ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಅದೋ ಹಿಮಚಿರತೆ!

Rashmi Kasaragodu
Updated On : 27 Apr 2013, 1:54 am

ಅದೊಂದು ಮೃಗದ ಕಣ್ಣುಗಳು ಎಂಬುದರಲ್ಲಿ ನನಗೆ ಯಾವ ಸಂದೇಹವೂ ಇರಲಿಲ್ಲ. ರಾತ್ರಿಯ ಹೊತ್ತು ಹೀಗೆ ಕಾಡಿನಲ್ಲಿ ಕತ್ತಲಲ್ಲಿ ಕತ್ತಲಾಗಿ ಕುಳಿತು ಪ್ರಾಣಿಗಳನ್ನು ನಿರೀಕ್ಷಿಸಿ, ಅದರ ಕಣ್ಣುಗಳ ಮಿಂಚನ್ನು ಕಂಡ ಅನುಭವ ನನಗಿತ್ತು. ಮಲೆನಾಡಿನ ಮನೆ, ತೋಟ ಎಂದಮೇಲೆ ಪ್ರಾಣಿಗಳ ಕಾಟವೂ, ಅದನ್ನು ನಿವಾರಿಸುವ ಬೇಟೆಗಾರರ ಪರಿಚಯವೂ ಬಾಲ್ಯದಲ್ಲಿ ಇದ್ದೇ ಇತ್ತು. ಅವರ ಸಾಮೀಪ್ಯದಲ್ಲಿ ಕಂಡ ಕಣ್ಣುಗಳವು... ಹಂದಿ, ಮುಳ್ಳುಹಂದಿ, ಮೊಲ, ಕಡವೆ...
ಆದರೆ ಇದು ಅದ್ಯಾವುದೂ ಅಲ್ಲ. ನನ್ನ ಆ ಮಲೆನಾಡಿನ ಪ್ರಾಣಿಗಳೆಲ್ಲಿ? ಈ ಹಿಮದ ಮೇಲಿನ ಮೃಗವೆಲ್ಲಿ? ನಡುರಾತ್ರಿಯ ಈ ನಡುಕದ ಹೊತ್ತಿನಲ್ಲಿ, ಎಲ್ಲರೂ ಮಲಗಿರುವಾಗ, ಕುರಿಕಾಯುವವನು ಬಿಡಾರ ಹೂಡಿರುವ ಸ್ಥಳದ ಆಸುಪಾಸಿನಲ್ಲೇ ಕಳ್ಳಹೆಜ್ಜೆಗಳಲ್ಲಿ ಬಂದು ನಿಂತಿರುವ ಆ ಪ್ರಾಣಿ ಯಾವುದದು? ನಾನು ಅಷ್ಟು ದಿನಗಳಿಂದ ದರ್ಶನಕ್ಕೆ ಕಾತರಿಸುತ್ತಿದ್ದೆನಲ್ಲ, ಅದೇ?
ಮತ್ತೆ ಮತ್ತೆ ಅತ್ತ ಇತ್ತಸುತ್ತ ಮುತ್ತ ತಲೆ ತಿರುಗಿಸಿ ನೋಡಿದೆ. ಬೆಟ್ಟಗಳ ಅಸುಪಾಸನ್ನೆಲ್ಲ ಚಂದಿರನ ಬೆಳಕಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಅವಲೋಕಿಸಿದೆ. ಇಲ್ಲ, ಮತ್ತೆ ಆ ಕಣ್ಣುಗಳ ಮಿಂಚು ಕಾಣಿಸಲೇ ಇಲ್ಲ. ಒಂದು ಕ್ಷಣ, ಒಂದೇ ಒಂದು ಕ್ಷಣ ಕಂಡ ಆ ಕಣ್ಣುಗಳು ಮಿಂಚಿನಂತೆ ಒಂದು ಕಾಣ್ಕೆಯನ್ನು ನನಗೆ ಕಾಣಿಸಿತ್ತು- 'ನಾನು ತೋರಿಸಿದರೆ ಉಂಟು, ಇಲ್ಲದಿದ್ದರೆ ಇಲ್ಲ' ಎಂಬುದೇ ಅದು. ಅದೀಗ ನನ್ನನ್ನು ಸ್ಪಷ್ಟವಾಗಿ ನೋಡುತ್ತಿರಬಹುದು; ಆದರೆ ನನಗೆ ಅದರ ದರ್ಶನ ಭಾಗ್ಯ ಕಿಂಚಿತ್ತೂ ಇಲ್ಲ. ನನ್ನಲ್ಲಿ ಅದರ ಬಗ್ಗೆ ಎಷ್ಟು ಬೇಕಾದರೂ ಕುತೂಹಲ ಇರಬಹುದು; ಆದರೆ ಅದಕ್ಕೆ ನನ್ನ ಬಗ್ಗೆ ತಿರಸ್ಕಾರ, ಭಯವಿರಬಹುದು ಅಷ್ಟೆ. ಈ ಪ್ರಾಣಿಯ ಜಗತ್ತಿನಲ್ಲಿ ನನಗೆ ಪ್ರವೇಶವಿಲ್ಲ.
ಚಳಿಯೆಲ್ಲ ಹಾರಿಹೋಗಿತ್ತು. ಜ್ವರದಂತಹ ಸ್ಥಿತಿ ಅದು. ಇಹಲೋಕದ ಅರಿವು ಮರಳಿದಾಗ ಮತ್ತೆ ಚಳಿ ಅಮರಿಕೊಂಡಿತು. ಸರಕ್ಕನೆ ಟೆಂಟ್‌ನೊಳಗೆ ನುಗ್ಗಿದೆ. ಪ್ರಿಯಾಗೆ ಎಚ್ಚರವಿರಲಿಲ್ಲ. ಈಗ ನನಗೆ ಆಗುತ್ತಿರುವ ಚಳಿಗೆ, ಇಬ್ಬರ ಸ್ಲೀಪಿಂಗ್ ಬ್ಯಾಗನ್ನು ಸೇರಿಸಿ ತೂರಿಕೊಂಡರೂ ಸಾಕಾಗುತ್ತಿರಲಿಲ್ಲ. ನಡುಗುತ್ತಾ ಮಲಗಿದೆ. ಎಷ್ಟೋ ಹೊತ್ತು ಹಾಗೇ ಇದ್ದೆ. ಯಾವಾಗಲೋ ನಿದ್ದೆ ಹತ್ತಿತು.
ಬೆಳಗ್ಗೆ ಮಹೇಶ ಹೊರಗಿನಿಂದ ಕರೆಯುತ್ತಿರುವಾಗ ಎಚ್ಚರಾಯಿತು. ಸ್ಲೀಪಿಂಗ್ ಬ್ಯಾಗುಗಳನ್ನೆಲ್ಲ ಪಕ್ಕ ಸರಿಸಿ, ಹೇಗಿದ್ದೆವೋ ಹಾಗೇ ಹೊರಗೆ ಬಂದುಬಿಟ್ಟೆವು. ಹಲ್ಲುಜ್ಜುವುದೇನೋ ಪರವಾಗಿಲ್ಲ, ಬಾಯಿ ತೊಳೆದುಕೊಳ್ಳುವುದೇ ಸಮಸ್ಯೆ. ತಾತ್ಕಾಲಿಕ ಶೌಚಮನೆ ಕಟ್ಟಿದ್ದರು. ವಿಸರ್ಜನೆಯೇನೋ ಮಾಡಬಹುದು, ತೊಳೆದುಕೊಳ್ಳುವುದೇ ಸಮಸ್ಯೆ! ಹಲ್ಲು ಮತ್ತು ಪೃಷ್ಠಗಳು ಎಷ್ಟೋ ಹೊತ್ತಿನವರೆಗೂ ಅನಸ್ತೇಶಿಯಾ ಕೊಟ್ಟಂತಾಗಿಬಿಟ್ಟವು.
ಹೊರಗೆ ನಮಗಾಗಿ ಜಗದ್ಭವ್ಯ ನಾಟಕವೊಂದು ಆಗಷ್ಟೇ ಅನಾವರಣಗೊಳ್ಳತೊಡಗಿತ್ತು. ಬಾರಾ ಶಿಗ್ರಿ ಗ್ಲೇಶಿಯರ್ ಪರ್ವತಗಳ ನಡುವಿನಿಂದ ಸೂರ್ಯನ ಕಿರಣಗಳು ಮೆಲ್ಲನೆ ಮೇಲೆ ಏಳಲಾರಂಭಿಸಿದ್ದವು.  ಮೊದಲಿಗೆ ಪರ್ವತದ ತುದಿ ನಿಧಾನವಾಗಿ ಕತ್ತಲಿನಿಂದ ಮೇಲೆದ್ದು ಬಂತು. ನಂತರ ಅದರ ತುದಿಗೆ ಯಾರೋ ಸರ್ಚ್‌ಲೈಟ್ ಹಾರಿಸಿದಂತೆ ಫಳ್ಳನೆ ಬೆಳಗಿತು. ಅದು ಹಾಗೇ ಮುಂದುವರಿಯುತ್ತ, ಕೆಳಗಿಳಿಯುತ್ತ ಬರತೊಡಗಿದಂತೆ, ಶಿಖರ ಭಾಗ ಬೆಂಕಿಯಿಟ್ಟ ಸೌದೆರಾಶಿಯಂತೆ ಧಗಧಗ ಉರಿಯತೊಡಗಿತು. ನಂತರ ಚಿನ್ನದ ಬಣ್ಣಕ್ಕೆ ತಿರುಗಿತು. ಹೊಂಬಣ್ಣದಲ್ಲಿ ಮಿರುಗುವ ಕೈಲಾಸ ಪರ್ವತದ ತುದಿಯನ್ನು ಫೋಟೋಗಳಲ್ಲಿ ನೋಡಿದ್ದೆ. ನನ್ನೆದುರಿದ್ದ ಪರ್ವತವೇ ನನ್ನ ಪಾಲಿಗೆ ಈಗ ಕೈಲಾಸವಾಗಿತ್ತು.
ಓಡುತ್ತ, ಏದುಸಿರುಬಿಡುತ್ತ ಸರೋವರದ ಕಡೆಗೆ ಧಾವಿಸಿದೆವು. ಸೂರ್ಯೋದಯದ ಸೊಬಗಿನ ಸರೋವರದ ದೃಶ್ಯ ಮಿಸ್ ಆಗಬಾರದಲ್ಲ? ಜತೆಗೆ ತಶಿಯೂ ಬಂದ.
'ಅದೋ, ಅದು ಹಿಮಚಿರತೆಯ ಮಲ' ಎಂದು ತೋರಿಸಿದ ತಶಿ. ಅಲ್ಲಿ ಅದು ಬಿದ್ದಿತ್ತು. ಹಸಿಯಾಗಿತ್ತೋ, ಒಣಗಿತ್ತೋ ಗೊತ್ತಾಗಲಿಲ್ಲ. ಅದು ನಿನ್ನೆ ರಾತ್ರಿಯದೆ? ಯಾರನ್ನು ಕೇಳುವುದು? ಸದ್ಯಕ್ಕೆ ಆ ಚಿಂತೆ ಬಿಟ್ಟು ಸರೋವರದ ಕಡೆ ದೌಡಾಯಿಸಿದೆವು.
ಅಲ್ಲಿ ಇನ್ನೊಂದು ನಾಟಕಕ್ಕೆ ತೆರೆ ಈಗಷ್ಟೆ ಸರಿಯುತ್ತಿತ್ತು.
(ಮುಂದಿನ ವಾರ- ಜಗವೆಲ್ಲಾ ತೊಯ್ದಾ)

 -ಹರೀಶ್ ಕೇರ
harishkera@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments