ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಮೇರುಗಿರಿಗಳ ಸಂಗ

ಒಮ್ಮೆ ನೇಚರ್ ಕ್ಲಬ್‌ನ ಸದಸ್ಯರುಡಿಸೆಂಬರ್‌ನ ಅಸಾಧ್ಯ ಕೊರೆಯುವ ಚಳಿಯಲ್ಲೇ ಮುಳ್ಳಯ್ಯನಗಿರಿ ಪರ್ವತದ ಮೇಲೇ ರಾತ್ರಿ ತಂಗುವುದೆಂದು ತೀರ್ಮಾನಿಸಿದೆವು. ಸುಮಾರು ...

Rashmi Kasaragodu
Updated On : 27 Apr 2013, 5:11 am

ಒಮ್ಮೆ ನೇಚರ್ ಕ್ಲಬ್‌ನ ಸದಸ್ಯರುಡಿಸೆಂಬರ್‌ನ ಅಸಾಧ್ಯ ಕೊರೆಯುವ ಚಳಿಯಲ್ಲೇ ಮುಳ್ಳಯ್ಯನಗಿರಿ ಪರ್ವತದ ಮೇಲೇ ರಾತ್ರಿ ತಂಗುವುದೆಂದು ತೀರ್ಮಾನಿಸಿದೆವು. ಸುಮಾರು 25 ಜನರ ಗುಂಪೊಂದು ಹಿಮಾಲಯಕ್ಕೇ ಹೋಗುತ್ತಿದ್ದೇವೇನೋ ಎಂಬಂತೆ ಹೊರಟು ನಿಂತಿತು. ಹತ್ತು ದಿನದ ಹಿಂದೆಯೇ ತಮ್ಮ ಕುಟುಂಬದ ಸದಸ್ಯರೆಲ್ಲರ ಹೆಸರನ್ನು ನೋಂದಾಯಿಸಿದ್ದ ತೇಜಸ್ವಿಯವರು ನಿಗದಿಯಾಗಿದ್ದ ಸಮಯ ಮಧ್ಯಾಹ್ನ 3 ಗಂಟೆಯಾದರೂ ಕಾಣಲಿಲ್ಲ. ಅವರ ಕುಟುಂಬದವರೆಲ್ಲ ವ್ಯಾನ್ ಹತ್ತಿ ಕುಳಿತರೂ ನಮ್ಮ ಮಾನಿಟರ್ ಪತ್ತೆ ಇಲ್ಲ. ಇದೇನಪ್ಪಾ ಎಂದು ಇಳಿದು ನೋಡಿದರೆ, ಸ್ಕೂಟರನ್ನು ಟರ್ರರ್ರ್ ಎನಿಸುತ್ತಾ ನಮ್ಮ ವ್ಯಾನ್ ಹೊರಡುವುದನ್ನೇ ಕಾಯುತ್ತಿದ್ದರು. 'ಯಾಕೆ ಬನ್ನಿ, ಹತ್ತಿ ಒಳಕ್ಕೆ' ಎಂದೆ.
'ಹೋಗಾ ಹೋಗಾ ನೀನು ಬೇಕಾದ್ರೆ ವ್ಯಾನ್‌ನಲ್ಲಿ ಹೋಗು. ಸ್ಕೂಟರ್‌ನಲ್ಲಿ ಹೋಗೋ ಮಜಾನೇ ಬೇರೆ. ನಿನ್ನ ಸ್ಕೂಟರ್ ತರ್ಲಿಲ್ವ' ಎಂದು ಛೇಡಿಸಿದರು. ಅವರ ಐಡಿಯಾ ನೋಡಿ ನನಗೂ ಸ್ಕೂಟರ್‌ನಲ್ಲಿ ಹೋಗಿದ್ರೆ ಚೆನ್ನಾಗಿತ್ತು ಅನಿಸಿತ್ತು. ಆದರೆ ಇಡೀ ತಂಡದ ಉಸ್ತುವಾರಿ ನನ್ನದ್ದಾಗಿದ್ದರಿಂದ ಬಾಲ ಮುದುರಿಕೊಂಡು ಡ್ರೈವರ್‌ನೆಡೆಗೆ ತಿರುಗಿ ರೈಟ್ ಎಂದೆ.
ಚಿಕ್ಕಮಗಳೂರಿನ ಮುಂದಿನ ಅಂಕುಡೊಂಕು ಹಾದಿಯ ರೋಚಕವಾದ ಪ್ರಯಾಣದ ಅನುಭವವು ಇಂದಿಗೂ ಹಸಿರಾಗಿದೆ. ಮುಗಿಲೆತ್ತರದ ಸಿಲ್ವರ್ ಓಕ್ ಮರಗಳ ನಡುವಿನ ಇಷ್ಟಗಲದ ದಾರಿಯಲ್ಲಿ ಕ್ಷಣಕ್ಷಣಕ್ಕೂ ಮೇಲೇರುವ ಅನುಭವವೇ ಬೇರೆ. ನಾವು ತಲುಪಿದ ಮುಕ್ಕಾಲು ಗಂಟೆಯ ನಂತರ ಬಂದ ತೇಜಸ್ವಿಯವರಲ್ಲಿ ಏಕಾಂಗಿ ಶೂರನ ಗೆಲುವಿತ್ತು. ವಸತಿಗಾಗಿ ಏರ್ಪಾಟಾದ ನಂತರ ಕಟಕಟಿಸುತ್ತಿದ್ದ ಹಲ್ಲುಗಳನ್ನು ನಿಯಂತ್ರಿಸುತ್ತಾ, ಅಂಗೈಗಳನ್ನು ಒಂದಕ್ಕೊಂದು ಉಜ್ಜುತ್ತಾ ರಾತ್ರಿಯ ಕುಳಿರ್ಗಾಳಿ ಎದುರಿಸಲು ಸನ್ನದ್ಧರಾದೆವು.
ಅಷ್ಟರಲ್ಲಿ ಸಂದೀಪ್, ಗಿರೀಶ್, ಅಮರೇಂದ್ರನಾಥ್ ಮತ್ತು ಅತುಲ್ ರಾವ್ ಎಲ್ಲಿಯೋ ಬಿದ್ದಿದ್ದ ಒಣರೆಂಬೆಗಳ ತುಂಡುಗಳನ್ನು ಹೊತ್ತು ತಂದು ಕ್ಯಾಂಪ್ ಫೈರ್ ಸಿದ್ಧಪಡಿಸಿದರು. ಅದಕ್ಕಾಗಿಯೇ ಕಾಯುತ್ತಿದ್ದಾರೆನೋ ಎಂಬಂತೆ ನಮ್ಮ ತಂಡದಲ್ಲಿದ್ದ ಹೆಂಗಳೆಯರು ನಾಮುಂದು ತಾಮುಂದು ಎಂದು ಇನ್ನೇನು ಬೆಂಕಿಗೇ ಬಿದ್ದು ಬಿಡುತ್ತಾರೇನೋ ಎನ್ನುವಷ್ಟರ ಮಟ್ಟಿಗೆ ಚಳಿ ಕಾಯಿಸಲು ಮುಗಿಬಿದ್ದರು.
'ಸೌದೆ ತಂದದ್ದು ನಾವು, ಮಜಾ ತಗೋಳ್ತಿರೋರು ನೀವು' ಎಂದು ಹುಡುಗ-ಹುಡುಗಿಯರಿಗೆ ಜಟಾಪಟಿ ಶುರುವಾಯಿತು. ಕರಿ ಜರ್ಕಿನ್ ತೊಟ್ಟು, ಕೊರಳಿಗೆ ಕ್ಯಾಮೆರಾ ನೇತು ಹಾಕಿಕೊಂಡು, ಜೀನ್ಸ್ ಪ್ಯಾಂಟಿನ ಎರಡೂ ಮುಂಜೇಬುಗಳಿಗೆ ಕೈ ತೂರಿಸಿದ್ದ ತೇಜಸ್ವಿ ಗಂಟಲು ಸರಿ ಮಾಡಿಕೊಳ್ಳುತ್ತಾ ಬಂದ ಕೂಡಲೇ ಎಲ್ಲರೂ ನಿಶ್ಯಬ್ದರಾದರು. ಅಷ್ಟರಲ್ಲಿ ಶೇಖರ್ ಹಾಗೂ ರವಿನಂದನ್ ತಮ್ಮ ಕಲೆಗಾರಿಕೆ ಪ್ರದರ್ಶಿಸಲು ಸೌದೆ ಕೊರಡುಗಳಿಂದಲೇ ಕತ್ತಿ ವರಸೆ ಶುರುಮಾಡಿದರು. ಸ್ವಲ್ಪ ಹೊತ್ತು ಯಾರೂ ಗಮನಿಸದಿದ್ದಾಗ ಕಿಕ್‌ಬಾಕ್ಸರ್‌ಗಳಂತೆ ಅರಚಾಡಿ ವಿಚಿತ್ರವಾಗಿ ಆಡತೊಡಗಿದರು.  ತೇಜಸ್ವಿ ನನ್ನನ್ನು ಕರೆದು 'ಅವರಿಬ್ಬರೂ ದಾರಿಯಲ್ಲೇನಾದರೂ ಬೈನೆ ಕಳ್ಳನ್ನು ಕುಡಿದ್ರಾ' ಎಂದು ಕೇಳಿದರು. ಅಷ್ಟರಲ್ಲಿ ಅವರಿಬ್ಬರ ಕೈಯಲ್ಲಿದ್ದ ದಗ್ಗುಲಾಗಿದ್ದ ಕೊರಡುಗಳು ಮುರಿದುಕೊಂಡು ಕೆಳಗೆ ಬಿದ್ದವು.  ಪ್ರೇಕ್ಷಕರು ತಮಗೂ ವೀಕ್ಷಿಸಿ ಸಾಕಾಯಿತೆಂದು ಮುಖಭಾವ ತೋರಿದ್ದರಿಂದ ಚರ್ಚೆಗಳು ಪ್ರಾರಂಭವಾದವು.
ಗಾಳಿಯ ವೇಗ, ದಿಕ್ಕು, ಏರೋಡೈನಮಿಕ್ಸ್, ವಿಮಾನ ತಂತ್ರಜ್ಞಾನ, ಪಕ್ಷಿಗಳ ದೇಹ ರಚನೆ, ಮೀನುಗಳ ಚಲನೆ, ಸಬ್‌ಮೆರೈನ್, ಯುದ್ಧ, ಉಗ್ರವಾದ, ರಾಜಕೀಯ, ಬೆಲೆ ಏರಿಕೆ, ಆಹಾರ ಸಮಸ್ಯೆ ಕಡೆಗೆ ಊಟದ ವಿಚಾರವಾಗಿಯೂ, ತರಾವರಿ ಟಾಪಿಕ್‌ಗಳು ಚರ್ಚೆಯಲ್ಲಿ ಸುಳಿದಾಡಿದವು. ಅಷ್ಟರಲ್ಲಿ ಊಟ ಸಿದ್ಧವಾಗಿ ಕೊರೆಯುವ ಚಳಿಯಲ್ಲಿ ಬಿಸ್ಸಿಬಿಸಿ ಅನ್ನ, ಸಾಂಬಾರ್, ಉಪ್ಪಿನಕಾಯಿ. ಅದರ ರುಚಿ ಏನು ಹೇಳುತ್ತೀರಿ! ಅದ್ಭುತವಾದ ಊಟ ಬಾರಿಸಿ ಮತ್ತೆ ಎಲ್ಲರೂ ಕ್ಯಾಂಪ್ ಫೈರಿನ ಮುಂದೆ ಗುಡ್ಡೆಯಾದೆವು.  ಅಷ್ಟರಲ್ಲಿ ರಾಯಚೂರಿನ ಆನಂದ್ 'ಓ ಫಿರ್ ನಯೀ ಆತೇ' ಎಂದು ಹಿಂದಿ ಹಾಡಿನ ಬಾಣ ಬಿಡಬೇಕೇ! ಪ್ರತ್ಯುತ್ತರವಾಗಿ ಹಾಸನದ ಭಾಸ್ಕರ್ 'ಚಲ್ತೇ ಚಲ್ತೇ... ಕಭಿ ಅಲ್ವಿದ ನಾ ಕೆಹೆನಾ' ಎಂದು ಝಳಪಿಸಿದ. ನಂತರ ನಡೆದದ್ದು ಸಂಗೀತದ ಜುಗಲ್ ಬಂದಿ. ನಾನು ಕೈಕಾಲು ಆಡಿಸುತ್ತಾ, 'ನನ್ನ ನೀನು ಗೆಲ್ಲಲಾರೆ, ತಿಳಿದೂ..ತಿಳಿದೂ..' ಎಂದು ಬಿಡತೊಡಗಿದೆ. 'ರೀ ಅಶೋಕ್. ಪಕ್ಕದಲ್ಲೇ ನಿಂತಿದಿರೀಲ್ಲ. ಹಿಡ್ಕಳ್ರೀ ಅವನ ಕೈ ಕಾಲುಗಳನ್ನ ಗಟ್ಟಿಯಾಗಿ. ಏಯ್ ಧನಂಜಯ. ಬಂದ್ರೆ ಕಾಲು ಮುರೀತೀನಿ ನೋಡ್ತಿರು. ಕೈಕಾಲು ಆಡಿಸದೇ ಹಾಡು ಹೇಳಲು ಬರುವುದಿಲ್ಲವಾ ನಿನಗೆ' ಎಂದು ಎಚ್ಚರಿಸಿದರು ತೇಜಸ್ವಿ. ಅಷ್ಟರಲ್ಲಿ ಮಹಿಳೆಯರ್ಯಾರೋ 'ಮಲಗೂ ಮಲಗೆನ್ನಾ ಮಗುವೇ..ಜೋ..ಜೋ..ಜೋ.. ಜೋ..' ಎಂದು ಶುರು ಮಾಡಿದರು. ವಾಚಿನೆಡೆಗೆ ನೋಡಿದರೆ ರಾತ್ರಿ 12 ದಾಟಿದೆ. ಬೆಳಗಿನ ಚಾರಣ ಕಲ್ಪಿಸಿಕೊಂಡು ಥ್ರಿಲ್ ಆಗಿ, ಮಲಗಲು ಟೆಂಟ್‌ಗಳ ಒಳಗೆ ನುಸುಳಿದೆವು.
ದಿನವೂ ಮನೆಯ ಬೆಚ್ಚನೆಯ ವಾತಾವರಣದಲ್ಲಿ ಮುದುರಿ ಮಲಗಿ ಯಾವುದೋ ಒಂದು ದಿನಚರಿಗೆ ಹೊಂದಿಕೊಂಡಂತೆ ಅನೂಚಾನವಾಗಿ ಬೆಳಗಿನ ಕೆಲಸಕಾರ್ಯಗಳಿಗೆ ಸ್ಪಂದಿಸುತ್ತಿದ್ದವರು ಹೊಸ ಜಾಗದ ಮುಂಜಾವನ್ನು ವಿಶಿಷ್ಟವಾದ ಸಡಗರದಿಂದ ಅನು ಭವಿಸಿದೆವು. ಲಗುಬಗೆಯಿಂದ ನಿತ್ಯಕರ್ಮ ಮುಗಿಸಿದ ನಮಗೆ ಬಿಸಿಬಿಸಿ ಉಪ್ಪಿಟ್ಟು, ಕಾಫಿ ಹೊಸ ಲವಲವಿಕೆ ತುಂಬಿತು. ಚರ್ಚೆ, ಮಾತು, ಕೇಕೆಗಳೊಂದಿಗೆ ಕಡಿದಾದ ಏರು ದಾಟಿ ಅಲೆಗಳಂತೆ ಎದುರಾಗುತಿದ್ದ ಶೋಲಾಗಳ ಮರುಕಳಿಕೆಯನ್ನು ಕಣ್ತುಂಬಿಕೊಳ್ಳತೊಡಗಿದೆವು. ಏರಿ ಬಂದ ದಾರಿಯನ್ನು ಹಿಂದಿರುಗಿ ನೋಡಿ ಹೆಮ್ಮೆಪಡತೊಡಗಿದೆವು. ದೂರದ ದಿಗಂತದವರೆಗೆ ಅನಂತ ಕಡಲಿನಂತೆ ಹಬ್ಬಿ ಮೆರೆಯುತಿದ್ದ ಈ ಗಿರಿ ಶ್ರೇಣಿಯನ್ನು ಉಳಿಸಿಕೊಳ್ಳುವ ಭಾಗ್ಯ ನಮಗಿದೆಯಾ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳತೊಡಗಿದೆವು.
ಅರಣ್ಯವಾಸಿಗಳನ್ನು ಯಾವುದಾದರೂ ನೆಪದಲ್ಲಿ ಒಕ್ಕಲೆಬ್ಬಿಸಿ ಉದ್ದಿಮೆಗಳಿಗೆ ಕಾರ್ಮಿಕರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಬಂಡವಾಳಶಾಹಿಗಳೊಂದಿಗೆ ಕೈ ಜೋಡಿಸುತ್ತಿರುವ ಆಡಳಿತ ವ್ಯವಸ್ಥೆ ದಿಗ್ಭ್ರಮೆ ಮೂಡಿಸುತ್ತದೆ. ಸ್ಥಳೀಯ ಅಮಾಯಕ ಜನರಿಗೆ ಪರಿಹಾರ ಹಣದ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸಲು ಸರ್ಕಾರದ ಬಳಿ ಸಾಕಷ್ಟು ದಾರಿಗಳಿವೆ.  ನೀತಿ ನಿರೂಪಕರುಗಳಿಗೆ ಕಾಡಿನ ವಾಸ್ತವದ ಚಿತ್ರಣವಿಲ್ಲದಿದ್ದರೆ, ಇವರು ಯಾವ ನೆಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ? ಕಾಡಿನಲ್ಲಿ ಬದುಕೋದು ಅಥವಾ ಹೊರಗೆ ಬರೋ ಎಲ್ಲಾ ವಿವೇಚನೆ ಅಲ್ಲಿನ ಮೂಲನಿವಾಸಿಗಳದ್ದೇ ಆಗಿರಬೇಕು. ಬಲವಂತವಾಗಿ ಒಕ್ಕಲೆಬ್ಬಿಸುವುದು ಅಥವಾ ಮೂಲಸೌಕರ್ಯಗಳಿಂದ ವಂಚಿತರನ್ನಾಗಿ ಮಾಡಲು ನಾವ್ಯಾರು?
ಮಧ್ಯಾಹ್ನ ಮೂರು ಗಂಟೆಗೇ ಚಾರಣ ಮುಗಿಯಿತು. ಮಧ್ಯಾಹ್ನದ ಊಟದ ನಂತರ ಬೆಟ್ಟದ ಒಂದು ಬದಿಯಲ್ಲಿ ಕುಳಿತ ತೇಜಸ್ವಿ ದೂರದಲ್ಲಿ ಕಾಣುತ್ತಿದ್ದ ಇನ್ನೊಂದು ಪರ್ವತಾಗ್ರವನ್ನು ತೋರಿಸಿ 'ನೋಡಲ್ಲಿ. ಅದರಾಚೆಯ ಮಗ್ಗುಲಿನಲ್ಲೇ ಮಾಣಿಕ್ಯಧಾರಾ ಇರೋದು. ಈಗ್ಗೆ ಹದಿನೈದು-ಇಪ್ಪತ್ತು ವರ್ಷ ಹಿಂದೆ ನನ್ನ ಸ್ನೇಹಿತರೊಡನೆ ಅಲ್ಲಿಗೆ ಹೋಗಿದ್ದಾಗ ತಮಾಷೆಯೊಂದು ನಡೀತು ಮಾರಾಯ. ನಾವು ನೀರಿನ ಝರಿ ಬೀಳುವುದನ್ನು ಹತ್ತಿರದಿಂದ ನೋಡೋಣ ಎಂದು ಕಡಿದಾದ ಪ್ರಪಾತವನ್ನು ಇಳಿದು ಸಾಹಸ ಮಾಡುತ್ತಾ  ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೆವು. ಸರಕ್ಕನೇ ಜಾರುವ ನೆಲ, ಆಧಾರಕ್ಕೆಂದು ಹಿಡಿದಿದ್ದ ಹುಲ್ಲಿನ ಜೊಂಪೆ ಪುಸ್ಸಕ್ಕೆಂದು ಕೈಗೇ ಬರುತ್ತಿತ್ತು. ಮಂಡಿ ಚಿಪ್ಪಿನಲ್ಲಿ ಟಕಟಕ ಎಂದು ನಡುಗು. ಸುತ್ತಾ ದಟ್ಟವಾದ ಕಾಡು, ಜೀ...ಜೀ... ಎನ್ನುವ ಜೀರುಂಡೆಗಳು.  ನೀರಿನ ಧಾರೆಯೊಂದು ನಿರಂತರವಾಗಿ ಧೋ ಎಂದು ಸಾವಿರಾರು ವರ್ಷಗಳಿಂದ ಸುರಿಯುತ್ತಿರುವಂತೆಯೇ ಸುರಿಯುತ್ತಿತ್ತು. ನಿರ್ಜನವಾಗಿದ್ದ ಆ ಅಪರೂಪದ ಪರಿಸರದಲ್ಲಿ ಇದ್ದಕ್ಕಿದ್ದಂತೆ ಯಾರೋ 'ಸಾರ್ ಅಲ್ಲಿಗೆ ಹೋಗಬೇಡಿ. ಹೋಗ್ಬೇಡಿ' ಎಂದು ಅರಚಿದಂತಾಯಿತು. ಕಾಡಿನ ಒಡಲೇ ಬಿರಿಯುವಂತೆ ಅಶರೀರವಾಗಿ ಹೊರಟ ಗಂಡುದನಿಯಿಂದ ತಬ್ಬಿಬ್ಬಾದ ನಾವು ಕೈತಪ್ಪಿ ಕಾಲುಜಾರಿ ಪ್ರಪಾತಕ್ಕೆ ಬೀಳದಿದ್ದುದೇ ಒಂದು ಪವಾಡ.  ಇವನ್ಯಾವನೋ ಯಡವಟ್ಟು ಗಿರಾಕಿ ಎಂದುಕೊಂಡು ನಾವು ಸಾವರಿಸಿಕೊಂಡು ಮುಂದಡಿ ಇರಿಸತೊಡಗಿದೆವು.  ಗಿಡಮರಗಳ ಸಂದಿಯಿಂದ ಹೊರನೆಗೆದ ಮನುಷ್ಯನೊಬ್ಬ 'ಸಾರ್ ಮುಂದೆ ಹೋಗಬೇಡಿ. ಹೋಗ್ಲೇಬೇಡಿ' ಎಂದು ಗೋಗರೆದು ಎಚ್ಚರಿಸಿದ. 'ಓ ಎಲ್ಲೋ ಕಾಳಿಂಗ ಸರ್ಪ ಇರಬಹುದು, ಇಷ್ಟು ದೂರ ಬಂದು ಅಂತಹ ಅಪರೂಪದ ಜೀವಿಯನ್ನು ನೋಡಿ ಫೋಟೋ ತೆಗೆಯದೇ ಹೋಗುವುದೇ' ಎಂದುಕೊಂಡು ನಾವು ಮುಂದಡಿ ಇರಿಸಿದೆವು. ತಾಳ್ಮೆ ಕಳೆದುಕೊಂಡ ಆ ಅಪರಿಚಿತ 'ಸಾರ್ ಅಲ್ಲಿ ನನ್ನ ಹೆಂಡ್ತಿ ಸ್ನಾನ ಮಾಡ್ತಾ ಇದ್ದಾಳೆ. ಮುಂದಕ್ಕೆ ಹೋಗ್ಬೇಡಿ' ಎಂದು ಅಂಗಲಾಚತೊಡಗಿದ. 'ಥತ್ ಎಂಥಾ ಯಡವಟ್ಟಾಯಿತು' ಎಂದುಕೊಂಡು ವಾಪಾಸ್ ಬಂದೆವು. ಆದ್ರೂ ಅಷ್ಟಕ್ಕೆಲ್ಲಾ ಅವನು ಅಷ್ಟೊಂದು ಕೂಗಾಡುವ ಅಗತ್ಯವಿರಲಿಲ್ಲ ಎನಿಸಿತು ನನಗೆ. ಅಲ್ವೇನಯ್ಯಾ' ಎಂದರು.

- ಚಿತ್ರ, ಲೇಖನ :ಧನಂಜಯ ಜೀವಾಳ
jeevala@rediffmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments