ್ಲ ವಿಸ್ತರಿಸಿದರೆ ಪುಟಗಟ್ಟಲೆ ಬರೆಯಬಹುದು. ಅದು ಗಾದೆಗಳ ಸತ್ವ. ಇಂಥ ಸಾವಿರ ಗಾದೆಗಳನ್ನು ಸಂಪಟೂರು ವಿಶ್ವನಾಥ್ ಅವರು ಚಿಕ್ಕ ವಿವರಣೆಯೊಂದಿಗೆ ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ.
ಕೃತಿ: 1000 ಅರ್ಥಪೂರ್ಣ ಗಾದೆಗಳು, ಪ್ರಕಾರ: ಗಾದೆಗಳ ಸಂಗ್ರಹ
ಏಕೆ ಓದಬೇಕು?: ಗಾದೆಗಳನ್ನು ಅರಿಯಲು, ಪ್ರ: ವಸಂತ ಪ್ರಕಾಶನ, ಬೆಂಗಳೂರು, ಪುಟಗಳು 210 ಬೆಲೆ ರು. 120

---


ಪ್ರೇಮ ಕವಿಯ ಕಾವ್ಯ ಹೃದಯ
ಕಳೆದ ಶತಮಾನದ ಎರಡನೆಯ ದಶಕದ ಮಧ್ಯದಲ್ಲಿ ಹುಟ್ಟಿ ಈ ಶತಮಾನದ ಮೊದಲ ದಶಕದ ಆರಂಭದಲ್ಲಿ ನಮ್ಮನ್ನಗಲಿದ ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಬದುಕು ಬರೆಹಗಳನ್ನು ಪರಿಚಯಿಸುವ ಕೃತಿ 'ಕೆ.ಎಸ್.ನ- ದರ್ಶನ'. ಸಾಗರದ ಎಲ್.ಬಿ. ಕಾಲೇಜಿನ ಕನ್ನಡ ವಿಭಾಗದಲ್ಲಿ ಏರ್ಪಡಿಸಿದ್ದ ವಿಚಾರಸಂಕಿರಣದ ಫಲಶ್ರುತಿ ಇದು. ನರಸಿಂಹಸ್ವಾಮಿಯವರು ಬರೆದದ್ದು ಎಂದು ಗೊತ್ತಿಲ್ಲದೆಯೇ ಕನ್ನಡಿಗರ ನಾಲಿಗೆಯ ಮೇಲೆ ಅವರ ಹಾಡಿನ ಸಾಲುಗಳು ನಲಿದಾಡುತ್ತಿವೆ. ಶಿಷ್ಟ ಜಾನಪದವಾಗುವ ಅದ್ಭುತ ಸಾಮರ್ಥ್ಯ ಅವರ ಕೃತಿಗಳಿಗೆ ಇದೆ. ಮಧ್ಯಮ ವರ್ಗದ ನೋವು ನಲಿವುಗಳಿಗೆ ಅವರು ದನಿಯಾದರು. ಅದ್ಭುತ ಪ್ರೇಮ ಕವಿತೆಗಳನ್ನು ಬರೆದ ನರಸಿಂಹಸ್ವಾಮಿಯವರು ಅಷ್ಟೇ ಸೊಗಸಾಗಿ ಮತ್ತು ಪರಿಣಾಮಕಾರಿಯಾಗಿ ಜನಸಾಮಾನ್ಯನ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಡಾ.ಜಿ. ಪ್ರಶಾಂತ ನಾಯಕ, ಡಾ.ಎಲ್.ಸಿ. ಸುಮಿತ್ರಾ, ಡಾ.ಜಿ.ಎಸ್. ಭಟ್, ಡಾ.ಎಚ್.ಟಿ. ಕೃಷ್ಣಮೂರ್ತಿ, ಡಾ.ನಾ. ಡಿಸೋಜಾ ಅವರ ಭಾಷಣದ ಲೇಖನ ರೂಪ ಹಾಗೂ ಟಿ.ಪಿ. ಅಶೋಕ ಅವರು ಮುನ್ನುಡಿಗೆ ಬದಲು ಬರೆದ ಪ್ರಸ್ತಾವನೆ ಒಳಗೊಂಡ ಈ ಕೃತಿಯನ್ನು ತಿರುಮಲ ಮಾವಿನಕುಳಿ ಸಂಪಾದಿಸಿದ್ದಾರೆ.
ಕೃತಿ: ಕೆ.ಎಸ್.ನ-ದರ್ಶನ
ಪ್ರಕಾರ: ವಿಮರ್ಶೆ
ಏಕೆ ಓದಬೇಕು?: ನರಸಿಂಹಸ್ವಾಮಿಯವರ ಬಗ್ಗೆ ಅರಿಯಲು
ಪ್ರ: ಕನ್ನಡ ವಿಭಾಗ, ಎಲ್.ಬಿ.ಕಾಲೇಜು, ಸಾಗರ, ಪುಟಗಳು 64 ಬೆಲೆ ರು. 60

---


ಮಹಿಳಾ ದನಿ
ನಾರೀಭಾವದ ಲೇಖಕಿ ಚಂದ್ರಮತಿ ಸೋಂದಾ ಅವರು 'ಮೈಸೂರು ಮಿತ್ರ' ಪತ್ರಿಕೆಗೆ ಬರೆದ ಅಂಕಣ ಬರೆಹಗಳ ಸಂಕಲನ 'ಆಟಕ್ಕೂ ಉಂಟು ಲೆಕ್ಕಕ್ಕೂ ಉಂಟು'. ಮಹಿಳೆಯರ ಸಾಮಯಿಕ ಸಮಸ್ಯೆಗಳ ಬಗ್ಗೆ ಪ್ರತಿ ವಾರವೂ ಬರೆದ ಲೇಖಕಿ, ಮಹಿಳೆಯ ಮೇಲಿನ ದೌರ್ಜನ್ಯ ಕಡಿಮೆಯಾಗುವ ಬದಲು ಹೆಚ್ಚುತ್ತಿರುವುದು ಅಂಕಿಅಂಶಗಳಿಂದ ತಿಳಿದುಬರುತ್ತದೆ. ಪ್ರಕರಣಗಳು ಹೆಚ್ಚುತ್ತಿವೆಯೋ ವರದಿಯಾಗುವ ಪ್ರಕರಣಗಳ ಸಂಖ್ಯೆ ಅಧಿಕವೋ ಎನ್ನುವ ಕುರಿತು ಸಂಶೋಧನೆ ನಡೆಯಬೇಕಿದೆ ಎಂದು ಹೇಳುತ್ತಾರೆ. ಶಿಕ್ಷಣ ಪಡೆದ ಮಹಿಳೆ ಯಾರದೋ ಇಚ್ಛೆಗೆ, ಖಯಾಲಿಗೆ ತಾನು ಬಲಿಯಾಗುತ್ತಿದ್ದೇನೆ ಎನ್ನುವುದನ್ನು ಮೊದಲು ಅರ್ಥಮಾಡಿಕಳ್ಳಬೇಕಿದೆ. ತನಗೆ ಸಿಗುತ್ತಿರುವ ಇಂಥ ಧಾರ್ಮಿಕ ಸ್ವಾತಂತ್ರ್ಯದ ಆಳ-ಅಗಲಗಳ ಬಗ್ಗೆ ಅವಳು ಆಲೋಚಿಸಬೇಕಿದೆ ಎನ್ನುತ್ತಾರೆ. ಮಹಿಳೆಯರು ಹಲವು ಸಂಕಷ್ಟಗಳ ನಡುವೆಯೂ ಅವನ್ನು ಮೆಟ್ಟಿನಿಂತು ಸಾಧನೆಯ ಶಿಖರವೇರಿ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದ್ದಾರೆ. ಅವರನ್ನು ನೆನೆಸಿಕೊಳ್ಳುವ ಪ್ರಯತ್ನ ಈ ಬರೆಹಗಳಲ್ಲಿದೆ.     
ಕೃತಿ: ಆಟಕ್ಕೂ ಉಂಟು ಲೆಕ್ಕಕ್ಕೂ ಉಂಟು
ಪ್ರಕಾರ: ಅಂಕಣ ಬರೆಹ
ಏಕೆ ಓದಬೇಕು?: ಮಹಿಳಾ ಪರ ಕಾಳಜಿಗಾಗಿ
ಪ್ರ: ಸಾಹಿತ್ಯ ನಂದನ, ಬೆಂಗಳೂರು, ಪುಟಗಳು 168 ಬೆಲೆ ರು. 90


---

ನೋಟದಾಚೆಯ ಬೆರಗು


ಋಣವಿರದ ಹೆಣದಂತೆ ಬೇಡದೆಡೆ ನೀರು ಸಿಕ್ಕಂತೆ
ಬೇಡದ ಭೋಗಕ್ಕೊದಗಿ ಸುಖ ಬಂತು
ಮರೆತಂತಾದೆ ಮಹಾದೇವನೆ
ಈ ಲೋಕೋದ್ಧಾರದ ಬರಲಾರದ ಆಮಿಶದ
ಪರಾಕಾಷ್ಠೆಯ ನಂಟು ಗಂಟಾದದ್ದು
ಹೇಗಪ್ಪಾ ಶಿವನೇ...
ಇದು ಆರ್. ವಿಜಯರಾಘವನ್ ಅವರ ಹೊಸ ಕಾವ್ಯ ಸಂಕಲನ 'ನೋಟ'ದ 'ಮಾಯದ ಮುಸುಕು' ಎಂಬ ಕವಿತೆಯ ಒಡಲಿನ ಸಾಲುಗಳು. ವ್ಯಾಖ್ಯಾನಕ್ಕೆ ನಿಲುಕದ ಆಲೋಚನೆಗಳನ್ನು ಅಮೂರ್ತತ ಭಾಷೆಯಲ್ಲಿ ಸಾಕ್ಷಾತ್ಕರಿಸಲು ನಡೆಸಿದ ಪ್ರಯತ್ನ ಇದು. ಇಂಥ ಹಲವು ಕವನಗಳನ್ನು ವಿಜಯರಾಘವನ್ ಇದರಲ್ಲಿ ನೀಡಿದ್ದಾರೆ. ನವ್ಯ ಕವಿತೆಗಳು ಎಲ್ಲೋ ಕಳೆದುಹೋದವು ಎಂದುಕೊಂಡವರಿಗೆ ಅದು ಈ ಸಂಕಲನದಲ್ಲಿ ಸಿಗಲಿದೆ. ಬನಾರಸಿನ ವಿವಿಧ ರೂಪಗಳನ್ನು ಕಟ್ಟಿಕಟ್ಟ ಹದಿನಾಲ್ಕು ಕವಿತೆಗಳೂ ಇಲ್ಲಿವೆ. ಹಫೀಝ್‌ನ ಹದಿಮೂರು, ಪರೀದುದ್ದಿನ್ ಅತ್ತಾರ್‌ನ ಒಂಬತ್ತು ಕವಿತೆಗಳ ಅನುವಾದಗಳೂ ಇಲ್ಲಿವೆ. ವಿಜಯರಾಘವನ್ ಅವರು, ತನಗೇನೋ ಹೇಳಬೇಕಾದುದು ಇದೆ ಎಂಬ ತುರ್ತಿನೊಂದಿಗೆ ಕವಿತೆಯನ್ನು ಬರೆಯುತ್ತಾರೆ. ಅವು ವಚನಗಳಂತೆ ಗಾಢವಾಗಿ ತಟ್ಟುತ್ತವೆ.   
ಕೃತಿ: ನೋಟ
ಪ್ರಕಾರ: ಕಾವ್ಯ
ಏಕೆ ಓದಬೇಕು?: ಓದಿನ ಖುಷಿಗಾಗಿ
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಪುಟಗಳು 132 ಬೆಲೆ ರು. 100


---

ಗೊರೂರು ಎಂಬ ಗರುಡಗಂಭ
ಸಾಹಿತಿಯೊಬ್ಬರು ಅವರ ನಿಧನದ ನಂತರವೂ ನಮಗೆ ಪ್ರಸ್ತುತರಾಗುವುದು ಅವರ ಬರೆಹಗಳ ಮೂಲಕ. ಗೊರೂರು ರಾಮಸ್ವಾಮಿ ಅಯ್ಯಂಗಾರರನ್ನು ಅವರ ಬರೆಹಗಳ ಕಾರಣಕ್ಕಾಗಿಯೇ ಇಂದು ನಾವು ಸ್ಮರಿಸುತ್ತಿದ್ದೇವೆ. ನಮ್ಮ ಊರಿನ ರಸಿಕರು, ಹಳ್ಳಿಯ ಚಿತ್ರಗಳು, ಹೇಮಾವತಿ ಮೊದಲಾದ ಕೃತಿಗಳಲ್ಲಿ ನಮ್ಮ ಗ್ರಾಮೀಣ ಭಾಗದ ಬದುಕನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟವರು ಗೊರೂರರು. ಗೊರೂರರ ತಿಳಿಯಾದ ಹಾಸ್ಯ ಅಪರೂಪದ್ದು. ಅವರ ಹಾಸ್ಯವೆಂದರೆ ಲೇವಡಿಯಲ್ಲ, ಅಪಹಾಸ್ಯವೂ ಆಗಿರಲಿಲ್ಲ. ಆಸ್ವಾದಿಸಿ ಹಗುರಾಗುವುದಕ್ಕೆ ಅದು ದಾರಿಯಾಗಿತ್ತು. ಗೊರೂರರು ಕನ್ನಡ ಪ್ರಬಂಧ ಸಾಹಿತ್ಯಕ್ಕೆ ನೀಡಿದ ಕೊಡುಗೆ ವಿಶಿಷ್ಟವಾದದ್ದು. ಪ್ರಬಂಧಗಳಿಗೆ ಅವರು ಕತೆಯ ಸ್ವರೂಕೊಟ್ಟರು. ಇಂಥ ಗೊರೂರರ ಬಗ್ಗೆ, ಅವರ ಕೃತಿಗಳ ಬಗ್ಗೆ ನಾಡಿನ ಹಿರಿಯರು ಬರೆದ ಲೇಖನಗಳನ್ನು ಸಂಪಾದಿಸಿ 'ಗರುಡಗಂಭದ ಗೊರೂರು' ಕೃತಿಯನ್ನು ಗೌರಿಸುಂದರ್ ಅವರು ಹೊರತಂದಿದ್ದಾರೆ. ಗೊರೂರರ ಅಧ್ಯಯನಕ್ಕೆ ಇದೊಂದು ಉತ್ತಮ ಕೃತಿಯಾಗಿದೆ.
ಕೃತಿ: ಗರುಡಗಂಭದ ಗೊರೂರು, ಪ್ರಕಾರ: ಸಂಪಾದನೆ
ಏಕೆ ಓದಬೇಕು?: ಗೊರೂರರನ್ನು ಅರಿಯಲು, ಪ್ರ: ಸುಂದರ ಪ್ರಕಾಶನ, ಬೆಂಗಳೂರು, ಪುಟಗಳು 424 ಬೆಲೆ 200



---

ಪುಂಡಲೀಕ ರೇಖೆ
ಇದೊಂದು ರೀತಿಯಲ್ಲಿ ಅಪರೂಪದ ಸಂಪುಟ. ಕಲಾವಿದ ಪುಂಡಲೀಕ ಕಲ್ಲಿಗನೂರ ಅವರು ವಿವಿಧ ಪತ್ರಿಕೆಗಳು ಹಾಗೂ ಬೇರೆಬೇರೆ ಸಂಚಿಕೆಗಳಿಗೆ ಬರೆದ ರೇಖಾಚಿತ್ರಗಳ ಸಂಪುಟ 'ರೇಖಾನುಸಂಧಾನ'. ಇದೇ ರೀತಿಯ ಇವರ ಮೊದಲಿನ ಕೃತಿ 'ಬಳಕುವ ಗೆರೆಗಳು'. ಅದಕ್ಕೆ ಬಂದ ಉತ್ತಮ ಪ್ರತಿಕ್ರಿಯೆ ಈ ಎರಡನೆಯ ಕೃತಿಯನ್ನು ಹೊರತರುವುದಕ್ಕೆ ಅವರಿಗೆ ಪ್ರೇರಣೆ ನೀಡಿದೆ. ಕನ್ನಡದಲ್ಲಿ ಇತರ ಕೆಲವು ಕಲಾವಿದರ ಇಂಥ ಕೃತಿಗಳು ಬಂದಿವೆ. ಕಲೆಗೆ ಭಾಷೆಯ ಹಂಗಿಲ್ಲ. ಕನ್ನಡ ನಾಡಿನ ಗಡಿಯಾಚೆಯೂ ಇದು ಪ್ರಸ್ತುತ ಕೃತಿ. ಚಿತ್ರಕಲೆಯ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅಭ್ಯಾಸದ ಗ್ರಂಥವಾಗಿದೆ. ಯಾವ ಕವಿತೆಗೆ ಬರೆದ ಚಿತ್ರ ಎಂಬುದನ್ನು ಸ್ಪಷ್ಟಗೊಳಿಸಲಿಕ್ಕಾಗಿ ಕವಿತೆಗಳನ್ನೂ ನೀಡಲಾಗಿದೆ. ಕೆಲವು ಅತ್ಯುತ್ತಮ ವ್ಯಕ್ತಿಚಿತ್ರಗಳೂ ಇದರಲ್ಲಿವೆ. ಪುಂಡಲೀಕ ಯಾವ ಅನುಕರಣೆಯನ್ನೂ ಮಾಡಿದವರಲ್ಲ. ಯಾವುದೇ ಸಿದ್ಧಾಂತ, ಶೈಲಿಗೂ ಅವರು ಬದ್ಧರಲ್ಲ. ಅವರಿಗೆ ಅವರೇ ಗುರು. ಕಾರಣ ಇದು ಅವರದೇ ಸ್ವತಂತ್ರ ಶೈಲಿಯನ್ನು ಸ್ಥಾಪಿಸುತ್ತದೆ. ಈ ಕೃತಿಯ ಪ್ರತಿಗಳಿಗಾಗಿ ಮೊ. 9343760234 ಸಂಪರ್ಕಿಸಬಹುದು.
ಕೃತಿ: ರೇಖಾನುಸಂಧಾನ
ಪ್ರಕಾರ: ರೇಖಾಚಿತ್ರ ಸಂಪುಟ
ಏಕೆ ಓದಬೇಕು?: ರೇಖಾಚಿತ್ರ ಅಭ್ಯಾಸಕ್ಕೆ
ಪ್ರ: ಕನ್ನಡ ಪ್ರಕಾಶನ, ಬೆಂಗಳೂರು, ಪುಟಗಳು 286 (ಎ4 ಡೆಮ್ಮಿ) ಬೆಲೆ ರು. 385

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments