ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಪುಸ್ತಕ ರಾತ್ರಿ

Rashmi Kasaragodu
Updated On : 27 Apr 2013, 2:00 am

ಕಳೆದ ಏ.23 ಎಲ್ಲ ರೀತಿಗಳಿಂದಲೂ ವಿಶಿಷ್ಟವಾಗಿತ್ತು. ಇದನ್ನು ವಿಶ್ವ ಗ್ರಂಥಾಲಯ ದಿನ, ವಿಶ್ವ ಪುಸ್ತಕ ದಿನ, ವಿಶ್ವ ಕಾಪಿರೈಟ್ ದಿನ ಎಂದೆಲ್ಲ ಆಚರಿಸಲಾಯಿತು. ಇದು ಶೇಕ್ಸ್‌ಪಿಯರ್‌ನ ಜನ್ಮದಿನ ಕೂಡ ಎಂಬುದನ್ನು ನೀವು ಓದಿದ್ದೀರಿ.
ಈ ಬಾರಿ ಪುಸ್ತಕದಿನದ ಹವಾ ಎಲ್ಲೆಡೆ ಜೋರಿತ್ತು. ಇಂಗ್ಲೆಂಡಿನಲ್ಲಿ ಹಳೆಯ ಕವಿಗಳ ಕಾವ್ಯಗಳ ರೀಡಿಂಗ್ ನಡೆಯಿತು. ಜರ್ಮನಿಯಲ್ಲಿ ಯುದ್ಧವಿರೋಧಿ ಸಾಹಿತ್ಯದ ರೀಡಿಂಗ್‌ಗಳು ಗಮನ ಸೆಳೆದವು. ಪುಸ್ತಕದಂಗಡಿಗಳು ಡಿಸ್ಕೌಂಟ್ ಇಟ್ಟು, ಲೇಖಕರನ್ನು ಕರೆದು ಕೂಡಿಸಿ ಓದುಗರನ್ನು ಸೆಳೆದವು. ಅಮೆರಿಕದಲ್ಲಿ ನಡೆದದ್ದು ಇನ್ನೂ ವಿಶಿಷ್ಟವಾಗಿತ್ತು. ಏ.23ರ ರಾತ್ರಿಯನ್ನು 'ಪುಸ್ತಕ ರಾತ್ರಿ' ಎಂದು ಕರೆದದ್ದಷ್ಟೇ ಅಲ್ಲ, ತಾವು ಪ್ರೀತಿಸುವ ಪುಸ್ತಕಗಳನ್ನು ಹಂಚಿದರು. ಅದರಲ್ಲೂ, ತಮಗೆ ಸಂಪೂರ್ಣ ಅಪರಿಚಿತರಾದವರಿಗೆ ಒಳ್ಳೆಯ ಕೃತಿಗಳನ್ನು ನೀಡಿ, ಇದನ್ನು ಓದಿ ಎಂದು ಒಲಿಸಿದ್ದು ವಿಶಿಷ್ಟವಾಗಿತ್ತು.
ಆದರೆ ಭಾರತದಲ್ಲಿ ಕೆಲವೇ ವಲಯಗಳಲ್ಲಿ ಹೊರತುಪಡಿಸಿ, ಇತರೆಡೆ ಇದರ ಆಚರಣೆ ಆದಂತಿಲ್ಲ. ಪುಸ್ತಕದ ನಿಮಿತ್ತದಲ್ಲಿ ಸಂಭ್ರಮಿಸುವುದು ಒಳ್ಳೆಯ ಅಭ್ಯಾಸ ಅಲ್ಲವೆ?

ಇಲಿಯ ಸ್ವಪ್ನ
ಹಾರುತ್ತಾ ಹಾರುತ್ತಾ ಸಮುದ್ರತೀರದಲ್ಲಿ ಬಂದಿಳಿಯಿತು ಸಾಗರಕಾಗೆ. ಆಗಷ್ಟೇ ಬಿಲದಿಂದ ಹೊರಬಿದ್ದ ಇಲಿಯೊಂದು ಅದನ್ನೇ ಪಿಳಿಪಿಳಿ ಕಣ್ಬಿಟ್ಟು ನೋಡಿತು. ಕಾಗೆಯೂ ಅದನ್ನು ನೋಡಿತು. ಇದು ರೆಕ್ಕೆ ಕಳೆದುಕೊಂಡ ಹಕ್ಕಿಯೇ ಇರಬೇಕೆಂದು ಭಾವಿಸಿ, ಆಶ್ಚರ್ಯದಿಂದ ಇಲಿಯನ್ನು ಕೇಳಿತು- 'ನಿನ್ನ ರೆಕ್ಕೆಗಳೆಲ್ಲಿವೆ?'
ಇಬ್ಬರಿಗೂ ಪರಸ್ಪರರ ಭಾಷೆ ತಿಳಿಯದು. ಕಾಗೆಯ ಎರಡೂ ಪಕ್ಕಗಳಲ್ಲಿ ಕಂಡ ರೆಕ್ಕೆಗಳನ್ನು ನೋಡಿ, ಈ ಜೀವಿ ಯಾವುದೋ ರೋಗದಿಂದ ಬಳಲುತ್ತಿದೆ ಎಂದು ಇಲಿ ಭಾವಿಸಿತು. 'ನಿನಗೇನಾಗಿದೆ?' ಎಂದು ಕೇಳಿತು ಇಲಿ. ಇಲಿ ತನ್ನ ರೆಕ್ಕೆಗಳನ್ನೇ ನೋಡುತ್ತಿರುವುದನ್ನು ಕಂಡು ಕಾಗೆಗೆ ವಿಷಾದವಾಯ್ತು. ಪಾಪ, ರೆಕ್ಕೆ ಬಿಡಿಸಿ ಹಾರುತ್ತಿದ್ದ ತನ್ನ ಹಳೆಯ ದಿನಗಳು ದಿನಗಳು ನೆನಪಿಗೆ ಬಂದಿರಬಹುದು ಎಂದುಕೊಂಡಿತು.
ಕರುಣೆಯಿಂದ, ಇಲಿಯನ್ನು ಕೊಕ್ಕಿನಲ್ಲಿ ಮೃದುವಾಗಿ ಕಚ್ಚಿಕೊಂಡು ಹಾರತೊಡಗಿತು. ಕೆಲವು ನಿಮಿಷ ಹಾರಿದ ಬಳಿಕ ಮತ್ತೆ ನೆಲಕ್ಕಿಳಿಸಿತು. ಆ ಕೆಲವು ಕ್ಷಣಗಳ ಕಾಲ ಇಲಿ ಇಡೀ ಭೂಮಿಯ ಸೌಂದರ್ಯವನ್ನು ಕಂಡಿತು. ಅದೆಲ್ಲ ಆದ ನಂತರ ಕೆಲವು ದಿನಗಳವರೆಗೆ ಇಲಿ ತಾನು ಹಾರಲಾಗದ ಪ್ರಾಣಿ ಎಂಬುದಕ್ಕಾಗಿ ಬೇಜಾರು ಪಟ್ಟುಕೊಂಡು ಇತ್ತು. ನಂತರ ಮತ್ತೆ ತನ್ನ ಇಲಿಜನ್ಮಕ್ಕೆ ಹೊಂದಿಕೊಂಡು, ತಾನು ನೋಡಿದ್ದೆಲ್ಲ ಸುಂದರ ಸ್ವಪ್ನ ಎಂದುಕೊಂಡು ಸುಮ್ಮನಾಯಿತು.
ಇಂಥ ಪುಟ್ಟ ಪುಟ್ಟ ಕತೆಗಳನ್ನು ಇನ್ನಷ್ಟು ಓದಬೇಕಾದರೆ ನೀವು ಬ್ರೆಝಿಲ್ ಮೂಲದ ಜನಪ್ರಿಯ ಲೇಖಕ, ಕಾದಂಬರಿಕಾರ ಪೌಲೋ ಕೊಯೆಲೋನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಬ್ಯುಸಿ ಬರಹಗಾರನಾದರೂ, ಆತ ತನ್ನ ತಾಣವನ್ನು ಯಾವಾಗಲೂ ಅಪ್‌ಡೇಟ್ ಮಾಡುತ್ತಿರುತ್ತಾರೆ ಎಂಬುದು ವಿಶೇಷ. ತಾಣದ ವಿಳಾಸ: ಡಿಡಿಠ://ಠಛ್ಡಟ್ಟ್ಛ್ಟಜಝ್ಟಛಿಟ್ಟ್ಜ.್ಛ್ಟಟ.

ಏಟು ಝಡ್
ರಾಜಕಾರಣಿಯೊಬ್ಬರು ಬರೆದ ಮಹಾಕಾವ್ಯವನ್ನು ಶ್ಲಾಘಿಸಿ ವಿಮರ್ಶಕರೊಬ್ಬರು ಹೀಗೆ ಬರೆದರು: ಈ ಕೃತಿಯ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಇದನ್ನು ಯಾರೂ ಕಡೆಗಣಿಸಲಾಗದು.
ಆ ವಿಮರ್ಶಕರನ್ನು ಕಂಡರಾಗದ ಇನ್ನೊಬ್ಬ ವಿಮರ್ಶಕರಿಂದ ಅದಕ್ಕೆ ವ್ಯಂಗ್ಯ: ಬಹುಶಃ ಆ ಪುಸ್ತಕವನ್ನು ಬುಕ್‌ರ್ಯಾಕ್‌ನಿಂದ ತೆಗೆಯುವಾಗ ಅವರ ಕಾಲಿಗೆ ಬಿದ್ದು ಕಾಲು ಅಪ್ಪಚ್ಚಿಯಾಗಿರಬೇಕು.


-ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments